ತೀವ್ರ ಶಾಖದಿಂದ ಹೊಸದಾಗಿ ಕಾಮಗಾರಿಯಾಗಿರುವ ಗುಜರಾತ್ ರಸ್ತೆಗಳು ಕರಗುತ್ತಿರುವುದು ಬಿಜೆಪಿ ಸರ್ಕಾರದ ಚಿಂತೆಗೆ ಕಾರಣವಾಗಿದೆ. ಸರ್ಕಾರ ಕಳಪೆ ರಸ್ತೆಗಳನ್ನು ನಿರ್ಮಿಸಿರುವ ಆರೋಪವನ್ನು ವಿಪಕ್ಷಗಳು ಹೊರಿಸುತ್ತಿವೆ.
ಗುಜರಾತ್‌ನಲ್ಲಿ ಇತ್ತೀಚೆಗೆ ಹೊಸದಾಗಿ ಕಾಮಗಾರಿಯಾಗಿರುವ ಬಹುತೇಕ ರಸ್ತೆಗಳ ಮೇಲೆ ಪಾದಾಚಾರಿಗಳಿಗೆ ನಡೆಯಲಾಗುತ್ತಿಲ್ಲ, ವಾಹನಗಳು ಸಾಗಲು ಕಷ್ಟಪಡುತ್ತಿವೆ. ಏಕೆಂದರೆ ಗುಜರಾತ್ ರಸ್ತೆಗಳು ಕರಗಿ ಡಾಂಬರು ನೀರಾಗಿದೆ. ಗುಜರಾತ್ ಅಭಿವೃದ್ದಿ ಮಾಡೆಲ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಬಿಜೆಪಿ ಸರ್ಕಾರ, ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಿದೆ ಎಂದು ವಿಪಕ್ಷಗಳು ಟೀಕಿಸಿವೆ.
ಭಾರತದಲ್ಲಿ ಬಿಸಿಲಿನ ತಾಪ ಹೊಸ ದಾಖಲೆ ಸೃಷ್ಟಿಸಿದ್ದು, ಕಳೆದ ವಾರ ಅತ್ಯಧಿಕ ಧಗೆ ದಾಖಲಾಗಿದೆ. ನಿಬಿಡ ನಗರಗಳಲ್ಲಿ ರಸ್ತೆಗಳಲ್ಲಿ ಬಿಟುಮಿನ್ ಕರಗುತ್ತಿವೆ. ಗುಜರಾತ್‌ನ ವಲ್ಸಾದ್‌ನ ನಿವಾಸಿಗಳು 36 ಡಿಗ್ರಿ ಸೆಲ್ಷಿಯಸ್ ಬಿಸಿಲಿನಲ್ಲಿ ರಸ್ತೆಗಳನ್ನು ದಾಟಲು ಸಾಧ್ಯವಾಗಿಲ್ಲ.
ಎನ್‌ಡಿಟಿವಿ ಮಾಧ್ಯಮ ಪ್ರಸಾರ ಮಾಡಿದ ದೃಶ್ಯಗಳಲ್ಲಿ ರಸ್ತೆ ದಾಟುವಾಗ ಜನರ ಚಪ್ಪಲಿಗಳು ಕರಗಿದ ಡಾಮರ್‌ನಲ್ಲಿ ಸಿಲುಕಿರುವುದು ಕಂಡುಬಂದಿದೆ. ಬಹುತೇಕ ರಸ್ತೆಗಳ ಮೇಲೆ ಮಹಿಳೆಯರು ಮತ್ತು ಪುರುಷರು ಬಿಟ್ಟು ಹೋದ ಚಪ್ಪಲಿಗಳೇ ಕಾಣಿಸುತ್ತಿವೆ. ಶುಕ್ರವಾರದಂದು ಪಶ್ಚಿಮ ಭಾರತದಲ್ಲಿ ತಾಪಮಾನ 50 ಡಿಗ್ರಿ ಸೆಲ್ಷಿಯಸ್‌ಗೆ ಏರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ರಾಜಸ್ಥಾನದ ಅಲ್ವಾರ್‌ನಲ್ಲಿ 1956ರಲ್ಲಿ 50.6 ಡಿಗ್ರಿ ಸೆಲ್ಷಿಯಸ್ ದಾಖಲಾಗಿರುವುದು ಭಾರತದ ಈವರೆಗಿನ ಗರಿಷ್ಠ ಉಷ್ಣತೆ. ಗುಜರಾತ್‌ನ ಸೂರತ್ ಮತ್ತು ಅಹಮದಾಬಾದ್ ಮಂಗಳವಾರದವರೆಗೆ ಅತೀ ಶಾಖ ಎದುರಿಸಿದೆ. ಅದರ ಪರಿಣಾಮ ಅಲ್ಲಿನ ರಸ್ತೆಗಳ ಮೇಲೂ ಕಂಡುಬಂದಿದೆ. ಸೂರತ್‌ನ ಚಂದ್ರಶೇಖರ್ ಆಜಾದ್ ಸೇತುವೆಯಿಂದ ಅದಜಾನ್ ಪಾಟಿಯ ನಡುವೆ 200 ಮೀಟರ್ ಉದ್ದ ರಸ್ತೆಗೆ ಇತ್ತೀಚೆಗಷ್ಟೇ ಹಾಕಲಾಗಿದ್ದ ಡಾಂಬರ್ ಕರಗಿ ಹೋಗಿದೆ. ಶಾಖದ ಅಲೆಗಳು ತೀವ್ರವಾಗಿ ಬಿಟುಮನ್ ಕರಗುತ್ತಿವೆ. ಹೀಗಾಗಿ ವಾಹನ ಸವಾರರು ಮತ್ತು ಪಾದಾಚಾರಿಗಳು ಸಮಸ್ಯೆ ಎದುರಿಸುತ್ತಿದ್ದಾರೆ.
ಗುಜರಾತ್‌ನ ವಡೋದರ ನಗರದಲ್ಲಿ ಬುಧವಾರ 38 ಡಿಗ್ರಿ ಸೆಲ್ಷಿಯಸ್‌ನಷ್ಟು ತಾಪಮಾನ ದಾಖಲಾಗಿದೆ. ಭಯಾಲಿ ಏರಿಯಾದಲ್ಲಿ ರಸ್ತೆಗಳು ಕರಗಿರುವುದು ವರದಿಯಾಗಿದೆ.
ಅಗತ್ಯ ಗುಣಮಟ್ಟದ ವಸ್ತುಗಳನ್ನೇ ಬಳಸಿ, ಸೂಕ್ತ ವಿಧಾನದಲ್ಲೇ ರಸ್ತೆ ಸಿದ್ಧಪಡಿಸಲಾಗಿದೆ. ದ್ರವ ಬಿಟುಮಿನ್ ರಸ್ತೆಗೆ ಹಾಕಿದ ನಂತರ ಕಲ್ಲಿನ ದೂಳನ್ನು ಹೊರಮೈ ಮೇಲೆ ಹರಡಲಾಗಿತ್ತು. ಆದರೆ ಶಾಖದ ಅಲೆಗಳು ತೀವ್ರವಾಗಿದ್ದ ಕಾರಣ ರಸ್ತೆಗಳು ಕರಗಿ ಬಳಸಲಾಗದ ಸ್ಥಿತಿಗೆ ತಲುಪಿದೆ ಎಂದು ಸೂರತ್ ನಗರಪಾಲಿಕೆ ಸಿಬ್ಬಂದಿಗಳು ಹೇಳಿದ್ದಾರೆ.
ಅಹಮದಾಬಾದ್‌ನಲ್ಲಿ ಗೋಮ್ತಿಪುರ ವಾರ್ಡ್‌ನ ಸುದ್ರಾಮ್ ನಗರ ರಸ್ತೆಯ 1.5 ಕಿಮೀ ಉದ್ದಕ್ಕೆ ತಿಂಗಳ ಹಿಂದೆ ಹಾಕಿದ್ದ ಬಿಟುಮನ್ ಮತ್ತು ಆಸ್ಫಾಲ್ಟ್ ಪದರವು ಕರಗಿದೆ. ಕಳೆದ ತಿಂಗಳು ಅಹಮದಾಬಾದ್‌ನಲ್ಲಿ ಹಲವು ವಾರ್ಡ್‌ಗಳಲ್ಲಿ ರಸ್ತೆ ಕಾಮಗಾರಿಗಳು ಆಗಿವೆ. ಈಗ ಶಾಖದ ಅಲೆಗಳಿಂದ ಸಮಸ್ಯೆಯಾಗುತ್ತಿರುವ ಬಗ್ಗೆ ಪಾಲಿಕೆಗೆ ತಿಳಿಸಲಾಗಿದೆ ಎಂದು ಸ್ಥಳೀಯ ಕಾರ್ಪೋರೇಟರ್ ಒಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮಂಗಳವಾರದಿಂದ ಅಹಮದಾಬಾದ್‌ನಲ್ಲಿ 36 ಡಿಗ್ರಿಯಿಂದ 45 ಡಿಗ್ರಿ ಸೆಲ್ಷಿಯಸ್‌ವರೆಗೆ ತಾಪಮಾನ ದಾಖಲಾಗಿದೆ. ಈಗಾಗಲೇ ಉತ್ತರ ಪ್ರದೇಶದ ಬಲಿಯಾ ಜಿಲ್ಲೆಯಲ್ಲಿ ಶಾಖದ ಅಲೆಗಳಿಗೆ ಒಂದು ಸಾವು ದಾಖಲಾಗಿದೆ. ರಾಜಸ್ಥಾನದ ಚುರು ಮತ್ತು ಶ್ರೀಗಂಗಾನಗರದಲ್ಲಿ ಅತ್ಯಧಿಕ 49.2 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಜಾರ್ಖಂಡ್‌ನಲ್ಲಿ ರೈಲ್ವೇ ಹಳಿಗಳು ಶಾಖದ ಕಾರಣದಿಂದ ಸರಿದಿರುವುದು ವರದಿಯಾಗಿದೆ.
ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ
ಭಾರತದಲ್ಲಿ ಮೇ ಮತ್ತು ಜೂನ್ ಸಾಮಾನ್ಯವಾಗಿ ಅತಿ ಬಿಸಿಯಾದ ತಿಂಗಳುಗಳಾಗಿರುತ್ತವೆ. ಸಾಮಾನ್ಯವಾಗಿ ಮುಂಗಾರು ಮಳೆ ಆಗಮಿಸುವ ಹೊತ್ತಿಗೆ ಧರೆ 40 ಡಿಗ್ರಿ ಸೆಲ್ಷಿಯಸ್ ಮೇಲೆ ಬಿಸಿಯಾಗಿರುತ್ತದೆ. ದೇಶದ ಹವಾಮಾನ ಇಲಾಖೆ ಶಾಖದ ಅಲೆಗಳು ಹೆಚ್ಚಾಗುವುದು ಮತ್ತು ನಿರ್ಜಲೀಕರಣ, ಶಾಖದ ಹೊಡೆತಗಳಂತಹ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಎಚ್ಚರಿಸಿದೆ. ಜೊತೆಗೆ ವ್ಯಾಪಕ ವಿದ್ಯುತ್ ಕಡಿತದ ಸಮಸ್ಯೆಯನ್ನೂ ಎದುರಿಸಬೇಕಾಗಿ ಬರಬಹುದು.
13 ರಾಜ್ಯಗಳಲ್ಲಿ ಬೆಳೆಗಳು ಒಣಗಿ ನಷ್ಟವಾಗಿ ಬಹಳಷ್ಟು ಮಂದಿ ನಗರಗಳ ಕಡೆಗೆ ವಲಸೆ ಹೋಗಿದ್ದರೆ, ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಸ್ಥಾನ, ಮಹಾರಾಷ್ಟ್ರ ಹಾಗೂ ಗುಜರಾತ್‌ನಲ್ಲಿ ಕೆರೆಗಳು, ಕೊಳಗಳು ಮತ್ತು ಅಣೆಕಟ್ಟುಗಳು ಒಣಗಿ ಹೋಗಿವೆ. ಭಾರತದಲ್ಲಿ ಶಾಖದ ಅಲೆಗಳಿಂದ ಗಂಭೀರ ಬರದ ಸ್ಥಿತಿ ಎದುರಿಸಬೇಕಾದೀತು ಮತ್ತು 3.30 ಕೋಟಿ ಮಂದಿ ನೀರಿನ ಕೊರತೆಯ ಸಮಸ್ಯೆ ಬಳಲಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಕರಾವಳಿ ತೀರಗಳಲ್ಲಿ ಚಂಡಮಾರುತ ರೋವಾನು ಐದು ದಿನಗಳ ಕಾಲ ಸಂಚರಿಸಲಿರುವುದರಿಂದ ಸ್ವಲ್ಪ ಮಳೆಯಾಗಿ ತಾಪಮಾನ ಇಳಿದಿದೆ.