ಹುಬ್ಬಳ್ಳಿ-ಧಾರವಾಡ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ ಹಿರೇಮಠ ಪುತ್ರಿ ನೇಹಾ ಕೊಲೆ ಪ್ರಕರಣ ಹುಬ್ಬಳ್ಳಿ ಅಷ್ಟೇ ಅಲ್ಲದೇ ಬೆಳಗಾವಿಯಲ್ಲೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ.
ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಪಾಗಲ್ ಪ್ರೇಮಿ ಫಯಾಜ್, ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾಳನ್ನು ಚಾಕುವಿನಿಂದ ಬರೋಬ್ಬರಿ 10 ಬಾರಿ ಚುಚ್ಚಿ ಕೊಲೆ ಮಾಡಿದ್ದಾನೆ. ಕೊಲೆ ಆರೋಪಿ ಮುಸ್ಲಿಂ ಸಮುದಾಯದವನು ಎಂಬುದು ಬಹಿರಂಗವಾಗುತ್ತಿದ್ದಂತೆ ಬಿಜೆಪಿ ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲೂ ಅಲರ್ಟ್ ಆಗಿದೆ.
ಕೊಲೆಯಾದ ಒಂದೇ ಗಂಟೆಯಲ್ಲಿ ವಿದ್ಯಾನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಫಯಾಜ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನೇಹಾ ಕುಟುಂಬಸ್ಥರನ್ನು ಬಿಜೆಪಿ ಮುಖಂಡರಾದ ಪ್ರಲ್ಹಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಇತರ ನಾಯಕರು ಭೇಟಿಯಾಗಿ, “ಹಿಂದೂಗಳಿಗೆ ರಕ್ಷಣೆ ನೀಡದ ರಾಜ್ಯ ಸರ್ಕಾರ” ಇದು ಗುಡುಗಿದ್ದಾರೆ.
ಪ್ರಕರಣವನ್ನು ಖಂಡಿಸಿ ಬಿಜೆಪಿ ಬೆಂಬಲಿತ ಎಬಿವಿಪಿ ಸಂಘಟನೆ ಪ್ರತಿಭಟನೆ ನಡೆಸಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಬಿಜೆಪಿ ಟ್ವೀಟ್ ಮಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.
ಪ್ರೀತಿ ನಿರಾಕರಿಸಿದ್ದಕ್ಕಾಗಿ ಮುಸ್ಲಿಂ ಯುವಕನೊಬ್ಬ ನಮ್ಮ ಪಾಲಿಕೆ ಸದಸ್ಯರಾದ ನಿರಂಜನ್ ಹಿರೇಮಠ ಅವರ ಪುತ್ರಿ ನೇಹ ಹಿರೇಮಠ ಅವರನ್ನು 9 ಬಾರಿ ಚಾಕು ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ತುಷ್ಟಿಕರಣ ಹಾಗೂ ಸಮಾಜಘಾತಕ ಶಕ್ತಿಗಳ ಪುಷ್ಟಿಕರಣದಿಂದಾಗಿ ಇಂತಹ ದುರ್ಘಟನೆಗಳು ಸಂಭವಿಸುತ್ತಿವೆ. ಕಾಂಗ್ರೆಸ್… pic.twitter.com/JUfcvLkwcm
— Pralhad Joshi (Modi Ka Parivar) (@JoshiPralhad) April 19, 2024
ನೇಹಾ ಹಿರೇಮಠ ಅವರ ಮೂಲವಾದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ನಗರ ಕೂಡ ಉದ್ವಿಗ್ನಗೊಂಡಿದೆ. ಇಲ್ಲಿ ಇಂದಿನಿಂದ ಮೂರು ದಿನಗಳ ಕಾಲ ನಗರ ಬಂದ್‌ಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿವೆ. ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸುತ್ತಿದ್ದಾರೆ. ಈ ನಡುವೆ, ʼಲವ್ ಜಿಹಾದ್ ಕೊಲೆʼ ಎಂದು ಹೇಳುವ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ನೇಹಾ ಕೊಲೆ ಪ್ರಕರಣದಲ್ಲಿ ರಾಜಕೀಯ ಇಲ್ಲ ಎಂದು ಗೃಹ ಸಚಿವರು ಸ್ಪಷ್ಟನೆ ನೀಡಿದ್ದು, ಪ್ರೇಮ ಪ್ರಕರಣ ಕೊಲೆಯನ್ನೇ ಕೋಮು ಸಂಘರ್ಷಕ್ಕೆ ಎಳೆದು ತರುವ ಹುನ್ನಾರಕ್ಕೆ ಬಿಜೆಪಿ ಯತ್ನಿಸುತ್ತಿರುವುದು ಬಹಳ ಸ್ಷಷ್ಟವಾಗಿದೆ. ಚುನಾವಣೆ ಹೊತ್ತಲ್ಲಿ ಎಷ್ಟು ಆಗುತ್ತೋ ಅಷ್ಟು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಿಜೆಪಿ ಒಳಗೊಳಗೆ ಹವಣಿಸುತ್ತಿದೆ.
