ಖಾಸಗಿ ವಲಯದ ಕಂಪನಿಗಳು, ಸಂಸ್ಥೆಗಳಲ್ಲಿ ಕನ್ನಡಿಗರಿಗೆ 75% ಮೀಸಲಾತಿ ಒದಗಿಸುವ ಮಸೂದೆಯನ್ನು ಸಚಿವ ಸಂಪುಟದಲ್ಲಿ ಜುಲೈ 15ರಂದು ರಾಜ್ಯ ಕಾಂಗ್ರೆಸ್ ಸರ್ಕಾರ ಅನುಮೋದಿಸಿತ್ತು. ಆದರೆ, ಇದೀಗ ಮಸೂದೆಯನ್ನು ಸದನದಲ್ಲಿ ಮಂಡಿಸದೆ, ಮಸೂದೆಗೆ ತಡೆಯೊಡ್ಡಿದೆ. ಸರ್ಕಾರ ಎಡಬಿಡಂಗಿ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ‘ಯು-ಟರ್ನ್ ಸರ್ಕಾರ’ ಎಂದು ಟೀಕಿಸಿದೆ.
ಮಸೂದೆಗೆ ತಡೆ ನೀಡಿರುವ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, “ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ಧತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು” ಎಂದು ಹೇಳಿದ್ದಾರೆ.
ಸರ್ಕಾರದ ನಡೆಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, “ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ? ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?
ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ?” ಎಂದು ಟ್ವೀಟ್ ಮಾಡಿದ್ದಾರೆ.
“ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ರಣಹೇಡಿ ನಿರ್ಧಾರವನ್ನು ಸಮಸ್ತ ಕರುನಾಡ ಜನರ ಪರವಾಗಿ ಖಂಡಿಸುವೆ” ಎಂದಿದ್ದಾರೆ.
“ಈ ನೆಲದಲ್ಲಿ ಬದುಕು ಮಾಡುತ್ತ ಕನ್ನಡ ಕಲಿತವರೆಲ್ಲ ಕನ್ನಡಿಗರೇ’ ಎಂದು ಪರಿಗಣಿಸಿ ಈ ನೆಲದ ಮಕ್ಕಳ ಉದ್ಯೋಗದ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಕನ್ನಡಪರ ಹೋರಾಟಗಾರರ ಬಹುದಿನಗಳ ಹೋರಾಟದ ಬೇಡಿಕೆಗೆ ನಿನ್ನೆಯಷ್ಟೇ ‘ಅಸ್ತು‘ ಎಂದು ಹೆಜ್ಜೆ ಇಟ್ಟಿದ್ದ ಸರ್ಕಾರ ದಿನ ಕಳೆಯುವುದರೊಳಗೇ ‘ಸುಸ್ತು’ ಹೊಡೆದಿರುವುದೇಕೆ?” ಎಂದು ಕಿಡಿಕಾರಿದ್ದಾರೆ.
“ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ತಂದದ್ಯಾಕೆ? ತಡೆಹಿಡಿದಿದ್ದೇಕೆ?
ಕನ್ನಡಿಗರ ಬದುಕಿನೊಂದಿಗೆ ಚೆಲ್ಲಾಟವೇಕೆ?
ಅಪಮಾನಿಸಲು ನಿಮಗೆ ಕನ್ನಡಿಗರೇ ಬೇಕಿತ್ತೆ?”ಕನ್ನಡಿಗರಿಗೆ ಉದ್ಯೋಗ ಕೊಡುವ ವಿಧೇಯಕ ದಿಢೀರ್ ತಡೆಹಿಡಿದು ಕನ್ನಡ-ಕನ್ನಡಿಗ-ಕರ್ನಾಟಕವನ್ನು ಅಪಮಾನಿಸಿರುವ ಮುಖ್ಯಮಂತ್ರಿ @siddaramaiah ನವರ ನೇತೃತ್ವದ @INCKarnataka… pic.twitter.com/9hVm9ubH2W
— Vijayendra Yediyurappa (@BYVijayendra) July 18, 2024
“ಮುಖ್ಯಮಂತ್ರಿಗಳು ಮೂರು ಬಾರಿ ‘ಯೂ ಟರ್ನ್ ಹೊಡೆದು’ ಕೊನೆಗೂ ವಿಧೇಯಕ ಸದ್ಯಕ್ಕೆ ಮಂಡಿಸುತ್ತಿಲ್ಲ ಎನ್ನುವ ಅಂಜುಬುರುಕ ನಿರ್ಧಾರದ ಹಿಂದೆ ನಾಡಿನ ಆತ್ಮ ಗೌರವ, ಕನ್ನಡಿಗರ ಸ್ವಾಭಿಮಾನ ಹಾಗೂ ಕನ್ನಡತನವನ್ನು ಹಿಮ್ಮೆಟ್ಟಿಸುವ ಕರ್ನಾಟಕ ವಿರೋಧಿ ಶಕ್ತಿಗಳ ಲಾಬಿ ಮೇಲುಗೈ ಸಾಧಿಸಿರುವಂತಿದೆ” ಎಂದು ವಿಜಯೇಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ.
“ಇಂಡಿ ಕೂಟದಲ್ಲಿ ಯಾವಾಗ ಬಿರುಕು ಮೂಡುತ್ತದೋ ಎಂಬ ಭೀತಿಯಲ್ಲಿರುವ ದೆಹಲಿಯ ದೊಡ್ಡ ‘ಕೈ’ ಮುಖ್ಯಮಂತ್ರಿಗಳ ಕೈ ಕಟ್ಟಿಹಾಕಿರಲೇಬೇಕು, ಇಲ್ಲದಿದ್ದರೇ ಕನ್ನಡಿಗರ ಬದುಕು ಹಸನಾಗಿಸುವ ವಿಧೇಯಕವನ್ನು ಬದಿಗೆ ಸರಿಸುವ ಪಲಾಯನವಾದಿ ನಿರ್ಧಾರ ಕೈಗೊಳ್ಳಲು ಹೇಗೆ ಸಾಧ್ಯ?” ಎಂದಿದ್ದಾರೆ.
“ಸದ್ಯ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿಗಳನ್ನು ಮುತ್ತಿರುವ ಮಹರ್ಷಿ ವಾಲ್ಮೀಕಿ ನಿಗಮ ಹಾಗೂ ಮುಡಾ ಹಗರಣಗಳಿಂದ ತತ್ತರಿಸಿರುವ ಕಾಂಗ್ರೆಸ್ ತನ್ನ ಮುಖ ಮುಚ್ಚಿಕೊಳ್ಳಲು ಹಗರಣದ ಚರ್ಚೆ ಹಾಗೂ ತನಿಖೆಯನ್ನು ದಿಕ್ಕು ತಪ್ಪಿಸಲು ಹಾಗೂ ಜನರ ಗಮನ ವಿಚಲಿತಗೊಳಿಸುವ ಕುತಂತ್ರದಿಂದ ಕನ್ನಡ ಪರ ವಿಧೇಯಕವನ್ನು ತಡೆಹಿಡಿದು ಗುರಾಣಿ ಮಾಡಿಕೊಳ್ಳುವ ಹುನ್ನಾರ ನಡೆಸಿದ್ದರೆ ರಾಜ್ಯದ ಜನತೆ
ಕಾಂಗ್ರೆಸ್ಸಿಗರನ್ನು ಎಂದಿಗೂ ಕ್ಷಮಿಸರು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ವಿಧೇಯಕದ ಕುರಿತು ಮಾಧ್ಯಮಗಳಲ್ಲಿ ಹೆಮ್ಮೆಯಿಂದ ಬೀಗಿದ್ದ ಸಚಿವರುಗಳು ಹಾಗೂ ಕಾಂಗ್ರೆಸ್ ಮುಖಂಡರು ಕೆಲವೇ ಸಮಯದ ಅಂತರದಲ್ಲಿ ನಾಡ ಜನರ ಬಗೆಗಿನ ಐತಿಹಾಸಿಕ ವಿಧೇಯಕ ಹಿಂತೆಗೆದುಕೊಂಡ ಬಗ್ಗೆ ಸಮಸ್ತ ಕನ್ನಡ ಜನತೆಯ ಮುಂದೆ ತಲೆ ಎತ್ತಿ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ” ಎಂದು ಟೀಕಿಸಿದ್ದಾರೆ.
“ಅರ್ಹತೆ ಇದ್ದರೂ ಉದ್ಯೋಗಾವಕಾಶಗಳಿಂದ ವಂಚಿತರಾಗಿ ಹತಾಶೆಗೊಳಗಾಗಿದ್ದ ಗ್ರಾಮೀಣ ಭಾಗದ ಲಕ್ಷಾಂತರ ನಿರುದ್ಯೋಗಿಗಳಿಗೆ ಭರವಸೆಯ ಬೆಳಕು ಮೂಡಿಸಿದ್ದ ಕನ್ನಡಿಗರ ಉದ್ಯೋಗ ಮೀಸಲಾತಿಯ ವಿಧೇಯಕ
ಪ್ರಸಕ್ತ ಅಧಿವೇಶನದಲ್ಲೇ ಸರ್ಕಾರ ಮಂಡಿಸಲಿ, ಇಲ್ಲವೇ ಕನ್ನಡಿಗರ ಆಕ್ರೋಶ ಎದುರಿಸಲು ಸಿದ್ದವಾಗಲಿ” ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಖಾಸಗಿ ಕೈಗಾರಿಕೆಗಳು ಹಾಗೂ ಇತರೆ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿತ್ತು. “ಕನ್ನಡಿಗರು ಕನ್ನಡದ ನೆಲದಲ್ಲಿ ಉದ್ಯೋಗ ವಂಚಿತರಾಗುವುದನ್ನು ತಪ್ಪಿಸಿ, ತಾಯ್ನಾಡಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂಬುದು ನಮ್ಮ ಸರ್ಕಾರದ ಆಶಯ. ನಮ್ಮದು ಕನ್ನಡಪರವಾದ ಸರ್ಕಾರ. ಕನ್ನಡಿಗರ ಹಿತ ಕಾಯುವುದು ನಮ್ಮ ಆದ್ಯತೆಯಾಗಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೊಂಡಿದ್ದರು. ಆದರೆ, ಮೂರೇ ದಿನದಲ್ಲಿ ಯು-ಟರ್ನ್ ಹೊಡೆದಿದ್ದಾರೆ.