ವಿಧಾನಸಭೆಗೆ ಎಳೆಯರೊಬ್ಬರು ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ ಮತ್ತು ದಿಟ್ಟ ನಿರ್ಧಾರಗಳ ಮೂಲಕ ತಮ್ಮದೇ ಆದ ಹೊಸ ಶೈಲಿಯೊಂದನ್ನು ಹುಟ್ಟುಹಾಕುತ್ತಿದ್ದಾರೆ. ಅದನ್ನು ಈ ಅಧಿವೇಶನದಲ್ಲಿ ಕಂಡಿದ್ದೇವೆ. ಈಗ ಸದನದಲ್ಲಿ ಅವರ ವಿರುದ್ಧ ದೂರುಗಳನ್ನು ಬಿಚ್ಚಿಡುವ ಮೂಲಕ ಅವರ ಧೃತಿಗೆಡಿಸುವ ಸ್ಪಷ್ಟ ಪ್ರಯತ್ನ ಇದು.
ಬುಧವಾರ ಸದನದಲ್ಲಿ ಅಶಿಸ್ತು ತೋರಿಸಿದ ಸದಸ್ಯರನ್ನು ಅಧಿವೇಶನದ ಅವಧಿಗೆ ಅಮಾನತು ಮಾಡಿದ ಸ್ಪೀಕರ್ ವಿರುದ್ಧ “ಅವಿಶ್ವಾಸ ಗೊತ್ತುವಳಿಯ ನೋಟಿಸು” ನೀಡಿದ್ದಾರೆ. ಅದಕ್ಕೆ ಹಾಲೀ ಸದನದ ಸದಸ್ಯರಾಗಿರುವ ಇಬ್ಬರು ಮಾಜೀ ಮುಖ್ಯಮಂತ್ರಿಗಳು ಸಹಿತ ಸಹಿ ಮಾಡಿದ್ದಾರೆ ಎಂಬ ವರದಿ ಓದಿದೆ.
ಸದನದ ನಿಯಮಗಳ ಪ್ರಕಾರ, ನೋಟಿಸು ಸಮರ್ಪಕವಾಗಿದೆ ಎಂದು ಸ್ಪೀಕರ್ ಸ್ಥಾನಕ್ಕೆ ಅನ್ನಿಸಿದರೆ, ಸದನದ ಒಳಗೆ 40ಕ್ಕಿಂತ ಹೆಚ್ಚು ಸದಸ್ಯರು ಈ ನೋಟಿಸಿನ ಪರವಾಗಿ ಕೈ ಎತ್ತಿದರೆ, ಸ್ಪೀಕರ್ ಅವರು ಅದನ್ನು ಕಲಾಪಕ್ಕೆ ಎತ್ತಿಕೊಂಡು, ಆ ಅವಿಶ್ವಾಸ ಕಲಾಪಕ್ಕೆ ದಿನ ನಿಗದಿ ಮಾಡುತ್ತಾರೆ, ಅಲ್ಲಿ ಚರ್ಚೆ ನಡೆದು, ಮತಕ್ಕೆ ಹಾಕಿ ಸ್ಪೀಕರ್ ಹುದ್ದೆಯಲ್ಲಿರುವ ವ್ಯಕ್ತಿಯ ಮೇಲಿನ ಅವಿಶ್ವಾಸ ತೀರ್ಮಾನ ಆಗುತ್ತದೆ. ಅದು ಸದನ ಕಲಾಪದ ಹಾದಿ.
ಇಲ್ಲಿ ಒಂದು ಅಚ್ಚರಿ ಏನೆಂದರೆ, ಸ್ಪೀಕರ್ ಹುದ್ದೆ ಪಕ್ಷಗಳಿಗಿಂತ ಮೇಲ್ಮಟ್ಟದ ಸಾಂವಿಧಾನಿಕ ಹುದ್ದೆಯಾದರೂ, ಅವರನ್ನು ಆರಿಸಿರುವ ಪಕ್ಷದವರು (ಬಹುಮತ ಇರುವ ಆಡಳಿತ ಪಕ್ಷ) ಅವರ ಕೈಬಿಡುವ ಸಾಧ್ಯತೆಗಳಿಲ್ಲ. ಆಡಳಿತ ಪಕ್ಷದ ಬಹುಮತವೂ ಈ ಸರ್ಕಾರಕ್ಕೆ ತೆಳುವಾದುದೇನಲ್ಲ. ಈಗ ನೀಡಿರುವ ನೋಟಿಸು ಸ್ವೀಕೃತಗೊಂಡರೂ ಕೂಡ, ಸದನದಲ್ಲಿ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಸ್ವೀಕೃತಗೊಂಡು ಖಾದರ್ (UT Khader) ಅವರು ಆ ಹುದ್ದೆಯಿಂದ ಕೆಳಗಿಳಿಯುವ ಸಾಧ್ಯತೆಗಳು ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ.
ಹಾಗಾದರೆ ಈ ಸೋಲುತ್ತೇವೆಂಬ ಗ್ಯಾರಂಟಿ ಇರುವ ಅವಿಶ್ವಾಸ ಗೊತ್ತುವಳಿ ನೋಟಿಸು ಪ್ರತಿಪಕ್ಷಗಳ ಕಡೆಯಿಂದ ಯಾಕೆ ಹೊರಟಿದೆ? ಅಲ್ಲೇ ಇರುವುದು ಹಿಕ್ಮತ್ತು!
ಸದನದಲ್ಲಿ ಅವಿಶ್ವಾಸ ಗೊತ್ತುವಳಿಯ ಕಲಾಪ ಆರಂಭ ಆದರೆ, ವಿರೋಧ ಪಕ್ಷಗಳಿಗೆ ಸದನದಲ್ಲೇ ಸ್ಪೀಕರ್ ವಿರುದ್ಧ (ಹೆಚ್ಚಿನಂಶ ಅವರ ನೈತಿಕ ಅನುಪಸ್ಥಿತಿಯಲ್ಲಿ) ತಮ್ಮ ಅಭಿಪ್ರಾಯಗಳನ್ನು ಹೊರಹಾಕುವ ಅವಕಾಶ ಸಿಗುತ್ತದೆ. ವಿಧಾನಸಭೆಗೆ ಎಳೆಯರೊಬ್ಬರು ಸ್ಪೀಕರ್ ಆಗಿ ಆಯ್ಕೆ ಆಗಿದ್ದಾರೆ ಮತ್ತು ದಿಟ್ಟ ನಿರ್ಧಾರಗಳ ಮೂಲಕ ತಮ್ಮದೇ ಆದ ಹೊಸ ಶೈಲಿಯೊಂದನ್ನು ಹುಟ್ಟುಹಾಕುತ್ತಿದ್ದಾರೆ. ಅದನ್ನು ಈ ಅಧಿವೇಶನದಲ್ಲಿ ಕಂಡಿದ್ದೇವೆ.
ಈಗ ಸದನದಲ್ಲಿ ಅವರ ವಿರುದ್ಧ ದೂರುಗಳನ್ನು ಬಿಚ್ಚಿಡುವ ಮೂಲಕ ಅವರ ಧೃತಿಗೆಡಿಸುವ ಸ್ಪಷ್ಟ ಪ್ರಯತ್ನ ಇದು. ಎರಡನೆಯದಾಗಿ, ಸದನದಲ್ಲಿ ಬಜೆಟ್ ಮೇಲಾಗಲೀ, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದಲ್ಲಾಗಲೀ ಪ್ರತಿಪಕ್ಷಗಳಿಗೆ “ಗ್ಯಾಲರಿಗೆ ಆಡುವ” ಅವಕಾಶ ಸಿಕ್ಕಿಲ್ಲ. ಹಾಗಾಗಿ, ಸದನದ ಅಮೂಲ್ಯ ಸಮಯವನ್ನು ಹಾಳು ಮಾಡಿ, ಕೆಸರೆರಚಾಟಕ್ಕೆ ಇನ್ನಷ್ಟು ಅವಕಾಶ ಪಡೆದುಕೊಳ್ಳುವ, ಆ ಮೂಲಕ ಸದನದ ಇನ್ನುಳಿದ ಅವಧಿಯ ಕಲಾಪಗಳಲ್ಲಿ ಒಂದೆರಡು ದಿನದ ಸಮಯವನ್ನು ತಮ್ಮ ಬಾಯಿ ಚಟ ತೀರಿಸಿಕೊಳ್ಳಲು ವ್ಯರ್ಥ ಮಾಡುವ ಉದ್ದೇಶಪೂರ್ವಕ ಪ್ರಯತ್ನ ಇದು ಎಂದು ಮೇಲುನೋಟಕ್ಕೇ ಅನ್ನಿಸುತ್ತದೆ. ನಿಜಕ್ಕೂ ಏನಾಗಲಿದೆ ಎಂಬುದನ್ನು ಕಾದು ನೋಡೋಣ.
ಆದರೆ, ಜನಸಾಮಾನ್ಯರಾದ ನಾವು ನಮ್ಮಿಂದ ಆರಿಸಿಹೋದ ಈ ಜನಪ್ರತಿನಿಧಿಗಳ ಈ “ಕೆಟ್ಟ ವರ್ತನೆ”ಗಳ ಬಗ್ಗೆ ಏನೂ ಮಾಡುವಂತಿಲ್ಲ. ಇದೆಲ್ಲ ಸದನದ ಸದಸ್ಯರಾಗಿ ಅವರ ಹಕ್ಕು! ಒಂದಂತೂ ಸತ್ಯ. ಈ ಅವಿಶ್ವಾಸದ ಬಗ್ಗೆ ಸದನದಲ್ಲಿ ಏನೇ ಕಲಾಪ ನಡೆದರೂ ಅದು ಒಂದು ಕೆಟ್ಟ ಪೂರ್ವೋದಾಹರಣೆ ಆಗಿ ಕರ್ನಾಟಕದ ಸಂಸದೀಯ ಇತಿಹಾಸದಲ್ಲಿ ದಾಖಲಾಗಲಿದೆ.

ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).