- ಜನವರಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಯೂಸುಫ್ ಮಲಿಕ್
- ಯೂಸುಫ್ ಅವರನ್ನು ತಕ್ಷಣ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ
ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕ ಯೂಸುಫ್ ಮಲಿಕ್ ಅವರ ವಿರುದ್ಧದ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್‌ಎಸ್‌ಎ) ಉಲ್ಲಂಘನೆ ಆರೋಪಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಏಪ್ರಿಲ್ 11) ರದ್ದುಗೊಳಿಸಿದೆ.
ಯಾವುದೇ ಆಧಾರವಿಲ್ಲದೆ ಪಾಲಿಕೆ ತೆರಿಗೆ ವಸೂಲಾತಿ ಪ್ರಕರಣದಲ್ಲಿ ಎನ್‌ಎಸ್‌ಎ ಜಾರಿಗೊಳಿಸುವುದು ಸೇಡಿನ ರಾಜಕಾರಣಕ್ಕೆ ಕಾರಣವಾಗಬಹುದು ಎಂದು ನ್ಯಾಯಾಲಯ ಉತ್ತರ ಪ್ರದೇಶ ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.
ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ನೇತೃತ್ವದ ಪೀಠ ವಿಚಾರಣೆ ನಡೆಸಿ, ರಾಮ್‌ಪುರ ಜೈಲಿನಿಂದ ಯೂಸುಫ್ ಮಲಿಕ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಎನ್‌ಎಸ್‌ಎ ಜಾರಿಗೊಳಿಸಿದ್ದನ್ನು ಪ್ರಶ್ನಿಸಿ ಯೂಸುಫ್ ಮಲಿಕ್ ಅರ್ಜಿ ಸಲ್ಲಿಸಿದ್ದರು
“ಆದಾಯ ಬಾಕಿಗಳ ಮರುಪಡೆಯುವಿಕೆಗಾಗಿ ಎನ್‌ಎಸ್‌ಎ ವಿಧಿಸಿರುವುದು ನಮಗೆ ಆಶ್ಚರ್ಯವಾಗಿದೆ. ಪ್ರಕರಣದಲ್ಲಿ ಯಾವುದೇ ಆಧಾರವಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಆದ್ದರಿಂದ ಎನ್‌ಎಸ್‌ಎ ರದ್ದುಗೊಳಿಸಲಾಗುತ್ತಿದೆ. ಅರ್ಜಿದಾರರಾಗಿರುವ ಯೂಸುಫ್ ಮಲಿಕ್ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸುತ್ತೇವೆ” ಎಂದು ಪೀಠ ಹೇಳಿದೆ.
ಯೂಸುಫ್ ಮಲಿಕ್ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ತಡಮಾಡದೆ ರಾಮ್‌ಪುರ ಜಿಲ್ಲಾ ನ್ಯಾಯಾಧೀಶರಿಗೆ ಮಾಹಿತಿ ರವಾನಿಸುವಂತೆ ರಾಜ್ಯ ಸರ್ಕಾರಕ್ಕೆ ಪೀಠ ಸೂಚಿಸಿತು.
ಹಿಂದಿನ ವಿಚಾರಣೆಗಳಲ್ಲಿ ನ್ಯಾಯಾಲಯದ ಸಲಹೆಯ ಹೊರತಾಗಿಯೂ ಯೂಸುಫ್ ವಿರುದ್ಧದ ಎನ್‌ಎಸ್‌ಎ ಆರೋಪಗಳನ್ನು ಹಿಂತೆಗೆದುಕೊಳ್ಳಲು ರಾಜ್ಯ ಸರ್ಕಾರ ನಿರಾಸಕ್ತಿ ವಹಿಸಿದೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ನ್ಯಾಯಾಲಯದ ಆದೇಶವನ್ನು ತಕ್ಷಣವೇ ರವಾನಿಸುವಂತೆ ಯೂಸುಫ್ ಮಲಿಕ್ ಅವರ ಪರ ಹಿರಿಯ ವಕೀಲ ಎಸ್‌ಡಬ್ಲ್ಯುಎ ಖಾದ್ರಿ ಪೀಠಕ್ಕೆ ಮನವಿ ಮಾಡಿದರು. ಪೀಠ ಅವರ ಮನವಿಯನ್ನು ಪುರಸ್ಕರಿಸಿತು.
ಈ ಸುದ್ದಿ ಓದಿದ್ದೀರಾ? ಸಚಿನ್ ಪೈಲಟ್ ಸತ್ಯಾಗ್ರಹ; ಕಾಂಗ್ರೆಸ್ ವರಿಷ್ಠರೊಂದಿಗೆ ಮಾತುಕತೆ ಸಾಧ್ಯತೆ
ತಮ್ಮ ವಿರುದ್ಧ ಎನ್‌ಎಸ್‌ಎ ಜಾರಿಗೊಳಿಸಿರುವ ಉತ್ತರಪ್ರದೇಶ ಸರ್ಕಾರದ ವಿರುದ್ಧ ಸಲ್ಲಿಸಿದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆ ನಡೆಸುತ್ತಿಲ್ಲ ಎಂದು ಆರೋಪಿಸಿ ಎಸ್‌ಪಿ ನಾಯಕ ಅಜಂ ಖಾನ್ ಅವರ ಆಪ್ತ ಸಹಾಯಕ ಯೂಸುಫ್ ಅವರು ಜನವರಿಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.