ನಾಸಿರುದ್ದೀನ್ ಶಾ: ಅಭಿಮಾನಿಗಳ ಎದೆ ತುಂಬುವ ಬೆಳಕು

Date:

ಆತ ಮಹಾನ್ ನಟ; ಕೇವಲ ಅತ್ಯುತ್ತಮ ನಟನಷ್ಟೇ ಅಲ್ಲ, ತನ್ನ ಇರುವಿಕೆಯಿಂದ ಒಂದು ಕಾಲಮಾನದ ಸಿನಿಮಾ ಹಾಗೂ ನಾಟಕ ರಂಗಗಳನ್ನು ಇನ್ನಿಲ್ಲದಂತೆ ಪ್ರಭಾವಿಸಿದ, ತನ್ನ ನಟನೆಯಿಂದ ಜನರನ್ನು ಮೆಚ್ಚಿಸಿದ, ತನ್ನ ಹೇಳಿಕೆಗಳಿಂದ ಸಮುದಾಯಗಳನ್ನು ಆಲೋಚನೆಗೀಡುಮಾಡಿದ ಕಲಾವಿದ. ಆತನೇ ನಾಸಿರುದ್ದೀನ್ ಶಾ. ಇಂದು- ಜುಲೈ 20- ಶಾ ಹುಟ್ಟಿದ ದಿನ. ಅವರಿಂದು 73ನೇ ಸಂವತ್ಸರಕ್ಕೆ ಕಾಲಿಟ್ಟಿದ್ದಾರೆ.

ನಾಸಿರುದ್ದೀನ್ ಶಾ, ಉತ್ತರ ಪ್ರದೇಶದ ಬಾರಾಬಂಕಿಯ ನವಾಬ್ ಕುಟುಂಬದವರು. ಅಜ್ಮೇರ್ ಹಾಗೂ ನೈನಿತಾಲ್‌ನಲ್ಲಿ ತಮ್ಮ ಆರಂಭಿಕ ವಿದ್ಯಾಭ್ಯಾಸ ಮಾಡಿದ ನಂತರ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಇವರ ಅಣ್ಣ ಜಮೀರುದ್ದೀನ್ ಶಾ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.

ನಾಸಿರುದ್ದೀನ್ ಶಾ ಓದಿನಲ್ಲಿ ಅಷ್ಟೇನೂ ಆಸಕ್ತಿ ತೋರಿಸುತ್ತಿರಲಿಲ್ಲ. ಶಾಲೆಯಲ್ಲಿ ನಡೆಯುತ್ತಿದ್ದ ನಾಟಕಗಳಲ್ಲಿ ಅಭಿನಯಿಸುವುದೆಂದರೆ ಬಾಲಕ ನಾಸಿರುದ್ದೀನ್‌ಗೆ ಎಲ್ಲಿಲ್ಲದ ಖುಷಿ. ಅದು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಪಾರ ಕನಸು ಹೊಂದಿದ್ದ ಅವರ ಅಪ್ಪನಿಗೆ ತೀವ್ರ ನಿರಾಶೆಯ ಹಾಗೂ ನೋವಿನ ಸಂಗತಿಯಾಗಿತ್ತು. ಈ ವಿಚಾರ ಅಪ್ಪ ಮತ್ತು ಮಗನ ಸಂಬಂಧ ಹದಗೆಡಲು ಕಾರಣವಾಯಿತು. ಆದರೆ, ನಟನೆಯೇ ತನ್ನ ಬದುಕು ಎಂದು ಅಷ್ಟೊತ್ತಿಗಾಗಲೇ ನಿರ್ಧರಿಸಿದ್ದ ಶಾ, ತನ್ನ 16ನೇ ವಯಸ್ಸಿನಲ್ಲಿ ಮನೆಯಲ್ಲಿ ಹೇಳದೇ ಮುಂಬೈಗೆ ಓಡಿಹೋದರು. ರಾಜೇಂದ್ರ ಕುಮಾರ್ ಅವರ ‘ಅಮಾನ್’ ಚಿತ್ರದಲ್ಲಿ ‘ಎಕ್ಸ್‌ಟ್ರಾ’ ಆಗಿ ನಟಿಸಿದ್ದರು. ಆಗ ಅವರಿಗೆ ಏಳೂವರೆ ರೂಪಾಯಿ ಸಂಭಾವನೆ ನೀಡಲಾಗಿತ್ತು. ಅದು ನಟನೆಗಾಗಿ ಅವರು ಪಡೆದ ಮೊದಲ ಸಂಭಾವನೆ.

ಇದೇ ಅಪ್ಪ ತನ್ನ ಮಗ ನಟನಾಗಬೇಕೆಂಬ ಹೆಬ್ಬಯಕೆಯಿಂದ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿದಾಗ ಆತನಿಗೆ 600 ರೂಪಾಯಿ ಕಳಿಸಿಕೊಡುತ್ತಾರೆ. ಇನ್ನೊಮ್ಮೆ ಮಗ ತನಗೆ ಇಷ್ಟವಿಲ್ಲದ ಹುಡುಗಿಯನ್ನು ವರಿಸಿದಾಗ ಮಗನೊಂದಿಗೆ ಮುನಿಸಿಕೊಳ್ಳುವ ಅಪ್ಪ, ಮೊಮ್ಮಗಳು ಹುಟ್ಟಿದಾಗ ಓಡಿಹೋಗಿ ಮಗುವನ್ನು ಮುದ್ದಿಸುತ್ತಾರೆ. ಅಪ್ಪ ಮಗನ ಸಂಬಂಧ ಎಂದೂ ಸಹಜ ಪಾತಳಿಯಲ್ಲಿರುವುದೇ ಇಲ್ಲ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ನಾಸಿರುದ್ದೀನ್ ಶಾ ಅವರಿಗೆ ಚಿತ್ರರಂಗದಲ್ಲಿ ಬ್ರೇಕ್ ನೀಡಿದ ಮೊದಲ ಚಿತ್ರ ಶ್ಯಾಮ್ ಬೆನಗಲ್ ನಿರ್ದೇಶನದ ‘ನಿಶಾಂತ್’. 1975ರಲ್ಲಿ ‘ನಿಶಾಂತ್’ ಬಂದಾಗ ಶಾನ ಅಪ್ಪ ಅದನ್ನು ಎರಡೆರಡು ಬಾರಿ ನೋಡಿ ಖುಷಿ ಪಡುತ್ತಾರೆ. ಆ ಸಿನಿಮಾದಿಂದ ಬಂದ ಸಂಭಾವನೆಯಲ್ಲಿ ನಾಸಿರುದ್ದೀನ್ ತನ್ನ ತಂದೆಗೆ 1000 ರೂಪಾಯಿ ನೀಡುತ್ತಾರೆ. ಅದಾದ ಅಲ್ಪ ಕಾಲದಲ್ಲಿಯೇ ಶಾ ಅವರ ಅಪ್ಪ ಕಾಲವಾಗುತ್ತಾರೆ. ಎಂದೂ ಅಪ್ಪನ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡದ ಮಗ, ಅಪ್ಪನ ಸಮಾಧಿ ಮುಂದೆ ಕೂತು ಮೊಟ್ಟ ಮೊದಲ ಬಾರಿಗೆ ಮನಸ್ಸಿನಲ್ಲಿರುವುದನ್ನೆಲ್ಲಾ ಹೇಳಿಕೊಳ್ಳುತ್ತಾರೆ. ಅಪ್ಪ ಮಗನ ಸಂಘರ್ಷದ, ಪರೋಕ್ಷ ಪ್ರೀತಿಯ ಕಥನವೇ ಒಂದು ಸಿನಿಮಾಗೆ ವಸ್ತುವಾಗುವಂತಿದೆ.           

ನಾಸಿರುದ್ದೀನ್ ಶಾ ತಮ್ಮ ಚಿತ್ರಜೀವನದಲ್ಲಿ ಅನುಭವಿಸಿದ್ದು ಒಂದೆರಡಲ್ಲ. ಆದರೆ, ಅವರು ಚಿತ್ರರಂಗಕ್ಕೆ ಅಡಿಯಿಡುವಾಗಲೇ ಇದೆಲ್ಲದಕ್ಕೂ ಸಿದ್ದರಾಗಿ ಬಂದಿದ್ದರು. ಬಹುತೇಕ ಹೊಸ ಹಾಗೂ ಯುವ ನಿರ್ದೇಶಕರೊಂದಿಗೆ ಕೆಲಸ ಮಾಡಿದವರು ಶಾ. ಎಪ್ಪತ್ತು ಮತ್ತು ಎಂಬತ್ತರ ದಶಕದಲ್ಲಿ ಪರ್ಯಾಯ ಸಿನಿಮಾಗಳ ಅವಿಭಾಜ್ಯ ಅಂಗವಾಗಿದ್ದರು.       

‘ನಿಶಾಂತ್’ ಚಿತ್ರದ ಮೂಲಕ ಚಿತ್ರಜೀವನ ಆರಂಭಿಸಿದ ಶಾ, ‘ಜಾನೇ ಬಿ ದೋ ಯಾರೋ’, ‘ಕಭೀ ಹಾ ಕಭೀ ನಾ’, ‘ಮಾಸೂಮ್’ ಹೀಗೆ ಚಿತ್ರದಿಂದ ಚಿತ್ರಕ್ಕೆ ಬೆಳೆಯುತ್ತಾ ಸಾಗಿದರು. ‘ಸ್ಪರ್ಶ್’ ಸಿನಿಮಾದ ಅಂಧ ಪ್ರಿನ್ಸಿಪಾಲರಾಗಿ, ‘ಬಜಾರ್’ ಸಿನಿಮಾದ ಕವಿ ಹಾಗೂ ಪ್ರೇಮಿ ಸಲೀಮನಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ‘ಜಾನೇ ಭೀ ದೋ ಯಾರೋ’ ಚಿತ್ರದಲ್ಲಿ ವಿನೋದ್ ಚೋಪ್ರಾ ಆಗಿ ಅವರ ಕಾಮಿಡಿ ಟೈಮಿಂಗ್ ಮತ್ತು ನಟನೆಯನ್ನು ಕೊಂಡಾಡದವರೇ ಇಲ್ಲ. ‘ಮಾಸೂಮ್’ ಚಿತ್ರದ ವಿವಾಹೇತರ ಸಂಬಂಧ ಹೊಂದಿದ ಗೃಹಸ್ಥ ಡಿ ಕೆ ಮಲ್ಹೋತ್ರಾ ಆಗಿ ಅವರದ್ದು ಪ್ರಬುದ್ಧ ನಟನೆ. ಅದೇ ರೀತಿ ‘ಎ ವೆನ್ಸ್‌ಡೇ’ ಚಿತ್ರದಲ್ಲಿ ಒಬ್ಬ ಸಾಮಾನ್ಯ ಮುಂಬೈ ನಿವಾಸಿಯಾಗಿ, ‘ಇಷ್ಕಿಯಾ’ದಲ್ಲಿ ಇಫ್ತೀಕರ್ ಆಗಿ, ‘ಕುಟ್ಟೆ’ ಚಿತ್ರದಲ್ಲಿ ನಾರಾಯಣ್ ಖೋಬ್ರೆಯಾಗಿ ಮರೆಯಲಾಗದ ನಟನೆ ಮಾಡಿದವರು ಶಾ.

ನಾಸಿರುದ್ದೀನ್ ಶಾ

ಕೇವಲ ಪರ್ಯಾಯ ಚಿತ್ರಗಳಲ್ಲಿ ಮಾತ್ರವಲ್ಲ.. ಕಮರ್ಷಿಯಲ್ ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಹೊಸ ತಲೆಮಾರಿನ ನವಾಜುದ್ದಿನ್ ಸಿದ್ಧಿಕಿ, ಆಯುಷ್ಮಾನ್ ಖುರಾನಾ, ಅನುರಾಗ್ ಕಶ್ಯಪ್, ವಿಕ್ಕಿ ಕೌಶಲ್ ಸೇರಿದಂತೆ ಹಲವರು ಶಾ ಅವರನ್ನು ರೋಲ್ ಮಾಡೆಲ್ ಎಂದು ಪರಿಗಣಿಸುತ್ತಾರೆ.

ನಾಸಿರುದ್ದೀನ್ ಶಾ ಸಿನಿಮಾ, ಕಿರುಚಿತ್ರಗಳು, ವೆಬ್ ಸೀರೀಸ್, ಟಿವಿ ಎಲ್ಲ ಮಾಧ್ಯಮಗಳಲ್ಲೂ ಗಮನಾರ್ಹ ಸಾಧನೆ ಮಾಡಿದವರು. ಆದರೆ, ಅವರ ಮೊದಲ ಪ್ರೀತಿ ರಂಗಭೂಮಿ. ನಾಟಕ ರಂಗದ ಬಗ್ಗೆ ಅಪಾರ ಆಸಕ್ತಿ, ಜ್ಞಾನ ಹೊಂದಿದ್ದ ಶಾ, ಬೆಂಜಮಿನ್ ಗಿಲಾನಿ ಜೊತೆ ಸೇರಿಕೊಂಡು ಮೋಟ್ಲೆ ಪ್ರೊಡಕ್ಷನ್ಸ್ ಸ್ಥಾಪಿಸಿದರು. ಸ್ಯಾಮ್ಯುಯೆಲ್ ಬೆಕೆಟ್‌ನ ‘ವೆಯ್ಟಿಂಗ್ ಫಾರ್ ಗೋಡೋ’ ಎನ್ನುವ ನಾಟಕ ಅದರ ಮೊದಲ ಪ್ರಯೋಗ. ಅದು ಮುಂಬೈನ ಪೃಥ್ವಿ ಥಿಯೇಟರ್‌ನಲ್ಲಿ ಮೂರು ವರ್ಷ ಪ್ರದರ್ಶನ ಕಂಡಿತ್ತು. ಅಬ್ಬಾಸ್ ಖಾನ್‌ನ ‘ಮಹಾತ್ಮ ವರ್ಸಸ್ ಗಾಂಧಿ’ ನಾಟಕದಲ್ಲಿ ಗಾಂಧಿ ಪಾತ್ರಧಾರಿಯಾಗಿ ನಟಿಸಿದ್ದ ಶಾ, ಕಮಲ ಹಾಸನ್ ಅವರ ‘ಹೇ ರಾಮ್’ ಚಿತ್ರದಲ್ಲೂ ಗಾಂಧಿ ಪಾತ್ರ ಮಾಡಿದ್ದಾರೆ.

ನಾಸಿರುದ್ದೀನ್ ಶಾಗೆ ಜನಪ್ರಿಯತೆ, ತೃಪ್ತಿ ಹೀಗೆ ಏನೆಲ್ಲವನ್ನೂ ನೀಡಿದ ನಾಟಕ ರಂಗ ಮಡದಿಯನ್ನೂ ನೀಡಿತು. 1975ರಲ್ಲಿ ಪೂನಾದಿಂದ ಮುಂಬೈಗೆ ಬಂದ ಹೊಸದರಲ್ಲಿ ಅವರಿಗೆ ರತ್ನಾ ಪಾಠಕ್ ಎನ್ನುವ ನಟಿ ಪರಿಚಯವಾದರು. ಆಗ ಆಕೆ ಸತ್ಯದೇವ್ ದುಬೆ ಅವರ ನಾಟಕವೊಂದರಲ್ಲಿ ನಟಿಸುತ್ತಿದ್ದರು. ಜೊತೆಜೊತೆಯಾಗಿ ನಟಿಸುತ್ತಲೇ ಇಬ್ಬರ ನಡುವೆ ಅನುರಾಗ ಮೂಡಿತು. ಏಳು ವರ್ಷಗಳ ಪ್ರೀತಿ, ಸಹಜೀವನದ ನಂತರ ಇಬ್ಬರೂ ಮದುವೆಯಾಗಲು ಮುಂದಾದರು. ಮಹಾ ಮುಂಗೋಪಿಯಾದ, ಮಾದಕ ವ್ಯಸನಿಯಾಗಿದ್ದ, ಮೇಲಾಗಿ ಅದಾಗಲೇ ಒಮ್ಮೆ ಮದುವೆಯಾಗಿದ್ದ ನಾಸಿರುದ್ದೀನ್ ಶಾಗೆ ತಮ್ಮ ಮಗಳನ್ನು ಕೊಡಲು ರತ್ನಾ ಅವರ ಪೋಷಕರು ಒಪ್ಪಲಿಲ್ಲ. ಆದರೆ, ನಾಸಿರುದ್ದೀನ್ ಶಾ ಮತ್ತು ರತ್ನಾ ಅವರೂ ಬಿಡಲಿಲ್ಲ. ಅದರ ನಡುವೆಯೇ ರತ್ನಾ ಮೂರು ವರ್ಷ ನಾಟಕ ತರಬೇತಿಗೆ ತೆರಳಿದರು. ಅಷ್ಟೊತ್ತಿಗಾಗಲೇ ಇಬ್ಬರೂ ಬೇರ್ಪಡಿಸಲಾಗದಷ್ಟು ಒಂದಾಗಿದ್ದರು. ಮುಂದೆ ಮದುವೆಯೂ ಆದರು.

ನಾಸಿರುದ್ದೀನ್ ಶಾ

ನಾಸಿರುದ್ದೀನ್ ಶಾ ಅತ್ಯುತ್ತಮ ನಟ. ‘ಪಾರ್’, ‘ಸ್ಪರ್ಶ್’ ಮತ್ತು ‘ಇಕ್ಬಾಲ್’ ಚಿತ್ರದ ನಟನೆಗಾಗಿ ಮೂರು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ‘ಆಕ್ರೋಶ್’, ‘ಚಕ್ರ’ ಮತ್ತು ‘ಮಾಸೂಮ್’ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಮೂರು ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಪ್ರಶಸ್ತಿಗಳ ಪಡೆದಾಗ ಹುಚ್ಚೆದ್ದು ಕುಣಿದು ಸಂಭ್ರಮಿಸುವ ನಟ ನಟಿಯರ ನಡುವೆ ಶಾ ಭಿನ್ನವಾಗಿ ಕಾಣುತ್ತಾರೆ. ‘ನನಗೆ ಸಿಕ್ಕ ಫಿಲಂ ಫೇರ್ ಅವಾರ್ಡ್‌ಗಳನ್ನು ವಾಶ್ ರೂಮ್ ಬಾಗಿಲ ಹ್ಯಾಂಡಲ್‌ಗಳನ್ನಾಗಿ ಬಳಸುತ್ತಿದ್ದೇನೆ. ಈ ಟ್ರೋಫಿಗಳಲ್ಲಿ ನನಗೆ ಯಾವುದೇ ಮೌಲ್ಯವಿಲ್ಲ’ ಎಂದಿದ್ದರು ಶಾ. ಅವರ ಹೇಳಿಕೆ ವಿವಾದಕ್ಕೂ ಗುರಿಯಾಗಿತ್ತು.

ನಾಸಿರುದ್ದೀನ್ ಶಾ, ಕೇವಲ ಅತ್ಯುತ್ತಮ ನಟ ಅಷ್ಟೇ ಅಲ್ಲ. ದಟ್ಟ ರಾಜಕೀಯ ಪ್ರಜ್ಞೆಯ ಕಲಾವಿದ. ತನ್ನ ಕಣ್ಣ ಮುಂದಿನ ವಾಸ್ತವಕ್ಕೆ ಸ್ಪಂದಿಸುವ ಮನುಷ್ಯ. ಇದರಿಂದ ಅವರು ಅನೇಕ ಬಾರಿ ವಿವಾದಕ್ಕೆ ಗುರಿಯಾಗಬೇಕಾಯಿತು.   

ಮೊಘಲರ ಬಗ್ಗೆ, ಭಾರತಕ್ಕೆ ಮೊಘಲರು ನೀಡಿರುವ ಕೊಡುಗೆಗಳ ಬಗ್ಗೆ ಹಲವು ಬಾರಿ ಮಾತನಾಡಿ ವಿವಾದಕ್ಕೆ ಗುರಿಯಾದರು ಶಾ. ಅವರು ‘ತಾಜ್: ಡಿವೈಡೆಡ್ ಬೈ ಬ್ಲಡ್’ ಎಂಬ ವೆಬ್ ಸೀರೀಸ್‌ನಲ್ಲಿ ಅಭಿನಯಿಸಿದ್ದಾರೆ. ‘ಅದರಲ್ಲಿ ಅಭಿನಯಿಸಿದ ನಂತರ ಅಕ್ಬರ್ ಬಗ್ಗೆ ನನಗಿದ್ದ ತಿಳಿವಳಿಕೆ ಬದಲಾಯಿತು. ಅಕ್ಬರ್ ಬಗ್ಗೆ ಇತಿಹಾಸದ ಪುಸ್ತಕಗಳಲ್ಲಿ ಕೆಲ ತಪ್ಪು ಮಾಹಿತಿ ಇದೆ. ಅಕ್ಬರ್ ತನ್ನದೇ ಆದ ಧರ್ಮವನ್ನು ಸ್ಥಾಪಿಸಲು ಬಯಸಿದ್ದ ಎಂದು ಕೆಲ ಪುಸ್ತಕಗಳಲ್ಲಿದೆ. ಈ ಬಗ್ಗೆ ನಾನು ಇತಿಹಾಸಕಾರರೊಂದಿಗೆ ಪರಿಶೀಲನೆ ನಡೆಸಿದ್ದೇನೆ. ಇದು ನಾನ್‌ಸೆನ್ಸ್’’ ಎಂದಿದ್ದರು ನಾಸೀರುದ್ದೀನ್.

ಹಾಗೆಯೇ ‘ಕೇರಳ ಸ್ಟೋರಿ’ ಚಿತ್ರದ ಯಶಸ್ಸನ್ನು ‘ಅಪಾಯಕಾರಿ ಟ್ರೆಂಡ್‌’ ಎಂದು ನಾಸಿರುದ್ದೀನ್‌ ಶಾ ಟೀಕಿಸಿ ಸುದ್ದಿಯಾಗಿದ್ದರು. ಈ ಟ್ರೆಂಡ್‌ ಅನ್ನು ನಾಜಿ ಜರ್ಮನಿಗೆ ಅವರು ಹೋಲಿಕೆ ಮಾಡಿದ್ದರು. ‘ಒಂದು ಹಂತದಲ್ಲಿ ಇದು ಅಪಾಯಕಾರಿ ಟ್ರೆಂಡ್‌. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅದರೊಂದಿಗೆ ನಾವು ಹಿಟ್ಲರ್‌ ಇದ್ದ ಸಮಯದ ನಾಜಿ ಜರ್ಮನಿಯ ರೀತಿ ಸಾಗುತ್ತಿದ್ದೇವೆ. ನೀವು ಎಷ್ಟು ದಿನ ದ್ವೇಷ ಹರಡುತ್ತೀರಿ’ ಎಂದು ಖಾರವಾಗಿ ಪ್ರಶ್ನೆ ಮಾಡಿದ್ದರು. ‘ಭೀಡ್, ಅಫ್ವಾಹ್, ಫರಾಜ್‌ನಂತಹ ಮೌಲ್ಯಯುತ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡವು. ಯಾರೂ ಕೂಡ ಆ ಸಿನಿಮಾಗಳನ್ನು ನೋಡಲಿಲ್ಲ. ಆದರೆ ‘ದಿ ಕೇರಳ ಸ್ಟೋರಿ’ ಸಿನಿಮಾವನ್ನು ನೋಡಲು ಮುಗಿಬೀಳುತ್ತಿದ್ದಾರೆ. ಇದು ಅಪಾಯಕಾರಿ ಟ್ರೆಂಡ್’ ಎಂದಿದ್ದರು.

ಈ ಸುದ್ದಿ ಓದಿದ್ದೀರಾ: ಕನ್ನಡ ಚಿತ್ರರಂಗದ ಸದ್ಯದ ದೊಡ್ಡ ಸಮಸ್ಯೆ ಯಾವುದು? ರಾಜ್ ಬಿ ಶೆಟ್ಟಿ ಹೇಳಿದ್ದು ನಿಜವೇ?

ಬಾಲಿವುಡ್‌ನ ಮಹಾನ್ ನಟ ಎಂದು ಎಲ್ಲರೂ ಕೊಂಡಾಡುವ ದಿಲೀಪ್ ಕುಮಾರ್ ಸತ್ತಾಗ ಪತ್ರಿಕೆಯೊಂದಕ್ಕೆ ಶ್ರದ್ಧಾಂಜಲಿ ಬರೆದಿದ್ದ ಶಾ, ‘ನಟನೆಯ ಆಚೆಗೆ ಏನೂ ಮಾಡದ ದಿಲೀಪ್ ಸಾಬ್, ಮುಂದಿನ ತಲೆಮಾರು ನೆನಪಿಟ್ಟುಕೊಳ್ಳುವಂತಹ, ಯುವ ಜನಾಂಗಕ್ಕೆ ಮಾದರಿಯಾಗುವಂತಹ ಏನನ್ನೂ ಮಾಡಲಿಲ್ಲ’ ಎಂದು ಟೀಕಿಸಿದ್ದರು. ಇನ್ನೊಮ್ಮೆ ಮುಸ್ಲಿಂ ದ್ವೇಷದ ಬಗ್ಗೆ ಮಾತನಾಡಿದ್ದ ನಟ, ‘ಮುಸ್ಲಿಮರನ್ನು ದ್ವೇಷಿಸುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ’ ಎಂದಿದ್ದರು.

ಕಲೆಗಾಗಿ ಅಪ್ಪನನ್ನು, ಮನೆಯನ್ನು ತೊರೆದು ಹೊರಬಂದ, ನಟನೆಯಲ್ಲಿ ಪರಿಪಕ್ವತೆಗಾಗಿ ಹಂಬಲಿಸಿದ, ಸಮಾಜದಲ್ಲಿ ಶಾಂತಿ, ಸೌಹಾರ್ದತೆಗಾಗಿ ಕನಸುವ ಮೂಲಕ ತನ್ನ ಪರಿಧಿ ಮೀರಿ ಹಲವು ವಿವಾದಗಳನ್ನು ಮೇಲೆಳೆದುಕೊಂಡ ನಾಸಿರುದ್ದೀನ್ ಶಾ, ಒಂದು ಉಜ್ವಲ ಬೆಳಕಾಗಿ ಅಭಿಮಾನಿಗಳಲ್ಲಿ ಎದೆಯನ್ನು ಬೆಳಗುತ್ತಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಾನ್ ಚಲನಚಿತ್ರೋತ್ಸವ: ಗ್ರ್ಯಾಂಡ್ ಪ್ರಿ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ಪಾಯಲ್ ಕಪಾಡಿಯಾ

ಕಾನ್ ಚಲನಚಿತ್ರೋತ್ಸವದಲ್ಲಿ ಗ್ರ್ಯಾಂಡ್ ಪ್ರಿ (Grand Prix) ಪ್ರಶಸ್ತಿ ಗೆಲ್ಲುವ ಮೂಲಕ...

‘ಈ ದಿನʼ ಗ್ರೌಂಡ್‌ ರಿಪೋರ್ಟ್‌ 3 | ವಿಡಿಯೊ ಪ್ರಕರಣ; ಹಲವು ಮಹಿಳೆಯರ ರಾಜಕೀಯ ಮಹತ್ವಾಕಾಂಕ್ಷೆ ಮಣ್ಣುಪಾಲು

ಹಾಸನದ ಸಂಸದನ ಕಾಮಕಾಂಡ ಬಯಲಾಗುತ್ತಿದ್ದಂತೆ ಆ ಪಕ್ಷದ ಹಲವು ನಾಯಕಿಯರ ರಾಜಕೀಯ...

ಕ್ರಿಸ್‌ಮಸ್‌ಗೆ ತೆರೆ ಕಾಣಲಿದೆ ದರ್ಶನ್ ಅಭಿನಯದ ‘ಡೆವಿಲ್’

ನಟ ದರ್ಶನ್ ಅಭಿನಯದ, ಪ್ರಕಾಶ್ ವೀರ್ ನಿರ್ದೇಶನದ ನಿರೀಕ್ಷಿತ ಸಿನಿಮಾ 'ಡೆವಿಲ್...

ಕಣ್ತೆರೆದು ನೋಡಿ, ‘ಅತ್ಯಾಚಾರಿ’ ಗಂಡು ನಮ್ಮ-ನಿಮ್ಮ‌ ಮನೆಯಲ್ಲೂ ಇರಬಹುದು

NCRB ವರದಿಯ ಪ್ರಕಾರ ಪ್ರತಿ ವರ್ಷ ಮೂರುವರೆ ಲಕ್ಷ ಅಪರಾಧಗಳು ಮಹಿಳೆಯರ...