ಅತ್ಯಾಚಾರ ಸಂತ್ರಸ್ತೆಯ ಕುಜ ದೋಷ ಅಧ್ಯಯನ ಮಾಡಲು ಲಖನೌ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗಕ್ಕೆ ಸೂಚಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ.
ಮದುವೆಯ ನೆಪದಲ್ಲಿ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯು ನಂತರದಲ್ಲಿ ಕುಜ ದೋಷ ನೆಪವೊಡ್ಡಿ ಮದುವೆ ತಿರಸ್ಕರಿಸಿದ್ದ. ಆರೋಪಿಯ ಜಾಮೀನು ಅರ್ಜಿ ನಿರ್ಧರಿಸುವ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ಸಂತ್ರಸ್ತೆಯ ಕುಜದೋಷ ಅಧ್ಯಯನ ಮಾಡಲು ಲಖನೌ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗಕ್ಕೆ ಸೂಚಿಸಿತ್ತು.
ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಪಂಕಜ್ ಮಿಥಾಲ್ ಅವರ ಪೀಠವು, ಜಾತಕ ಜ್ಯೋತಿಷ್ಯ ಮುಂತಾದವು ಕೋರ್ಟಿನ ಪರಿಗಣನೆಗೆ ಬರುವುದಿಲ್ಲ ಎಂದು ಹೇಳಿ ಅಲಹಾಬಾದ್ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಹೈಕೋರ್ಟ್ನ ಲಖನೌ ಪೀಠವು ಮೇ 23 ರಂದು ನೀಡಿದ್ದ ಆದೇಶವನ್ನು ಗಮನಿಸಿದ ನಂತರ ಸುಪ್ರೀಂ ಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ಕೈಗೆತ್ತಿಕೊಂಡಿತ್ತು.
ಈ ಸುದ್ದಿ ಓದಿದ್ದೀರಾ? ತ್ರಿವಳಿ ರೈಲು ದುರಂತ ಸ್ಥಳಕ್ಕೆ ಪ್ರಧಾನಿ ಭೇಟಿ, ಮೃತರ ಕುಟುಂಬಗಳಿಗೆ 10 ಲಕ್ಷ ಪರಿಹಾರ; ಹಲವು ರೈಲುಗಳು ರದ್ದು
ಸುಪ್ರೀಂ ಕೋರ್ಟ್ನಲ್ಲಿ ಸಂತ್ರಸ್ತೆಯ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಹೈಕೋರ್ಟ್ನ ನಿರ್ದೇಶನವು ಗೊಂದಲವನ್ನುಂಟು ಮಾಡುತ್ತದೆ. ಈ ಕಾರಣದಿಂದ ಆದೇಶಕ್ಕೆ ತಡೆ ನೀಡಬೇಕೆಂದು ಕೋರಿದ್ದರು.
“ಸುಪ್ರೀಂಕೋರ್ಟ್ ಪ್ರಕರಣವನ್ನು ಸ್ವಯಂ ಪ್ರೇರಿತವಾಗಿ ತೆಗೆದುಕೊಳ್ಳುತ್ತದೆ. ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ಮೇ 23 ರಂದು ಅಲಹಾಬಾದ್ ಹೈಕೋರ್ಟ್ನ ನ್ಯಾಯಾಧೀಶರು ನೀಡಿದ ಆದೇಶಕ್ಕೆ ನಾವು ತಡೆ ನೀಡುತ್ತೇವೆ ಮತ್ತು ಅರ್ಹತೆಯ ಮೇಲೆ ಜಾಮೀನು ಅರ್ಜಿಯನ್ನು ನಿರ್ಧರಿಸಲು ಹೈಕೋರ್ಟ್ಗೆ ಕೇಳುತ್ತೇವೆ. ಅಲ್ಲದೆ ಮೂರು ವಾರಗಳಲ್ಲಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸುವಂತೆ ವಿಶ್ವವಿದ್ಯಾಲಯಕ್ಕೆ ಸೂಚಿಸಲಾಗಿದೆ” ಎಂದು ಪೀಠ ಹೇಳಿದೆ.
ಉತ್ತರಪ್ರದೇಶದಲ್ಲಿ ಮದುವೆಯಾಗುವುದಾಗಿ ಹೇಳಿ ನಂಬಿಸಿ ಅತ್ಯಾಚಾರವೆಸಗಿದ್ದ ಆರೋಪಿ, ನಂತರದಲ್ಲಿ ಆಕೆಗೆ ಕುಜದೋಷವಿದೆ ಎಂದು ಹೇಳಿ ಮದುವೆಯನ್ನು ನಿರಾಕರಿಸಿದ್ದ. ಆರೋಪಿಯನ್ನು ಅತ್ಯಾಚಾರದ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದರು. ಇದೇ ವೇಳೆ ಆರೋಪಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾನೆ. ಮೇ 23 ರಂದು ಅರ್ಜಿ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಧೀಶರಾದ ಬ್ರಿಜ್ ರಾಜ್ ಸಿಂಗ್ ಅವರು ಅತ್ಯಾಚಾರ ಸಂತ್ರಸ್ತೆಗೆ ಕುಜ ದೋಷ ಇದೆಯೇ ಎಂಬುದನ್ನು ನಿರ್ಧರಿಸಲು ಆಕೆಯ ಜಾತಕವನ್ನು ಲಖನೌ ವಿಶ್ವವಿದ್ಯಾನಿಲಯದ ಜ್ಯೋತಿಷ್ಯ ವಿಭಾಗಕ್ಕೆ ಕಳುಹಿಸಲು ಆದೇಶಿಸಿದ್ದರು.