ಅನುಮಾನ, ಆಕ್ರೋಶ, ಆರೋಪ, ಪ್ರತ್ಯಾರೋಪಗಳ ಮಣಿಪುರ ಅಗ್ನಿಕುಂಡವಾಗಿದೆ. ಅಲ್ಲಿ ದಿನವೂ ಹತ್ತಾರು ಮಂದಿಯ ಮಾನ, ಪ್ರಾಣ ಹರಣವಾಗುತ್ತಿದೆ. ಹಿಂಸಾಚಾರದಲ್ಲಿ ಸತ್ತ ಮೃತದೇಹಗಳು ಗುರುತಿಸುವವರಿಲ್ಲದೇ ಶವಾಗಾರಗಳಲ್ಲೇ ಕೊಳೆಯುತ್ತಿವೆ. ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಿಂಸೆ, ದೌರ್ಜನ್ಯ ಎಸಗಲಾಗುತ್ತಿದೆ.
ಆಕೆಯ ಹೆಸರು ಲುವಾಂಗ್ಬಿ ಲಿಂತೋಗಂಬಿ ಹಿಜಾಮ್. 17 ವರ್ಷದ ಲುವಾಂಗ್ಬಿಗೆ ವೈದ್ಯೆಯಾಗಬೇಕೆನ್ನುವ ಕನಸು. ಅದಕ್ಕಾಗಿ ಕೋಚಿಂಗ್‌ಗೂ ಹೋಗುತ್ತಿದ್ದಳು. ಅವತ್ತೂ ಕೂಡ ಕೋಚಿಂಗ್ ಸೆಂಟರ್‌ನಲ್ಲಿ ಫಿಸಿಕ್ಸ್ ಮತ್ತು ಕೆಮಿಸ್ಟ್ರಿ ತರಗತಿಗೆ ಹೋಗಿದ್ದಳು. ಸಾಮಾನ್ಯವಾಗಿ ಅವರ ಅಪ್ಪನೇ ಆಕೆಯನ್ನು ಕೋಚಿಂಗ್ ಸೆಂಟರ್‌ಗೆ ಬಿಟ್ಟು ನಂತರ ಕರೆದುಕೊಂಡು ಬರುತ್ತಿದ್ದರು. ಆದರೆ, ಅಪ್ಪನಿಗೆ ಹುಷಾರಿಲ್ಲದೇ ಇದ್ದುದರಿಂದ ಅವತ್ತು ಹೋಗಲಾಗಲಿಲ್ಲ. ಅದೇ ತನ್ನ ಬದುಕಿನ ಕೊನೆಯಿಲ್ಲದ ಸಂಕಟಕ್ಕೆ ಕಾರಣವಾಗುತ್ತದೆಂದು ಆ ತಂದೆಗೆ ಗೊತ್ತಿರಲಿಲ್ಲ. ಅವತ್ತು ಮನೆಗೆ ಬರಬೇಕಿದ್ದ ಮಗಳು ವಾಪಸ್ ಬರಲೇ ಇಲ್ಲ; ಇವತ್ತಿಗೂ ಬಂದಿಲ್ಲ.
ತಮ್ಮ ಮಗಳಿಗಾಗಿ ಆ ಪೋಷಕರು ಹುಡುಕದ ಜಾಗವಿಲ್ಲ. ಭೇಟಿಯಾಗದ ವ್ಯಕ್ತಿಯಿಲ್ಲ. ಆಕೆ ತನ್ನ ಸಹಪಾಠಿ ಫಿಜಾಮ್ ಹೇಮನ್‌ಜಿತ್ ಸಿಂಗ್ ಜೊತೆ ಸ್ಕೂಟಿಯಲ್ಲಿ ಹೋಗುತ್ತಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇಬ್ಬರೂ ಪ್ರೇಮಿಗಳಾಗಿದ್ದರಿಂದ ಓಡಿಹೋಗಿರಬಹುದೆಂದು ಆರಂಭದಲ್ಲಿ ಅಂದುಕೊಂಡಿದ್ದರು. ಆದರೆ, ಅವತ್ತಿನಿಂದ ಫಿಜಾಮ್ ಹೇಮನ್‌ಜಿತ್ ಸಿಂಗ್ ಕೂಡ ನಾಪತ್ತೆಯಾಗಿದ್ದಾನೆ. ನಾಗಾಗಳ ಪ್ರಾಬಲ್ಯದ ಕೌಪುಮ್‌ನಿಂದ ಅವರಿಬ್ಬರ ಮೊಬೈಲ್‌ನ ಕೊನೇ ಸಿಗ್ನಲ್ ಕಂಡುಬಂದಿದೆ. ನಂತರ ಸ್ವಿಚ್ ಆಫ್ ಆಗಿದೆ.
ಫಿಜಾಮ್ ಹೇಮನ್‌ಜಿತ್ ಸಿಂಗ್ ಪೋಷಕರದ್ದು ಮತ್ತೊಂದು ಕಥೆ. ಫುಟ್‌ಬಾಲ್ ಪಂದ್ಯ ನೋಡಲು ಹೋಗುತ್ತೇನೆ ಎಂದು ಜುಲೈ 6ರಂದು ಮನೆ ಬಿಟ್ಟ ಫಿಜಾಮ್ ಹೇಮನ್‌ಜಿತ್ ಸಿಂಗ್, ವಾಪಸ್ ಬಂದೇ ಇಲ್ಲ. ಮಗ ಊಟ ಕೂಡ ಮಾಡದೇ ಮನೆ ಬಿಟ್ಟಿದ್ದ. ಆತನ ಬಳಿ ಹಣವೂ ಇರಲಿಲ್ಲ. ಮಗು ಎಷ್ಟು ಹಸಿದುಕೊಂಡಿದೆಯೋ ಏನೋ ಎಂದು ಆತನ ತಾಯಿ ಹಲುಬುತ್ತಿದ್ದಾಳೆ. ಅವರು ಯಾವ ಜಾಗದಿಂದ ನಾಪತ್ತೆಯಾಗಿದ್ದಾರೆ ಎನ್ನುವುದು ಪೊಲೀಸರಿಗೆ ಗೊತ್ತಿದೆ. ಮೊಬೈಲ್ ಲೊಕೇಷನ್ ಸೇರಿದಂತೆ ಹಲವು ವಿಧಾನಗಳ ಮೂಲಕ ಅವರನ್ನು ಪತ್ತೆ ಹಚ್ಚಲು ಪ್ರಯತ್ನಿಸುತ್ತಿಲ್ಲ ಎನ್ನುವುದು ಇಬ್ಬರು ಪೋಷಕರ ಆರೋಪ.
ನಾಪತ್ತೆ ಪ್ರಕರಣದ ಬಗ್ಗೆ ಮಣಿಪುರದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ಪೊಲೀಸರಿಗೆ ದೂರು ನೀಡಲಾಗಿದೆ. ಮುಖ್ಯಮಂತ್ರಿ ಬೀರೇನ್‌ಸಿಂಗ್ ಅವರನ್ನು ಭೇಟಿಯಾಗಿ ವಿನಂತಿಸಲಾಗಿದೆ. ರಾಜ್ಯಪಾಲ ಅನುಸೂಯ ಉಯಿಕ್ಯೆ, ರಕ್ಷಣಾ ಸಲಹೆಗಾರ, ಸ್ಥಳೀಯ ಶಾಸಕ ಎಲ್ಲರನ್ನೂ ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಯಾವುದರಿಂದಲೂ, ಯಾರಿಂದಲೂ ಏನೂ ಸಹಾಯ, ಸಹಕಾರ ಸಿಕ್ಕಿಲ್ಲ.
ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಆದರೂ ಪ್ರಯೋಜನವಾಗಿಲ್ಲ. ಮಗಳೇನಾದರೂ ಸತ್ತುಹೋಗಿದ್ದರೆ, ಅವಳ ಮೃತದೇಹವನ್ನಾದರೂ ಕೊಡಿ, ಅಂತಿಮ ಸಂಸ್ಕಾರವನ್ನು ನಡೆಸುತ್ತೇವೆ ಎಂದು ಕೇಳಿಕೊಳ್ಳುತ್ತಿದ್ದಾರೆ. ಅದಕ್ಕೆ ಉತ್ತರಿಸುವವರೇ ಇಲ್ಲವಾಗಿದ್ದಾರೆ. ಮಣಿಪುರದಲ್ಲಿ ಬಹಳ ದಿನಗಳ ಕಾಲ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿತ್ತು. ಪುನಾರಂಭವಾದ ಬಳಿಕ ಈ ಘಟನೆಗಳು ನಡೆದಿವೆ.
ಇದು ಕೇವಲ ಎರಡು ಕುಟುಂಬಗಳ ಕಥೆಯಲ್ಲ. ಇಡೀ ರಾಜ್ಯದ ಸಾವಿರಾರು ಕುಟುಂಬಗಳ ಕಥೆ. ಮಣಿಪುರವೆಂಬ ಒಂದಾನೊಂದು ಕಾಲದ ಸುಂದರ ರಾಜ್ಯದಲ್ಲಿ ಈಗ ಹಿಂಸಾಚಾರ, ಗಲಭೆ, ಕೊಲೆ, ಅತ್ಯಾಚಾರಗಳು ನಿತ್ಯದ ವಿದ್ಯಮಾನಗಳಾಗಿವೆ. ಅಲ್ಲಿ ಜನ ಮನೆ ಬಿಟ್ಟು ಹೊರಬರಲು ಹೆದರುತ್ತಿದ್ದಾರೆ. ಹೊರಗೆ ಬಂದರೆ, ವಾಪಸ್ ಮನೆಗೆ ಹೋಗುವುದು ಅನುಮಾನ. ಮನೆಯಲ್ಲಿರುವವರನ್ನೂ ಹುಡುಕಿ ಹುಡುಕಿ ಹೊಡೆದು ಕೊಲ್ಲಲಾಗುತ್ತಿದೆ. ಅದರಲ್ಲೂ ಮಹಿಳೆಯರನ್ನು ಹೆಚ್ಚಾಗಿ ಗುರಿಯಾಗಿಸಿಕೊಳ್ಳಲಾಗಿದೆ. ಅವರನ್ನು ಮನೆಗಳಿಂದ ಹೊರಗೆಳೆದು ಕ್ರೂರವಾಗಿ ನಡೆಸಿಕೊಳ್ಳಲಾಗುತ್ತಿದೆ. ಎರುಪ್ ಕಾಂಗ್‌ಪೋಕ್ಪಿ ಎನ್ನುವ ಹಳ್ಳಿಯಿಂದ ಮೂವರು ಮಹಿಳೆಯರನ್ನು ಅವರ ಮನೆಗಳಿಂದ ಹೊರಗೆಳೆದು ಬೆತ್ತಲುಗೊಳಿಸಿ ಅವಮಾನಿಸಲಾಗಿತ್ತು. ಅವರೊಬ್ಬರ ಮೇಲೆ ಸಾವಿರಾರು ಜನರ ಎದುರು ಮತ್ತೆ ಮತ್ತೆ ಅತ್ಯಾಚಾರ ಮಾಡಲಾಗಿದೆ.
ಮಣಿಪುರದಲ್ಲಿ ಇಡೀ ವ್ಯವಸ್ಥೆ ಹಳಿ ತಪ್ಪಿದೆ. ಇಲ್ಲಿ ಯಾವುದೂ ಸಮರ್ಪಕವಾಗಿಲ್ಲ. ಆದರೆ, ಮುಖ್ಯಮಂತ್ರಿ ಬೀರೇನ್‌ಸಿಂಗ್ ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದಾರೆ. ಅವರಿಂದ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು ಸಾಧ್ಯವಿಲ್ಲವೆಂದು ಸಾಬೀತಾಗಿದೆ.
ಪ್ರಧಾನಿ ಮೋದಿ ಈ ಬಗ್ಗೆ ತುರ್ತು ಗಮನ ಹರಿಸಬೇಕಾಗಿತ್ತು. ಆದರೆ, ಕಾಂಗ್‌ಪೋಕ್ಪಿ ಮಹಿಳೆಯರ ಬೆತ್ತಲೆ ಮೆರವಣಿಗೆ ನಂತರ, ಅಂದರೆ, ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿ 79 ದಿನ ಕಳೆದ ನಂತರ, ಅವರು ಕೇವಲ 30 ಸೆಕೆಂಡುಗಳ ಪ್ರತಿಕ್ರಿಯೆ ನೀಡಿದ್ದರು. ಅದೂ ಮಣಿಪುರವನ್ನು ಕಾಂಗ್ರೆಸ್ ಆಡಳಿತದ ರಾಜ್ಯಗಳಲ್ಲಿನ ಹಿಂಸಾಚಾರಕ್ಕೆ ಹೋಲಿಸಿ ಮಾತನಾಡಿದ್ದರು.
ಜಮ್ಮು ಕಾಶ್ಮೀರದಲ್ಲಿ ಎಲ್ಲ ರೀತಿಯ ಭಿನ್ನ ಧ್ವನಿಗಳನ್ನು ಅಡಗಿಸಿದ, ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕೇಂದ್ರದ ಅಧೀನದ ವಿವಿಧ ಸಂಸ್ಥೆಗಳ ಮೂಲಕ ಮುಗಿಬಿದ್ದ ಮೋದಿ ಸರ್ಕಾರಕ್ಕೆ ಮಣಿಪುರದಲ್ಲಿನ ಹಿಂಸಾಚಾರವನ್ನು ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಮಣಿಪುರದ ಕೊನೆಯಿಲ್ಲದ ಸಂಕಟದ ಬಗ್ಗೆ, ‘ವಿಶ್ವಗುರು’ವಿನ ವೈಫಲ್ಯದ ಬಗ್ಗೆ ಇಡೀ ವಿಶ್ವವೇ ಮಾತನಾಡುತ್ತಿದೆ. ಆದರೆ, ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿದರೂ, ವಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದರೂ ಮೋದಿಯವರದ್ದು ಮೌನ.
ಮೀತೀ, ಕುಕಿ, ನಾಗಾಗಳ ನಾಡು ಈಗ ಕ್ಷೋಭೆಯ ನೆಲವಾಗಿದೆ. ಒಂದು ಕ್ರಿಶ್ಚಿಯನ್ ಸಮುದಾಯ ಮತ್ತೊಂದು ಹಿಂದೂ ಸಮುದಾಯದ ನಡುವಿನ ಸಂಘರ್ಷ ರಾಜ್ಯವನ್ನು ಹಿಂಸಾಚಾರದ ಮಡಿಲಿಗೆ ನೂಕಿದೆ. ಮೇ 3ರಂದು ಕುಕಿ ಜನ ರಾಜ್ಯದ 16 ಜಿಲ್ಲೆಗಳ ಪೈಕಿ ಹತ್ತು ಜಿಲ್ಲೆಗಳಲ್ಲಿ ನಡೆಸಿದ ಬುಡಕಟ್ಟು ಐಕ್ಯತಾ ಜಾಥಾದ ಸಂದರ್ಭದಲ್ಲಿ ಸ್ಫೋಟಗೊಂಡ ಗಲಭೆ ರಾಜ್ಯವನ್ನು ಬೆಂಕಿಯ ಕೆನ್ನಾಲಿಗೆಯ ಮೇಲೆ ಕೂರಿಸಿ ಕುದಿಸುತ್ತಿದೆ. ಗಲಭೆಗಳಲ್ಲಿ ಇದುವರೆಗೆ 150ಕ್ಕೂ ಹೆಚ್ಚು ಜನ ಸತ್ತಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. 60 ಸಾವಿರ ಮಂದಿ ಮನೆ ಮಠ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. 12 ಸಾವಿರಕ್ಕೂ ಹೆಚ್ಚು ಮಂದಿ ನೆರೆಯ ಮಿಜೋರಾಂ ರಾಜ್ಯಕ್ಕೆ ಪಲಾಯನ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ: ಮಣಿಪುರ ಘಟನೆ | ಸಂಸತ್ತಿಗೆ ಕಪ್ಪು ಬಟ್ಟೆ ಧರಿಸಿ ಆಗಮಿಸಿದ ವಿಪಕ್ಷ ಸದಸ್ಯರು
ಮೀತೀಗಳು ಕುಕಿಗಳ ಪ್ರಾಬಲ್ಯದ ಜಾಗಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ ಕುಕಿಗಳು ಮೀತೀಗಳ ಪ್ರಾಬಲ್ಯದ ಸ್ಥಳಗಳಿಗೆ ಹೆಜ್ಜೆಯಿಡಲಾಗುತ್ತಿಲ್ಲ. ಕೇಂದ್ರದಿಂದ ಬಂದಿರುವ ಅಸ್ಸಾಂ ರೈಫಲ್ಸ್ ಕುಕಿಗಳಿಗೆ ಬೆಂಬಲ ಕೊಡುತ್ತಾರೆ ಎನ್ನುವ ಅನುಮಾನ ಮೀತೀಗಳಿಗೆ. ಮೀತೀ ಸಮುದಾಯದ ಮುಖ್ಯಮಂತ್ರಿಯಿಂದಾಗಿ ಪೊಲೀಸರು ಹಾಗೂ ಆಡಳಿತಾಂಗ ಅವರ ಪರವಾಗಿ ಕೆಲಸ ಮಾಡುತ್ತಿದೆ ಎನ್ನುವ ಆರೋಪ ಕುಕಿಗಳದ್ದು. ಹೀಗೆ ಅನುಮಾನ, ಆಕ್ರೋಶ, ಆರೋಪ, ಪ್ರತ್ಯಾರೋಪಗಳ ನಡುವೆ ದಿನವೂ ಅಲ್ಲಿ ಹತ್ತಾರು ಮಂದಿಯ ಮಾನ, ಪ್ರಾಣ ಹರಣವಾಗುತ್ತಿದೆ. ಹಿಂಸಾಚಾರದಲ್ಲಿ ಸತ್ತ ಹತ್ತಾರು ಮೃತದೇಹಗಳು ಗುರುತಿಸುವವರಿಲ್ಲದೇ ಶವಾಗಾರಗಳಲ್ಲೇ ಕೊಳೆಯುತ್ತಿವೆ. ಎರಡೂ ಸಮುದಾಯಗಳಲ್ಲಿನ ಮಹಿಳೆಯರನ್ನು ಗುರಿಯಾಗಿಸಿಕೊಂಡು ಹಿಂಸೆ, ದೌರ್ಜನ್ಯ ಎಸಗಲಾಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪ್ರಧಾನಿ ಇದರ ಬಗ್ಗೆ ಮಾತನಾಡುತ್ತಿಲ್ಲ. ಅದಾನಿ, ಬ್ರಿಜ್‌ಭೂಷನ್ ಸಿಂಗ್ ಚೀನಾ ಮತ್ತು ಮಣಿಪುರದ ಬಗ್ಗೆ ಪ್ರಧಾನಿಯವರದ್ದು ಮಹಾಮೌನ.
ಮಣಿಪುರದ ಅಮ್ಮಂದಿರ, ಅಕ್ಕಂದಿರ ಆಕ್ರಂದನ, ಆರ್ತನಾದ ಕೊನೆಯಾಗುವುದೆಂದು?
ಆಧಾರ: ದಿ ವೈರ್
ಜನರ ನಡುವೆ ದ್ವೇಷ ಹರಡಿದರೆ ಈ ರೀತಿಯ ಪರಿಣಾಮ ಎದುರಿಸಬೇಕಾಗುತ್ತದೆ. ಒಂದು ರಾಜ್ಯವನ್ನು ರಕ್ಫಿಸಲಾಗದವರು ರಾಷ್ಟ್ರವನ್ನು ಹೇಗೆ ರಕ್ಷಿಸಿಕೊಳ್ಳಲು ಸಾಧ್ಯ..