60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಇಲ್ಲ: ಬಸವಳಿದ ರಾಜ್ಯ ಬಿಜೆಪಿ; ಆಸ್ಥೆ ತೋರದ ಮೋದಿ-ಶಾ

Date:

Advertisements
ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದು ದಿಲ್ಲಿಯ ಬಿಜೆಪಿ ನಾಯಕರಿಗೂ ಗೊತ್ತಿದೆ. ಗೊತ್ತಿದ್ದೂ ಮಗುವಿನಂತೆ ಮೊಂಡಾಟ ಮಾಡುವುದು, ಬಿಜೆಪಿಯಲ್ಲಿ ಮಾತ್ರ! 60 ದಿನವಾದರೂ ವಿಪಕ್ಷ ನಾಯಕನ ಆಯ್ಕೆ ಮಾಡಲಾಗದೆ ರಾಜ್ಯ ಬಿಜೆಪಿ  ಹತಾಶೆ, ಅಸಹಾಯಕತೆಗಳಿಂದ ಬಸವಳಿದಿದೆ. ಆಸ್ಥೆ ತೋರದ ‘ವಿಶ್ವ ಗುರು’ ಮೋದಿ, ‘ಚಾಣಕ್ಯ’ ಅಮಿತ್ ಶಾ ಮೊಂಡಾಟ ಮುಂದುವರೆದಿದೆ 

ರಾಜ್ಯ ವಿಧಾನಸಭಾ ಚುನಾವಣೆ ಮುಗಿದು, ಫಲಿತಾಂಶ ಬಂದು ಇಂದಿಗೆ 60 ದಿನಗಳಾಯಿತು. ಬಜೆಟ್ ಅಧಿವೇಶನ ಶುರುವಾಗಿ ಒಂದು ವಾರವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದೂ ಆಯಿತು. ಇಷ್ಟಾದರೂ ವಿರೋಧ ಪಕ್ಷದ ನಾಯಕನ ಕುರ್ಚಿ ಮಾತ್ರ ಈಗಲೂ ಖಾಲಿ ಇದೆ. ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಮೊದಲ ಬಾರಿಗೆ- ಮೇಲ್ಮನೆ ಮತ್ತು ಕೆಳಮನೆಯಲ್ಲಿ ವಿರೋಧ ಪಕ್ಷದ ನಾಯಕನಿಲ್ಲದೆ ಸದನ ಸೊರಗುತ್ತಿದೆ. ಬಿಜೆಪಿಯ ಈ ನಡೆ ಸದನದ ಇತಿಹಾಸದಲ್ಲಿ ಕಪ್ಪು ಚುಕ್ಕೆಯಾಗಿ ದಾಖಲಾಗಿದೆ. ಭವ್ಯ ಪರಂಪರೆಗೆ ಕಳಂಕ ಮೆತ್ತಿಕೊಂಡಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ವಿರೋಧ ಪಕ್ಷದ್ದೇ ಪ್ರಮುಖ ಪಾತ್ರ. ಪ್ರಜಾಪ್ರಭುತ್ವದ ಯಶಸ್ಸು ವಿರೋಧ ಪಕ್ಷಗಳ ರಚನಾತ್ಮಕ ಪಾತ್ರವನ್ನು ಅವಲಂಬಿಸಿದೆ. ಕಾವಲುಗಾರನಾಗಿ ಕಾರ್ಯನಿರ್ವಹಿಸುವುದು, ಸರ್ಕಾರದ ಕಾರ್ಯಗಳನ್ನು ವಿಮರ್ಶಿಸುವುದು ಮತ್ತು ಉದ್ಭವಿಸಬಹುದಾದ ಯಾವುದೇ ಸಮಸ್ಯೆಗಳನ್ನು ಎತ್ತಿ ತೋರಿಸುವುದು ವಿರೋಧ ಪಕ್ಷದ ಪ್ರಮುಖ ಕಾರ್ಯವಾಗಿದೆ.

ಆದರೆ ರಾಜ್ಯ ಬಿಜೆಪಿ ನಾಯಕರಿಗೆ ತಮಗೆ ಬೇಕಾದ ವಿಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳುವ ದಮ್ಮೂ ಇಲ್ಲ, ಆ ಬಗ್ಗೆ ಸಮರ್ಥಿಸಿಕೊಂಡು ಮಾತನಾಡುವ ತಾಕತ್ತೂ ಇಲ್ಲವಾಗಿದೆ. ಏಕೆಂದರೆ, ಅವರಾರೂ ಶುದ್ಧಹಸ್ತರಲ್ಲ, ಪ್ರಾಮಾಣಿಕರಲ್ಲ, ದಕ್ಷ ಆಡಳಿತಗಾರರಂತೂ ಅಲ್ಲವೇ ಅಲ್ಲ ಎನ್ನುವುದನ್ನು ವಿಧಾನಸಭಾ ಚುನಾವಣೆ ಸಾಬೀತು ಮಾಡಿದೆ. ಆ ಸೋಲೇ ಅವರ ಬಾಯಿ ಕಟ್ಟಿಹಾಕಿದೆ. ಹೈಕಮಾಂಡಿನ ಮುಂದೆ ಎದೆ ಸೆಟೆಸಿ ನಿಲ್ಲಲಾಗದಂತಹ ಸ್ಥಿತಿಯನ್ನು ಸೃಷ್ಟಿಸಿದೆ.

Advertisements

ಈ ಬೆಳವಣಿಗೆಗೆ ವಿರುದ್ಧವಾಗಿ, ಪ್ರತಿಯೊಂದು ಆಯ್ಕೆ, ನೇಮಕದ ಬಗ್ಗೆ ಅಂತಿಮ ನಿರ್ಧಾರ ತಳೆಯುವ ಬಿಜೆಪಿ ಹೈಕಮಾಂಡಿಗೆ, ರಾಜ್ಯ ಬಿಜೆಪಿಯ ಸುದ್ದಿಯೇ ಬೇಡವಾಗಿದೆ. ಕರ್ನಾಟಕದ ಸಹವಾಸ ಸಾಕು ಎನಿಸಿಬಿಟ್ಟಿದೆ. ದಿಲ್ಲಿ ಮತ್ತು ಇಲ್ಲಿನ ಬಿಜೆಪಿ ನಡುವಿನ ಸಂಬಂಧ ಈ ಮಟ್ಟಿಗೆ ಹಳಸಿಕೊಂಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ. ಜೊತೆಗೆ ಯಾವ ರಾಜ್ಯವೇ ಆಗಲಿ, ಚುನಾವಣೆಯ ಸೋಲಿನ ನಂತರ ಹೈಕಮಾಂಡ್, ಇನ್ನೂ ಹೆಚ್ಚಿನ ಆಸ್ಥೆ ವಹಿಸಿ, ಅಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಿದ ಉದಾಹರಣೆಗಳಿವೆ. ಆದರೆ ಕರ್ನಾಟಕದ ಬಗೆಗಿನ ಬಿಜೆಪಿಯ ನಿರ್ಲಕ್ಷ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ

ಪ್ರಧಾನಿ ಮೋದಿಯವರ ಮರೆಯಲ್ಲಿ 14 ರಾಜ್ಯಗಳನ್ನು ಗೆದ್ದು ಸಾಮ್ರಾಜ್ಯ ವಿಸ್ತರಿಸಿಕೊಳ್ಳುತ್ತಿದ್ದ ಭಾರತೀಯ ಜನತಾ ಪಕ್ಷಕ್ಕೆ ಕರ್ನಾಟಕದಲ್ಲಾದ ಸೋಲು ಅರಗಿಸಿಕೊಳ್ಳಲಾಗದ ಆಘಾತ ನೀಡಿದೆ. ಅದರ ಫಲವಾಗಿ ದಿಲ್ಲಿಯ ನಾಯಕರು ಕರ್ನಾಟಕಕ್ಕೆ ಬರದಂತೆ, ಕರ್ನಾಟಕದ ನಾಯಕರು ದಿಲ್ಲಿಗೆ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಹಿರಿಯ ಬಿಜೆಪಿ ನಾಯಕರನ್ನು ಕೇಳಿದರೆ, ಹೆಸರು ಹೇಳಲು ಇಚ್ಛಿಸದ ಆ ಹಿರಿಯರು, `ಕರ್ನಾಟಕದ ಬಿಜೆಪಿ ಬಗ್ಗೆ ಮೋದಿ-ಶಾಗಳಿಗೆ ಭಾರೀ ಬೇಸರವಾಗಿದೆ. ಅದರಲ್ಲೂ ಕೈಯಲ್ಲಿದ್ದ ಅಧಿಕಾರವನ್ನು ಕಾಂಗ್ರೆಸ್ಸಿಗೆ ಕೊಟ್ಟರಲ್ಲ ಎಂದು ಬಿ.ಎಲ್ ಸಂತೋಷ್ ಮತ್ತವರ ತಂಡದ ಬಗ್ಗೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದಾರೆ’ ಎಂದರು.

ರಾಜ್ಯ ವಿಧಾನಸಭೆಯ ಚುನಾವಣೆಗೂ ಮುಂಚೆ ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ಅಧ್ಯಕ್ಷರವರೆಗೆ, ಎಲ್ಲರನ್ನು ಸೇರಿಸಿ ಹತ್ತತ್ತು ಸಲ ಸಭೆ ಮಾಡಿ, ಮಾಹಿತಿ ಪಡೆದಿದ್ದ ಮೋದಿ-ಶಾಗಳಿಗೆ, ಕರ್ನಾಟಕವನ್ನು ಗೆಲ್ಲುವುದು ಗೊತ್ತಿತ್ತು. ಆಡಳಿತಾರೂಢ ಬಿಜೆಪಿಯ ಹಳವಂಡಗಳನ್ನೆಲ್ಲ ಮರೆಸಿ, ಮೋದಿಯವರನ್ನು ಮೆರೆಸಿ, ಮತ ಬಾಚುವುದು ಹೇಗೆಂಬ ಪ್ಲಾನ್ ತಯಾರಾಗಿತ್ತು. ಅದಕ್ಕೆ ಬೇಕಾದ ಸಂಪನ್ಮೂಲವನ್ನು ತಂದು ಸುರಿಯಲಾಗಿತ್ತು. ಆದರೆ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ʼಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ, ನೀವು ನಿಶ್ಚಿಂತರಾಗಿರಿʼ ಎಂದು ರಾಜ್ಯದ ತಂಟೆಗೆ ಬರದಂತೆ ಮೋದಿ-ಶಾ ಅವರಿಗೆ ಭರವಸೆ ನೀಡಿದರಂತೆ. ಸಂತೋಷ್ ಅವರನ್ನು ನಂಬಿದ ಮೋದಿ-ಶಾ ಮೆರವಣಿಗೆಯಲ್ಲಿ ಕೈ ಬೀಸಿಕೊಂಡು ಹೋದರೆ ಸಾಕೆಂದು ಭಾವಿಸಿದರು. ಕರ್ನಾಟಕ ಕೈಬಿಟ್ಟುಹೋಯಿತು ಎನ್ನುತ್ತಾರೆ ಪಕ್ಷದ ಹಿರಿಯರು. 

ಇದಷ್ಟೇ ಅಲ್ಲದೆ, ಬಿಜೆಪಿಯನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಬಯಸಿದ ಸಂತೋಷ್, ಹಳಬರನ್ನು ಪಕ್ಷದ ಚಟುವಟಿಕೆಗಳಿಂದ ವ್ಯವಸ್ಥಿತವಾಗಿ ದೂರವಿಟ್ಟರು. ತಮ್ಮ ಮಾತಿಗೆ ಮರುಮಾತನಾಡದೆ, ನಡು ಬಗ್ಗಿಸಿ ನಿಲ್ಲುವ ಸುಮಾರು 60 ಹೊಸ ಮುಖಗಳನ್ನು ಅಭ್ಯರ್ಥಿಗಳನ್ನಾಗಿಸಿದರು. ಅಣ್ಣಾಮಲೈಗಳಂತಹ ಹುಡುಗರಿಗೆ ಉಸ್ತುವಾರಿ ವಹಿಸಿದರು. ಪೇಶ್ವೆ ಬ್ರಾಹ್ಮಣರಿಗೆ ಪಟ್ಟ ಕಟ್ಟಲು ವೇದಿಕೆ ಸಜ್ಜುಗೊಳಿಸಿದರು. ಆದರೆ, ಪಕ್ಕದ ಕೇರಳ ರಾಜ್ಯದ ಉಸ್ತುವಾರಿ ವಹಿಸಿಕೊಂಡು ಪಕ್ಷವನ್ನು ನೆಲಕಚ್ಚಿಸಿದ್ದ; ತೆಲಂಗಾಣದಲ್ಲಿ ಶಾಸಕರ ಖರೀದಿಗೆ ಕೈಹಾಕಿ, ಪೋಸ್ಟರ್ ಆಗಿದ್ದ ಸಂತೋಷ್ ಅವರ ಪರಾಕ್ರಮವನ್ನು ಬಹಳ ಹತ್ತಿರದಿಂದ ಬಲ್ಲ ರಾಜ್ಯ ಬಿಜೆಪಿ ನಾಯಕರು, ಸೆಟೆದು ನಿಂತರು. ಆದರೆ, ಸೆಟೆದುನಿಂತ ಬಿಜೆಪಿಗರ ‘ಬಂಡವಾಳ’ ಗೊತ್ತಿದ್ದ ಸಂತೋಷ್, ಫೈಲು – ದಾಳಿಯ ದಾಳ ಉರುಳಿಸಿ ಬಾಯಿ ಮುಚ್ಚಿಸಿದರು. ಜೊತೆಗೆ ಪಕ್ಷವನ್ನೂ ಪಲ್ಟಿ ಹೊಡೆಸಿದರು.

ಈಗ, ಫಲಿತಾಂಶದ ನಂತರ, ಪಕ್ಷದ ಆತ್ಮಾವಲೋಕನದ ಸಭೆಯಲ್ಲಿ ಪಕ್ಷವನ್ನು ಪಲ್ಟಿ ಹೊಡೆಸಿದ ಸಂತೋಷರ ಸುಳಿವೇ ಇಲ್ಲ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಗಾಗ ಬಂದುಹೋದರೂ, ಏನೂ ಮಾಡಲಾಗುತ್ತಿಲ್ಲ. ಅಣ್ಣಾಮಲೈ ಬಗ್ಗೆ ರೇಣುಕಾಚಾರ್ಯ ಅರಚಾಡಿದರೂ ಕ್ರಮ ಕೈಗೊಳ್ಳುವವರಿಲ್ಲ. ಗೆದ್ದ 66 ಶಾಸಕರಿಗೆ ನಾಯಕರೇ ಇಲ್ಲ.

ಇದನ್ನು ಓದಿದ್ದೀರಾ?: ಏಕರೂಪ ನಾಗರಿಕ ಸಂಹಿತೆ | ಧ್ರುವೀಕರಣದ ಆಟಕ್ಕೆ ಎರಡು ಸಾಧ್ಯತೆಗಳು: ರಾಜಾರಾಂ ತಲ್ಲೂರು ಬರಹ

ಜಾತಿ ಕಾರಣಕ್ಕೆ ಕೆಲವರು ಯಡಿಯೂರಪ್ಪನವರನ್ನು ಆಶ್ರಯಿಸಿದರೆ, ಮತ್ತೆ ಕೆಲವರು ಬಸವರಾಜ ಬೊಮ್ಮಾಯಿ ಅವರ ಹಿಂದೆಮುಂದೆ ಓಡಾಡುತ್ತಿದ್ದಾರೆ. ಇಬ್ಬರ ಗುಂಪಿನಲ್ಲೂ ಗುರುತಿಸಿಕೊಳ್ಳದವರು ಸಂತೋಷ್‌ ಮತ್ತು ಸಂಘ ಪರಿವಾರದ ಬಗ್ಗೆ ಮಾತನಾಡದೆ ಮುಗುಮ್ಮಾಗಿದ್ದಾರೆ. ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಯಾರು, ವಿಪಕ್ಷ ನಾಯಕ ಯಾರು ಎನ್ನುವುದು ಕಗ್ಗಂಟಾಗಿ ಕೂತಿದೆ.

ಇಂತಹ ದಿಕ್ಕೆಟ್ಟ ಸ್ಥಿತಿ ಬಿಜೆಪಿಗೆ ಬಂದೊದಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಪಕ್ಷದ ಮಾನ ಉಳಿಸಲು ಗೆದ್ದ ಶಾಸಕರು ಮನಸ್ಸಿಲ್ಲದ ಮನಸ್ಸಿನಿಂದ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದಾರೆ. ಬಸವರಾಜ ಬೊಮ್ಮಾಯಿ, ಅಶ್ವತ್ಥನಾರಾಯಣ, ಆರ್. ಅಶೋಕ್, ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್‌ ಕುಮಾರ್‌, ಸುರೇಶ್ ಕುಮಾರ್‍‌ಗಳೇ ಮುಂಚೂಣಿ ನಾಯಕರು. ಆದರೆ ವಿಪಕ್ಷ ನಾಯಕನ ಕುರ್ಚಿಯಲ್ಲಿ ಕೂರುವ ದಮ್ಮು, ತಾಕತ್ತು ಯಾರಿಗೂ ಇಲ್ಲ. ಕಣ್ಮುಂದಿನ ಖಾಲಿ ಕುರ್ಚಿ ಕ್ಷಣಕ್ಷಣಕ್ಕೂ ಅಣಕಿಸುತ್ತಿದೆ. ಆಡಳಿತ ಪಕ್ಷದ ನಾಯಕರ ಮಾತು ಕೆಣಕುತ್ತಿದೆ. ಆಡಲಾಗದ ಅನುಭವಿಸಲಾಗದ ಸ್ಥಿತಿ ಬಿಜೆಪಿ ನಾಯಕರದಾಗಿದೆ.

‘ಅದಕ್ಕೇ ಹೇಳೋದು, ಪಕ್ಷಕ್ಕೆ ಅನುಭವಿಗಳು, ಹಿರಿಯರು, ಸಂಸದೀಯ ಪಟುಗಳು ಬೇಕು ಅಂತ. ಇವತ್ತು ಸದನದಲ್ಲಿ ಪಕ್ಷವನ್ನು ಸಮರ್ಥಿಸಿಕೊಳ್ಳುವ, ಆಡಳಿತ ಪಕ್ಷದ ಬಾಯಿ ಬಡಿಯುವ ಯಡಿಯೂರಪ್ಪ, ಈಶ್ವರಪ್ಪ, ಸೋಮಣ್ಣ, ಮಾಧುಸ್ವಾಮಿಗಳಿದ್ದರೆ ಬಿಜೆಪಿಗೆ ಈ ಸ್ಥಿತಿ ಬರುತ್ತಿತ್ತೆ?’ ಎನ್ನುತ್ತಾರೆ ಹಿರಿಯ ಬಿಜೆಪಿ ನಾಯಕರು.

ದುರದೃಷ್ಟಕರ ಸಂಗತಿ ಎಂದರೆ, ಚುನಾವಣಾ ನಂತರ ಪಕ್ಷದೊಳಗೆ ಇಷ್ಟೆಲ್ಲ ಘಟನಾವಳಿಗಳು ಘಟಿಸುತ್ತಿದ್ದರೂ, ಪಕ್ಷದ ಈ ಹೀನಾಯ ಸ್ಥಿತಿಗೆ ಸಂಘ ಪರಿವಾರದ ಬಿ.ಎಲ್. ಸಂತೋಷ್‌ ಅವರೇ ಕಾರಣ ಎಂದು ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ರೇಣುಕಾಚಾರ್ಯರು ಬಹಿರಂಗವಾಗಿ ಹೇಳುತ್ತಿದ್ದರೂ, ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಶಿಸ್ತು ಸುಸ್ತು ಹೊಡೆದು ಕೂತಿದೆ. ಅಳಿದುಳಿದ ನಾಯಕರಂತಿರುವ ಯಡಿಯೂರಪ್ಪನವರು ಕೈಗೆ ಸಿಗುತ್ತಾರೆ, ಅವರ ಬಳಿ ಕಷ್ಟ ಸುಖ ಹೇಳಿಕೊಳ್ಳಬಹುದು. ಆದರೆ ಅವರ ಬಳಿ ಅಧಿಕಾರವಿಲ್ಲ. ಇನ್ನು ದೆಹಲಿಯ ಮೋದಿ-ಶಾ-ನಡ್ಡಾಗಳನ್ನು ನೋಡುವುದಾಗಲೀ, ಮಾತನಾಡಿಸುವುದಾಗಲೀ ಸಾಧ್ಯವಿಲ್ಲದ ಮಾತು. ಹೀಗಾಗಿ ಬಿಜೆಪಿಯ ಗೆದ್ದ ಮತ್ತು ಸೋತ ಶಾಸಕರು ಅನಾಥರಾಗಿದ್ದಾರೆ. ವಿಪಕ್ಷ ನಾಯಕರ ಆಯ್ಕೆ ಪ್ರಕ್ರಿಯೆ ಮುಂದಕ್ಕೆ ಹೋಗುತ್ತಲೇ ಇದೆ. ಬಿಜೆಪಿಗರಿಗೆ ಮುಜುಗರಕ್ಕೀಡು ಮಾಡುತ್ತಲೇ ಇದೆ.

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಅದನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ಅದು ದಿಲ್ಲಿಯ ಬಿಜೆಪಿ ನಾಯಕರಿಗೂ ಗೊತ್ತಿದೆ. ಗೊತ್ತಿದ್ದೂ ಮಗುವಿನಂತೆ ಹಠ ಹಿಡಿಯುವುದು, ಮೊಂಡಾಟ ಮಾಡುವುದು, ಬಿಜೆಪಿಯಲ್ಲಿ ಮಾತ್ರ! ರಾಜ್ಯ ಬಿಜೆಪಿ  ಹತಾಶೆ, ಅಸಹಾಯಕತೆಗಳಿಂದ ಬಸವಳಿದಿದೆ. ‘ವಿಶ್ವ ಗುರು’ ಮೋದಿಗೆ, ‘ಚಾಣಕ್ಯ’ ಅಮಿತ್ ಶಾಗೆ ದಿಕ್ಕೇ ತೋಚದಂತಾಗಿದೆ.

Basavaraju Megalkeri
+ posts

ಲೇಖಕ, ಪತ್ರಕರ್ತ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಸವರಾಜು ಮೇಗಲಕೇರಿ
ಬಸವರಾಜು ಮೇಗಲಕೇರಿ
ಲೇಖಕ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X