ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಕುಕಿ ಬುಡಕಟ್ಟು ಸಮುದಾಯಕ್ಕೆ ಸೇನೆಯ ರಕ್ಷಣೆ ಕೋರಿ ಸಲ್ಲಿಸಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಮಂಗಳವಾರ ನಿರಾಕರಿಸಿದೆ.
ʻಇದು ಸಂಪೂರ್ಣವಾಗಿ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಾಗಿದೆʼ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎಂಎಂ ಸುಂದ್ರೇಶ್ ಅವರಿದ್ದ ರಜಾಕಾಲದ ಪೀಠವು, ವಿಚಾರಣೆಯನ್ನು ಜುಲೈ 3ಕ್ಕೆ ಮುಂದೂಡಿದೆ.
ʻಮಣಿಪುರ ಬುಡಕಟ್ಟು ವೇದಿಕೆʼ ಪರವಾಗಿ ವಿಷಯ ಪ್ರಸ್ತಾಪಿಸಿದ. ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್, ʻಕೇಂದ್ರ ಸರ್ಕಾರವು ನೀಡಿರುವ ಭದ್ರತೆಯ ಭರವಸೆಯನ್ನು ನಂಬಲು ಸಾಧ್ಯವಿಲ್ಲ. ಜನಾಂಗೀಯ ಹಿಂಸಾಚಾರದಿಂದ ನಲುಗಿರುವ ಮಣಿಪುರದಲ್ಲಿ ಅಲ್ಪಸಂಖ್ಯಾತ ಕುಕಿ ಬುಡಕಟ್ಟು ಜನಾಂಗದವರಿಗೆ ಸೇನಾ ರಕ್ಷಣೆ ಕೋರಿದ್ದರು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ʻ ಭದ್ರತಾ ಏಜೆನ್ಸಿಗಳು ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿರುವುದರಿಂದ ತುರ್ತು ವಿಚಾರಣೆಯ ಅಗತ್ಯವಿಲ್ಲʼ ಎಂದು ಹೇಳಿದರು.
ʻಕೇಂದ್ರ ಮತ್ತು ಮಣಿಪುರ ಸರ್ಕಾರಗಳು ಜಂಟಿಯಾಗಿ ಈಶಾನ್ಯ ರಾಜ್ಯದ ಕುಕಿ ಬುಡಕಟ್ಟು ಜನಾಂಗದವರ “ಜನಾಂಗೀಯ ನಿರ್ಮೂಲನೆ” ಗುರಿಯನ್ನು ಹೊಂದಿದೆ. ಎರಡೂ ಸರ್ಕಾರಗಳು ಕೋಮುವಾದಿ ಕಾರ್ಯಸೂಚಿಯನ್ನು ಹೊಂದಿವೆʼ ಎಂದು ಮಣಿಪುರ ಬುಡಕಟ್ಟು ವೇದಿಕೆ ಆರೋಪಿಸಿದೆ.
ಮೇ 3 ರಂದು ಮಣಿಪುರದಲ್ಲಿ ಮೈತೆಯಿ ಮತ್ತು ಕುಕಿ ಸಮುದಾಯಗಳ ನಡುವೆ ಭುಗಿಲೆದ್ದ ಹಿಂಸಾಚಾರದಲ್ಲಿಈಗಾಗಲೇ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈತೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರು, ನಾಗಾಗಳು ಮತ್ತು ಕುಕಿಗಳು ರಾಜ್ಯದ ಜನಸಂಖ್ಯೆಯ ಶೇಕಡಾ 40 ರಷ್ಟಿದ್ದಾರೆ. ಈ ಜನಾಂಗದವರು ಹೆಚ್ಚಾಗಿ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.