ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯ್ಕ ಅವರ ಎಸ್‌ಟಿ ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಸುಳ್ಳು ದಾಖಲೆಗಳನ್ನು ನೀಡಿ, ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರಡಿಗುಡ್ಡ ಗ್ರಾಮದ ನರಸಿಂಹ ನಾಯ್ಕ ಎಂಬವರು ಹೈಕೋರ್ಟ್‌ನಲ್ಲಿ ಅಮರೇಶ್ವರ ನಾಯ್ಕ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಅಮರೇಶ್ವರ ನಾಯ್ಕ ಅವರ ಶೈಕ್ಷಣಿಕ ದಾಖಲೆಗಳ ಪ್ರಕಾರ, ಅವರು ಕ್ಷತ್ರಿಯ-ಹಿಂದು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಆದರೆ, ಸುಳ್ಳು ಜಾತಿ ಪ್ರಮಾಣಪತ್ರ ಸಲ್ಲಿಸಿ, ಎಸ್‌ಸಿ ಮೀಸಲು ಕ್ಷೇತ್ರ ರಾಯಚೂರಿನಲ್ಲಿ ಸ್ಪರ್ಧಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಮರೇಶ್ವರ ನಾಯ್ಕ್ ಅವರು ಸುಳ್ಳು ದಾಖಲೆಗಳ ಮೂಲಕ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಎಸ್‌ಟಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಅವರ ಜಾತಿ ಪ್ರಮಾಣಪತ್ರ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್, ಏಪ್ರಿಲ್ 19ಕ್ಕಿಂತ ಮುನ್ನ ಜಾತಿ ಪ್ರಮಾಣಪತ್ರವು ನಕಲಿಯಲ್ಲ ಎಂಬುದನ್ನು ಸಾಬೀತು ಮಾಡಲು ಅಫಿಡವಿಟ್ ಸಲ್ಲಿಸುವಂತೆ ಅಮರೇಶ್ವರ್ ಅವರಿಗೆ ಸೂಚಿಸಿದೆ. ಅಫಿಡವಿಟ್ ಪರಿಶೀಲಿಸಿದ ಬಳಿಕ, ಅಂದೇ ನ್ಯಾಯಾಲಯವು ತೀರ್ಪು ಪ್ರಕಟಿಸಲಿದೆ ಎಂದು ವರದಿಯಾಗಿದೆ.
ಅಗತ್ಯ ದಾಖಲೆಗಳೊಂದಿಗೆ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿರುವುದಾಗಿ ಅಮರೇಶ್ವರ ನಾಯ್ಕ್ ಹೇಳಿದ್ದಾರೆ. ”ನಾನು ರಾಯಚೂರಿನ ಹಾಲಿ ಸಂಸದ. ಕಳೆದ ಬಾರಿಯೂ ರಾಯಚೂರು ಎಸ್‌ಟಿ ಮೀಸಲು ಕ್ಷೇತ್ರವಾಗಿತ್ತು. ಆಗಲೂ ಸ್ಪರ್ಧಿಸಿದ್ದೆ. ಚುನಾವಣಾಧಿಕಾರಿಗಳು ದಾಖಲೆಗಳನ್ನು ಸ್ವೀಕರಿಸಿದ್ದರು ಮತ್ತು ಜನರು ನನ್ನನ್ನು ಆಯ್ಕೆ ಮಾಡಿದ್ದರು. ಈಗ, ನನ್ನ ಜಾತಿ ಪ್ರಮಾಣಪತ್ರದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸುತ್ತದೆಂಬ ವಿಶ್ವಾಸವಿದೆ” ಎಂದು ಅಮರೇಶ್ವರ ನಾಯ್ಕ ಹೇಳಿರುವುದಾಗಿ ‘ಟಿಎನ್‌ಐಇ) ವರದಿ ಮಾಡಿದೆ.
ಒಂದು ವೇಳೆ, ನ್ಯಾಯಾಲಯವು ಅಮರೇಶ್ವರ ಅವರು ಜಾತಿ ಪ್ರಮಾಣಪತ್ರವನ್ನು ರದ್ದುಗೊಳಿಸದರೆ, ಬಿಜೆಪಿ ಮುಂದೇನು ಮಾಡಲಿದೆ ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಅಮರೇಶ್ವರ ಅವರ ಜಾತಿ ಪ್ರಮಾಣ ಪತ್ರವನ್ನು ಹೈಕೋರ್ಟ್ ರದ್ದುಪಡಿಸಿದರೆ ಅಭ್ಯರ್ಥಿಯನ್ನು ಬದಲಾಯಿಸುವ ಅಥವಾ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ರಾಯಚೂರು ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ, ಕುಸ್ತಗಿ ಶಾಸಕ ದೊಡ್ಡನಗೌಡ ಜಿ ಪಾಟೀಲ್ ಹೇಳಿದ್ದಾರೆ.
“ತಹಶೀಲ್ದಾರರು ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರ ಜಾತಿ ಪ್ರಮಾಣಪತ್ರವನ್ನು ನೀಡುತ್ತಾರೆ. ನರಸಿಂಹ ನಾಯ್ಕ್ ಅವರ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡುವ ಭರವಸೆ ಇದೆ” ಎಂದು ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ.