ಜಿಎಸ್‌ಟಿ ಬಗೆಗಿನ ಸಂಕೀರ್ಣತೆಗಳ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಅನ್ನಪೂರ್ಣ ಗ್ರೂಪ್ ಅಧ್ಯಕ್ಷ ಶ್ರೀನಿವಾಸನ್ ಪ್ರಶ್ನಿಸಿದ್ದಾರೆ. ಬಳಿಕ, ತಮ್ಮ ಪ್ರಶ್ನೆಯ ಕಾರಣಕ್ಕಾಗಿ ಕ್ಷಮೆ ಕೇಳಿದ್ದಾರೆ. ಅವರು ಪ್ರಶ್ನಿಸಿ, ಕ್ಷಮೆ ಕೇಳಿದ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಿರ್ಮಲಾ ಸೀತಾರಾಮನ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ಕೊಯಮತ್ತೂರಿನಲ್ಲಿ ಪ್ರಮುಖ ಉದ್ಯಮಿಗಳೊಂದಿಗೆ ಸಮಾಲೋಚನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ನಿರ್ಮಲಾ ಸೀತಾರಾಮನ್ ಭಾವಹಿಸಿದ್ದರು. ಸಭೆಯಲ್ಲಿನ ಚರ್ಚೆಯ ವೇಳೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಕೀರ್ಣತೆಗಳ ಬಗ್ಗೆ ಶ್ರೀನಿವಾಸನ್ ಅವರು ನಿರ್ಮಲಾ ಸೀತಾರಾಮನ್ ಅವರನ್ನು ಪ್ರಶ್ನಿಸಿದ್ದರು. ಜಿಎಸ್‌ಟಿ ಬಗ್ಗೆ ತಮ್ಮನ್ನು ಪ್ರಶ್ನಿಸಿದ್ದಕ್ಕೆ ಶ್ರೀನಿವಾಸನ್ ವಿರುದ್ಧ ಗುಡುಗಿದ ನಿರ್ಮಲಾ ಸೀತಾರಾಮನ್, ತಮ್ಮ ಬಳಿ ಶ್ರೀನಿವಾಸನ್ ಕ್ಷಮೆ ಕೇಳುವಂತೆ ಮಾಡಿದ್ದಾರೆ.
ಸಭೆಯಲ್ಲಿ ಮಾತನಾಡಿದ ಶ್ರೀನಿವಾಸನ್, ವಿವಿಧ ಜಿಎಸ್‌ಟಿ ದರಗಳಿಂದ ರೆಸ್ಟೋರೆಂಟ್‌ಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಸೆಳೆದಿರು. “ಸಿಹಿತಿಂಡಿಗಳ ಮೇಲೆ 5% ಮತ್ತು ಕೆನೆ ತುಂಬಿದ ಪೇಸ್ಟ್ರಿಗಳ ಮೇಲೆ 18% ಜಿಎಸ್‌ಟಿ ವಿಧಿಸಲಾಗುತ್ತಿದೆ. ನಮ್ಮ ಬೇರಿಕೆಯಲ್ಲಿ ಖಾಲಿ ಬನ್ ಮಾರಿದರೆ 5% ಜಿಎಸ್‌ಟಿ. ಅದೇ ಬನ್‌ಗೆ ಕ್ರೀಮ್ ಹಾಕಿ ಕ್ರೀಮ್ ಬನ್ ಮಾರಿದರೆ 18% ಜಿಎಸ್‌ಟಿ. ಯಾಕೆ ಹೀಗೆ” ಎಂದು ಹಾಸ್ಯಾತ್ಮಕವಾಗಿ ವಿವರಿಸಿದರು.
ಆದರೆ, ಅವರ ಮಾತುಗಳಿಂದ ಸಿಡಿಮಿಡಿಗೊಂಡ ನಿರ್ಮಲಾ ಸೀತಾರಾಮನ್, ಶ್ರೀನಿವಾಸನ್ ಅವರು ಕ್ಷಮೆ ಕೇಳುವಂತೆ ಒತ್ತಾಯಿಸಿದ್ದು, ಸಭೆಯ ಮರುದಿನ ಶ್ರೀನಿವಾಸನ್ ಅವರು ತಾವು ಸಭೆಯಲ್ಲಿ ಎತ್ತಿದ ಪ್ರಶ್ನೆಯ ಕಾರಣಕ್ಕಾಗಿ ಕ್ಷಮೆ ಕೇಳಿದ್ದಾರೆ. ಕೊಠಡಿಯೊಂದರಲ್ಲಿ ಮೂರು ಜನರಿದ್ದು, ಅವರ ಪೈಕಿ ಶ್ರೀನಿವಾಸನ್ ಅವರು ನಿರ್ಮಲಾ ಸೀತಾರಾಮನ್ ಅವರಲ್ಲಿ ಎದ್ದು ನಿಂತು, ತಪ್ಪಾಗಿದೆ ಎಂದು ಕೈ ಮುಗಿದಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ.
ಕ್ಷಮೆ ಕೇಳುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋವನ್ನು ಹಂಚಿಕೊಂಡಿರುವ ನೆಟ್ಟಿಗರು, “ನಿರ್ಮಲಾ ಸೀತಾರಾಮನ್ ಅವರು ಕೊಯಮತ್ತೂರಿನ ಹೆಮ್ಮೆಯ ಅನ್ನಪೂರ್ಣ ಗ್ರೂಪ್ ಮುಖ್ಯಸ್ಥ ಶ್ರೀನಿವಾಸನ್ ಅವರನ್ನು ಕ್ಷಮೆಯಾಚಿಸುವಂತೆ ಒತ್ತಾಯಿಸಿದ್ದಾರೆ. ಶ್ರೀನಿವಾಸ್ ಮಾಡಿದ ಅಪರಾಧವೇನು? ಇದು ಬಿಜೆಪಿ ನಾಯಕರ ದುರಹಂಕಾರವನ್ನು ಬಯಲು ಮಾಡುತ್ತದೆ. ಮಾತ್ರವಲ್ಲದೆ, ತಮಿಳುನಾಡಿನ ಜನತೆಗೆ ಮಾಡಿದ ಅವಮಾನವೂ ಆಗಿದೆ. ಹೀಗಾಗಿಯೇ ಬಿಜೆಪಿ ಎಂದಿಗೂ ತಮಿಳುನಾಡನ್ನು ಗೆಲ್ಲುವುದಿಲ್ಲ. ಅಹಂಕಾರಕ್ಕೂ ಒಂದು ಮಿತಿ ಇರಬೇಕು” ಎಂದು ನೆಟ್ಟಿಗರು ಎಂದು ಕಿಡಿಕಾರಿದ್ದಾರೆ.