ಹಿಂಡನ್ಬರ್ಗ್ ಸಂಶೋಧನಾ ತನಿಖಾ ವರದಿ ಬಿಡುಗಡೆಯಾಗಿ ಏಳು ತಿಂಗಳ ಬಳಿಕ ಪತ್ರಕರ್ತರ ಸಮೂಹದ ವೆಬ್ಸೈಟ್ಆದ ಒಸಿಸಿಆರ್‌ಪಿ- ‘ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ’ ಅದಾನಿ ಸಮೂಹದ ಮತ್ತೊಂದು ವಂಚನೆಯ ಬಗ್ಗೆ ತನಿಖಾ ವರದಿಯೊಂದನ್ನು ಪ್ರಕಟಿಸಿದೆ.
ಸಾರ್ವಜನಿಕವಾಗಿ ಪಟ್ಟಿ ಮಾಡಲ್ಪಟ್ಟ ಅದಾನಿಯ ಸಮೂಹದ ಷೇರುಗಳಲ್ಲಿ ‘ಅಪಾರದರ್ಶಕ’ ಮಾರಿಷಸ್ ನಿಧಿಗಳ ಹಣದ ಹರಿವು ಕಂಡು ಬಂದಿದೆ ಎಂದು ಒಸಿಸಿಆರ್‌ಪಿ ವರದಿಯಲ್ಲಿ ಹೇಳಲಾಗಿದೆ. ಅನಾಮಧೇಯ ಪತ್ರಕರ್ತರು ತನಿಖೆ ನಡೆಸಿ ಈ ವರದಿ ರೂಪಿಸಿದ್ದಾರೆನ್ನಲಾಗಿದೆ.
ಅದಾನಿಯ ಕುಟುಂಬದ ಪಾಲುದಾರರ ಪಾತ್ರ ಇದೆ ಎಂದು ವರದಿಯಲ್ಲಿ ಆರೋಪಿಸಲಾಗಿದೆ. ಈ ಆರೋಪದ ನಂತರ ಅದಾನಿ ಸಮೂಹದ ಕಂಪನಿಗಳ ಷೇರುಗಳು ಗುರುವಾರ(ಆಗಸ್ಟ್ 31) ಭಾರಿ ಕುಸಿತ ಕಂಡವು. ಪ್ರಮುಖವಾಗಿ ಅದಾನಿ ಎಂಟರ್‌ಪ್ರೈಸಸ್ ಶೇ. 5 ರಷ್ಟು ಕುಸಿದಿದೆ.
ಅದಾನಿ ಎಂಟರ್‌ಪ್ರೈಸಸ್, ಟೋಟಲ್ ಗ್ಯಾಸ್ ಷೇರುಗಳು ಕನಿಷ್ಠ ಶೇ. 2ರಷ್ಟು ಕುಸಿತ ಕಂಡಿವೆ. ಬಂದರು ಮತ್ತು ವಿಶೇಷ ಆರ್ಥಿಕ ವಲಯ ಕಂಪನಿ ಕೂಡ ಶೇ. 2.3 ನಷ್ಟು ಕುಸಿತವಾದರೆ, ಅದಾನಿ ಪವರ್ ಶೇರುಗಳು ಶೇ. 2.9 ಕಡಿಮೆಯಾಗಿದೆ ಮತ್ತು ಗ್ರೀನ್ ಎನರ್ಜಿ ಶೇ.3.4 ರಷ್ಟು ಕಡಿಮೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಪುಟಿನ್ ನಂತರ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದೆಹಲಿಯ ಜಿ20 ಶೃಂಗಸಭೆಗೆ ಗೈರು
ಒಸಿಸಿಆರ್‌ಪಿ – ಹಿಂಡೆನ್‌ಬರ್ಗ್ 2.0?
ಹಲವು ತೆರಿಗೆ ಸ್ವರ್ಗಗಳ ವಿಶ್ಲೇಷಣಾ ಫೈಲ್‌ಗಳು ಮತ್ತು ಅದಾನಿ ಸಮೂಹದ ಆಂತರಿಕ ಇಮೇಲ್‌ಗಳ ಪರಿಶೀಲನೆ ಬಳಿಕ ಕಡಲಾಚೆಯ ಸಂಸ್ಥೆಗಳ ಮೂಲಕ ಅದಾನಿಯ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿದ ಕನಿಷ್ಠ 2 ಪ್ರಕರಣಗಳು ಪತ್ತೆಯಾಗಿವೆ ಎಂದು ಲಾಭೋದ್ದೇಶವಿಲ್ಲದ ಮಾಧ್ಯಮ ಸಂಸ್ಥೆ ಒಸಿಸಿಆರ್‌ಪಿ ತನ್ನ ತನಿಖಾ ವರದಿಯಲ್ಲಿ ಹೇಳಿದೆ.
ಮಾರಿಷಸ್ ದೇಶದ ಅಪಾರದರ್ಶಕ ಫಂಡ್ಗಳ ಮೂಲಕ ಅದಾನಿ ಸಮೂಹದ ವ್ಯಾವಹಾರಿಕ ಪಾಲುದಾರರು ಕೋಟ್ಯಂತರ ಹಣವನ್ನು ಹೂಡಿಕೆ ಮಾಡಿದ್ದಾರೆ ಎಂದು ಒಸಿಸಿಆರ್‌ಪಿ ಆರೋಪಿಸಿದೆ.
ಅದಾನಿಯ ಸಮೂಹದ ಪ್ರಮುಖ ಸಾರ್ವಜನಿಕ ಹೂಡಿಕೆದಾರರು ಅದಾನಿ ಆಪ್ತರೇ ಆಗಿದ್ದಾರೆ. ಇದು ಭಾರತದ ಷೇರು ಮಾರುಕಟ್ಟೆ ಕಾನೂನಿನ ಉಲ್ಲಂಘನೆಯಾಗಿರುವ ಸಾಧ್ಯತೆ ಇದೆ ಎಂದು ತನಿಖಾ ವರದಿ ಹೇಳುತ್ತದೆ. ತೆರಿಗೆದಾರರ ಸ್ವರ್ಗ ಎನಿಸಿರುವ ಮಾರಿಷಸ್ನ ಫಂಡ್ಗಳ ಮೂಲಕ ಅದಾನಿಯ ಸಮೂಹದ ವಿವಿಧ ಕಂಪನಿಗಳ ಷೇರುಗಳನ್ನು ಖರೀದಿಸಿದ ಮತ್ತು ಮಾರಿದ ಪ್ರಕರಣಗಳು ಕನಿಷ್ಠ ಎರಡಾದರೂ ಇದೆ ಎಂದು ಹೇಳಲಾಗಿದೆ.
ಮಾರಿಷಸ್ ಫಂಡ್ಗಳ ಮೂಲಕ ಹಲವು ವರ್ಷಗಳಿಂದ ಅದಾನಿ ಷೇರುಗಳನ್ನು ಖರೀದಿಸುವುದು ಮತ್ತು ಮಾರಾಟ ಮಾಡುತ್ತಾ ಸಾಕಷ್ಟು ಲಾಭ ಮಾಡಲಾಗಿದೆ. ಈ ಹೂಡಿಕೆಗಳನ್ನು ನಿರ್ವಹಿಸುವ ಮ್ಯಾನೇಜ್ಮೆಂಟ್ ಸಂಸ್ಥೆ ವಿನೋದ್ ಅದಾನಿಯ ಕಂಪನಿಗೆ ಹಣ ಪಾವತಿಸಿದೆ ಎಂದೂ ಒಸಿಸಿಆರ್ಪಿಯ ವರದಿಯಲ್ಲಿ ಹೇಳಿದೆ.
ಒಸಿಸಿಆರ್‌ಪಿ ವರದಿಯು ತನ್ನ ಲೇಖನಕ್ಕಾಗಿ ತನಿಖೆ ನಡೆಸಿದ ಹೂಡಿಕೆದಾರರಲ್ಲಿ ಇಬ್ಬರು ಹೆಸರನ್ನು ಹೇಳಿದ್ದು, ಒಬ್ಬರು ನಾಸರ್ ಅಲಿ ಶಬಾನ್ ಅಹ್ಲಿ ಮತ್ತು ಇನ್ನೊಬ್ಬರು ಚಾಂಗ್ ಚುಂಗ್-ಲಿಂಗ್ ಆಗಿದ್ದಾರೆ. ಇವರಿಬ್ಬರೂ ಅದಾನಿಯ ಕುಟುಂಬದೊಂದಿಗೆ ದೀರ್ಘಕಾಲದಿಂದ ವ್ಯಾಪಾರ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಿದೆ.
ಮಾರಿಷಸ್ ದೇಶದ ಒಪೇಕ್ ಫಂಡ್ ಅಥವಾ ಅಪಾರದರ್ಶಕ ಫಂಡ್ಗಳ ಮೂಲಕ ಅವ್ಯವಹಾರ ಉಂಟಾಗಿರುವುದು ತಿಳಿದುಬಂದಿದೆ. ಒಪೇಕ್ ಫಂಡ್ ಎನ್ನುವುದು ತನ್ನ ಪೋರ್ಟ್ಫೋಲಿಯೋಗಳ ಮಾಹಿತಿಯನ್ನು ಹೂಡಿಕೆದಾರರಿಗೆ ತಿಳಿಸುವುದಿಲ್ಲ. ಈ ಫಂಡ್ಗಳು ಯಾವ್ಯಾವ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡಿವೆ ಎನ್ನುವ ಮಾಹಿತಿ ಅದರ ಹೂಡಿಕೆದಾರರಿಗೆ ಗೊತ್ತಿರುವುದಿಲ್ಲ.
ವರದಿ ಅಲ್ಲಗೆಳೆದ ಅದಾನಿ ಸಮೂಹ
ಒಸಿಸಿಆರ್‌ಪಿ ವರದಿಯನ್ನು ಅಲ್ಲಗಳೆದಿರುವ ಅದಾನಿಯ ಸಮೂಹ, ಹಿಂಡನ್‌ಬರ್ಗ್ ಸಂಶೋಧನಾ ವರದಿ ಈ ಹಿಂದೆ ಬಿಡುಗಡೆ ಮಾಡಿದ ತನಿಖಾ ವರದಿಯಲ್ಲಿ ಈ ಅಂಶಗಳು ಇವೆ. ಇದೆಲ್ಲವೂ ಜಾರ್ಜ್ ಸೋರೋಸ್ ಪಿತೂರಿಯಾಗಿದೆ. ಹಿಂಡನ್ಬರ್ಗ್ ವರದಿಯೇ ಆಧಾರರಹಿತವಾಗಿದೆ. ಇಂಥ ಪ್ರಯತ್ನಗಳ ಮೂಲಕ ನಮ್ಮ ಕಂಪನಿಯ ಷೇರುಗಳ ಮೌಲ್ಯವನ್ನು ಕುಸಿಯುವಂತೆ ಮಾಡುವ ಪ್ರಯತ್ನದ ಕುರಿತು ವಿವಿಧ ತನಿಖಾ ಸಂಸ್ಥೆಗಳು ಹಾಗೂ ಪ್ರಾಧಿಕಾರಗಳು ತನಿಖೆ ನಡೆಸುತ್ತಿವೆ. ಈ ನಿಯಂತ್ರಣ ಪ್ರಕ್ರಿಯೆಯನ್ನು ಗೌರವಿಸುವುದು ಅತ್ಯಗತ್ಯ’ ಎಂದು ಕಂಪನಿ ತಿಳಿಸಿದೆ.