ಲೈಂಗಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಅಪಹರಣ ಪ್ರಕರಣಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಇಬ್ಬರು ಮೊಮ್ಮಕ್ಕಳು ಜೈಲು ಸೇರಿದ್ದಾರೆ. ಮಗ ಎಚ್.ಡಿ ರೇವಣ್ಣ ಜೈಲು ಸೇರಿ, ಜಾಮೀನು ಪಡೆದು ಹೊರಬಂದಿದ್ದಾರೆ. ಮತ್ತೊಬ್ಬ ಮಗ ಎಚ್.ಡಿ ಕುಮಾರಸ್ವಾಮಿ ಮಂಡ್ಯ ಸಂಸತ್ ಚುನಾವಣೆಯಲ್ಲಿ ಗೆದ್ದು, ಕೇಂದ್ರದಲ್ಲಿ ಮಂತ್ರಿಗಿರಿ ಪಡೆದಿದ್ದಾರೆ. ಈ ನಡುವೆ, ಕುಮಾರಸ್ವಾಮಿ ಮಂತ್ರಿಯಾಗಿದ್ದಕ್ಕೆ ಜೆಡಿಎಸ್ ಅಭಿನಂದನೆ ಸಲ್ಲಿಸಿ, ಫ್ಲೆಕ್ಸ್‌ಗಳನ್ನು ಹಾಕಿದ್ದು, ಅದರಲ್ಲಿ ರೇವಣ್ಣ ಚಿತ್ರವನ್ನು ಕೈಬಿಡಲಾಗಿದೆ.
ರೇವಣ್ಣ ಮತ್ತು ಅವರ ಇಬ್ಬರೂ ಮಕ್ಕಳು ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳಾಗಿದ್ದು, ಪ್ರಜ್ವಲ್ ರೇವಣ್ಣನನ್ನು ಮಾತ್ರ ಜೆಡಿಎಸ್‌ನಿಂದ ಅಮಾನತು ಮಾಡಲಾಗಿದೆ. ರೇವಣ್ಣ ಮತ್ತು ಸೂರಜ್ ಇನ್ನೂ ಜೆಡಿಎಸ್‌ನಲ್ಲಿದ್ದು, ಶಾಸಕ, ಎಂಎಲ್‌ಸಿ ಆಗಿದ್ದಾರೆ. ಆದಾಗ್ಯೂ, ಜೆಡಿಎಸ್ ಫ್ಲೆಕ್ಸ್‌ಗಳಲ್ಲಿ ದೇವೇಗೌಡರ ಎರಡನೇ ಮಗನ ಚಿತ್ರಕ್ಕೆ ಅವಕಾಶ ನೀಡಲಾಗಿಲ್ಲ. ರೇವಣ್ಣ ಕುಟುಂಬದ ಲೈಂಗಿಕ ಹಗರಣಗಳ ಕಾರಣದಿಂದಾಗಿ, ಅವರ ಕುಟುಂಬದಿಂದ ಅಂತರ ಕಾಯ್ದುಕೊಳ್ಳಲು ಕುಮಾರಸ್ವಾಮಿ ಯತ್ನಿಸುತ್ತಿದ್ದಾರೆ. ರೇವಣ್ಣ ಕುಟುಂಬವನ್ನು ದೂರವಿಟ್ಟು ನೋಡುತ್ತಿದ್ದಾರೆ.
ಮಂಡ್ಯದಲ್ಲಿನ ಪ್ರಮುಖ ಸರ್ಕಲ್‌ಗಳಲ್ಲಿ ಕುಮಾರಸ್ವಾಮಿಗೆ ಅಭಿನಂದನೆ ಸಲ್ಲಿಸಿ, ಬೃಹತ್ ಫ್ಲೆಕ್ಸ್‌ಗಳನ್ನು ಹಾಕಲಾಗಿದೆ. ಅವುಗಳಲ್ಲಿ ಬಿಜೆಪಿಯ ಪ್ರಮುಖ ನಾಯಕರ ಚಿತ್ರಗಳೂ ಇವೆ. ಆದರೆ, ಮಾಜಿ ಸಚಿವ ರೇವಣ್ಣ ಭಾವಚಿತ್ರಕ್ಕೆ ಜಾಗ ನೀಡಲಾಗಿಲ್ಲ.
ಸದ್ಯ, ಹಾಸನ ಜಿಲ್ಲೆಯಲ್ಲಿ ರೇವಣ್ಣ ಕುಟುಂಬದ ದೌರ್ಜನ್ಯ – ದಬ್ಬಾಳಿಕೆಗಳು ಬಹಿರಂಗವಾಗಿದ್ದು, ಜೆಡಿಎಸ್ ಮುಜುಗರ ಅನುಭವಿಸುತ್ತಿದೆ. ಆದಾಗ್ಯೂ, ಪ್ರಜ್ವಲ್ ಪ್ರಕರಣದಲ್ಲಿ ಮೊದಲಿಗೆ ರೇವಣ್ಣ ಕುಟುಂಬಕ್ಕೂ ನಮಗೂ ಸಂಬಂಧವೇ ಇಲ್ಲ ಎಂದಿದ್ದ ಕುಮಾರಸ್ವಾಮಿ, ನಂತರದಲ್ಲಿ ರೇವಣ್ಣ ಕುಟುಂಬದ ಪರ ನಿರಂತರವಾಗಿ ಮಾತನಾಡುತ್ತಿದ್ದರು. ಆದರೆ, ಪ್ರಜ್ವಲ್ ಮತ್ತು ಸೂರಜ್ ಬಂಧನದ ಬಳಿಕ, ಅವರ ಕುಟುಂಬದಿಂದ ಅಂತರ ಕಾಯ್ದುಕೊಳ್ಳಲು ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಯತ್ನಿಸುತ್ತಿದ್ದಾರೆ.