ಎರಡು ಬಾರಿ ಎನ್‌ಡಿಎ ಕೂಟವನ್ನು ತೊರೆದು ತಪ್ಪು ಮಾಡಿದೆ. ಇನ್ನೆಂದೂ ಆ ತಪ್ಪನ್ನು ಮಾಡಲಾರೆ, ಎನ್‌ಡಿಎ ತೊರೆಯಲಾರೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭಾನುವಾರ ಹೇಳಿದ್ದಾರೆ.
ಪಾಟ್ನಾದ ಬಾಪು ಸಭಾಂಗಣದಲ್ಲಿ ಸಹಕಾರಿ ಇಲಾಖೆಯ ಕಾರ್ಯಕ್ರಮದಲ್ಲಿ ಬಿಹಾರ ಸಿಎಂ ಈ ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ಭಾಗಿಯಾಗಿದ್ದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್
“ಬಿಹಾರದಲ್ಲಿ, ವಿಶೇಷವಾಗಿ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರ ನಾಯಕತ್ವದಲ್ಲಿ ಸಹಕಾರಿ ವಲಯವು ದೊಡ್ಡ ಪ್ರಮಾಣದ ಪ್ರಯೋಜನಗಳನ್ನು ಪಡೆದಿವೆ” ಎಂದು ಸಿಎಂ ನಿತೀಶ್ ಇದೇ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳಾದ ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ವಿರುದ್ಧ ವಾಗ್ದಾಳಿ ನಡೆಸಿದ ನಿತೀಶ್, “2005ರ ಮೊದಲು ರಾಜ್ಯದ ಪ್ರಗತಿಯನ್ನು ಅಂದಿನ ಆಡಳಿತ ಕುಂಠಿತಗೊಳಿಸಿದ್ದಾರೆ. ಅವರ ಆಡಳಿತದ ವೇಳೆ ಜನರು ಸಂಜೆ ನಂತರ ತಮ್ಮ ಮನೆಗಳಿಂದ ಹೊರಬರಲು ಭಯಪಡುತ್ತಿದ್ದರು” ಎಂದು ಆರೋಪಿಸಿದರು.
ಅಧಿಕಾರ ಎಲ್ಲಿರುತ್ತದೆಯೋ ಅಲ್ಲಿಗೆ ವಾಲಿಕೊಳ್ಳುವುದರಲ್ಲೇ ಪ್ರಸಿದ್ಧರಾಗಿರುವ ನಿತೀಶ್ ಕುಮಾರ್ ಅವರು ಹಲವು ಬಾರಿ ತನ್ನ ಮೈತ್ರಿ ಬದಲಾಯಿಸಿಕೊಂಡವರು. ಈ ಹಿಂದೆ ಎರಡು ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟದಿಂದ ಹೊರನಡೆದು, ಯುಪಿಎ ಒಕ್ಕೂಟ ಸೇರಿದ್ದರು. ತನ್ನ ರಾಜಕೀಯ ಜೀವನದಲ್ಲಿ ಬಹುತೇಕ ಕ್ಷಣಗಳಲ್ಲಿ ಮೈತ್ರಿ ಮುರಿದು ಇನ್ನೊಂದು ಮಿತ್ರಕೂಟಕ್ಕೆ ಹಾರುವ ಮೂಲಕವೇ ನಿತೀಶ್ ಸುದ್ದಿಯಾಗಿದ್ದಾರೆ.
