ಶಿಕ್ಷಕರಿಗೆ ಮೀಸಲಿಟ್ಟ ನೀರನ್ನು ಕುಡಿದ ಕಾರಣಕ್ಕಾಗಿ ಶಿಕ್ಷಕನೊಬ್ಬ ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ. ದಲಿತ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ.
7ನೇ ತರಗತಿಯಲ್ಲಿ ಓದುತ್ತಿದ್ದ 12 ವರ್ಷದ ವಿದ್ಯಾರ್ಥಿ ಶಿಕ್ಷಕರಿಗೆ ಮೀಸಲಿಟ್ಟಿದ್ದ ನೀರು ಕುಡಿದಿದ್ದಾನೆ. ಇದರಿಂದ ಕೋಪಗೊಂಡ ಶಿಕ್ಷಕ ಗಂಗಾರಾಮ್ ಗುರ್ಜರ್ ವಿದ್ಯಾರ್ಥಿಯನ್ನು ಮನಬಂದಂತೆ ಥಳಿಸಿದ್ದಾನೆ.
ಘಟನೆ ನಡೆದ ನಂತರ ಆಕ್ರೋಶಗೊಂಡ ವಿದ್ಯಾರ್ಥಿಯ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ನೂರಕ್ಕೂ ಹೆಚ್ಚು ಜನರು ಶಾಲೆಗೆ ಆಗಮಿಸಿ ಆರೋಪಿ ಶಿಕ್ಷಕ ಗಂಗಾರಾಮ್ ಗುರ್ಜರ್‌ನನ್ನು ತರಾಟೆಗೆ ತೆಗೆದುಕೊಂಡರು.
ಘಟನೆಯ ವಿಕೋಪವನ್ನು ಅರಿತ ಪೊಲೀಸರು ಶಾಲೆಗೆ ಆಗಮಿಸಿ ಶಿಕ್ಷಕನನ್ನು ಜನಸಂದಣಿಯಿಂದ ರಕ್ಷಿಸಿ ಠಾಣೆಗೆ ಕರೆದೊಯ್ದರು. ನಂತರ ಪೋಷಕರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಶಿಕ್ಷಕನನ್ನು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದಾರಾ? ತಕ್ಕ ಬೆಲೆ ತೆರುತ್ತಾರೆ: ‘ಇಂಡಿಯಾ’ ಹಾಗೂ ‘ಭಾರತ’ ವಿವಾದದ ಬಗ್ಗೆ ರಾಹುಲ್ ಕಿಡಿ
“ಬೆಳಗಿನ ಶಾಲಾ ಪ್ರಾರ್ಥನೆಯನ್ನು ಮುಗಿಸಿದ ನಂತರ ಹಲ್ಲೆಗೊಳಗಾದ ವಿದ್ಯಾರ್ಥಿ ಒಳಗೊಂಡು ಕೆಲವು ವಿದ್ಯಾರ್ಥಿಗಳು ಶಿಕ್ಷಕರಿಗೆ ಮೀಸಲಿಟ್ಟಿದ್ದ ನೀರನ್ನು ಆಕಸ್ಮಿಕವಾಗಿ ಕುಡಿದಿದ್ದಾರೆ. ಉಳಿದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ದಲಿತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗೆ ಮಾತ್ರ ಶಿಕ್ಷಕ ಗಂಗಾರಾಮ್ ಗುರ್ಜರ್ ಹಲ್ಲೆ ನಡೆಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಭರತ್‌ಪುರದ ಎಸ್‌ಪಿ ಮೃದುಲ್ ಕಚವಾ ತಿಳಿಸಿದ್ದಾರೆ.
“ನನ್ನ ಸಹೋದರ ಶಿಕ್ಷಕರಿಗೆ ಮೀಸಲಿಟ್ಟಿದ್ದ ಪಾತ್ರೆಯಲ್ಲಿ ನೀರು ಕುಡಿದಿದ್ದಕ್ಕಾಗಿ ಶಿಕ್ಷಕ ಗಂಗಾರಾಮ್ ಗುರ್ಜರ್ ದೊಣ್ಣೆಯಿಂದ ಅಮಾನುಷವಾಗಿ ಥಳಿಸಿದ್ದಾರೆ. ಹಲ್ಲೆ ಮಾಡುವುದರ ಜೊತೆ ಜಾತಿ ನಿಂದನೆಯನ್ನು ಮಾಡಿದ್ದಾನೆ. ಹಲ್ಲೆಯಿಂದ ನನ್ನ ಸಹೋದರನಿಗೆ ಮೈಮೇಲೆ ತೀವ್ರ ಗಾಯಗಳಾಗಿದೆ” ಎಂದು ಸಂತ್ರಸ್ತ ವಿದ್ಯಾರ್ಥಿಯ ಸಹೋದರ ರಾನ್ ಸಿಂಗ್ ತಿಳಿಸಿದ್ದಾರೆ.