ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಇರ್ಷಲ್ವಾಡಿ ಗ್ರಾಮವೊಂದರಲ್ಲಿ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿದ್ದು, 78 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಅತ್ಯಂತ ಕಠಿಣ ಕಣಿವೆ ಭೂಪ್ರದೇಶ ಮತ್ತು ಭಾರೀ ಮಳೆಯಿಂದ ರಕ್ಷಣಾ ಕಾರ್ಯಗಳಿಗೆ ಅಡ್ಡಿಯಾಗಿದ್ದು, ನಾಪತ್ತೆಯಾದವರ ಪತ್ತೆಗೆ ಪರಿಹಾರ ತಂಡಗಳು ಪ್ರಯತ್ನ ಮುಂದುವರಿಸಿವೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.
ಬುಧವಾರ (ಜುಲೈ 19) ರಂದು ರಾತ್ರಿ ಸಂಭವಿಸಿದ ಭೂಕುಸಿತದಲ್ಲಿ ಇರ್ಷಲ್ವಾಡಿ ಉಪಗ್ರಾಮದ ಬಹುತೇಕ ಮನೆಗಳು ನೆಲಸಮಗೊಂಡಿವೆ. ಜ್ವಾಲಾಮುಖಿ ಪ್ರಾಂತ್ಯದ ಭಾಗವಾಗಿರುವ ಪರ್ವತ ಶ್ರೇಣಿಯು 60 ಮಿಲಿಯನ್ ವರ್ಷಗಳ ಹಿಂದೆ ರೂಪುಗೊಂಡಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಈ ಗ್ರಾಮದಲ್ಲಿ 43 ಮನೆಗಳಿದ್ದು 229 ಮಂದಿ ಮಾತ್ರ ವಾಸಿಸುತ್ತಿದ್ದಾರೆ. ಇವರಲ್ಲಿ ಸದ್ಯ ಮಾಹಿತಿಯಂತೆ 78 ಮಂದಿ ನಾಪತ್ತೆಯಾಗಿದ್ದಾರೆ. ದುರಂತದಲ್ಲಿ 144 ಮಂದಿಯನ್ನು ರಕ್ಷಿಸಲಾಗಿದೆ. ಇರ್ಷಲ್ವಾಡಿ ಗ್ರಾಮವನ್ನು ತಲುಪಲು ತುಂಬ ಕಷ್ಟ. ಅನುಭವಿ ಚಾರಣಿಗರು ಸಹ ಈ ಭೂಪ್ರದೇಶವನ್ನು ಅಪಾಯಕಾರಿ ಎಂದು ಪರಿಗಣಿಸುತ್ತಾರೆ.
ಗ್ರಾಮದ ಜನರು ಸ್ಥಳೀಯ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಕಾಡಿನಲ್ಲಿ ಮೇವು ಮತ್ತು ಕೆಲವು ಕೃಷಿ ಚಟುವಟಿಕೆಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಮಣಿಪುರ ಹಿಂಸಾಚಾರ | ಸದನದಲ್ಲಿ ನಿಯಮ 267ರಡಿ ಚರ್ಚೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ
ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವವರು ಬದುಕಿರುವ ಸಾಧ್ಯತೆ ಕಡಿಮೆಯಾಗಿದ್ದು, ಪರಿಹಾರ ಹಾಗೂ ಶೋಧ ಕಾರ್ಯಾಚರಣೆಯನ್ನು ಮುಂದುವರಿಸಬೇಕೇ ಅಥವಾ ಸ್ಥಗಿತಗೊಳಿಸಬೇಕೇ ಎಂಬ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಪರಿಹಾರ ಮತ್ತು ರಕ್ಷಣಾ ತಂಡಗಳು ಶನಿವಾರ ಆರು ಮೃತದೇಹಗಳನ್ನು ಹೊರತೆಗೆದಿದ್ದು, 98 ಮಂದಿ ತಾತ್ಕಾಲಿಕ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಹಿಮಾಲಯ ಪರ್ವತ ಏರಿರುವ ಸಂತೋಷ್ ದಗಾಡೆ ಅವರು ಇರ್ಷಲ್ವಾಡಿಗೆ ಆಗಾಗ ಚಾರಣ ಮಾಡುತ್ತಿದ್ದರು ಮತ್ತು ಗ್ರಾಮಸ್ಥರಿಂದ ಚಹಾ ಮತ್ತು ತಿಂಡಿಗಳನ್ನು ಪಡೆದುಕೊಳ್ಳುತ್ತಿದ್ದರು. ಭೂಕುಸಿತದ ಸುದ್ದಿಯ ನಂತರ, ಅವರು ಸಹಾಯ ಮಾಡಲು ಹೋದಾಗ ಕೆಲವು ಮನೆಗಳನ್ನು ಹೊರತುಪಡಿಸಿ ಇಡೀ ಗ್ರಾಮವು ನೆಲದಡಿಯಲ್ಲಿ ಹೂತುಹೋಗಿತ್ತು.
“ನನಗೆ ನನ್ನ ಕಣ್ಣುಗಳನ್ನು ನಂಬಲಾಗಲಿಲ್ಲ. ನಾನು ಪರಿಚಿತ ಮನೆಗಳನ್ನು ಹುಡುಕಲು ಪ್ರಾರಂಭಿಸಿದೆ. ಎಲ್ಲೆಡೆ ಹತಾಶೆ ಇತ್ತು,” ಎಂದು ಸಂತೋಷ್ ದಗಾಡೆ ದುಃಖ ತೋಡಿಕೊಂಡರು.