ಮುಜರಾಯಿ ಇಲಾಖೆಯಡಿ ಬರುವ ದೇವಾಲಯದಲ್ಲಿ ಆದಾಯಕ್ಕಿಂತ ಹೆಚ್ಚು ಸಂಬಳ(ತಸ್ತೀಕ್ ಹಣ) ನೀಡಲಾಗಿದೆ ಎಂಬ ಆರೋಪದಡಿ ಹಿರಿಯ ಅರ್ಚಕ, ಸಾಹಿತಿ ಹಿರೇಮಗಳೂರು ಕಣ್ಣನ್ ಅವರಿಗೆ ಚಿಕ್ಕಮಗಳೂರು ತಹಶೀಲ್ದಾರ್ ನೋಟಿಸ್ ನೀಡಿದ್ದರು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ಅವರಿಂದ ಸಂಬಳ ವಾಪಸ್ ಪಡೆಯಲು ನಿರ್ಧರಿಸಿದ್ದ ನೋಟಿಸ್ ಅನ್ನು ವಾಪಸ್ ಪಡೆಯಲು ಸರ್ಕಾರ ಸೂಚನೆ ನೀಡಿದೆ.
ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, “ಇದು ತಹಶೀಲ್ದಾರ್ ಅವರಿಂದ ಆಗಿರುವ ಎಡವಟ್ಟು. ನನಗೂ ಈ ಮಾಹಿತಿ ಇರಲಿಲ್ಲ. ಇದರಲ್ಲಿ ಕಣ್ಣನ್ ಅವರದ್ದು ಏನೂ ತಪ್ಪಿಲ್ಲ. ತಹಶೀಲ್ದಾರ್ ದುಡ್ಡು ಕೊಟ್ಟಿದ್ದಕ್ಕೆ ಅವರು ತಗೊಂಡಿದ್ದಾರೆ. ಕೂಡಲೇ ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿದ್ದ ನೋಟಿಸ್ ಅನ್ನು ಹಿಂಪಡೆಯಲು ಸೂಚನೆ ನೀಡುತ್ತೇನೆ” ಎಂದು ತಿಳಿಸಿದ್ದಾರೆ.

ಏನಿದು ಬೆಳವಣಿಗೆ?
ಮುಜರಾಯಿ ಇಲಾಖೆಯಡಿ ಬರುವ ದೇವಾಲಯದ ಆದಾಯಕ್ಕಿಂತ ಹೆಚ್ಚು ಸಂಬಳ ನೀಡಲಾಗಿದೆ ಎಂಬ ಆರೋಪದಡಿ ಹಿರಿಯ ಅರ್ಚಕ, ಸಾಹಿತಿ ಹಿರೇಮಗಳೂರು ಕಣ್ಣನ್ ಅವರಿಗೆ ಚಿಕ್ಕಮಗಳೂರು ತಹಶೀಲ್ದಾರ್ ನೋಟಿಸ್ ನೀಡಿದ್ದರು.
ಹಿರೇಮಗಳೂರು ಕಣ್ಣನ್ ಅವರು ಅರ್ಚಕರಾಗಿರುವ ಹಿರೇಮಗಳೂರು ಗ್ರಾಮದ ಕಲ್ಯಾಣ ಕೋದಂಡ ರಾಮಚಂದ್ರಸ್ವಾಮಿ ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ, ತಿಂಗಳ ಸಂಬಳದ ಪೈಕಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ಕಣ್ಣನ್ ಅವರಿಗೆ ತಹಶೀಲ್ದಾರ್ ಸೂಚನೆ ನೀಡಿದ್ದರು.
ಮೂಲಗಳ ಪ್ರಕಾರ, ಹಿರೇಮಗಳೂರು ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂ. ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂ. ಅಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿದೆ. ಸದ್ಯ ಪ್ರತಿ ತಿಂಗಳು ಬರುತ್ತಿದ್ದ ಸಂಬಳವನ್ನು ತಡೆ ಹಿಡಿಯಲಾಗಿದ್ದು, ಮೇಲಾಧಿಕಾರಿಗಳ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಶೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದರು.
ಬಿಜೆಪಿ ಪಾಳಯ ಆಕ್ರೋಶ
ಈ ಬೆಳವಣಿಗೆಯ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ನಿಲುವು ತಾಳಿದೆ ಎಂದು ದೂರಿದ್ದಾರೆ.
ಸಿಎಂ @siddaramaiah ಅವರ ಹಿಂದೂ ದ್ವೇಷ ಯಾವ ಪರಾಕಾಷ್ಠೆಗೆ ತಲುಪಿದೆ ಎಂದರೆ 10 ವರ್ಷಗಳ ಸಂಬಳ ವಾಪಸ್ಸು ನೀಡುವಂತೆ ಚಿಕ್ಕಮಗಳೂರಿನ ರಾಮನ ದೇವಸ್ಥಾನದ ಆಚರ್ಕರಿಗೆ ನೋಟೀಸ್ ಕೊಡಿಸಿದ್ದಾರೆ.
7 ತಿಂಗಳಲ್ಲೇ ರಾಜ್ಯದ ಬೊಕ್ಕಸವನ್ನ ಬರಿದು ಮಾಡಿ ದಿವಾಳಿಯಾಗಿರುವ @INCKarnataka ಸರ್ಕಾರ ದೇವಸ್ಥಾನದ ಅರ್ಚಕರಿಗೆ ನೀಡುವ ಸಂಬಳಕ್ಕೂ ಕತ್ತರಿ… pic.twitter.com/N3L8TW07Jw
— R. Ashoka (ಆರ್. ಅಶೋಕ) (@RAshokaBJP) January 23, 2024
ಈ ಬಗ್ಗೆ ಟ್ವೀಟ್ ಮಾಡಿರುವ ವಿಪಕ್ಷ ನಾಯಕ ಆರ್ ಅಶೋಕ್, “ಸಿಎಂ ಸಿದ್ದರಾಮಯ್ಯನವರ ಹಿಂದೂ ದ್ವೇಷ ಯಾವ ಪರಾಕಾಷ್ಠೆಗೆ ತಲುಪಿದೆ ಎಂದರೆ 10 ವರ್ಷಗಳ ಸಂಬಳ ವಾಪಸ್ಸು ನೀಡುವಂತೆ ಚಿಕ್ಕಮಗಳೂರಿನ ರಾಮನ ದೇವಸ್ಥಾನದ ಅರ್ಚಕರಿಗೆ ನೋಟಿಸ್ ಕೊಡಿಸಿದ್ದಾರೆ. 7 ತಿಂಗಳಲ್ಲೇ ರಾಜ್ಯದ ಬೊಕ್ಕಸವನ್ನ ಬರಿದು ಮಾಡಿ ದಿವಾಳಿಯಾಗಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ ದೇವಸ್ಥಾನದ ಅರ್ಚಕರಿಗೆ ನೀಡುವ ಸಂಬಳಕ್ಕೂ ಕತ್ತರಿ ಹಾಕುತ್ತಿದ್ದಾರೆ. ಹಿಂದೂಗಳನ್ನು, ಹಿಂದೂಗಳ ದೇವಸ್ಥಾನಗಳನ್ನು, ಅಲ್ಲಿ ಪೂಜೆ ಮಾಡುವವರನ್ನು ಕಂಡರೆ ನಿಮಗೆ ಯಾಕಿಷ್ಟು ದ್ವೇಷ ಸಿಎಂ ಸಿದ್ದರಾಮಯ್ಯನವರೇ?” ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಮಾತನಾಡಿರುವ ಮಾಜಿ ಸಚಿವ ಕೆಎಸ್ ಈಶ್ವರಪ್ಪ, “ರಾಜ್ಯ ಸರಕಾರ ಹುಚ್ಚು ಸರ್ಕಾರ ಎನ್ನುವುದಕ್ಕೆ ಇದು ಮತ್ತೊಂದು ಉದಾಹರಣೆ. ಚಿಕ್ಕಮಗಳೂರು ದೇವಸ್ಥಾನದ ಅರ್ಚಕ ಹಿರೇಮಗಳೂರು ಕಣ್ಣನ್ ಅವರಿಗೆ 10 ವರ್ಷದ ಸಂಬಳದ ಹಣ ವಾಪಸ್ ಕಟ್ಟುವಂತೆ ಹೇಳಿದೆ. ಇದು ಸುಸಂಸ್ಕೃತ ಅರ್ಚಕರಾದ ಹಿರೇಮಗಳೂರು ಕಣ್ಣನ್ ಅವರಿಗೆ ಮಾಡಿದ ದೊಡ್ಡ ಅಪಚಾರ” ಎಂದು ಕಿಡಿಕಾರಿದ್ದಾರೆ.