ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಗೆ ನಿತೀಶ್ ಅವರ ಜೆಡಿಯು ಮರಳುತ್ತದೆ ಎಂಬ ಊಹಾಪೋಹಗಳು ಕೆಲ ದಿನಗಳಿಂದ ಹರಡಿದ್ದವು. ಆದರೆ, ಆ ಬಗ್ಗೆ ಯಾವುದೇ ಮಾತನಾಡದ ನಿತೀಶ್ ಕುಮಾರ್, ಇದೀಗ ರಾಜೀನಾಮೆ ನೀಡಿದ್ದಾರೆ.
ನಿತೀಶ್ ಕುಮಾರ್ ಅವರು ಭಾನುವಾರ ಬೆಳಗ್ಗೆ ರಾಜ್ಯಪಾಲರ ಕಚೇರಿಗೆ ತೆರಳಿ, ರಾಜೀನಾಮೆ ನೀಡಿದ್ದಾರೆ. ಅದಕ್ಕೂ ಮುನ್ನ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಪಕ್ಷದ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಕೂಟಕ್ಕೆ ಮರಳು ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ನಿತೀಶ್ ಕುಮಾರ್ ಅವರು ಆರ್‌ಜೆಡಿ ಮತ್ತು ಕಾಗ್ರೆಂಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಈಗ, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಿತೀಶ್, 28 ವಿರೋಧ ಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದಿಂದಲೂ ಹೊರ ನಡೆಸಿದ್ದಾರೆ.
ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು, ಮತ್ತೆ ಮುಖ್ಯಮಂತ್ರಿಯಾಗುವ ಸಾಧ್ಯತೆಗಳು ಇವೆ. ಬಿಹಾರದ ಎಲ್ಲ ಬಿಜೆಪಿ ಶಾಸಕರು ಈಗಾಗಲೇ ನಿತೀಶ್ ಕುಮಾರ್‌ಗೆ ಬೆಂಬಲ ಪತ್ರ ನೀಡಿದ್ದಾರೆ ಎಂದು ವರದಿಯಾಗಿದೆ.
ನಿತೀಶ್ ಅವರ ಜೆಡಿಯು ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಮುಂದಿನ ಲೋಕಸಭೆ ಚುನಾವಣೆ ಎದುರಿಸಲಿವೆ. ಚುನಾವಣೆಗೆ ಸೀಟು ಹಂಚಿಕೆಯ ಒಪ್ಪಂದವೂ ಈಗಾಗಲೇ ಮುಗಿದಿದೆ ಎಂದು ಹೇಳಲಾಗಿದೆ.
ಈ ವರದಿ ಓದಿದ್ದೀರಾ?: ಬಿಹಾರ | ಬಿಜೆಪಿ ಸಖ್ಯ ತೊರೆದಿದ್ದ ನಿತೀಶ್, ಮತ್ತೆ ಎನ್‌ಡಿಎ ಸೇರ ಹೊರಟ್ಟಿದ್ದು ಯಾಕೆ?
ಬಿಹಾರದ ಬಿಜೆಪಿ ಶಾಸಕರು ಮತ್ತು ಸಂಸದರು ಪಾಟ್ನಾದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ್ದಾರೆ. ರಾಜ್ಯದಲ್ಲಿನ ರಾಜಕೀಯ ಪರಿಸ್ಥಿತಿಗಳ ಬಗ್ಗೆ ಚರ್ಚೆ ನಡೆಸಿದ್ದು, ಮತ್ತಷ್ಟು ಕಾರ್ಯತಂತ್ರಗಳನ್ನು ರೂಪಿಸಿದ್ದಾರೆ. ಅಲ್ಲದೆ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮತ್ತು ಕೆಲ ಬಿಜೆಪಿ ನಾಯಕರು ಭಾನುವಾರ ಮಧ್ಯಹ್ನ ಪಾಟ್ನಾಗೆ ತೆರಳಲಿದ್ದು, ಮತ್ತೊಂದು ಸಭೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಈ ಹಿಂದೆ, ಬಿಜೆಪಿ ಜೊತೆಗೆ ಮೈತ್ರಿ ಮಾಡಿದ್ದ ನಿತೀಶ್ ಕುಮಾರ್, 2022ರ ಆಗಸ್ಟ್‌ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ತೊರೆದಿದ್ದರು. ಆಗ, ‘ತನ್ನ ಪಕ್ಷವನ್ನು ಒಡೆದು ಮುಗಿಸಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದರು. ಬಳಿಕ, ಆರ್‌ಜೆಡಿ ಮತ್ತು ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದರು. ಇದೀಗ, ಮತ್ತೆ ಸರ್ಕಾರವನ್ನು ಉರುಳಿಸಿ, ಬಿಜೆಪಿಯೊಂದಿಗೆ ಮರಳಿದ್ದಾರೆ.