- ನಮ್ಮ ಕಾಮಗಾರಿಗಳಿಗೆ ‘ಹಣದ ಭಾಗ್ಯ’ ಕರುಣಿಸಿ ಎಂದು ಮನವಿ ಮಾಡಿದ ಕೆಂಪಣ್ಣ
- ಆಗಸ್ಟ್ 31ರೊಳಗೆ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಗಡುವು
‘ಯಾವ ಸಚಿವರೂ ನಮ್ಮ ಬಳಿ ಕಮಿಷನ್ ಕೇಳಿಲ್ಲ. ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ. ಯಾವುದೇ ಗುತ್ತಿಗೆದಾರರು ಬಂದು ನನ್ನ ಬಳಿ ದೂರು ಹೇಳಿಲ್ಲ’ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ ಕೆಂಪಣ್ಣ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ನಮಗೆ ರಾಜ್ಯಾದ್ಯಂತ ಮಾಹಿತಿ ಬಂದಿದೆ. ಯಾವುದೇ ಗುತ್ತಿಗೆದಾರರು ಬಂದು ನನ್ನ ಬಳಿ ದೂರು ಹೇಳಿಲ್ಲ. ನಮ್ಮ ಪರಿಸ್ಥಿತಿ ಸದ್ಯ ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ. ಸರ್ಕಾರ ಎಲ್ಲರಿಗೂ ಭಾಗ್ಯಗಳನ್ನು ಕೊಡುತ್ತಿದೆ. ನಾವು ಈಗಾಗಲೇ ಮುಗಿಸಿರುವ ಕಾಮಗಾರಿಗಳಿಗೆ ‘ಹಣದ ಭಾಗ್ಯ’ ಕರುಣಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸರ್ಕಾರದ ವಿರುದ್ಧ ನಾವು ಯಾರೂ ಕಮಿಷನ್ ಆರೋಪ ಮಾಡಿಲ್ಲ. ಏಳು ತಿಂಗಳಿಂದ ಹಣ ಬಾಕಿ ಇದೆ. ರಾಜ್ಯದ ಗುತ್ತಿಗೆದಾರರ 25 ಸಾವಿರ ಕೋಟಿ ಬಿಲ್ ಬಾಕಿ ಇದೆ. ಇದರಲ್ಲಿ ಸ್ವಲ್ಪ ಹಣ ಬಿಡುಗಡೆಯಾಗಿದೆ. ನೂರು ಕೋಟಿ ಸಾಲಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.
ಕಾರ್ಯನಿರತ ಗುತ್ತಿಗೆದಾರರ ಸಂಘದವರು 15% ಕಮಿಷನ್ ಆರೋಪ ಮಾಡ್ತಿದ್ದಾರೆ. ನಾವು ಗುತ್ತಿಗೆದಾರರ ಸಂಘದವರು ಯಾವುದೇ ಆರೋಪ ಮಾಡ್ತಿಲ್ಲ. ಕಳೆದ ಮೂರ್ನಾಲ್ಕು ತಿಂಗಳಿನಿಂದ ಯಾವುದೇ ಕಾಮಗಾರಿ ನಡೆದಿಲ್ಲ. ಹೀಗಿರುವಾಗ ಕಮಿಷನ್ ಕೊಡುವ ಪ್ರಶ್ನೆಯೇ ಉದ್ಬವಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಆಗಸ್ಟ್ 31ರೊಳಗೆ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇವೆ. ಆತ್ಮಹತ್ಯೆ ಮಾತ್ರ ದಾರಿ ಅನ್ನುವ ಪರಿಸ್ಥಿತಿ ಬಂದಿದೆ. ಸಿದ್ದರಾಮಯ್ಯ ಅವರಿಗೆ ನಿನ್ನೆ ಕೂಡ ಪತ್ರ ಬರೆದಿದ್ದೇನೆ. ಎಲ್ಲರನ್ನೂ ಕರೆದು ಸಭೆ ಮಾಡಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕೆಲ ಬಿಬಿಎಂಪಿ ಗುತ್ತಿಗೆದಾರರು ಬಿಜೆಪಿ ನಾಯಕರ ಬಳಿ ಯಾಕೆ ಹೋದರೋ ಗೊತ್ತಿಲ್ಲ, ಇದು ರಾಜಕೀಯ ಪ್ರೇರಿತವಾಗಿರಬಹುದು ಎಂದು ಕೆಂಪಣ್ಣ ಹೇಳಿದರು.
ನಾನು ಯಾವುದೇ ರಾಜಕೀಯ ಪಕ್ಷದ ಏಜೆಂಟ್ ಅಲ್ಲ, ನಾನು ಗುತ್ತಿಗೆದಾರರ ಏಜೆಂಟ್ ಎಂದು ಹೇಳಿದ ಕೆಂಪಣ್ಣ, ‘ನಾವು 40% ಭ್ರಷ್ಟಾಚಾರ ನಡೆಯುತ್ತಿದೆ ಎಂದು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದೆವು. ನಮ್ಮ ಬಳಿ ದಾಖಲೆ ಇದೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿಯಾಗಲು ಸಾಕಷ್ಟು ಪ್ರಯತ್ನ ಮಾಡಿದೆವು. ಆದರೆ ಅವರು ನಮಗೆ ಭೇಟಿಗೆ ಅವಕಾಶ ಕೊಡಲಿಲ್ಲ. ಕರೆದು ಮಾತನಾಡಿಸುವ ಸೌಜನ್ಯ ತೋರಲಿಲ್ಲ. ಅವರಿಗೆ ಬೇಕಾದವರಿಗೆ ಮಾತ್ರ ಹಣ ಬಿಡುಗಡೆ ಮಾಡಿದ್ದಾರೆ. ಆದರೆ ನಮಗೆ ಈಗಲೂ ಅವರ ಮೇಲೆ ಗೌರವ ಇದೆ’ ಎಂದು ತಿಳಿಸಿದರು.