ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎಯ ಏಕೈಕ ಮುಸ್ಲಿಂ ಎಲ್‌ಜೆಪಿ ಸಂಸದ ಮೆಹಬೂಬ್ ಅಲಿ ಕೈಸರ್ ಅವರು ಭಾನುವಾರ ಆರ್‌ಜೆಡಿ ಸೇರ್ಪಡೆ ಆಗಿದ್ದಾರೆ. ಲೋಕಸಭೆ ಚುನಾವಣೆ ನಡುವೆ ಬಿಜೆಪಿಗೆ ಹಿನ್ನೆಡೆಯಾಗಿದೆ.
ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರು ಎಲ್‌ಜೆಪಿಯನ್ನು ವಿಭಜಿಸಿದಾಗ ಪಾರಸ್ ಪರವಾಗಿ ನಿಂತಿದ್ದ ಕೈಸರ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಇದಾದ ಬಳಿಕ ರಾಜಿ ಮಾತುಕತೆ ನಡೆದರೂ ಕೂಡಾ ಅದನ್ನು ಒಪ್ಪದ ಕೈಸರ್ ತೇಜಸ್ವಿ ಯಾದವ್ ಸಮ್ಮುಖದಲ್ಲಿ ಆರ್‌ಜೆಡಿ ಸೇರಿದ್ದಾರೆ.
#WATCH | Former Lok Janshakti Party (Ramvilas) leader & Khagaria MP Choudhary Mehboob Ali Kaiser joins RJD in the presence of former Bihar deputy CM & RJD leader Tejashwi Yadav. pic.twitter.com/pocZWtdrgN
— ANI (@ANI) April 21, 2024
“ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಅವರೊಂದಿಗಿನ ಸಭೆಯ ನಂತರ ಕೈಸರ್ ಸಾಹೇಬ್ ನಮ್ಮೊಂದಿಗೆ ಕೈಜೋಡಿಸಿದ್ದಾರೆ. ಅವರ ಅನುಭವ ನಮಗೆ ಲಾಭ ನೀಡಲಿದೆ. ಇದು ಬಿಜೆಪಿ ಆಡಳಿತದಲ್ಲಿ ಅಪಾಯಕ್ಕೆ ಸಿಲುಕಿರುವ ನಮ್ಮ ಸಂವಿಧಾನವನ್ನು ರಕ್ಷಿಸುವ ನಮ್ಮ ಹೋರಾಟದ ಪರವಾಗಿ ಬಲವಾದ ಸಂದೇಶವನ್ನು ನೀಡುತ್ತದೆ” ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಂಗಳೂರು | ಕಾಂಗ್ರೆಸ್‌ಗೆ ‘ಕೈ’ ಕೊಟ್ಟ ಮಾಜಿ ಮೇಯರ್ ಕವಿತಾ ಸನಿಲ್; ಬಿಜೆಪಿ ಸೇರ್ಪಡೆ
ಸಹರ್ಸಾ ಜಿಲ್ಲೆಯ ಸಿಮ್ರಿ ಭಕ್ತಿಯಾರ್ಪುರ್ ಅನ್ನು ಆಳಿದ ಕುಟುಂಬದಲ್ಲಿ ಜನಿಸಿದ ಕೈಸರ್ ಅವರು ಕಾಂಗ್ರೆಸ್‌ನಲ್ಲಿ ತಮ್ಮ ರಾಜಕೀಯ ವೃತ್ತಿಜೀವನವನ್ನು ಪ್ರಾರಂಭಿಸಿದ್ದು 2013 ರವರೆಗೆ ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದರು.ಅವರು 2014 ರಲ್ಲಿ ಎಲ್‌ಜೆಪಿ ಸೇರಿದ್ದು ಐದು ವರ್ಷಗಳ ನಂತರ ಖಗರಿಯಾ ಸ್ಥಾನದಲ್ಲಿ ಗೆಲುವು ಸಾಧಿಸಿದ್ದಾರೆ.
2020 ರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿಯು ಕೈಸರ್ ಅವರ ಪುತ್ರ ಯೂಸುಫ್ ಸಲಾವುದ್ದೀನ್‌ಗೆ ಟಿಕೆಟ್ ನಿರಾಕರಿಸಿದ ಬಳಿಕ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಜೊತೆಗಿನ ಕೈಸರ್ ಸಂಬಂಧ ಹದಗೆಡಲು ಆರಂಭವಾಗಿದೆ. 2020ರಲ್ಲಿ ಕೈಸರ್ ಅವರ ಪುತ್ರ ಸಲಾವುದ್ದೀನ್ ಆರ್‌ಜೆಡಿ ಟಿಕೆಟ್‌ನಲ್ಲಿ ಸಿಮ್ರಿ ಭಕ್ತಿಯಾರ್‌ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದರು.
ಈಗ 23 ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಆರ್‌ಜೆಡಿ, ಈಗ ಚುನಾವಣೆಯಲ್ಲಿ ಕೈಸರ್ ಅವರನ್ನು ಕಣಕ್ಕಿಳಿಸಲಿದೆಯೇ ಎಂಬ ಚರ್ಚೆಯಾಗುತ್ತಿದೆ.