“ಬಿಜೆಪಿಯವರು ಅವರ ಪಕ್ಷದಲ್ಲಿ ನಾಯಕತ್ವ ನಿರೂಪಿಸಲು ಕಾಂಗ್ರೆಸ್ ಸರ್ಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ” ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಹೇಳಿದರು.
ತುಮಕೂರಿನ ಗೃಹ ಕಚೇರಿಯಲ್ಲಿ ಈ ದಿನ. ಕಾಮ್‌ನ ಸಹಾಯವಾಣಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರದಲ್ಲಿ ಯಾವುದೇ ರೀತಿಯ ಹಗರಣಗಳು ನಡೆದಿಲ್ಲ. ಈ ಹಿಂದಿನ ಬಿಜೆಪಿ ಸರ್ಕಾರದಲ್ಲೇ 25 ಹಗರಣಗಳು ನಡೆದಿವೆ. ಅದನ್ನು ಮಾಧ್ಯಮಗಳು ಕೂಡ ವರದಿ ಮಾಡಿದೆ. ಬಿಜೆಪಿಯ ನಾಯಕರು ಅವರ ಪಕ್ಷದಲ್ಲಿ ನಾಯಕತ್ವ ನಿರೂಪಿಸಿಕೊಳ್ಳಲು ವಿನಾಃಕಾರಣ ಕಾಂಗ್ರೆಸ್ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳಿಂದ ಅವರಿಗೆ ಯಾವುದೇ ರೀತಿಯ ಯಶಸ್ಸು ಸಿಗುವುದಿಲ್ಲ” ಎಂದು ಹೇಳಿದರು.
ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಸಿ ಎಂ ಸಿದ್ದರಾಮಯ್ಯ ಪತ್ನಿ ಪಾರ್ವತಮ್ಮ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ತಂದೆಯ ಹೆಸರು ಪ್ರಸ್ತಾಪ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, “ರಾಜಕಾರಣದಲ್ಲಿ ಯಾವಾಗಲೂ ತಾಳ್ಮೆಯ ರಾಜಕಾರಣ ಇರಬೇಕು. ಏಕವಚನದಲ್ಲಿ ಬೈಯ್ಯೋದು, ಮಾತಾಡೋದು. ಗಂಭೀರವೇ ಅಲ್ಲದ ವಿಷಯಗಳನ್ನು ವಿವಾದವನ್ನಾಗಿ ಮಾಡುವುದು ಸರಿಯಲ್ಲ. ವೈಯಕ್ತಿಕವಾಗಿ ಕುಟುಂಬ ಸದಸ್ಯರ ಹೆಸರುಗಳನ್ನ ಪ್ರಸ್ತಾಪ ಮಾಡುವುದು. ಇದು ಯಾವುದೇ ರಾಜಕಾರಣಿಗೆ ಭೂಷಣವಲ್ಲ” ಎಂದು ಹೇಳುವ ಮೂಲಕ ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಟಾಂಗ್ ನೀಡಿದರು.
