ಮೇಕೆಯೊಂದನ್ನು ಕಳವು ಮಾಡಲಾಗಿದೆ ಎಂಬ ಶಂಕೆಯಲ್ಲಿ ಓರ್ವ ದಲಿತ ವ್ಯಕ್ತಿ ಒಳಗೊಂಡು ಇಬ್ಬರು ಯುವಕರನ್ನು ತಲೆ ಕೆಳಕಾಗಿ ನೇತು ಹಾಕಿ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ತೆಲಂಗಾಣದ ಮಂಚಿರಿಯಾಲ್ ಜಿಲ್ಲೆಯ ಮಂದಮಾರಿ ಪಟ್ಟಣದಲ್ಲಿ ನಡೆದಿದೆ.
ಘಟನೆಗ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಕೊಮುರಾಜುಲ ರಾಮುಲು, ಅವರ ಪತ್ನಿ ಸ್ವರೂಪ ಮತ್ತು ಪುತ್ರ ಶ್ರೀನಿವಾಸ್ ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸ್ಥಳೀಯ ಪೊಲೀಸರ ಪ್ರಕಾರ, ಮಂದಮಾರಿಯ ಅಂಗಡಿ ಬಜಾರ್‌ನ ಕೋಮುರಾಜು ರಾಮುಲು, ಆತನ ಪತ್ನಿ ಸ್ವರೂಪ ಹಾಗೂ ಅವರ ಪುತ್ರನಾದ ಶ್ರೀನಿವಾಸ್ ಪಟ್ಟಣದ ಹೊರವಲಯದಲ್ಲಿನ ಗಂಗನೀಲ್ಲಪಂಪುಲ ಬಳಿ ಮೇಕೆಯ ಗುಂಪೊಂದನ್ನು ಸಾಕಿಕೊಂಡಿದ್ದರು. ಆ ಗುಂಪಿನಿಂದ ಮೇಕೆಯೊಂದು ಕಾಣೆಯಾಗಿರುವುದು ಇಪ್ಪತ್ತು ದಿನಗಳ ಹಿಂದೆ ಅವರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಗೋಪಾಲಕ ತೇಜಾ ಮತ್ತು ಆತನ ದಲಿತ ಸ್ನೇಹಿತ ಚಿಲುಮುಲ ಕಿರಣ್ ಅವರನ್ನು ಮೇಕೆಯನ್ನು ಕದ್ದಿರುವ ಶಂಕೆಯ ಮೇರೆಗೆ ಕಳೆದ ಶುಕ್ರವಾರ ಶೆಡ್‌ಗೆ ಕರೆಸಲಾಗಿತ್ತು.
ಶೆಡ್‌ಗೆ ಕರೆಸಿದ ನಂತರ ಅವರನ್ನು ಕಟ್ಟಿ ತಲೆಕೆಳಕಾಗಿ ನೇತು ಹಾಕಿದ್ದಾರೆ. ನಂತರ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಆರೋಪಿಗಳೆ ಈ ಘಟನೆಯನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸೆ.5ರಂದು ‘ಇಂಡಿಯಾ’ ಸಂಸದರ ಸಭೆ ಕರೆದ ಖರ್ಗೆ; ಒಂದು ಚುನಾವಣೆಯ ಬಗ್ಗೆ ವಾಗ್ದಾಳಿ
ಶನಿವಾರದಂದು ತೀವ್ರವಾಗಿ ಗಾಯಗೊಂಡಿದ್ದ ತೇಜಾ ಹಾಗೂ ಕಿರಣ್ ತಮ್ಮ ಮನೆಗಳಿಗೆ ಹಿಂದಿರುಗಿದ ನಂತರ ಈ ಘಟನೆಯು ಬೆಳಕಿಗೆ ಬಂದಿದೆ.
ಕೂಡಲೇ ಮಂದಾಮಾರಿಗೆ ಧಾವಿಸಿರುವ ಬೆಲ್ಲಂಪಲ್ಲಿ ಸಹಾಯಕ ಪೊಲೀಸ್ ಆಯುಕ್ತ ಬಿ. ಸಾದಯ್ಯ ಹಾಗೂ ಸಬ್ ಇನ್ಸ್‌ಪೆಕ್ಟರ್ ಚಂದ್ರಕುಮಾರ್, ಘಟನೆಯ ಕುರಿತು ವಿಚಾರಣೆ ಕೈಗೊಂಡಿದ್ದಾರೆ. ನಂತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಆರೋಪಿ ಕುಟುಂಬದ ಮೂವರು ಸದಸ್ಯರು ಹಾಗೂ ಅವರ ಸಹಾಯಕ ನರೇಶ್ ಎಂಬ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.