ಕಳೆದ ಮೂರು ತಿಂಗಳಿಂದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಅಂತ್ಯ ಕಾಣುತ್ತಿಲ್ಲ. ಇಂದು (ಆಗಸ್ಟ್ 04) ಮತ್ತೆ ಭುಗಿಲೆದ್ದ ಗಲಭೆಯಲ್ಲಿ ಪೊಲೀಸ್ ಶಸ್ತ್ರಾಗಾರದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಗಲಭೆಕೋರರ ಗುಂಪು ಲೂಟಿ ಮಾಡಿದೆ. ರಾಜಧಾನಿ ಸನಿಹದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸೇನಾಧಿಕಾರಿ ಮೃತಪಟ್ಟಿದ್ದಾರೆ.
ರಾಜಧಾನಿ ಇಂಫಾಲದಲ್ಲಿನ ಪೊಲೀಸ್ ಶಸ್ತ್ರಾಗಾರಕ್ಕೆ ನುಗ್ಗಿದ ಗುಂಪೊಂದು ಎಕೆ ಸರಣಿಯ ಬಂದೂಕುಗಳು, ವಿವಿಧ ಕ್ಯಾಲಿಬರ್‌ಗಳ 19 ಸಾವಿರಕ್ಕೂ ಹೆಚ್ಚಿನ ಸುತ್ತುಗಳ ಗುಂಡುಗಳು, ಘಾತಕ್ ಸರಣಿಯ ಬಂದೂಕುಗಳು, ಹಲವು ಪಿಸ್ತೂಲುಗಳು, 25 ಗುಂಡು ನಿರೋಧಕ ಜಾಕೆಟ್‌ಗಳು, 125 ಹ್ಯಾಂಡ್ ಗ್ರೆನೇಡ್‌ಗಳು ಸೇರಿದಂತೆ ಹಲವು ಶಸ್ತ್ರಗಳನ್ನು ಲೂಟಿ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏತನ್ಮಧ್ಯೆ, ಪೊಲೀಸರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಗುಂಡು ಹಾರಿಸುವ ಹಾಗೂ ಗಲಭೆ ಘಟನೆಗಳು ಕಡಿಮೆ ನಡೆದಿವೆ. ಪರಿಸ್ಥಿತಿ ಉದ್ವಿಗ್ನವಾಗಿರುವುದರಿಂದ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಸಂಪೂರ್ಣ ಕರ್ಫ್ಯೂ ವಿಧಿಸಲಾಗಿದೆ. ಪೂರ್ವ ಮತ್ತು ಪಶ್ಚಿಮ ಇಂಫಾಲ್ ಜಿಲ್ಲೆಗಳಲ್ಲಿ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಸುಮ್ಮನಿರದಿದ್ದರೆ ನಿಮ್ಮ ಮನೆಗಳಿಗೆ ಇಡಿ ಕಳಿಸಬೇಕಾಗುತ್ತದೆ: ವಿಪಕ್ಷ ಸದಸ್ಯರಿಗೆ ಕೇಂದ್ರ ಸಚಿವೆ ಎಚ್ಚರಿಕೆ
ಆದಾಗ್ಯೂ, ರಾಜ್ಯ ಸರ್ಕಾರ ಪೂರ್ವ ಮತ್ತು ಪಶ್ಚಿಮ ಇಂಫಾಲ್ ಜಿಲ್ಲೆಗಳಲ್ಲಿ ಕರ್ಫ್ಯೂವನ್ನು ಬೆಳಗ್ಗೆ 5 ರಿಂದ ಮಧ್ಯಾಹ್ನ 12ರವರೆಗೆ ಸಡಿಲಗೊಳಿಸಿದೆ. ಇದರಿಂದ ಸಾಮಾನ್ಯ ಜನತೆಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅನುಕೂಲವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಶ್ಚಿಮ ಇಂಫಾಲ್ ಜಿಲ್ಲೆಯ ಸೆಂಜಮ್ ಚಿರಾಂಗ್‌ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಮಣಿಪುರ ರೈಫಲ್ಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ಗುರುವಾರ(ಆಗಸ್ಟ್ 4), ಬಿಷ್ಣುಪುರ್ ಜಿಲ್ಲೆಯ ಕಾಂಗ್ವೈ ಮತ್ತು ಫೌಗಕ್ಚಾವೊ ಪ್ರದೇಶಗಳಲ್ಲಿ ಸೇನೆ ಮತ್ತು ಆರ್‌ಪಿಎಫ್ ಸಿಬ್ಬಂದಿ ಅಶ್ರುವಾಯು ಶೆಲ್‌ಗಳನ್ನು ಹಾರಿಸಿದ ನಂತರ ನಡೆದ ಘರ್ಷಣೆಯಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.