ಮಧ್ಯಪ್ರದೇಶ ದಾತಿಯಾ ಜಿಲ್ಲೆಯಲ್ಲಿ ಬುಧವಾರ ಹಸು ಮೇಯಿಸುತ್ತಿರುವ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಗುಂಡಿನ ಚಕಮಕಿ ನಡೆದ ಪರಿಣಾಮ ಐವರು ಸಾವನ್ನಪ್ಪಿದ್ದು, ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ತವರು ಕ್ಷೇತ್ರವಾಗಿರುವ ಜಿಲ್ಲೆಯ ರೆಂಡಾ ಗ್ರಾಮದಲ್ಲಿ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಡಾಂಗಿ ಮತ್ತು ಪಾಲ್ ಸಮುದಾಯದ ಸದಸ್ಯರ ನಡುವೆ ಗುಂಡಿನ ಚಕಮಕಿ ನಡೆದಿದೆ.
ಪ್ರಾಥಮಿಕ ತನಿಖೆಯನ್ನು ಉಲ್ಲೇಖಿಸಿದ ದಾತಿಯಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ, ಮೂರು ದಿನಗಳ ಹಿಂದೆ ಹಸುಗಳನ್ನು ಮೇಯಿಸುವ ವಿಷಯಕ್ಕೆ ಪ್ರಕಾಶ್ ಡಾಂಗಿ ಮತ್ತು ಪ್ರೀತಮ್ ಪಾಲ್ ಎಂಬುವವರ ನಡುವೆ ವಾಗ್ವಾದ ನಡೆದಿತ್ತು.
ಈ ಸುದ್ದಿ ಓದಿದ್ದೀರಾ? ಶೇ. 40 ಹಾಲಿ ಸಂಸದರಿಗೆ ಕ್ರಿಮಿನಲ್ ಆರೋಪ, ಶೇ. 7 ಮಂದಿ ಶತ ಕೋಟ್ಯಾಧೀಶರು: ಎಡಿಆರ್ ವರದಿ
ತೀವ್ರ ವಾಗ್ವಾದದ ಸಂದರ್ಭದಲ್ಲಿ, ಪ್ರಕಾಶ್ ಪ್ರೀತಮ್‌ಗೆ ಕಪಾಳಮೋಕ್ಷ ಮಾಡಿದ ನಂತರ ಎರಡೂ ಸಮುದಾಯಗಳ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಎಸ್‌ಪಿ ಹೇಳಿದರು.
ಬುಧವಾರ ಬೆಳಗ್ಗೆ ಎರಡು ಸಮುದಾಯಗಳ ಸದಸ್ಯರು ಮತ್ತೊಮ್ಮೆ ಮುಖಾಮುಖಿಯಾಗಿ ಗುಂಡಿನ ಚಕಮಕಿಯಲ್ಲಿ ತೊಡಗಿದ್ದು, ಐವರು ಮೃತಪಟ್ಟು ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ವರಿಷ್ಠಾಧಿಕಾರಿ ಪ್ರದೀಪ್ ಶರ್ಮಾ ಹೇಳಿದರು.
ಗುಂಡಿನ ಚಕಮಕಿಯಲ್ಲಿ ಪ್ರಕಾಶ್ ಡಂಗಿ, ರಾಮ್ ನರೇಶ್ ಡಂಗಿ, ಸುರೇಂದ್ರ ಡಂಗಿ, ರಾಜೇಂದ್ರ ಪಾಲ್ ಮತ್ತು ರಾಘವೇಂದ್ರ ಪಾಲ್ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ 30 ವರ್ಷಕ್ಕಿಂತ ಮೇಲ್ಪಟ್ಟವರು. ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.