ಬೆಂಗಳೂರಿನಲ್ಲಿ ನಿನ್ನೆ(ಅ.31) ಸಂಜೆ 6:30ಕ್ಕೆ ‘ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಕರ್ನಾಟಕ’ ಎಂಬ ಸಂಘಟನೆಯು ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯ ಪಕ್ಕದಲ್ಲೇ ಇರುವ ಬಿಫ್ಟ್ (BIFT) ಸಭಾಭವನದಲ್ಲಿ ‘ಪ್ಯಾಲೆಸ್ತೀನ್ ಸಮಸ್ಯೆ- ಒಂದು ಅವಲೋಕನ’ ಎಂಬ ವಿಚಾರಗೋಷ್ಠಿ ಆಯೋಜಿಸಿತ್ತು.
ಆದರೆ, ಸಂಜೆ ನಿಗದಿಯಾಗಿದ್ದ ಈ ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ನಿನ್ನೆ ಬೆಳಗ್ಗೆಯೇ ಸಭಾಂಗಣವಿದ್ದ ಕಟ್ಟಡಕ್ಕೆ ಆಗಮಿಸಿದ್ದ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯ ಪೊಲೀಸರು, ಸಭಾಂಗಣಕ್ಕೆ ಅವರಾಗಿಯೇ ಬೀಗ ಹಾಕಿ, ಕಾರ್ಯಕ್ರಮಕ್ಕೆ ಅನುಮತಿ ಇಲ್ಲ ಎಂದು ತಿಳಿಸಿ, ಕೀಯನ್ನು ಕೊಡದೆ ಠಾಣೆಗೆ ತೆರಳಿದ್ದರು.
ಇದನ್ನು ಓದಿದ್ದೀರಾ? ಪ್ಯಾಲೆಸ್ತೀನ್ ಪರ ನಡೆಯಬೇಕಿದ್ದ ಕಾರ್ಯಕ್ರಮ ಸಭಾಂಗಣದ ‘ಕೀ’ಯನ್ನೇ ಹೊತ್ತೊಯ್ದ ಬೆಂಗಳೂರು ಪೊಲೀಸರು!
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಕನ್ನಡದ ಕವಿ-ನಾಟಕಕಾರ, ರಂಗಭೂಮಿ ಕಲಾವಿದ, ನಿರ್ದೇಶಕರೂ ಆಗಿರುವ ರಘುನಂದನ ಅವರು ತಮ್ಮ ಅನಿಸಿಕೆಯೊಂದನ್ನು ಹಂಚಿಕೊಂಡಿದ್ದಾರೆ. ಅದನ್ನು ಇಲ್ಲಿ ಯಥಾವತ್ತಾಗಿ ಪ್ರಕಟಿಸಲಾಗಿದೆ.
ಇದೀಗ ಗೊತ್ತಾಯಿತು. ಇಂದು(ಅ.31) ಈಗ, ಸಂಜೆ 6.30ಕ್ಕೆ ನಡೆಯಬೇಕಿದ್ದ ಈ ಸಭೆಯನ್ನು ಮುಂದೂಡಲಾಗಿದೆ. ರಾಜ್ಯದ ಗೃಹ ಸಚಿವ ಪರಮೇಶ್ವರ್ ಅವರ ಸುಪರ್ದಿಯಲ್ಲಿರುವ ಕರ್ನಾಟಕ ಪೊಲೀಸ್ ಇಲಾಖೆ, ಈ ಸದ್ಯ ಈ ಸಭೆ ನಡೆಯಕೂಡದು ಎಂದು ತಾಕೀತು ಮಾಡಿದೆ. ಸಭೆ, ಅದು ನಡೆಯಬಹುದಾದರೆ, ಯಾವಾಗ ನಡೆಯಬಹುದು ಅನ್ನುವುದನ್ನು ಪೊಲೀಸರು ಕೆಲದಿನ ಬಿಟ್ಟು ಹೇಳುತ್ತಾರಂತೆ.
ಪ್ಯಾಲೆಸ್ತೀನ್ ಜನರ ಜೊತೆ ಸೌಹಾರ್ದ-ಸಹಾನುಭೂತಿಯಿಂದ ನಿಲ್ಲಲೆಣಿಸುವ ಯಾವುದೇ ಬಹಿರಂಗ ಸಭೆ (ಅದು ದೊಡ್ಡದಿರಲಿ, ಚಿಕ್ಕದಿರಲಿ) ನಡೆಯಕೂಡದು ಎನ್ನುತ್ತ, ಇಸ್ರೇಲ್‌ನ ಎಪ್ಪತ್ತೈದು ವರ್ಷಗಳ ಅಮಾನುಷ, ಅನೈತಿಕ, ಅಧಾರ್ಮಿಕ ನಡವಳಿಕೆಯನ್ನು ಪ್ರತಿಭಟಿಸುವ ಯಾವುದೇ ಬಹಿರಂಗ ಸಭೆಗೂ ಅನುಮತಿ ನೀಡಲು ನಿರಾಕರಿಸುತ್ತಿರುವ ಈ ಸರಕಾರವು ಈಗ ಒಂದು ಕೋಣೆಯಲ್ಲಿ ನಡೆಯಬೇಕಿದ್ದ ಗಂಭೀರ ಚರ್ಚೆಗೂ ತಡೆಯೊಡ್ಡಿದೆ.
ಅನುಮತಿ ನಿರಾಕರಿಸಲು ಮತ್ತು ಸಭೆಗಳಿಗೆ ತಡೆಯೊಡ್ಡಲು, ಸರಕಾರದ ಮನಸ್ಸಿನಲ್ಲಿರುವ ಕಾರಣವೇನಿರಬಹುದು?
ಇಂಥ ಸಂದರ್ಭವನ್ನು ಬಳಸಿಕೊಂಡು, “ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ರಾಜ್ಯ ಸರ್ಕಾರವು ಮುಸಲ್ಮಾನರ ಪರವಾಗಿದೆ,” ಎಂದು ಸಂಘ ಪರಿವಾರದವರು ಪ್ರಚಾರ ಮಾಡುತ್ತಾರೆ ಎಂಬ ಭಯವಿರಬೇಕು ಅದು. ಅಲ್ಲದೆ, ಇದೇ ನೆಪದಲ್ಲಿ ಸಂಘ ಪರಿವಾರದ ಕಿಡಿಗೇಡಿಗಳು ಗಲಭೆ ಎಬ್ಬಿಸಬಹುದು ಎಂಬ ಭಯವಿರಬೇಕು. ಅದು ನಿಜವಾಗಿದ್ದರೆ, ಇದು ನೈತಿಕ ಧೈರ್ಯವಿರದ, ಲಜ್ಜೆಗೇಡಿ ಸರಕಾರ ಎನ್ನಬೇಕಾಗುತ್ತದೆ. ಇನ್ನು ಆ ಭಯಕ್ಕೆ ಕಾರಣವಾಗಿರುವ ಬಿಜೆಪಿ-ಸಂಘ ಪರಿವಾರದ ಅನೈತಿಕತೆ, ಅಧಾರ್ಮಿಕತೆ, ನೀಚತನ ಎಂಥದ್ದಿರಬೇಡ?
ಪ್ಯಾಲೆಸ್ತೀನ್ ಜನರ ಜೊತೆ ನಿಂತರೆ ಅದು ಮುಸಲ್ಮಾನರ ಜೊತೆ ನಿಂತಂತೆ, ಯಹೂದಿಗಳ ವಿರುದ್ಧ ನಿಂತಂತೆ ಎಂದು ಆಗುವುದಾದರೂ ಹೇಗೆ? ಹಾಗೆ ಆಲೋಚಿಸುವ ಮತ್ತು ಆ ಬಗೆಯ ಅಪಪ್ರಚಾರ ಮಾಡುವ ಮನಸ್ಸುಗಳು, ಎರಡಕ್ಕೂ ನಿಜವಾದ ಧರ್ಮ, ನೀತಿ, ನ್ಯಾಯಪ್ರಜ್ಞೆ ಇಲ್ಲ ಎನ್ನಬೇಕು, ಅಷ್ಟೇ.
ಕರ್ನಾಟಕದ ಜನರಾಗಿ, ಭಾರತೀಯರಾಗಿ ನಾವು ತಲೆತಗ್ಗಿಸಿ ನಿಲ್ಲಬೇಕಾದ ಸಂದರ್ಭ ಇದು, ಅತೀವ ದುಃಖದ್ದು.
ನರಮೇಧವೊಂದರ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಲು, ಸಂಕಟದಲ್ಲಿರುವ ಜನರ ಜೊತೆ ಸಾಂಕೇತಿಕವಾಗಿಯಾದರೂ ನಿಲ್ಲಲು ಅನುವಿಲ್ಲದ ಸಮಾಜ ಅದೆಂಥ ಸಮಾಜ, ಅದಕ್ಕೆ ಅನುವಿಲ್ಲದ ದೇಶ ಅದೆಂಥ ದೇಶ? ನ್ಯಾಯ, ನೀತಿ, ಬುದ್ಧಪ್ರಜ್ಞೆಯ ನಡವಳಿಕೆಗೆ ಅನುವು ಮಾಡಿಕೊಡದ ಸರಕಾರ ಅದೆಂಥ ಸರಕಾರ?