ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿಕೆ ಹರಿಪ್ರಸಾದ್ ಅವರಿಗೆ ನೋಟಿಸ್ ನೀಡಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಕೆ ಹರಿಪ್ರಸಾದ್, ”ನೋಟಿಸ್ ಬಂದಿರುವ ಬಗ್ಗೆ ವಾಟ್ಸಪ್‌ನಲ್ಲಿ ನೋಡಿದೆ. ಪ್ರತಿ ಇವತ್ತು ನನಗೆ ಬರಬಹುದು. ಪ್ರತಿ ಕೈಗೆ ಸಿಕ್ಕ ಬಳಿಕ ಅದಕ್ಕೆ ಉತ್ತರಿಸುತ್ತೇನೆ” ಎಂದು ತಿಳಿಸಿದರು.
”ಆ ನೋಟಿಸು ಪಕ್ಷ ಮತ್ತು ನನಗೆ ಸಂಬಂಧಿಸಿದ್ದು. ಎಐಸಿಸಿಯ ಶಿಸ್ತು ಕಮಿಟಿ ನೋಟಿಸ್ ಕೊಟ್ಟಾಗ ಅದಕ್ಕೆ ನಾನು ಅಧಿಕೃತವಾಗಿ ಉತ್ತರ ನೀಡುತ್ತೇನೆ. 10 ದಿವಸ ಸಮಯ ಕೊಟ್ಟಿದ್ದಾರೆ” ಎಂದು ಬಿಕೆ ಹರಿಪ್ರಸಾದ್ ತಿಳಿಸಿದರು.
ಹೈಕಮಾಂಡ್ ಶಿಸ್ತು ಸಮಿತಿಯಿಂದ ನೋಟಿಸ್ ಹಿನ್ನೆಲೆ
— eedina.com (@eedinanews) September 13, 2023
'ಪ್ರತಿ ಕೈಗೆ ಸಿಕ್ಕ ಬಳಿಕ ಉತ್ತರಿಸುವೆ' ಎಂದ ಬಿ ಕೆ ಹರಿಪ್ರಸಾದ್@HariprasadBK2 @INCKarnataka pic.twitter.com/T3u46DN5Me
ನೋಟಿಸ್ ಯಾಕೆ?
ಕಳೆದ ಶನಿವಾರ ಅತಿ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಹರಿಪ್ರಸಾದ್ ಅವರು ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು.
“ಹಿಂದಿನ ಯಾವ ಮುಖ್ಯಮಂತ್ರಿಗಳೂ ಜಾತಿ ರಾಜಕಾರಣ ಮಾಡಲಿಲ್ಲ. ಕಾಗೋಡು ತಿಮ್ಮಪ್ಪ, ಬಂಗಾರಪ್ಪ ಜಾತಿ ರಾಜಕಾರಣ ಮಾಡಲಿಲ್ಲ. ಪಂಚೆ ಹಾಕಿಕೊಂಡು ವಾಚ್ ಕಟ್ಟಿಕೊಂಡು ಖಾಕಿ ಚಡ್ಡಿ ಹಾಕೊಂಡು, ಸಮಾಜವಾದಿ ಅಂತ ಹೇಳಿದರೆ ಆಗುವುದಿಲ್ಲ. ದೇವರಾಜ ಅರಸು ಕಾರಿನಲ್ಲಿ ಹೋದಾಕ್ಷಣ ದೇವರಾಜ ಅರಸು ಆಗುವುದಿಲ್ಲ, ಅವರ ಚಿಂತನೆ ಇರಬೇಕು” ಎಂದಿದ್ದರು.
“ನಾನು ಅಧಿಕಾರ ಸಿಕ್ಕಿಲ್ಲವೆಂದು ಅಡ್ವಾಣಿ ಅವರನ್ನು ಭೇಟಿ ಮಾಡಿ, ಅವರ ಮನೆಯಲ್ಲಿ ಉಪಾಹಾರ ಸ್ವೀಕರಿಸಿ ಬಿಜೆಪಿ ಸೇರಲು ಹೋಗಿರಲಿಲ್ಲ. ಯಾರು ಹೋಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದ್ದ ವೆಂಕಯ್ಯ ನಾಯ್ಡು ಹಾಗೂ ಅರವಿಂದ ಲಿಂಬಾವಳಿ ಈಗಲೂ ಇದ್ದಾರೆ” ಎಂದು ಹೇಳಿದ್ದರು.

ಈ ಸಂಬಂಧ ಹೈಕಮಾಂಡ್ ಬಳಿ ಮುಖ್ಯಮಂತ್ರಿಗಳು ತೀವ್ರ ಅಸಮಾಧಾನ ಹೊರಹಾಕಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಹರಿಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ.
ನೋಟಿಸ್‌ನಲ್ಲಿ ತಮ್ಮ ಪತ್ರಕ್ಕೆ 10 ದಿನಗಳ ಒಳಗೆ ಉತ್ತರಿಸುವಂತೆ ಕಾಂಗ್ರೆಸ್ ಶಿಸ್ತು ಕಮಿಟಿಯ ಪ್ರಧಾನ ಕಾರ್ಯದರ್ಶಿ ತಾರೀಖ್ ಅನ್ವರ್ ತಿಳಿಸಿದ್ದಾರೆ.
ಬಿಜೆಪಿ ಯ ಬಲಿಪಶು ಈ ಮನುಷ್ಯ.