ಬಿಹಾರ ರಾಜಕೀಯ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್, ಆರ್‌ಜೆಡಿ ಮೈತ್ರಿ ತೊರೆದು ಮತ್ತೆ ಬಿಜೆಪಿ ಜೊತೆಗೆ ಕೈಜೋಡಿಸುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಮೈತ್ರಿಯನ್ನು ಉಳಿಸಲು ಇಂಡಿಯಾ ಮೈತ್ರಿಕೂಟ ಕಸರತ್ತು ನಡೆಸುತ್ತಿದೆ. ಮುಂದೇನಾಗಬಹುದು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ.
ಅಂದಹಾಗೆ, ಯುಡಿಯು ನಾಯಕ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2022ರ ಆಗಸ್ಟ್‌ನಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ತೊರೆದಿದ್ದರು. ಆಗ, ‘ಬಿಜೆಪಿಯು ತನ್ನ ಪಕ್ಷವನ್ನು ಒಡೆದು ಮುಗಿಸಲು ಯತ್ನಿಸುತ್ತಿದೆ’ ಎಂದು ಆರೋಪಿಸಿದ್ದರು. ಬಳಿಕ, ಆರ್‌ಜೆಡಿ, ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಮಾಡಿಕೊಂಡು ಮತ್ತೆ ಮುಖ್ಯಮಂತ್ರಿಯಾದರು. ಅಲ್ಲದೆ, ಅದಾದ ಮೂರು ತಿಂಗಳ ಬಳಿಕ, ಮುಂಬರುವ 2025ರ ವಿಧಾನಸಭಾ ಚುನಾವಣೆಯನ್ನು ಆರ್‌ಜೆಡಿ ನಾಯಕ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಮೈತ್ರಿಯನ್ನು ಮುನ್ನಡೆಸುತ್ತಾರೆ ಎಂದೂ ಹೇಳಿದ್ದರು.
ಆದರೆ, ಈಗ, ಆರ್‌ಜೆಡಿ ಜೊತೆಗಿನ ಮೈತ್ರಿಯನ್ನು ನಿತೀಶ್ ಕಡಿತಗೊಳಿಸಲು ಮುಂದಾಗಿದ್ದಾರೆ ಎನ್ನಲಾಗಿದೆ. ಗುರುವಾರ, ಜನವರಿ 26ರಂದು ಪಾಟ್ನಾದಲ್ಲಿ ನಡೆದ ಗಣರಾಜ್ಯೋತ್ಸವ ಸಮಾರಂಭದಲ್ಲಿ ನತೀಶ್ ಮತ್ತು ತೇಜಸ್ವಿ ಅಂತರ ಕಾಯ್ದುಕೊಂಡಿದ್ದರು. ಇದು, ಮೈತ್ರಿ ಒಡೆಯುತ್ತದೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಆದರೆ, ನತೀಶ್ ಅವರು ಮೈತ್ರಿ ಒಡೆಯುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ, ಊಹಾಪೋಹಗಳು ವದಂತಿಗಳಾಗಿಯೇ ಉಳಿದಿವೆ.
2022ರಲ್ಲಿ ನಿತೀಶ್ ಎನ್‌ಡಿಎ ತೊರೆದಿದ್ದೇಕೆ?
ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಲ್ಲಿ ಬಿಹಾರದಲ್ಲಿ ಜೆಡಿಯು ದೊಡ್ಡ ಪಾಲನ್ನು ಹೊದ್ದಿತ್ತು. ಆದರೆ, 2015ರಲ್ಲಿ 71 ಸ್ಥಾನಗಳನ್ನು ಹೊಂದಿದ್ದ ಜೆಡಿಯು ಪಾಲು, 2020ರಲ್ಲಿ 43 ಸ್ಥಾನಗಳಿಗೆ ಕುಸಿದಿತ್ತು. ಬಿಜೆಪಿ ತನ್ನ ಸ್ಥಾನಗಳನ್ನು 53ರಿಂದ 74ಕ್ಕೆ ಏರಿಸಿಕೊಂಡು, ಹೆಚ್ಚಿನ ಸ್ಥಾನಗಳನ್ನು ಪಡೆದುಕೊಂಡಿತ್ತು. ಆಗಿನಿಂದಲೂ ನಿತೀಶ್ ಬಿಜೆಪಿ ಜೊತೆ ಅಸಮಾಧಾನಗೊಂಡಿದ್ದರು.
ಅಲ್ಲದೆ, ನತೀಶ್ ಜೊತೆಗೆ ಬಂಡಾಯ ಎದ್ದಿದ್ದ ಎನ್‌ಡಿಎ ಭಾಗವೇ ಆಗಿದ್ದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಅವರು ಎಲ್ಲ ಕ್ಷೇತ್ರಗಳಲ್ಲಿಯೂ ಜೆಡಿಯು ವಿರುದ್ಧ ಅಭ್ಯರ್ಥಿಗಳನ್ನು ಕಣಕ್ಕಿಸಿದ್ದರು. ಜೆಡಿಯು ಮತಗಳನ್ನು ವಿಭಜಿಸಲು ಮತ್ತು ಜೆಡಿಯು ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿಯ ಪ್ರಾಕ್ಸಿಯಾಗಿ ಚಿರಾಗ್ ಕಾರ್ಯನಿರ್ವಹಿಸಿದ್ದಾರೆ ಎಂದು ನಿತೀಶ್ ಆರೋಪಿಸಿದ್ದರು. ಆ ಚುನಾವಣೆಯಲ್ಲಿ ಎಲ್‌ಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಗೆದ್ದರೂ, ಉಳಿದ ಕ್ಷೇತ್ರದಲ್ಲಿ ಜೆಡಿಯು ಮತಗಳು ವಿಭಜನೆಯಾಗುವಲ್ಲಿ ಗಂಭೀರ ಪ್ರಭಾವ ಬೀರಿತ್ತು. ಇದಕ್ಕೂ ಬಿಜೆಪಿಯೇ ಕಾರಣವೆಂದು ನಿತೀಶ್ ದೂರಿದ್ದರು.
ಅಲ್ಲದೆ, ಜೆಡಿಯು ನಾಯಕ ಆರ್‌ಸಿಪಿ ಸಿಂಗ್ ಅವರನ್ನು ಬಳಸಿಕೊಂಡು ಬಿಜೆಪಿಯು ತಮ್ಮ ಪಕ್ಷವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದ ಜೆಡಿಯು ಎಚ್ಚೆತ್ತುಕೊಂಡು, ಬಿಜೆಪಿ ಜೊತೆಗಿನ ಮೈತ್ರಿ ಕಡಿತಗೊಳಿಸಿ, ಎನ್‌ಡಿಎ ತೊರೆದಿತ್ತು.
ಈಗ ಎನ್‌ಡಿಎಗೆ ಮರಳಲು ಬಯಸುತ್ತಿರುವುದೇಕೆ?
ಕಾಂಗ್ರೆಸ್, ಆರ್‌ಜೆಡಿ ಮತ್ತು ಒಂಡಿಯಾ ಮೈತ್ರಿಕೂಟದಲ್ಲಿ ನಿತೀಶ್ ಅಸಮಾಧಾನಗೊಳ್ಳಲು ಕೆಲವು ಕಾರಣಗಳಿವೆ ಎಂದು ಜೆಡಿಯು ಒಳಗಿನವರೇ ಹೇಳುತ್ತಾರೆ.
ಲೋಕಸಭೆ ಚುನಾವಣೆಗೆ ಮುನ್ನ ಕನಿಷ್ಠ ಏಳು ಜೆಡಿಯು ಸಂಸದರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ. ಈ ಸಂಸದರು 2019ರಲ್ಲಿ ಎನ್‌ಡಿಎ ಮೈತ್ರಿಯಲ್ಲಿ ಗೆದ್ದಿದ್ದರು. ಅವರು ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗ ಜೊತೆಗಿನ ಮೈತ್ರಿಯನ್ನು ನಿರೀಕ್ಷಿಸಿರಲಿಲ್ಲ. ಅಲ್ಲದೆ, ಜೆಡಿಯು ಪಕ್ಷದ ಮಾಜಿ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಹೊರತುಪಡಿಸಿ ಹೆಚ್ಚಿನ ಹಿರಿಯ ಜೆಡಿಯು ನಾಯಕರು ಬಿಜೆಪಿ ಮೈತ್ರಿಯ ಪರವಾಗಿದ್ದಾರೆ. ನಿತೀಶ್ ಅವರು ಕ್ರಮಕೈಗೊಳ್ಳದಿದ್ದರೆ ಪಕ್ಷ ಇಬ್ಭಾಗವಾಗುವ ಸಾಧ್ಯತೆ ಇದೆ. ಅದಕ್ಕೆ ಪೂರಕವೆಂಬಂತೆ ಕಳೆದ ತಿಂಗಳು, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರೊಂದಿಗಿನ ಸಖ್ಯವನ್ನು ಇಷ್ಟಪಡದ ಲಲನ್ ಸಿಂಗ್ ಅವರನ್ನು ಜೆಡಿಯು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
2019ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಭಾಗವಾಗಿ ಸ್ಪರ್ಧಿಸಿದ್ದ ಜೆಡಿಯು 17 ಸ್ಥಾನಗಳಲ್ಲಿ 16 ಸ್ಥಾನಗಳನ್ನು ಗೆದ್ದಿತ್ತು. ಇದೀಗ, ಆಂತರಿಕ ಸಮೀಕ್ಷೆಗಳು ಪಕ್ಷಕ್ಕೆ ಹೆಚ್ಚಿನ ಮಹತ್ವವನ್ನು ತೋರಿಸದ ಕಾರಣ, ನರೇಂದ್ರ ಮೋದಿಯವರ ನಾಯಕತ್ವದಲ್ಲಿ ತಮ್ಮ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಸಾಧ್ಯತೆಗಳಿವೆ ಎಂದು ನಿತೀಶ್ ಭಾವಿಸಿದ್ದಾರೆ. ಮೋದಿಯ ಜನಪ್ರಿಯತೆ ಮತ್ತು ಅಯೋಧ್ಯೆ ರಾಮಮಂದಿರ ಉದ್ಘಾಟನೆಯು ಗೆಲುವಿನ ಸೂತ್ರವಾಗಲಿದೆ ಎಂದು ಜೆಡಿಎಸ್ ಭಾವಿಸಿದೆ.
ಈ ವರದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಮೂವರು ಮಾನಗೆಟ್ಟ ನಾಯಕರು ಮತ್ತು ರಾಮ ರಾಜಕಾರಣ
ನಿತೀಶ್ ಅವರು, ಕಳೆದ ವರ್ಷ ‘ಇಂಡಿಯಾ’ ಮೈತ್ರಿಕೂಟ ರಚಿಸಲು ಎಲ್ಲ ವಿಪಕ್ಷಗಳನ್ನು ಒಗ್ಗೂಡಿಸಲು ಕೆಲಸ ಮಾಡಿದ್ದರು. ಅಲ್ಲದೆ, ಮೈತ್ರಿಕೂಟದಲ್ಲಿ ಪ್ರಮುಖ ಹುದ್ದೆ ನಿರೀಕ್ಷಿಸಿದ್ದರು. ಪ್ರಧಾನಿ ಅಭ್ಯರ್ಥಿ ತಾವೇ ಆಗಬೇಕೆಂಬ ಬಯಕೆಯೂ ಅವರಲ್ಲಿತ್ತು. ಆದರೆ, ಟಿಎಂಸಿ ಮತ್ತು ಎಎಪಿಯಂತಹ ಪಕ್ಷಗಳ ಅಸಮಾಧಾನ ಅಸಹಾಕಾರದಿಂದ ಅದು ಫಲಿಸಲಿಲ್ಲ.
2017ರಲ್ಲಿ ಮಹಾಘಟಬಂಧನ್‌ನಿಂದ ದೂರವಿರಲು ಆರ್‌ಜೆಡಿಯನ್ನು ಜೆಡಿಯು ದೂಷಿಸಿತ್ತು. ಈಗ, ಕಾಂಗ್ರೆಸ್‌ನತ್ತ ಬೆರಳು ಮಾಡುತ್ತಿದೆ. ‘ಇಂಡಿಯಾ’ ಒಕ್ಕೂಟದ ಇತರ ಪಕ್ಷಗಳಿಗೆ ಕಾಂಗ್ರೆಸ್ ಹೆಚ್ಚು ಜಾಗ ಕೊಟ್ಟಿದೆ ಎಂದು ದೂರುತ್ತಿದೆ. ಅಲ್ಲದೆ, ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಆರಂಭಿಸಿದ್ದಾರೆ. ಇದು, ಜೆಡಿಯು ಮತ್ತಷ್ಟು ಹಿಂದೆ ಸರಿಯಲು ಕಾರಣವಾಗಿದೆ ಎನ್ನಲಾಗಿದೆ.
‘ಇಂಡಿಯಾ’ ಕೂಟವು ಗಟ್ಟಿಯಾಗ ಹೊರಬರಲು ವಿಫಲವಾಗಬಹುದು ಎಂಬ ಎಣಿಕೆಯಲ್ಲಿರುವ ನಿತೀಶ್, ತಮ್ಮ ಪಕ್ಷದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಜೊತೆ ಕೈಜೋಡಿಸುವ ಕಸರತ್ತು ಮಾಡುತ್ತಿರಬಹುದು ಎಂದು ಸ್ವಪಕ್ಷೀಯರೇ ಹೇಳುತ್ತಾರೆ.