- ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಸುಳ್ಳು ಹೇಳಿದ್ದ ಯೂಟ್ಯೂಬರ್
- ಆರೋಪಿಯನ್ನು ಏಪ್ರಿಲ್ 5ರಂದು ಬಿಹಾರದಲ್ಲಿ ಬಂಧಿಸಿದ್ದ ತಮಿಳುನಾಡು ಪೊಲೀಸರು
ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ನಕಲಿ ವಿಡಿಯೋಗಳನ್ನು ಶೇರ್ ಮಾಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಬಿಹಾರ ಮೂಲದ ಯೂಟ್ಯೂಬರ್ ಮನೀಶ್ ಕಶ್ಯಪ್ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ ಜಾರಿಗೊಳಿಸಿರುವ ತಮಿಳುನಾಡು ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ಈ ಬಗ್ಗೆ ಪ್ರಶ್ನಿಸಿರುವ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, “ಈ ವ್ಯಕ್ತಿಯ ವಿರುದ್ಧ ಎನ್ಎಸ್ಎ ಹೇರಿಕೆ? ಈ ವ್ಯಕ್ತಿಯ ವಿರುದ್ಧ ಏತಕ್ಕಾಗಿ ಈ ಪ್ರತೀಕಾರ?” ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ತಮಿಳುನಾಡು ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, “ಬಿಹಾರದಿಂದ ವಲಸೆ ಬಂದ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ದಾಳಿ ನಡೆಯುತ್ತಿದೆ ಎಂದು ಮನೀಶ್ ಕಶ್ಯಪ್ ನಕಲಿ ವಿಡಿಯೋ ಮಾಡುತ್ತಿದ್ದಾರೆ. ಅವರಿಗೆ 60 ಲಕ್ಷ ಹಿಂಬಾಲಕರು ಇದ್ದಾರೆ. ಅವರೊಬ್ಬ ರಾಜಕಾರಣಿ. ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು ಪತ್ರಕರ್ತರಲ್ಲ” ಎಂದು ಹೇಳಿದರು.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ ಎಸ್ ನರಸಿಂಹ ಒಳಗೊಂಡ ಪೀಠವು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಕಶ್ಯಪ್ ಅವರ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ ಮನವಿಯ ಕುರಿತು ತಮಿಳುನಾಡು ಮತ್ತು ಬಿಹಾರ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.
ಈ ಸುದ್ದಿ ಓದಿದ್ದೀರಾ? ಸಲಿಂಗ ವಿವಾಹ ಮಾನ್ಯತೆ | ದೈಹಿಕ ಸಂಬಂಧ ಮಾತ್ರವಲ್ಲ ಭಾವನಾತ್ಮಕ ಸಂಬಂಧ ಹೊಂದಿದೆ : ಡಿ ವೈ ಚಂದ್ರಚೂಡ್
ಪ್ರಸ್ತುತ ಕಶ್ಯಪ್ ವಿರುದ್ಧ ತಮಿಳುನಾಡು ಮತ್ತು ಬಿಹಾರ ಎರಡೂ ರಾಜ್ಯಗಳಲ್ಲೂ ಅನೇಕ ಎಫ್‌ಐಆರ್‌ಗಳು ದಾಖಲಾಗಿವೆ. ಬಿಹಾರದ ವಕೀಲರು ಕಶ್ಯಪ್ ಅವರನ್ನು ‘ಸರಣಿ ತಪ್ಪು ಮಾಡಿದವ’ ಎಂದು ಬಣ್ಣಿಸಿ, “ಆತನ ಕೃತ್ಯಗಳು ಕೇವಲ ವಿಡಿಯೋಗಳನ್ನು ಮಾಡುವುದಕ್ಕೆ ಸೀಮಿತವಾಗಿಲ್ಲ. ಸೆಕ್ಷನ್ 307 ಸೇರಿದಂತೆ ಗಂಭೀರವಾದ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ” ಎಂದು ತಿಳಿಸಿದ್ದಾರೆ.
ಕಶ್ಯಪ್ ವಿರುದ್ಧ ದಾಖಲಾಗಿರುವ ಅನೇಕ ಎಫ್‌ಐಆರ್‌ಗಳನ್ನು ಗಮನದಲ್ಲಿಟ್ಟುಕೊಂಡು ಮಧುರೈ ಜೈಲಿನಿಂದ ಬೇರೆ ಕಾರಾಗೃಹಕ್ಕೆ ಸ್ಥಳಾಂತರಿಸದಂತೆ ಸುಪ್ರೀಂ ಕೋರ್ಟ್ ತಮಿಳುನಾಡು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಕಳೆದ ವಾರ ಕಶ್ಯಪ್ ಅವರು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ಸಲ್ಲಿಸಿದ ಮನವಿಯ ಮೇರೆಗೆ ಕೇಂದ್ರ, ತಮಿಳುನಾಡು ಮತ್ತು ಬಿಹಾರ ಸರ್ಕಾರಕ್ಕೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿತ್ತು.
ಏಪ್ರಿಲ್ 5ರಂದು, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಿದ ನಕಲಿ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಬಿಹಾರ ಮೂಲದ ಯೂಟ್ಯೂಬರ್ ಮನೀಶ್ ಕಶ್ಯಪ್ ಅವರನ್ನು ತಮಿಳುನಾಡು ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಬಂಧಿಸಿದ್ದರು.
ಕಳೆದ ತಿಂಗಳು, ತಮಿಳುನಾಡಿನಲ್ಲಿ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಹೇಳಲಾದ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಸತ್ಯ ಪರಿಶೀಲಕರು ಮತ್ತು ಪೊಲೀಸ್ ಇಲಾಖೆ ವಿಡಿಯೋಗಳು ನಕಲಿ ಎಂದು ಸ್ಪಷ್ಟಪಡಿಸಿತ್ತು.
ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಕೂಡ ವಿಡಿಯೋ ಬಗ್ಗೆ ಹೇಳಿಕೆ ನೀಡಿ, “ವಲಸೆ ಕಾರ್ಮಿಕರ ಬಗ್ಗೆ ಇಂತಹ ವದಂತಿಗಳನ್ನು ನಂಬಬೇಡಿ ಮತ್ತು ರಾಜ್ಯವು ವಲಸೆ ಕಾರ್ಮಿಕರಿಗೆ ಅಗತ್ಯವಿರುವ ಎಲ್ಲ ಬೆಂಬಲ ನೀಡುತ್ತದೆ. ತಮಿಳುನಾಡಿನಲ್ಲಿ ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಿಂದ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಸುರಕ್ಷತೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತದೆ” ಎಂದು ಭರವಸೆ ನೀಡಿದ್ದರು.