ಪಕ್ಷಪಾತವುಳ್ಳ, ಕೋಮು ಭಾವನೆ ಕೆರಳಿಸುವ ಕೆಲವು ಸುದ್ದಿ ನಿರೂಪಕರ ಕಾರ್ಯಕ್ರಮಗಳನ್ನು ಬಹಿಷ್ಕರಿಸಲು ವಿಪಕ್ಷಗಳ ‘ಇಂಡಿಯಾ’ ಒಕ್ಕೂಟವು ನಿರ್ಧರಿಸಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮುಂಬೈ ಮನೆಯಲ್ಲಿ ನಡೆದ ತನ್ನ ಮೊದಲ ಸಮನ್ವಯ ಸಭೆಯಲ್ಲಿ ವಿಪಕ್ಷಗಳ ಒಕ್ಕೂಟವು ಇಂಥದ್ದೊಂದು ತೀರ್ಮಾನ ತೆಗೆದುಕೊಂಡಿದೆ ಎಂದು ಸಮನ್ವಯ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಎಲ್ಲ 12 ಪಕ್ಷಗಳ ಪರವಾಗಿ ಮಾತನಾಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ.
ಯಾವ ನಿರೂಪಕರ ಕಾರ್ಯಕ್ರಮಗಳಿಗೆ ಇಂಡಿಯಾ ಒಕ್ಕೂಟದ ಪಕ್ಷಗಳ ಪ್ರತಿನಿಧಿಗಳನ್ನು ಕಳಿಸಿಕೊಡಬಾರದು ಎನ್ನುವ ಪಟ್ಟಿಯನ್ನು ತಯಾರಿಸಲು ಸಮನ್ವಯ ಸಮಿತಿಯು ಮಾಧ್ಯಮಗಳ ಉಪಗುಂಪಿಗೆ ಅಧಿಕಾರ ನೀಡಿದೆ.
‘ದೇಶದಲ್ಲಿ ಉದ್ರೇಕಕಾರಿ ಚರ್ಚೆಗಳನ್ನು ನಡೆಸುವ ಕೆಲವು ಆಂಕರ್‌ಗಳು ಇದ್ದಾರೆ ಎಂದು ನಮ್ಮ ಮಾಧ್ಯಮ ಉಪ ಗುಂಪಿನಿಂದ ಶಿಫಾರಸು ಇತ್ತು. ಆದ್ದರಿಂದ ಭಾರತ ಮೈತ್ರಿಕೂಟವು ಅದರ ಬಗ್ಗೆ ಅಧಿಸೂಚನೆಯನ್ನು ಹೊರಡಿಸುತ್ತದೆ ಮತ್ತು ಅಂತಹ ಕಾರ್ಯಕ್ರಮಗಳಿಗೆ ಹೋಗುವುದನ್ನು ನಿಲ್ಲಿಸುತ್ತದೆ’ ಎಂದು ಸಮನ್ವಯ ಸಭೆಯ ನಂತರ ಆಪ್‌ನ ರಾಘವ್ ಚಡ್ಡಾ ಹೇಳಿದ್ದಾರೆ.
ಇಂಡಿಯಾ ಒಕ್ಕೂಟವು ಸೀಟು ಹಂಚಿಕೆ ಬಗ್ಗೆ ಶೀಘ್ರದಲ್ಲೇ ಮಾತುಕತೆ ನಡೆಸಲಿದೆ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ತನ್ನ ಮೊದಲ ಸಾರ್ವಜನಿಕ ಸಭೆಯನ್ನು ಭೋಪಾಲ್‌ನಲ್ಲಿ ನಡೆಸಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.
ಈ ಸುದ್ದಿ ಓದಿದ್ದೀರಾ: ವಿಶೇಷ ಅಧಿವೇಶನದ ಉದ್ದೇಶ ಇನ್ನೂ ನಿಗೂಢ: ಸೆ.17 ರಂದು ಸರ್ವಪಕ್ಷ ಸಭೆ ಕರೆದ ಕೇಂದ್ರ
ಸಮನ್ವಯ ಸಮಿತಿಯು ಸೀಟು ಹಂಚಿಕೆಯನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. ಸದಸ್ಯ ಪಕ್ಷಗಳು ಮಾತುಕತೆ ನಡೆಸಿ ಆದಷ್ಟು ಬೇಗ ನಿರ್ಧಾರ ಕೈಗೊಳ್ಳಕಾಗುವುದು ಎಂದು ಸಮಿತಿಯ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.
ಬೆಲೆ ಏರಿಕೆ, ನಿರುದ್ಯೋಗ ಮತ್ತು ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿಷಯಗಳ ಕುರಿತು ಅಕ್ಟೋಬರ್ ಮೊದಲ ವಾರದಲ್ಲಿ ಭೋಪಾಲ್‌ನಲ್ಲಿ ಮೊದಲ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಸಮಿತಿ ಹೇಳಿದೆ.
ಸಂಜೆ ಇಂಡಿಯಾ ಒಕ್ಕೂಟವು ತಾವು ಬಹಿಷ್ಕರಿಸುವ ನಿರೂಪಕರ ಹೆಸರುಗಳನ್ನು ಬಿಡುಗಡೆ ಮಾಡಿದೆ. ಅದರಲ್ಲಿ ನ್ಯೂಸ್ 18ನ ಅಮಾನ್ ಚೋಪ್ರಾ, ಅಮಿಶ್ ದೇವಗನ್, ಆನಂದ್ ನರಸಿಂಹನ್, ಭಾರತ್ ಎಕ್ಸ್‌ಪ್ರೆಸ್‌ನ ಅದಿತಿ ತ್ಯಾಗಿ, ಡಿಡಿ ನ್ಯೂಸ್‌ನ ಅಶೋಕ್ ಶ್ರೀವಾಸ್ತವ್, ಆಜ್ ತಕ್‌ನ ಸುಧೀರ್ ಚೌಧರಿ ಮತ್ತು ಚಿತ್ರಾ ತ್ರಿಪಾಠಿ, ಭಾರತ್ 24ನ ರುಬಿಕಾ ಲಿಯಾಖತ್, ಇಂಡಿಯಾ ಟುಡೆಯ ಗೌರವ್ ಸಾವಂತ್ ಮತ್ತು ಶಿವ್ ಅರೋರಾ, ಇಂಡಿಯಾ ಟಿವಿಯ ಪ್ರಾಚಿ ಪರಾಶರ್, ಟೈಮ್ಸ್ ನೌನ ನಾವಿಕಾ ಕುಮಾರ್ ಮತ್ತು ಸುಶಾಂತ್ ಸಿನ್ಹಾ ಮತ್ತು ರಿಪಬ್ಲಿಕ್ ಭಾರತ್‌ನ ಅರ್ನಾಬ್ ಗೋಸ್ವಾಮಿ ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸುವುದಾಗಿ ‘ಇಂಡಿಯಾ’ ತಿಳಿಸಿದೆ.