2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಟಿಎಂಸಿ ನಾಯಕಿ, ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ವಿಧಾನಸಭಾ ಬಜೆಟ್ ಅಧಿವೇಶನಕ್ಕಾಗಿ ನಡೆದ ಟಿಎಂಸಿ ಶಾಸಕರ ಸಭೆಯಲ್ಲಿ ಬ್ಯಾನರ್ಜಿ ಮೈತ್ರಿಯ ಬಗ್ಗೆ ಮಾತನಾಡಿದ್ದಾರೆ. “ದೆಹಲಿಯಲ್ಲಿ ಎಎಪಿಗೆ ಕಾಂಗ್ರೆಸ್ ಸಹಾಯ ಮಾಡಲಿಲ್ಲ. ಹರಿಯಾಣದಲ್ಲಿ ಕಾಂಗ್ರೆಸ್‌ಗೆ ಎಎಪಿ ನೆರವು ನೀಡಲಿಲ್ಲ. ಹೀಗಾಗಿ, ಎರಡೂ ಕಡೆ ಎರಡೂ ಪಕ್ಷಗಳು ಸೋತವು, ಬಿಜೆಪಿ ಅಧಿಕಾರಕ್ಕೆ ಬಂದಿತು” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಮುಂದಿನ ವರ್ಷ ನಡೆಲಿರುವ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈಗಾಗಲೇ ಮೂರು ಬಾರಿ ಟಿಎಂಸಿ ಏಕಾಂಗಿಯಾಗಿ ಬಹುಮತ ಪಡೆದು ಸರ್ಕಾರ ರಚಿಸಿದೆ. ನಾಲ್ಕನೇ ಬಾರಿಯೂ ಪಕ್ಷವು ಏಕಾಂಗಿಯಾಗಿ ಗೆದ್ದು, ಸರ್ಕಾರ ರಚಿಸುವ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
“ಬಂಗಾಳದಲ್ಲಿ ಕಾಂಗ್ರೆಸ್ ಏನನ್ನೂ ಮಾಡಿಲ್ಲ. ಸಮಾನ ಮನಸ್ಕ ವಿರೋಧ ಪಕ್ಷಗಳು ಮತ ವಿಭಜನೆಯಾಗದಂತೆ ನೋಡಿಕೊಳ್ಳಬೇಕು. ಆದರೆ, ದೆಹಲಿ, ಹರಿಯಾಣದಲ್ಲಿ ಅದು ಸಾಧ್ಯವಾಗಲಿಲ್ಲ. ಹೀಗಾದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿಯನ್ನು ತಡೆಯಲು ‘ಇಂಡಿಯಾ’ ಒಕ್ಕೂಟಕ್ಕೆ ಕಷ್ಟವಾಗುತ್ತದೆ” ಎಂದು ಹೇಳಿದ್ದಾರೆ.