ಕರಾವಳಿಯಲ್ಲಿ ಹೊಸ ಸಂಚಲನ; ಕೋಮುವಾದದ ವಿರುದ್ಧ ಬ್ರಾಹ್ಮಣ ಸಮುದಾಯ

Date:

Advertisements

ಬ್ರಾಹ್ಮಣರೆಲ್ಲರೂ ಬಿಜೆಪಿಗರು ಮತ್ತು ಕೋಮುವಾದಿಗಳು ಎಂಬ ಹಣೆಪಟ್ಟಿಯ ವಿರುದ್ದ ಮುಖಂಡರು ಸಂದೇಶ ರವಾನಿಸಿದ್ದಾರೆ

ಬ್ರಾಹ್ಮಣ ಸಮುದಾಯವು ಕೋಮುವಾದಿ ಸಂಘಪರಿವಾರದ ಜೊತೆ ನಿಲ್ಲುತ್ತದೆ ಎಂಬ ಅಪವಾದವನ್ನು ಕಳೆದುಕೊಳ್ಳಲು ಯತ್ನಿಸುತ್ತಿರುವ ಕರಾವಳಿಯ ಪ್ರಜ್ಞಾವಂತ ಬ್ರಾಹ್ಮಣ ಮುಖಂಡರು ಹೊಸ ಹಾದಿಗೆ ನಾಂದಿ ಹಾಡಿದ್ದಾರೆ.

ಕೋಮುವಾದದ ಸುದ್ದಿಗಳಿಗೆ ಹೆಸರಾದ ಕರಾವಳಿಯಲ್ಲಿ ಇದೀಗ ಸಾಮರಸ್ಯದ ಚಟುವಟಿಕೆಗಳು ಗರಿಗೆದರಿವೆ. ಆಶಾದಾಯಕ, ಸೂಕ್ಷ್ಮ ಮತ್ತು ಪ್ರಭಾವಶಾಲಿ ಸುದ್ದಿಯೊಂದು ಕರಾವಳಿಯಿಂದ ಬಂದಿದೆ.

Advertisements

ಸಮಾನ ಮನಸ್ಕ ಬ್ರಾಹ್ಮಣ ವೇದಿಕೆ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು ನೂರು ಜನ ಬ್ರಾಹ್ಮಣ ಮುಖಂಡರು ನಗರದಲ್ಲಿ ಸಭೆ ಸೇರಿ, ಧಾರ್ಮಿಕ ಅಸಹಿಷ್ಣುತೆ, ಕೋಮುವಾದದ ವಿರುದ್ಧ ಮಾತನಾಡಿದ್ದಾರೆ. ಪ್ರಜಾಪ್ರಭುತ್ವ ಆಶಯಗಳಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಧ್ವನಿ ಎತ್ತಿದ್ದಾರೆ.

bramins22

ಕರಾವಳಿಯಲ್ಲಿ ಬ್ರಾಹ್ಮಣರ ಸಂಖ್ಯೆ ಕಡಿಮೆಯಾದರೂ ಅವರ ರಾಜಕೀಯ ಪ್ರಭಾವ ಜೋರಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು ಬ್ರಾಹ್ಮಣರೆಲ್ಲರೂ ಬಿಜೆಪಿಗರು ಮತ್ತು ಕೋಮುವಾದಿಗಳು ಎಂಬ ಹಣೆಪಟ್ಟಿಯ ವಿರುದ್ದ ಸಂದೇಶ ರವಾನಿಸಿದ್ದಾರೆ. ಜೊತೆಗೆ ಬಿಜೆಪಿಯನ್ನು ಬೆಂಬಲಿಸದವರು ಬ್ರಾಹ್ಮಣರೇ ಅಲ್ಲ ಹಿಂದೂಗಳೇ ಅಲ್ಲ ಎಂಬುವ ಕೀಳುಮಟ್ಟದ ಬೆದರಿಕೆಯ ವಿರುದ್ದ ಸಮರ ಸಾರುವ ನಿರ್ಣಯಕ್ಕೆ ಬಂದಿದ್ದಾರೆ. ಇದು ಕರಾವಳಿಯ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗೆ ಹೊಸರೂಪ ನೀಡಲಿದೆ ಎಂದೇ ಹೇಳಲಾಗುತ್ತಿದೆ. ಅದೇ ರೀತಿ ಬಡತನದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಲುಪಿಸುವ ಯೋಜನೆ ರೂಪಿಸಲೂ ನಿರ್ಧರಿಸಲಾಗಿದೆ.

ಈ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲೆಯ ಪ್ರಭಾವಿ ನಾಯಕ ಶ್ರೀಧರ ಭಿಡೆ, “ಬ್ರಾಹ್ಮಣರು ಅಂದರೆ ದೇಶದ ಸಮಗ್ರ ಜನರನ್ನೂ ಪ್ರೀತಿಸುವ ಮತ್ತು ಸಮಾಜದ ಸುಧಾರಣೆಯ ನಾಯಕತ್ವವನ್ನು ವಹಿಸಿದವರು. ಹಿಂದೂ ಮುಸ್ಲಿಂ ಸಂತ ಪರಂಪರೆಯನ್ನೂ ಬೆಳೆಸಿದವರು. ನಾವು ಸಂಕುಚಿತರಾಗುವ ಪ್ರಶ್ನೆಯೇ ಇಲ್ಲ” ಎಂದರು.

ಖ್ಯಾತ ಚಿಂತಕ ಪ್ರೊ. ರಾಜಾರಾಮ ತೋಳ್ಪಾಡಿಯವರು ಮಾತನಾಡಿ, “ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆ ಬರುತ್ತಿರುವಾಗ ಸಮಾನ ಮನಸ್ಕ ಬ್ರಾಹ್ಮಣರು ಆ ನಿಟ್ಟಿನಲ್ಲಿ ತಮ್ಮ ಸಮುದಾಯಕ್ಕೆ ಸತ್ಯ ಸಂದೇಶ ನೀಡುವ ಈ ಕಾರ್ಯ ಅಗತ್ಯ” ಎಂದು ಅಭಿಪ್ರಾಯಪಟ್ಟರು.

ಬ್ಯಾಂಕ್ ನೌಕರ ಸಂಘದ ಹಿರಿಯ ನಾಯಕ ಟಿ.ಆರ್.ಭಟ್ ಮಾತನಾಡಿ, “ಬ್ರಾಹ್ಮಣರೆಲ್ಲರೂ ನಿರ್ದಿಷ್ಟ ಸಿದ್ದಾಂತ ಮತ್ತು ಪಕ್ಷಕ್ಕೇ ಸೇರಬೇಕು ಅಥವಾ ಸೇರಿದ್ದಾರೆ ಎಂಬ ನಿಲುವಿನ ವಿರುದ್ದ ನಾವು ಮಾತನಾಡಲೇಬೇಕು, ದೇಶದ ಆಗುಹೋಗುಗಳ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಪರಿಸ್ಥಿತಿ ಉಳಿಯಬೇಕು” ಎಂದು ಆಶಿಸಿದರು.

ಕಾರ್ಯಕ್ರಮದ ಸಂಘಟಕ ಎಂ.ಜಿ.ಹೆಗಡೆ ಮಾತನಾಡಿ, “ಬಿಜೆಪಿ ಮತ್ತು ಕೋಮು ಸಂಘಟನೆಗಳಿಗೆ ಬೆಂಬಲಿಸದ ಬ್ರಾಹ್ಮಣರಿಗೆ ಕೌಟುಂಬಿಕ ಕಿರುಕುಳ ನೀಡುವುದು, ಸಾರ್ವಜನಿಕವಾಗಿ ಹೀಯಾಳಿಸುವ, ವ್ಯವಹಾರಿಕವಾಗಿ ತೊಂದರೆ ಕೊಡುವ ಮೂಲಕ ಭಯದ ವಾತಾವರಣ ಹುಟ್ಟಿಸುತ್ತಿರುವುದು ಆಘಾತಕಾರಿ” ಎಂದು ತಿಳಿಸಿದರು.

Bramins

ಮುಂದುವರಿದು, “ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬ್ರಾಹ್ಮಣರಿಗೆ ಸರ್ಕಾರ ನೀಡುವ ಸವಲತ್ತು ಸಿಗುವಂತೆ ಮಾಡುತ್ತೇವೆ. ಕೇವಲ ರಾಜಕೀಯ ವಿರೋಧಕ್ಕಾಗಿ ದ್ವೇಷಿಸುವ ಬೆದರಿಸುವ, ಕಿರುಕುಳ ನೀಡುವ ಕೀಳು ಮನಸ್ಥಿತಿಯಿಂದ ಕೆಲವರು ಹೊರಬರಬೇಕು. ಅನಗತ್ಯ ಸಂಘರ್ಷಕ್ಕೆ ಇದು ಕಾರಣವಾದೀತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷದ ಆಯ್ಕೆ ವ್ಯಕ್ತಿಯ ಸ್ವಾತಂತ್ರ್ಯ. ಇದಕ್ಕೂ ವಿರೋಧ ಎಂದರೆ ಅಪಾಯಕಾರಿ. ಇಷ್ಟು ದಿನ ಸಹಿಸಿಕೊಂಡಿದ್ದೇವೆ. ಇನ್ನು ಉತ್ತರಿಸುವ ದಾರಿ ಹುಡುಕುತ್ತೇವೆ , ಕೋಮುವಾದಿ ಬ್ರಾಹ್ಮಣರಿಂದ ಇಂತಹ ಕಿರುಕುಳ ಆದರೆ ನಮ್ಮ ಗಮನಕ್ಕೆ ತನ್ನಿ. ನಾವು ಒಟ್ಟಾಗಿ ಎದುರಿಸೋಣ” ಎಂದಿದ್ದಾರೆ.

“ಮುಂದಿನ ದಿನಗಳಲ್ಲಿ ಎಲ್ಲಾ ಜಾತಿ ಧರ್ಮದ ಜನರನ್ನು ಸಹಿಷ್ಣುತೆಯಿಂದ , ಪ್ರೀತಿಯಿಂದ ನೋಡುವ ಸಮಾನ ಮನಸ್ಕ ಬ್ರಾಹ್ಮಣರನ್ನು ವ್ಯಾಪಕವಾಗಿ ಸಂಘಟಿಸಲಾಗುವುದು” ಎಂದು ತಿಳಿಸಿದ್ದಾರೆ.

ಸುರತ್ಕಲ್ ಹಿರಿಯ ಮುಂದಾಳು ಗುರುರಾಜ ಆಚಾರ್ಯ, ಬೆಟ್ಟ ರಾಜಾರಾಮ ಭಟ್ಟ, ಮಹೇಶ ಕುಮಾರ ಸುಳ್ಯ, ಸತ್ಯೇಂದ್ರ ವೇಣೂರು, ನಿವೃತ್ತ ಹಿರಿಯ ಬ್ಯಾಂಕ್ ಅಧಿಕಾರಿ ಟಿ.ಆರ್.ಭಟ್ಟ, ಡಾ. ಶಿವಾನಂದ ಮುಂಡಾಜೆ, ರಮೇಶ ಕೋಟೆ, ಕೆ.ರಾಘವೇಂದ್ರ, ವಿನಯ ಆಚಾರ್ಯ, ಬೆಟ್ಟ ಜಯರಾಮ ಭಟ್ಟ, ದಿನೇಶ್ ರಾವ್, ಬಾಲಕೃಷ್ಣ ಭಟ್ಟ, ಕೆಮ್ಮಟ್ಟು ಸ್ವರ್ಣ ಭಟ್, ವಕೀಲೆ ವಿದ್ಯಾ ಭಟ್ಟ, ನಮಿತಾ ರಾವ್ , ಚೈತನ್ಯಾ ಭಟ್ಟ, ಪ್ರವೀಣ ಭಟ್ಟ ಪುತ್ತೂರು ಮೊದಲಾದವರು ಸಭೆಯಲ್ಲಿ ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆಗಸ್ಟ್ 26ರಿಂದ ರಾಜ್ಯದಲ್ಲಿ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ರಾಜ್ಯದಾದ್ಯಂತ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಆಗಸ್ಟ್ 26ರಿಂದ ಭಾರೀ ಮಳೆಯಾಗಲಿದೆ...

ಧರ್ಮಸ್ಥಳ ಪ್ರಕರಣ | ನನ್ನ ಬಂಧನ ರಾಜಕೀಯ ಪಿತೂರಿಯ ಭಾಗ: ಮಹೇಶ್ ಶೆಟ್ಟಿ ತಿಮರೋಡಿ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

Download Eedina App Android / iOS

X