ಲೋಕಸಭಾ ಚುನಾವಣೆ ನಡೆಯುತ್ತಿದೆ. ಮೊದಲ ಎರಡು ಹಂತದ ಮತದಾನ ಮುಗಿದಿವೆ. ಪ್ರಧಾನಿ ಮೋದಿ ಅವರು ದೇಶಾದ್ಯಂತ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ. ಅವರು ಭಾರತದ ಅಲ್ಪಸಂಖ್ಯಾತರ ವಿರುದ್ಧ ಕಟು ಭಾಷೆ ಬಳಸಿ ವಾಗ್ದಾಳಿ ನಡೆಸುತ್ತಿದ್ದಾರೆ. ಇದು ಅಕ್ಷರಶಃ ಅಕ್ಷಮ್ಯ. 10 ವರ್ಷಗಳ ಕಾಲ ಅಧಿಕಾರ ನಡೆಸಿರುವ ಓರ್ವ ಪ್ರಧಾನಿ ತಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ವಿವರಿಸುವ ಬದಲು, ತನ್ನ ಸಾಧನೆಗಳನ್ನು ಚುನಾವಣಾ ಪ್ರಚಾರದ ಪ್ರಮುಖ ವಿಷಯವಾಗಿ ಬಳಸಿಕೊಳ್ಳುವ ಬದಲು, ಮುಸ್ಲಿಮರನ್ನು ಗುರಿಯಾಗಿಸಿಕೊಂಡಿದ್ದಾರೆ. ಬಹುಸಂಖ್ಯಾತ ಹಿಂದುಗಳಲ್ಲಿ ಮುಸ್ಲಿಂ ದ್ವೇಷವನ್ನು ಪ್ರಚೋದಿಸಿ, ಮತ ಗಿಟ್ಟಿಸಿಕೊಳ್ಳುವ ತಂತ್ರ ಹೆಣೆಯುತ್ತಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಚಾರದಲ್ಲಿ ಮೋದಿಯವರು ಇಷ್ಟು ಬೇಗ ಮುಸಲ್ಮಾನರನ್ನು ದೂಷಿಸುತ್ತಿರುವುದೇಕೆ ಎಂಬ ಪ್ರಶ್ನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. 2019ರ ಚುನಾವಣಾ ಪ್ರಚಾರದಲ್ಲಿ ಮೋದಿಯವರು ಮತ್ತು ಬಿಜೆಪಿ ನಾಯಕರು ನಿರ್ಲಜ್ಜವಾಗಿ ಮುಸ್ಲಿಮರ ವಿರುದ್ಧದ ಹೇಳಿಕೆಗಳನ್ನು ನೀಡುತ್ತಿದ್ದರು. ಆದರೆ, ಮೋದಿ ಅವರು ಕೊನೆಯ ಎರಡು ಹಂತಗಳ ಮತದಾನ ಬಾಕಿ ಇದ್ದಾಗ ಮುಸ್ಲಿಮರ ವಿರುದ್ಧ ಮಾತನಾಡಲು ಆರಂಭಿಸಿದ್ದರು. ಆಗ, ಮೋದಿ ಅಲೆ ಮತ್ತು ಪುಲ್ವಾಮ ಘಟನೆಯಿಂದಾಗಿ ಬಿಜೆಪಿ 303 ಸ್ಥಾನಗಳನ್ನು ಗಳಿಸಲು ಸಾಧ್ಯವಾಯಿತು.
ಆದರೆ, ಈ ಬಾರಿ ಪ್ರಧಾನಿ ಮೋದಿ, ಆರಂಭದಲ್ಲಿಯೇ ‘ದ್ವೇಷ ಭಾಷಣ’ ಮಾಡುತ್ತಿದ್ದಾರೆ. ಈಗಾಗಲೇ ಅಪಖ್ಯಾತಿ ಪಡೆದಿರುವ ಚುನಾವಣಾ ಆಯೋಗವು ಮೋದಿ ಭಾಷಣದ ಬಗ್ಗೆ ತುಟಿಬಿಚ್ಚಿಲ್ಲ. ಯಾವುದೇ ಕ್ರಮಕ್ಕೂ ಮುಂದಾಗಿಲ್ಲ.
ಸುದೀರ್ಘ ಚುನಾವಣಾ ಪ್ರಯಾಸದಲ್ಲಿ ಇನ್ನೂ ಐದು ಹಂತಗಳ ಮತದಾನ ಬಾಕಿ ಇದೆ. ಕಳೆದ ಎರಡು ಹಂತಗಳ ಮತದಾನದಲ್ಲಿ ಬಿಜೆಪಿ ನೀರಸವಾಗಿದೆ. ಈಗಾಗಲೇ ಮತದಾನ ನಡೆದಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದೆ ಎಂಬ ಅಭಿಪ್ರಾಯಗಳಿವೆ. ಆರಂಭದಲ್ಲಿ ‘ಚಾರ್ ಸವ್ ಪಾರ್’ ಎನ್ನುತ್ತಾ 400 ಸ್ಥಾನ ಗೆಲ್ಲುತ್ತೇವೆ ಎನ್ನುತ್ತಿದ್ದ ಮೋದಿ ಅವರು ಏಕಾಏಕಿ 400ರ ಅಂಕಿಯ ಮಾತನ್ನು ನಿಲ್ಲಿಸಿದ್ದಾರೆ.
ಮತದಾನ ನಡೆಯುತ್ತಿರುವ ವೇಳೆ, ಈ ಅಸಾಧಾರಣ ಗುರಿಯನ್ನು ಪ್ರಬಲವಾಗಿ ಪ್ರಚಾರಗಳಲ್ಲಿ ಪ್ರತಿಪಾದಿಸಬೇಕು. ಆಡಳಿತ ಮತ್ತು ಅಭಿವೃದ್ಧಿಯ ಮೇಲೆ ಮೋದಿ ಅಲೆ ಬಿಜೆಪಿಯನ್ನು ಆ ಅಂಕಿಗೆ ಕೊಂಡೊಯ್ಯಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಮೋದಿ ಅಲೆ ಕೆಲಸ ಮಾಡುತ್ತಿಲ್ಲ. ಇಂತಹ ಹೊತ್ತಿನಲ್ಲಿ ಬಿಜೆಪಿ ಮತ್ತಷ್ಟು ತೀವ್ರವಾಗಿ ಪ್ರಚಾರ ನಡೆಸಲು ಮುಂದಾಗಿದೆ. ಬಿಜೆಪಿಯ ಪ್ರಚಾರ ದಾಳಿಗೆ ಮುಸ್ಲಿಮರೇ ಮುಖ್ಯ ಗುರಿಯಾಗುತ್ತಿದ್ದಾರೆ. ಬಿಜೆಪಿಯ ‘ಸ್ಟಾರ್ ಪ್ರಚಾರಕ’ರಾದ ಮೋದಿ ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಭಾಷಣವನ್ನು ಆಶ್ರಯಿಸಿದ್ದಾರೆ.
ಇತ್ತೀಚೆಗೆ ಪ್ರಕಟವಾದ ಸಿಎಸ್ಡಿಎಸ್-ಲೋಕನೀತಿ ಸಮೀಕ್ಷೆಯು, ಬಿಜೆಪಿಯು ಚುನಾವಣಾ ಪ್ರಚಾರದ ವೇದಿಕೆಯಾಗಿ ಮೋದಿ ವರ್ಚಸ್ಸಿಗೆ ಒತ್ತು ನೀಡುತ್ತಿದೆ. ಯೂಟ್ಯೂಬ್ನಲ್ಲಿ 150 ಹಾಡುಗಳು ಮತ್ತು 11 ದಿನಪತ್ರಿಕೆಗಳ ಮೂಲಕ ಮೋದಿ ಬಗ್ಗೆ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಆದರೂ, 2014 ಮತ್ತು 2019ರಂತೆ ಮತದಾರರು ಮೋದಿ ಮ್ಯಾಜಿಕ್ಗೆ ತಲೆದೂಗುತ್ತಿಲ್ಲ.
ಮೋದಿ ಅಲೆಯು ಜೀವನೋಪಾಯದ ಸಮಸ್ಯೆಗಳನ್ನು ಪರಿಹರಿಸಲು ಅಥವಾ ಹಿನ್ನೆಲೆಗೆ ಸರಿಸಲು ಸಾಧ್ಯವಾಗುವುದಿಲ್ಲ. ಈ ಬಾರಿ, ನಾಯಕತ್ವದ ನಿರೀಕ್ಷೆಯಷ್ಟು ಸ್ಥಾನಗಳನ್ನು ಬಿಜೆಪಿ ಗಳಿಸುವುದಿಲ್ಲ ಎಂದು ಸಮೀಕ್ಷೆಯ ಭಾಗವಾಗಿದ್ದ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದಲ್ಲಿ ಮತಕ್ಕಾಗಿ ಬಿಜೆಪಿ ಕಾರ್ಯಕರ್ತರು ಹಿಂದು ಮತದಾರರ ಬಾಗಿಲು ಬಡಿಯುತ್ತಿದ್ದಾರೆ. ಆದರೂ, ಹೆಚ್ಚಿನ ಮತದಾರರನ್ನು ಬಿಜೆಪಿಗೆ ಮತ ಚಲಾಯಿಸುವಂತೆ ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಮೋದಿ ಅಲೆಯಿಲ್ಲ. ಮತದಾರರು ನಿರಾಶದಾಯಕವಾಗಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ.
ಅಂದಹಾಗೆ, ಬಿಜೆಪಿ ಮತ್ತು ಮೋದಿ ಅಲೆಯಲ್ಲಿ ತೇರುತ್ತಿರುವವರಲ್ಲಿ ಹೆಚ್ಚಿನವರು ಯುವಜನರು. ಅದರಲ್ಲೂ ಮೊದಲ ಬಾರಿಗೆ ಮತಹಾಕುವವರಲ್ಲಿ ಹೆಚ್ಚಿನವರು ಮೋದಿಯನ್ನು ಕೊಂಡಾಡುತ್ತಾರೆ. ಈ ಚುನಾವಣೆಯಲ್ಲಿ 1.8 ಕೋಟಿ ಯುವಜನರು ಮೊದಲ ಬಾರಿಗೆ ಮತ ಹಾಕುತ್ತಿದ್ದಾರೆ. ಇವರಲ್ಲಿ ಹೆಚ್ಚಿನವರು ನಿರುದ್ಯೋಗಿಗಳು. ಅವರ ಮತಗಳ ಮೇಲೆ ನಿರುದ್ಯೋಗದ ಪ್ರಭಾವವೂ ಇದೆ.
ದೇಶದಲ್ಲಿರುವ ಒಟ್ಟು ನಿರುದ್ಯೋಗಿಗಳಲ್ಲಿ ಬರೋಬ್ಬರಿ 83% ನಿರುದ್ಯೋಗಿಗಳು ಯುವಜನರೇ ಆಗಿದ್ದಾರೆ. ಅಷ್ಟೇ ಅಲ್ಲದೆ, ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಸಿಗದೆ, ಅನೌಪಚಾರಿಕ ವಲಯಗಳಲ್ಲಿ ದುಡಿಯುತ್ತಿರುವವರ ಸಂಖ್ಯೆಯ ಪ್ರಚಾರವೂ ಹೆಚ್ಚಿದೆ.
ಈ ಯುವಜನರಿಗೆ ನಿರುದ್ಯೋಗವು ಮೂಲ ಸಮಸ್ಯೆಯಾಗಿದೆ. ಚುನಾವಣೆಯಲ್ಲಿ ತಾವು ಯಾರಿಗೆ ಮತ ಹಾಕಬೇಕು ಎಂಬುದರ ಮೇಲೆ ನಿರುದ್ಯೋಗದ ಪ್ರಭಾವವಿದೆ. ಆದರೂ, ಆಡಳಿತಾರೂಢ ಬಿಜೆಪಿ ‘ನಿಮಗೆ 18 ವರ್ಷ ವಯಸ್ಸಾಗಿದ್ದರೆ, ಇನ್ನೂ ಯಾಕೆ ಆಲೆಯುತ್ತಿದ್ದೀರಿ. ಮತದಾನಕ್ಕೆ ಬನ್ನಿ’ ಎಂಬ ಔಪಚಾರಿಕ ಘೋಷಣೆಯ ಹೊರತಾಗಿ, ಹೆಚ್ಚಿನದ್ದನ್ನು ಘೋಷಿಸಿಲ್ಲ. ಯಾವುದೇ ನೀತಿ, ಯೋಜನೆಗಳ ಭರವಸೆಯನ್ನೂ ನೀಡಿಲ್ಲ. ಮಾತ್ರವಲ್ಲ, 2014ರಲ್ಲಿ ಘೋಷಿಸಿದ್ದ ವರ್ಷಕ್ಕೆ 2 ಕೋಟಿ ಉದ್ಯೋಗದ ಭರವಸೆಯನ್ನೂ ಪೂರೈಸಿಲ್ಲ.
ಇನ್ನು, ರೈತ ಸಮುದಾಯ ಮೋದಿ ಸರ್ಕಾರದ ಮೇಲೆ ಸಂಪೂರ್ಣ ಸಿಟ್ಟಾಗಿದೆ. ಗೊಬ್ಬರ, ಬಿತ್ತನೆ ಬೀಜಗಳ ಮೇಲಿನ ಸಬ್ಸಿಡಿಗಳನ್ನು ಕಸಿದುಕೊಂಡಿದ್ದು ಮಾತ್ರವಲ್ಲದೆ, ಕೃಷಿ ಕಾಯ್ದೆಗಳ ಮೂಲಕ ರೈತ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲು ಮೋದಿ ಸರ್ಕಾರ ಮುಂದಾಗಿತ್ತು ಎಂಬುದು ರೈತರಲ್ಲಿ ಸಿಟ್ಟು ತರಿಸಿದೆ.
ಮುಸ್ಲಿಮರನ್ನು ಹೊರಗಿಟ್ಟು ರೂಪಿಸಲಾದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧವೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿ ಅಧಿಕಾರದಲ್ಲಿರುವ ಅಸ್ಸಾಂನಲ್ಲಿ ಜನರು ಕಾಯ್ದೆಯ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದಾರೆ. ಪ್ರತಿಭಟನೆ ನಡೆಸುತ್ತಿದ್ದಾರೆ.
ಮಹಿಳೆಯರ ರಕ್ಷಣೆಯಲ್ಲೂ ಮೋದಿ ಸರ್ಕಾರ ವಿಫಲವಾಗಿದೆ. ಮಣಿಪುರ ಹಿಂಸಾಚಾರ, ಕುಸ್ತಿಪಟುಗಳ ಮೇಲಿನ ಲೈಂಗಿಕ ದೌರ್ಜನ್ಯ, ಉತ್ತರ ಪ್ರದೇಶದ ಉನ್ನಾವೋ ಮತ್ತು ಹತ್ರಾಸ್ ಅತ್ಯಾಚಾರ ಪ್ರಕರಣ, ಕುತುವಾದ ಆಸಿಫಾ ಬಾನೋ ಅತ್ಯಾಚಾರ-ಕೊಲೆ ಪ್ರಕರಣ, ಗುಜರಾತ್ನ ಬಿಲ್ಕೀಸ್ ಬಾನೋ ಪ್ರಕರಣಗಳಲ್ಲಿ ಮೋದಿ ಅವರ ಬಿಜೆಪಿ ಬಹಿರಂಗವಾಗಿಯೇ ಆರೋಪಿ-ಅಪರಾಧಿಗಳ ಪರವಾದ ನಿಲುವು ಹೊಂದಿತ್ತು. ಇದೆಲ್ಲವೂ ಮಹಿಳೆಯರ ರಕ್ಷಣೆಯಲ್ಲಿ ಮೋದಿ ಸರ್ಕಾರದ ಧೋರಣೆ ಏನೆಂಬುದನ್ನು ಸೂಚಿಸಿದೆ. ಇದು ಮಹಿಳಾ ಮತದಾರರಲ್ಲಿ ಆಕ್ರೋಶ ತರಿಸಿದೆ.
ದಲಿತರು ಕೂಡ ಬಿಜೆಪಿಯ ಮನುವಾದಿ ಸಿದ್ಧಾಂತವನ್ನು ಅರ್ಥೈಸಿಕೊಂಡಿದ್ದಾರೆ. ಬಿಜೆಪಿ ಆಡಳಿತದಲ್ಲಿ ತಮ್ಮ ಸಮುದಾಯದ ಅಭಿವೃದ್ಧಿಯಾಗದು, ರಕ್ಷಣೆಯೂ ಸಿಗದು ಎಂಬುದನ್ನು ಅರಿತುಕೊಂಡಿದ್ದಾರೆ. ಬಿಜೆಪಿ ವಿರುದ್ಧ ಸಿಡಿದು ನಿಂತಿದ್ದಾರೆ.
ತೆರಿಗೆ ಹಂಚಿಕೆ, ಅನುದಾನ ಹಂಚಿಕೆ, ಯೋಜನೆಗಳ ಅನುಷ್ಠಾನದಲ್ಲಿ ದಕ್ಷಿಣದ ರಾಜ್ಯಗಳ ಮೇಲೆ ಮೋದಿ ಸರ್ಕಾರ ಮಲತಾಯಿ ಧೋರಣೆ ಹೊಂದಿದ್ದು, ಅನ್ಯಾಯ ಮಾಡಿದೆ ಎಂದು ದಕ್ಷಿಣದ ರಾಜ್ಯಗಳಲ್ಲಿ ಅಸಮಾಧಾನವಿದೆ.
ಈ ವರದಿ ಓದಿದ್ದೀರಾ?: ಲೋಕಸಭೆ ಚುನಾವಣೆ| ಎರಡು ಹಂತದ ಮತದಾನದ ಡೇಟಾ ಬಿಡುಗಡೆ, ವಿಳಂಬಕ್ಕೆ ವಿವರಣೆ ನೀಡಲು ವಿಪಕ್ಷಗಳ ಆಗ್ರಹ
ಮೋದಿ ಸರ್ಕಾರವು ಸಿಬಿಐ, ಇಡಿ, ಐಟಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ಮೇಲೆ ನಿರಂತರ ದಾಳಿ ಮಾಡಿದೆ. ಅಲ್ಲದೆ, ಇಬ್ಬರು ಮುಖ್ಯಮಂತ್ರಿಗಳನ್ನು ಜೈಲಿನಲ್ಲಿರಿಸಿದೆ. ದೆಹಲಿಯಲ್ಲಿ ಕೇಜ್ರಿವಾಲ್ ಬಂಧನವು ತಮ್ಮ ಗೆಲುವಿಗೆ ಅನುಕೂಲವಾಗುತ್ತದೆ ಎಂದು ಬಿಜೆಪಿ ಭಾವಿಸಿತ್ತು. ಅದರೆ, ಅದು ಉಲ್ಟಾ ಹೊಡೆದಿದೆ.
ಇನ್ನು, ರಾಮ ಮಂದಿರದ ಪ್ರತಿಷ್ಠಾಪನೆ ಕೂಡ ಬಿಜೆಪಿ ಪರವಾಗಿ ದೇಶದಲ್ಲಿ ಅಲೆಯನ್ನು ಸೃಷ್ಟಿಸಿಲ್ಲ. ಬೆಲೆ ಏರಿಕೆ, ನಿರುದ್ಯೋಗ ಜನರನ್ನು ಕಾಡುತ್ತಿದೆ. ಇದೆಲ್ಲವೂ, ಮೋದಿ ಅವರ ಜನಪ್ರಿಯತೆಯನ್ನು ಕಡಿಮೆ ಮಾಡಿದೆ. ದೇಶದಲ್ಲಿ ಮೋದಿ ಅಲೆ ಇಲ್ಲದಂತಾಗಿದೆ.
ಹೀಗಾಗಿಯೇ, ಮತ್ತೆ ಅಧಿಕಾರ ಹಿಡಿಯಬೇಕೆಂದು ಹಪಾಹಪಿಸುತ್ತಿರುವ ಮೋದಿ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡುತ್ತಿದ್ದಾರೆ. ಕೋಮು ದ್ವೇಷವನ್ನು ಪ್ರಚೋದಿಸುತ್ತಿದ್ದಾರೆ. ಆದರೆ, ಕೋಮು ದ್ವೇಷವು ಜನರ ಹಸಿವನ್ನು ನೀಗಿಸದು, ಉದ್ಯೋಗವನ್ನು ನೀಡದು, ರಕ್ಷಣೆ ಒದಗಿಸದು ಎಂಬುದನ್ನು ದೇಶದ ಜನರು ಅರಿತಿದ್ದಾರೆ. ಇದು ಮೋದಿ ಮತ್ತು ಬಿಜೆಪಿಯಲ್ಲಿ ಮತ್ತಷ್ಟು ಸೋಲಿನ ಆತಂಕ ಹೆಚ್ಚಿಸಿದೆ.