- ಪ್ರಜಾಪ್ರಭುತ್ವದಲ್ಲಿ ಸಂಭಾಷಣೆ ಮುಖ್ಯವಾದುದು ಎಂದ ಪವಾರ್ ಪುತ್ರಿ
- ‘ಗೊಂದಲವನ್ನು ಶರದ್ ಪವಾರ್ ಅವರೇ ನಿವಾರಿಸಬೇಕು’ ಎಂದ ಶಿವಸೇನೆ ಸಂಸದ
ಮುಂಬರುವ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ‘ಇಂಡಿಯಾ’ ಮೈತ್ರಿಕೂಟ ರಚಿಸಿಕೊಂಡು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಸಮರ ಸಾರಿರುವ ನಡುವೆಯೇ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ನಡೆ ಗೊಂದಲ ಸೃಷ್ಟಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ 103ನೇ ಪುಣ್ಯತಿಥಿಯ ಅಂಗವಾಗಿ ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಶರದ್ ಪವಾರ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ, ಮೋದಿಯವರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ.
ಅಲ್ಲದೇ, ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದು ಹೋಗುತ್ತಿರುವ ವೇಳೆ ಮೋದಿ ಹಾಗೂ ಪವಾರ್ ಪರಸ್ಪರ ಆತ್ಮೀಯರಂತೆ ಮಾತನಾಡಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿ ಈವರೆಗೆ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಪ್ರಧಾನಿ ಜೊತೆ ವೇದಿಕೆ ಹಂಚಿಕೊಂಡಿರುವುದು ಇಂಡಿಯಾ’ ಮೈತ್ರಿಯೊಳಗೂ ಗೊಂದಲಕ್ಕೂ ಎಡೆ ಮಾಡಿಕೊಟ್ಟಿದೆ.
ಈ ಬಗ್ಗೆ ಬಹಿರಂಗ ಹೇಳಿಕೆ ನೀಡಿರುವ ಶಿವಸೇನಾ ಸಂಸದ ಸಂಜಯ್ ರಾವತ್, ‘ಮಹಾ ವಿಕಾಸ್ ಅಘಾಡಿ ಅಥವಾ ಇಂಡಿಯಾ ನಾಯಕರು ಇಂತಹ ಕಾರ್ಯಕ್ರಮಗಳಿಗೆ ಹೋದಾಗ, ಜನರ ಮನಸ್ಸಿನಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಇಂಡಿಯಾ ಒಕ್ಕೂಟದ ಸದಸ್ಯರಲ್ಲಿರುವ ಗೊಂದಲವನ್ನು ಶರದ್ ಪವಾರ್ ಅವರೇ ನಿವಾರಿಸಬೇಕು’ ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹರಿಯಾಣದಲ್ಲಿ ಕೋಮು ಸಂಘರ್ಷ: ಐವರು ಬಲಿ; 30ಕ್ಕೂ ಹೆಚ್ಚು ಮಂದಿಗೆ ಗಾಯ
ಕಾರ್ಯಕ್ರಮದಲ್ಲಿ ತಂದೆಯ ಭಾಗವಹಿಸುವಿಕೆಯ ಬಗ್ಗೆ ಹೇಳಿಕೆ ನೀಡಿರುವ ಪುತ್ರಿ, ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ, ‘ಪ್ರಧಾನಮಂತ್ರಿ ಅವರಿಗೆ ಪ್ರಶಸ್ತಿ ನೀಡುವ ಸಮಾರಂಭದಲ್ಲಿ ಭಾಗವಹಿಸಿರುವ ತಂದೆಯ ನಿರ್ಧಾರದಲ್ಲಿ ಯಾವುದೇ ತಪ್ಪಿಲ್ಲ. ಅವರು ನಮ್ಮ ದೇಶದ ಪ್ರಧಾನಿಯೇ ಹೊರತು ಬಿಜೆಪಿಯ ಪ್ರಧಾನಿಯಲ್ಲ. ಮಹಾರಾಷ್ಟ್ರ ಯಾವಾಗಲೂ ಒಬ್ಬ ವ್ಯಕ್ತಿಯ ಹುದ್ದೆಯನ್ನು ಗೌರವಿಸುತ್ತದೆ. ಬಾಳಾಸಾಹೇಬ್ ಠಾಕ್ರೆ ಮತ್ತು ನನ್ನ ತಂದೆ ಆಗಾಗ್ಗೆ ಒಬ್ಬರನ್ನೊಬ್ಬರು ಟೀಕಿಸುತ್ತಿದ್ದರು. ಆದರೂ ಯಾವಾಗಲೂ ಬಾಳಾಸಾಹೇಬರು ಆಯೋಜಿಸುತ್ತಿದ್ದ ಸಮಾರಂಭದಲ್ಲಿ ಭಾಗವಹಿಸುತ್ತಿದ್ದರು. ಪ್ರಜಾಪ್ರಭುತ್ವದಲ್ಲಿ ಸಂಭಾಷಣೆ ಮುಖ್ಯವಾದುದು’ ಎಂದು ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಬಣವು ರಾಜ್ಯದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರಕಾರವನ್ನು ಸೇರುವುದರೊಂದಿಗೆ ಪವಾರ್ ಅವರ ಪಕ್ಷವು ಇತ್ತೀಚೆಗೆ ವಿಭಜನೆಯಾಗಿದ್ದನ್ನು ಸ್ಮರಿಸಬಹುದು.