ಗರ್ಭಪಾತಕ್ಕೆ ಅನುಮತಿ ಕೋರಿ ಅಪ್ರಾಪ್ತೆ ಯುವತಿಯೊಬ್ಬಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಗುಜರಾತ್ ಹೈಕೋರ್ಟ್ ನಡೆಸಿದ ಸಂಧಾನ ಯತ್ನ ವಿಫಲವಾಗಿದೆ.
23 ವರ್ಷದ ಯುವಕನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ 16 ವರ್ಷದ ಯುವತಿಯು ಇದೀಗ ಏಳು ತಿಂಗಳ ಗರ್ಭಿಣಿಯಾಗಿದ್ದಾಳೆ. ತನ್ನ ಮಗಳ ಗರ್ಭಪಾತಕ್ಕೆ ಅನುಮತಿ ನೀಡಬೇಕು ಎಂದು ಯುವತಿಯ ತಂದೆ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ದೂರುದಾರರು ಮತ್ತು ಆರೋಪಿಯ ಜೊತೆ ಸಂಧಾನ ಸಾಧ್ಯವೇ ಎಂದು ಸಲಹೆ ಕೇಳಿದ್ದ ನ್ಯಾಯಾಯಲಯವು, ಮೋರ್ಬಿ ಸಬ್ ಜೈಲ್‌ನಲ್ಲಿರುವ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು.
ಶುಕ್ರವಾರ ನ್ಯಾಯಾಧೀಶ ಸಮೀರ್ ದವೆ ಎದುರು ಹಾಜರಾದ ಆರೋಪಿʻ ನಾನು ಎರಡು ವರ್ಷಗಳ ಹಿಂದೆ ವಿವಾಹಿತನಾಗಿದ್ದು, ನನ್ನ ಪತ್ನಿಯು ಇದೀಗ ಗರ್ಭಿಣಿಯಾಗಿದ್ದಾಳೆʼ ಎಂದು ಹೇಳಿಕೆ ನೀಡಿದ್ದಾನೆ. ಹೀಗಾಗಿ ಸಂಧಾನವು ಸಾಧ್ಯವಿಲ್ಲ ಎಂದು ಬಾಲಕಿ ಪರ ವಕೀಲರಾದ ಸಿಕಂದರ್ ಸೈಯದ್ ಅವರಿಗೆ ನ್ಯಾಯಾಲಯ ತಿಳಿಸಿದೆ.
ಇದೇ ಪ್ರಕರಣದ ಅರ್ಜಿ ವಿಚಾರಣೆ ವೇಳೆ ಕಳೆದ ವಾರ ನ್ಯಾಯಾಧೀಶ ಸಮೀರ್ ದವೆ, ʻಮನುಸ್ಮೃತಿʼ ಓದುವಂತೆ ವಕೀಲರಿಗೆ ಸಲಹೆ ನೀಡಿದ್ದರು. ನ್ಯಾಯಾಧೀಶರ ಈ ಹೇಳಿಕೆ ವಿವಾದ ಸೃಷ್ಟಿಸಿತ್ತು.
ʻಆಗಸ್ಟ್ 16ರಂದು ಬಾಲಕಿಯ ಹೆರಿಗೆ ದಿನಾಂಕ ನೀಡಲಾಗಿದೆ. ಹೀಗಾಗಿ ಆದಷ್ಟು ಬೇಗನೆ ಪ್ರಕರಣದ ವಿಚಾರಣೆ ನಡೆಸಬೇಕುʼ ಎಂದು ಬಾಲಕಿ ಪರ ವಕೀಲರಾದ ಸಿಕಂದರ್ ಸೈಯದ್ ಮನವಿ ಮಾಡಿದ್ದರು.
ʻನಾವು 21ನೇ ಶತಮಾನದಲ್ಲಿ ಬದುಕುತ್ತಿರುವ ಕಾರಣಕ್ಕೆ ಈ ಉದ್ವೇಗವಿದೆ. ಈ ಹಿಂದೆ ಹೆಣ್ಣುಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ತಾಯ್ತನ ಪಡೆದುಕೊಳ್ಳುತ್ತಿದ್ದರು. ನೀವು ಇದನ್ನು ಓದುವುದಿಲ್ಲ. ಆದರೆ ಇದಕ್ಕಾಗಿ ಒಮ್ಮೆ ಮನುಸ್ಮೃತಿಯನ್ನು ಓದಿರಿʼ ಎಂದು ವಕೀಲರಿಗೆ ನ್ಯಾಯಮೂರ್ತಿ ʻಸಲಹೆʼ ನೀಡಿದ್ದರು.
ಒಂದು ಕಾಲದಲ್ಲಿ 14- 15 ವರ್ಷಕ್ಕೆ ಹೆಣ್ಣುಮಕ್ಕಳು ತಾಯಂದಿರಾಗುವುದು ಸರ್ವೇ ಸಾಮಾನ್ಯವಾಗಿತ್ತು. 17 ವರ್ಷಕ್ಕೆ ತಲುಪುವ ವೇಳೆಗೆ ಬಹುತೇಕರು ತಮ್ಮ ಮೊದಲ ಮಗುವಿಗೆ ಜನ್ಮ ನೀಡಿರುತ್ತಿದ್ದರು ಎಂದು ಹೇಳಿದ್ದರು.
ಗರ್ಭಪಾತ ಪ್ರಕ್ರಿಯೆ ವೇಳೆ ಮಗು ಜೀವಂತವಾಗಿ ಜನಿಸುವ ಸಾಧ್ಯತೆಯೂ ಇದೆ ಎಂದು ಹೇಳುದ್ದ ನ್ಯಾಯಮೂರ್ತಿ, ಇದು ನಡೆದರೆ, ಮಗುವನ್ನು ಯಾರು ನೋಡಿಕೊಳ್ಳುತ್ತಾರೆ? ಮಗು ಜೀವಂತ ಜನಿಸಿದರೆ ಅದನ್ನು ಕೊಲ್ಲಲು ಕೋರ್ಟ್ ಅನುಮತಿ ನೀಡಲು ಸಾಧ್ಯವೇ?” ಎಂದು ಪ್ರಶ್ನಿಸಿತ್ತು. ಏಳು ತಿಂಗಳು ಕಳೆದಿರುವುದರಿಂದ ಮಗು ಜೀವಂತ ಜನಿಸಿದರೆ ಏನು ಮಾಡಬಹುದು? “ದತ್ತು ಸ್ವೀಕಾರ ಆಯ್ಕೆಯ ಬಗ್ಗೆ ಪರಿಶೀಲಿಸುವುದನ್ನು ನೀವು ಆರಂಭಿಸಿ” ಎಂದು ವಕೀಲರಿಗೆ ಸಲಹೆ ನೀಡಿತ್ತು.