- ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಭೇಟಿಗೆ ಕರೆದ ಖರ್ಗೆ
- ದೆಹಲಿ ಭೇಟಿ ಸಂದರ್ಭ ಇತರ ಪಕ್ಷಗಳ ನಾಯಕರ ಜೊತೆ ಮಾತುಕತೆ
ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೂರು ದಿನಗಳ ಭೇಟಿಗಾಗಿ ದೆಹಲಿಗೆ ತೆರಳಿದ್ದು, ಬುಧವಾರ (ಏಪ್ರಿಲ್ 12) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿದ್ದಾರೆ.
ಇವರೊಡನೆ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರೂ ತೆರಳಿದ್ದಾರೆ. ಖರ್ಗೆ ಅವರ ನಿವಾಸದಲ್ಲಿ ನಿತೀಶ್ ಹಾಗೂ ತೇಜಸ್ವಿ ಯಾದವ್ ಖರ್ಗೆ ಹಾಗೂ ರಾಹುಲ್ ಅವರನ್ನು ಭೇಟಿಯಾಗಿದ್ದಾರೆ.
ದೆಹಲಿ ಭೇಟಿ ವೇಳೆ ನಿತೀಶ್ ಅವರು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎನ್ನಲಾಗಿದೆ. ಅಲ್ಲದೆ ನಿತೀಶ್ ಅವರು ಖರ್ಗೆ ಅವರ ಸೂಚನೆ ಮೇರೆಗೆ ಮಂಗಳವಾರ (ಏಪ್ರಿಲ್ 11) ದೆಹಲಿಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಬಲ ಸ್ಪರ್ಧೆ ಒಡ್ಡಲು ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳನ್ನು ಒಂದುಗೂಡಿಸಲು ನಿತೀಶ್ ಸೇತುವೆಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಧ್ಯಮಗಳ ವರದಿ ಹೇಳಿದೆ.
ದೆಹಲಿಗೆ ಆಗಮಿಸಿದ ಬಳಿಕ ನಿತೀಶ್ ಕುಮಾರ್ ಮೊದಲು ಬಿಹಾರದಲ್ಲಿ ಮಿತ್ರಪಕ್ಷ ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಅವರನ್ನು ಭೇಟಿ ಮಾಡಿದರು.
ಲಾಲು ಪ್ರಸಾದ್ ಅವರ ಪುತ್ರ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಪ್ರಸ್ತುತ ದೆಹಲಿಯಲ್ಲಿದ್ದಾರೆ. ಅವರು ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಎದುರಿಸುತ್ತಿದ್ದಾರೆ.
ಪ್ರವಾಸದ ವೇಳೆ ನಿತೀಶ್ ಅವರು ಖರ್ಗೆ ಅವರನ್ನು ಹೊರತುಪಡಿಸಿ ಅನೇಕ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ ಎಂದು ಜೆಡಿಯು ನಾಯಕರು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಅರುಣಾಚಲ ಪ್ರದೇಶ | ‘ಒಂದಿಂಚು ಭೂಮಿ ಬಿಡೆವು’ ಎಂದ ಅಮಿತ್ ಶಾ; ‘ಸಾರ್ವಭೌಮತೆಗೆ ಧಕ್ಕೆ’ ಎಂದು ಆಕ್ಷೇಪಿಸಿದ ಚೀನಾ
“ಪ್ರತಿಪಕ್ಷಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇದು ನಿತೀಶ್ ಅವರ ಬಹುನಿರೀಕ್ಷಿತ ಪ್ರವಾಸ. ಒಗ್ಗಟ್ಟಿನ ಹೋರಾಟದತ್ತ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಹೆಜ್ಜೆ ಇರಿಸಿರುವುದು ಸಂತಸ ತಂದಿದೆ” ಎಂದು ಜೆಡಿಯು ಹಿರಿಯ ನಾಯಕ ಮತ್ತು ರಾಜ್ಯಸಭಾ ಮಾಜಿ ಸಂಸದ ಕೆ ಸಿ ತ್ಯಾಗಿ ಹೇಳಿದ್ದಾರೆ.
ಪ್ರತಿಪಕ್ಷಗಳ ಒಗ್ಗೂಡಿಸುವಿಕೆಗೆ ನಿತೀಶ್ ಕುಮಾರ್ ಅವರಿಗೆ ಕರೆ ಮಾಡುವುದಾಗಿ ಕಳೆದ ವಾರ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.