ಉತ್ತರಪ್ರದೇಶದ ಮುಜಾಫರ್ನಗರ ಶಾಲೆಯಲ್ಲಿ ಶಿಕ್ಷಕಿಯೊಬ್ಬರು ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಇತರ ವಿದ್ಯಾರ್ಥಿಗಳಿಗೆ ಸೂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯನ್ನು ಮುಚ್ಚುವಂತೆ ಶಿಕ್ಷಣ ಇಲಾಖೆ ಶಾಲಾ ಸಂಚಾಲಕರಿಗೆ ನೋಟಿಸ್ ನೀಡಿದೆ.
ಶಾಲೆಯಲ್ಲಿ ಕಲಿಯುತ್ತಿದ್ದ ಇತರ ಮಕ್ಕಳನ್ನು ಸ್ಥಳೀಯ ಬೇರೆ ಶಾಲೆಗೆ ಸೇರಿಸಲಾಗುವುದು. ಶಾಲೆ ಮುಚ್ಚುವುದರಿಂದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ರೀತಿಯ ಸಮಸ್ಯೆ ಎದುರಾಗುವುದಿಲ್ಲ ಎಂದು ಮುಜಾಫರ್ನಗರ ಜಿಲ್ಲಾ ಶಿಕ್ಷಣ ಇಲಾಖೆ ತಿಳಿಸಿದೆ.
ಆರೋಪಿ ಶಿಕ್ಷಕಿ ತ್ರಿಪ್ತಾ ತ್ಯಾಗಿ ಏಳು ವರ್ಷದ ಮುಸ್ಲಿಂ ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡುವಂತೆ ಇನ್ನುಳಿದ ವಿದ್ಯಾರ್ಥಿಗಳಿಗೆ ಆದೇಶಿಸಿದ ವಿಡಿಯೋ ಶುಕ್ರವಾರ(ಆಗಸ್ಟ್ 25) ವೈರಲ್ ಆಗಿತ್ತು.
ವಿಡಿಯೋ ವೈರಲ್ ಆದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷದ ನಾಯಕರು ಘಟನೆಯನ್ನು ಖಂಡಿಸುವುದರ ಜೊತೆ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಶಿಕ್ಷಕಿಯ ವಿರುದ್ಧ ಕ್ರಮಕ್ಕೆ ಕೂಡ ಆಗ್ರಹಿಸಿದ್ದರು.
ಶಿಕ್ಷಕಿಯ ವಿರುದ್ಧ ಪ್ರಕರಣವನ್ನು ಈಗಾಗಲೇ ದಾಖಲಿಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಶಿಕ್ಷಕಿಯ ವಿರುದ್ಧ ತೆಗೆದುಕೊಂಡು ಕ್ರಮಗಳ ಬಗ್ಗೆ ಒಂದು ವಾರದಲ್ಲಿ ವರದಿಯನ್ನು ನೀಡುವಂತೆ ಸೂಚಿಸಿದೆ.
ಈ ಸುದ್ದಿ ಓದಿದ್ದೀರಾ? ದೆಹಲಿ ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ‘ಖಲಿಸ್ತಾನ್ ಜಿಂದಾಬಾದ್’ ಬರಹ
ವೈರಲ್ ಆಗಿರುವ ವಿಡಿಯೋದಲ್ಲಿ, ತರಗತಿಯ ಮುಂದೆ ನಿಂತಿದ್ದ ಮುಸ್ಲಿಂ ಬಾಲಕನನ್ನು ಒಬ್ಬ ವಿದ್ಯಾರ್ಥಿ ಕಪಾಳ ಮೋಕ್ಷ ಮಾಡಿದ ನಂತರ ಶಿಕ್ಷಕಿ ಇತರ ವಿದ್ಯಾರ್ಥಿಗಳಿಗೂ ಹಲ್ಲೆ ನಡೆಸುವಂತೆ ಒತ್ತಾಯಿಸುವುದನ್ನು ನೋಡಬಹುದು.
ಈ ಬಗ್ಗೆ ಬಾಲಕನ ತಾಯಿ ರುಬೀನಾ ಮಾತನಾಡಿ, ಮಗ ಮನೆಗೆ ಬಂದಾಗ ಅಳುತ್ತಿದ್ದನು. ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಹೋಮ್ ವರ್ಕ್ ಮಾಡದಿದ್ದಕ್ಕೆ ಟೀಚರ್ ಶಿಕ್ಷೆ ಕೊಟ್ಟಿರಬೇಕು ಎಂದುಕೊಂಡೆವು. ಆದರೆ ವಿಡಿಯೋವನ್ನು ನೋಡಿದಾಗ ನಮಗೆ ಆಘಾತವಾಯಿತು ಎಂದು ಹೇಳಿದ್ದಾರೆ.
ಬಾಲಕನ ಸೋದರ ಸಂಬಂಧಿ ಮೊಹಮ್ಮದ್ ನದೀಮ್ ಎಂಬಾತ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಅವರು ಬೇರೆ ಯಾವುದೋ ಕೆಲಸಕ್ಕೆಂದು ಶಾಲೆಗೆ ಹೋಗಿದ್ದರು ಆ ವೇಳೆ ಈ ಘಟನೆ ನಡೆಯುತ್ತಿದ್ದಾಗ ವಿಡಿಯೋ ಚಿತ್ರೀಕರಿಸಿದ್ದಾರೆ.
ಘಟನೆಯ ಬಗ್ಗೆ ಶಿಕ್ಷಕಿ ತ್ರಿಪ್ತಾ ತ್ಯಾಗಿ ಸಮರ್ಥಿಸಿಕೊಂಡಿದ್ದು, “ತಮ್ಮ ಮಗನೊಂದಿಗೆ ಕಟ್ಟುನಿಟ್ಟಾಗಿ ನೋಡಿಕೊಳ್ಳುವಂತೆ ವಿದ್ಯಾರ್ಥಿ ಪೋಷಕರು ಕೂಡ ಹೇಳಿದ್ದರು. ಆತ ಹೋಮ್ವರ್ಕ್ ಮಾಡಿರಲಿಲ್ಲ. ತಾನು ಅಂಗವಿಕಲೆಯಾಗಿರುವ ಕಾರಣ ಇತರ ವಿದ್ಯಾರ್ಥಿಗಳಿಂದ ಶಿಕ್ಷೆ ಕೊಡಿಸಿದ್ದೆ. ಇದೊಂದು ಸಣ್ಣ ಘಟನೆ ಅಷ್ಟೆ” ಎಂದಿದ್ದರು.