ಅಯೋದ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ದಿನ ಕೇಸರಿ ಬಣ್ಣದ ಭಾರತದ ನಕ್ಷೆ ರಚನೆಯಿಂದಾಗಿ ವಿದ್ಯಾರ್ಥಿಗಳ ನಡುವೆ ಪ್ರತಿಭಟನೆ ಮತ್ತು ಸಂಘರ್ಷಕ್ಕೆ ಸುದ್ದಿಯಾದ ಎನ್‌ಐಟಿ ಕ್ಯಾಲಿಕಟ್, ಇದೀಗ ನಾಥೂರಾಮ್ ಗೋಡ್ಸೆ ಪ್ರಶಂಸೆಯ ಮತ್ತೊಂದು ವಿವಾದ ಎಳೆದುಕೊಂಡಿದೆ
ಗಾಂಧಿ ಕೊಲೆಗಾರ ನಾಥೂರಾಮ್ ಗೋಡ್ಸೆ ಹೊಗಳಿd ಫೇಸ್‌ಬುಕ್ ಪೋಸ್ಟ್ ಬರೆದ ಕ್ಯಾಲಿಕಟ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್‌ಐಟಿ) ಪ್ರೊಫೆಸರ್ ಡಾ ಎ ಶೈಜಾ ವಿರುದ್ಧ ಕೇರಳ ಪೊಲೀಸರು ಮೊಕದ್ದಮೆ ದಾಖಲಿಸಿದ್ದಾರೆ.
ಜನವರಿ 31ರಂದು ಮಹಾತ್ಮಾ ಗಾಂಧಿ ಪುಣ್ಯಸ್ಮರಣೆಯ ದಿನದಂದು ವಕೀಲರೊಬ್ಬರು, “ಹಿಂದೂ ಮಹಾಸಭಾ ಕಾರ್ಯಕರ್ತ ನಾಥೂರಾಮ್ ಗೋಡ್ಸೆ ಭಾರತದಲ್ಲಿ ಅನೇಕರಿಗೆ ಹೀರೋ ಆಗಿದ್ದಾರೆ” ಎಂದು ಬರೆದಿದ್ದ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಶೈಜಾ, “ಭಾರತವನ್ನು ಉಳಿಸಿರುವ ಗೋಡ್ಸೆ ಬಗ್ಗೆ ಹೆಮ್ಮೆಯಿದೆ” ಎಂದು ಬರೆದಿದ್ದರು. ನಂತರ ಶೈಜಾ ತಮ್ಮ ಪ್ರತಿಕ್ರಿಯೆಯನ್ನು ಅಳಿಸಿದ್ದರು. ಆದರೆ ಅವರ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್ ವ್ಯಾಪಕವಾಗಿ ಪ್ರಸಾರವಾಗಿದೆ. “ಶೈಜಾ ಸಮಾಜದಲ್ಲಿ ಸಂಘರ್ಷ ಮೂಡಿಸಲು ಪ್ರಯತ್ನಿಸಿದ್ದಾರೆ” ಎಂದು ಆರೋಪಿಸಿರುವ ಸಿಪಿಐ(ಎಂ) ಯುವಸಂಘಟನೆ ಡಿವೈಎಫ್‌ಐ ಶನಿವಾರ ಶೈಜಾರನ್ನು ಉದ್ಯೋಗದಿಂದ ವಜಾ ಮಾಡುವಂತೆ ಒತ್ತಾಯಿಸಿದೆ.
ಕೋಯಿಕ್ಕೋಡ್ (ಕ್ಯಾಲಿಕಟ್) ಸಂಸದ ಎಂಕೆ ರಾಘವನ್ ‘ಎಕ್ಸ್’ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ನನ್ನ ಕ್ಷೇತ್ರದಲ್ಲಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಎನ್‌ಐಟಿಯಲ್ಲಿ ಜವಾಬ್ದಾರಿಯುತ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಮಹಾತ್ಮಾ ಗಾಂಧಿ ವಿರುದ್ಧ ಅನುಚಿತ ಪ್ತತಿಕ್ರಿಯೆ ಮತ್ತು ಗೋಡ್ಸೆಯ ಕೆಲಸವನ್ನು ಹೊಗಳಿರುವುದು ನಾಚಿಕೆಗೇಡು. ಸಂಬಂಧಿತ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಇಂತಹ ಹೇಳಿಕೆಗಳು ನಮ್ಮ ಶೈಕ್ಷಣಿಕ ಸಮಗ್ರತೆಯ ಕಳಪೆ ಪ್ರದರ್ಶನ ಮತ್ತು ನಾವು ಎತ್ತಿಹಿಡಿಯಬೇಕಾದ ಮೌಲ್ಯಗಳನ್ನು ದುರ್ಬಲಗೊಳಿಸುತ್ತದೆ. ಶೈಕ್ಷಣಿಕ ಪರಿಸರ ಎಲ್ಲರನ್ನೊಳಗೊಂಡ, ಗೌರವಯುತ ಮತ್ತು ದ್ವೇಷಭಾಷಣೆ ಅಥವಾ ಅಸಹಿಷ್ಣುತೆಯಿಂದ ಮುಕ್ತವಾಗಿರುವುದು ಅಗತ್ಯ” ಎಂದು ಬರೆದಿದ್ದಾರೆ. ಜೊತೆಗೆ, ಪ್ರಕರಣದ ಬಗ್ಗೆ ತಕ್ಷಣ ವಿವರಣೆ ಪಡೆಯುವಂತೆ ರಿಜಿಸ್ಟ್ರಾರ್‌ಗೆ ಸೂಚಿಸಲಾಗಿದೆ ಎಂದು ಎನ್‌ಐಟಿ ನಿರ್ದೇಶಕರು ತಮಗೆ ಮಾಹಿತಿ ನೀಡಿರುವುದಾಗಿ ತಿಳಿಸಿದ್ದಾರೆ.
Late last night, I was informed by the Director @nitcofficial that he, in his absentia has directed Registrar to seek an immediate explanation from professor who posted a comment on social media glorifying the assassination of Gandhi and praising Godse’s deed.
— M K Raghavan (@mkraghavaninc) February4, 2024
ಮೂರು ಸಂಸ್ಥೆಗಳು ದೂರು ಸಲ್ಲಿಸಿದ ನಂತರ ಕೋಯಿಕ್ಕೋಡ್ ನಗರ ವ್ಯಾಪ್ತಿಯ ಪೊಲೀಸರು ಶೈಜಾ ವಿರುದ್ಧ ಸೆಕ್ಷನ್ 153ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. “ಗಾಂಧೀಜಿ ಕೊಲೆಯನ್ನು ಮೆಚ್ಚಿಕೊಳ್ಳುವುದು ನನ್ನ ಪ್ರತಿಕ್ರಿಯೆಯ ಉದ್ದೇಶವಾಗಿರಲಿಲ್ಲ. ‘ನಾನೇಕೆ ಗಾಂಧಿಯ ಕೊಂದೆ’ ಎನ್ನುವ ಗೋಡ್ಸೆಯ ಪುಸ್ತಕವನ್ನು ನಾನು ಓದಿದ್ದೇನೆ. ಜನಸಾಮಾನ್ಯರಿಗೆ ತಿಳಿಯದ ಅನೇಕ ಮಾಹಿತಿ ಪುಸ್ತಕದಲ್ಲಿ ಬಹಿರಂಗವಾಗಿದೆ. ಗೋಡ್ಸೆ ಕೂಡ ಸ್ವಾತಂತ್ರ್ಯ ಹೋರಾಟಗಾರ. ಈ ಪುಸ್ತಕದಿಂದ ನನಗೆ ಜ್ಞಾನೋದಯವಾಗಿದೆ. ಆ ಹಿನ್ನೆಲೆಯಲ್ಲಿ ವಕೀಲರ ಫೇಸ್‌ಬುಕ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದೆ. ನನ್ನ ಪ್ರತಿಕ್ರಿಯೆಗೆ ಜನರು ತಪ್ಪರ್ಥ ಮಾಡಿಕೊಂಡಾಗ ಅದನ್ನು ಅಳಿಸಿದ್ದೇನೆ” ಎಂದು ಶೈಜಾ ಸಮರ್ಥಿಸಿಕೊಂಡಿದ್ದಾರೆ.
ಇತ್ತೀಚೆಗೆ ಎನ್‌ಐಟಿ ಕ್ಯಾಲಿಕಟ್‌ನಲ್ಲಿ ರಾಮಮಂದಿರ ಉದ್ಘಾಟನೆ ದಿನದಂದು ಕೇಸರಿ ಬಣ್ಣದ ಭಾರತದ ನಕ್ಷೆ ಬಿಡಿಸಿದ ನಂತರ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಘರ್ಷಣೆಯಿಂದ ಸುದ್ದಿಯಾಗಿತ್ತು. ನಕ್ಷೆಯ ವಿರುದ್ಧ ಪ್ರತಿಭಟಿಸುವಾಗ ವ್ಯಾಸಖ್ ಪ್ರೇಮ್‌ಕುಮಾರ್ ಎನ್ನುವ ದಲಿತ ವಿದ್ಯಾರ್ಥಿ ‘ಭಾರತ ರಾಮರಾಜ್ಯವಲ್ಲ’ ಎಂದು ಪೋಸ್ಟರ್ ಹಿಡಿದ ನಂತರ ಸಂಘರ್ಷ ಏರ್ಪಟ್ಟಿತ್ತು. ಈ ಪ್ರಕರಣದಲ್ಲಿ ಪ್ರೇಮ್‌ಕುಮಾರ್‌ನನ್ನು ಒಂದು ವರ್ಷದ ಮಟ್ಟಿಗೆ ಅಮಾನತು ಮಾಡಲಾಗಿತ್ತು. ಆದರೆ ವಿದ್ಯಾರ್ಥಿಗಳ ಪ್ರತಿಭಟನೆಯ ನಂತರ ಮೇಲ್ಮನವಿ ಸಲ್ಲಿಸುವ ಅವಕಾಶ ಕೊಟ್ಟು ಅಮಾನತನ್ನು ತಡೆಹಿಡಿಯಲಾಗಿದೆ.
ಎನ್‌ಐಟಿ ಕ್ಯಾಲಿಕಟ್‌ನಲ್ಲಿ 25 ವರ್ಷಗಳಿಂದ ವೃತ್ತಿನಿರತ ಶೈಜಾ, ತಮ್ಮ ಪೋಸ್ಟ್ ವಿರುದ್ಧ ಆಕ್ರೋಶ ವ್ಯಕ್ತವಾಗಲು ಕಾಲೇಜಿನ ಇತ್ತೀಚೆಗಿನ ವಿದ್ಯಾರ್ಥಿಗಳ ನಡುವಿನ ಅಶಾಂತಿ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಆದರೆ ಸಂಸ್ಥೆಯಿಂದ ಯಾರೂ ತಮ್ಮ ಪೋಸ್ಟ್ ಬಗ್ಗೆ ವಿವರಣೆ ಕೇಳಿಲ್ಲ ಎಂದು ಮಾಧ್ಯಮಗಳಿಗೆರಾಝಕೀ ತಿಳಿಸಿದ್ದಾರೆ.