ಪ್ರಧಾನಿ ನರೇಂದ್ರ ಮೋದಿ ಅವರ ಪಾದ ಸ್ಪರ್ಶಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಬಿಹಾರ ನಾಚಿಕೆ ಪಡುವಂತೆ ಮಾಡಿದ್ದಾರೆ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಶುಕ್ರವಾರ ಹೇಳಿದ್ದಾರೆ.
‘ಜನ್ ಸೂರಾಜ್’ ಅಭಿಯಾನವನ್ನು ನಡೆಸುತ್ತಿರುವ ಪ್ರಶಾಂತ್ ಕಿಶೋರ್ ಭಾಗಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದು, “ನಿತೀಶ್ ಕುಮಾರ್ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಧಾನಿ ನರೇಂದ್ರ ಮೋದಿಯವರ ಪಾದವನ್ನು ಸ್ಪರ್ಶಿಸಿದ್ದಾರೆ” ಎಂದು ಆರೋಪಿಸಿದರು.
“ಈ ಹಿಂದೆ ನಾನು ನಿತೀಶ್ ಕುಮಾರ್ ಅವರ ಜೊತೆ ಕೆಲಸ ಮಾಡಿದ್ದೇನೆ. ಈಗ ಅವರನ್ನೇ ಟೀಕಸುತ್ತೇನೆ. ಇದನ್ನು ಜನರು ಪ್ರಶ್ನಿಸುತ್ತಾರೆ. ಆದರೆ ನಿತೀಶ್ ಆಗ ವಿಭಿನ್ನ ವ್ಯಕ್ತಿಯಾಗಿದ್ದರು. ಅವರ ಆತ್ಮಸಾಕ್ಷಿಯನ್ನು ಮಾರಾಟ ಮಾಡಿರಲಿಲ್ಲ” ಎಂದು ಪ್ರಶಾಂತ್ ಕಿಶೋರ್ ಅಭಿಪ್ರಾಯಿಸಿದರು.
ಇದನ್ನು ಓದಿದ್ದೀರಾ? ಸುಳ್ಳಾದ ಭವಿಷ್ಯ | ಇನ್ನು ಮುಂದೆ ಚುನಾವಣಾ ಸೀಟುಗಳನ್ನು ಊಹಿಸುವುದಿಲ್ಲ: ಪ್ರಶಾಂತ್ ಕಿಶೋರ್
ಪ್ರಶಾಂತ್ ಕಿಶೋರ್ 2015ರಲ್ಲಿ ನಿತೀಶ್ ಕುಮಾರ್ ಅವರ ಜೆಡಿಯುನ ಚುನಾವಣಾ ಪ್ರಚಾರವನ್ನು ನಿರ್ವಹಿಸಿದ್ದರು. ಅದಾದ ಎರಡು ವರ್ಷಗಳ ಬಳಿಕ ಔಪಚಾರಿಕವಾಗಿ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
“ರಾಜ್ಯದ ನಾಯಕ ಎಂದರೆ ಆ ರಾಜ್ಯದ ಜನರ ಹೆಮ್ಮೆ. ಆದರೆ ನಿತೀಶ್ ಕುಮಾರ್ ಅವರು ಪ್ರಧಾನಿ ಮೋದಿಯವರ ಪಾದಗಳನ್ನು ಮುಟ್ಟಿ ಬಿಹಾರಕ್ಕೆ ಅವಮಾನ ಮಾಡಿದ್ದಾರೆ” ಎಂದು ಪ್ರಶಾಂತ್ ಕಿಶೋರ್ ಕಳೆದ ವಾರ ದೆಹಲಿಯಲ್ಲಿ ನಡೆದ ಎನ್‌ಡಿಎ ಸಭೆಯನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.
“ಪ್ರಧಾನಿ ಮೋದಿ ಅಧಿಕಾರಕ್ಕೆ ಮರಳುವಲ್ಲಿ ನಿತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ತುಂಬಾ ಮಾತನಾಡುತ್ತಿದ್ದಾರೆ. ಆದರೆ ಬಿಹಾರ ಸಿಎಂ ತಮ್ಮ ಸ್ಥಾನವನ್ನು ಹೇಗೆ ಬಳಸಿಕೊಳ್ಳುತ್ತಿದ್ದಾರೆ” ಎಂದು ಪ್ರಶಾಂತ್ ಕಿಶೋರ್ ಪ್ರಶ್ನಿಸಿದರು.
ಇದನ್ನು ಓದಿದ್ದೀರಾ? ಪ್ರಶಾಂತ್ ಕಿಶೋರ್ ಚುನಾವಣಾ ಸಮೀಕ್ಷೆ ಸುಳ್ಳಾಗಿಲ್ಲವೇ, ಇದು ಬಿಜೆಪಿಯ ಮೈಂಡ್ ಗೇಮ್ ಅಲ್ಲವೇ?
“ನಿತೀಶ್ ರಾಜ್ಯಕ್ಕೆ ಲಾಭ ತರಲು ತನ್ನ ಪ್ರಭಾವ ಬಳಸುತ್ತಿಲ್ಲ. ಬದಲಾಗಿ 2025ರ ವಿಧಾನಸಭಾ ಚುನಾವಣೆಯ ನಂತರವೂ ಬಿಜೆಪಿ ಬೆಂಬಲದೊಂದಿಗೆ ಅಧಿಕಾರವನ್ನು ಪಡೆಯಲೆಂದು ಪ್ರಧಾನಿ ಮೋದಿ ಪಾದ ಸ್ಪರ್ಶಿಸುತ್ತಿದ್ದಾರೆ” ಎಂದು ಆರೋಪಿಸಿದರು.
2014ರಲ್ಲಿ ಪಿಎಂ ಮೋದಿ ಪ್ರಚಾರವನ್ನು ನಿಭಾಯಿಸಿದ ಬಳಿಕ ಪ್ರಶಾಂತ್ ಕಿಶೋರ್ ಮೊದಲ ಬಾರಿಗೆ ಖ್ಯಾತಿ ಪಡೆದಿದ್ದಾರೆ. ಆದರೆ ಅದಾದ ಬಳಿಕ ಅವರ ಹಲವು ಚುನಾವಣಾ ಭವಿಷ್ಯಗಳು ಹುಸಿಯಾಗಿದೆ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿಯೂ ಪ್ರಶಾಂತ್ ಕಿಶೋರ್ ಭವಿಷ್ಯ ಸುಳ್ಳಾಗಿದೆ. ಅದಾದ ಬಳಿಕ “2024ರ ಲೋಕಸಭಾ ಚುನಾವಣೆಯ ಬಗ್ಗೆ ನಾನು ನೀಡಿದ್ದ ಭವಿಷ್ಯವು ತಪ್ಪಾಗಿದೆ ಎಂದು ಒಪ್ಪಿಕೊಳ್ಳುತ್ತೇನೆ. ಇನ್ನು ಮುಂದೆ ಯಾವುದೇ ಚುನಾವಣಾ ಸೀಟುಗಳನ್ನು ಊಹಿಸುವುದಿಲ್ಲ” ಎಂದು ಪ್ರಶಾಂತ್ ಕಿಶೋರ್ ಘೋಷಿಸಿದ್ದಾರೆ.
Nitish Kumar sold pride of Bihar’s people, touched feet of PM Modi: Prashant Kishor pic.twitter.com/qIlUJlIyMj
— Kashmir News Trust༝ (@knewstrust) June 15, 2024
“ಬಿಜೆಪಿ 303 ಅಥವಾ ಹೆಚ್ಚಿನ ಸ್ಥಾನಗಳನ್ನು ಪಡೆಯುತ್ತದೆ. ಜೂನ್ 4ರಂದು ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ” ಎಂದು ಭವಿಷ್ಯ ನುಡಿದಿದ್ದರು. ಬಿಜೆಪಿ ಸೇರಿ ಸಂಪೂರ್ಣ ಎನ್‌ಡಿಎ ಮೈತ್ರಿಕೂಟ 292 ಹಾಗೂ ಇಂಡಿಯಾ ಮೈತ್ರಿಕೂಟ 232 ಸ್ಥಾನಗಳನ್ನು ಪಡೆದಿದ್ದು ಪ್ರಶಾಂಶ್ ಕಿಶೋರ್ ಭವಿಷ್ಯ ಸುಳ್ಳಾಗಿತ್ತು.