- ರಾಜೀವ್ ತಾರಾನಾಥ್ ಅವರಲ್ಲಿ ಕಮಿಷನ್‌ಗಾಗಿ ಬೇಡಿಕೆ ಇಟ್ಟ ಅಧಿಕಾರಿಗಳು
- ಸಾಂಸ್ಕೃತಿಕ ನಗರಿಗೆ ಕಳಂಕ ತರುವ ಕೆಲಸ ಮಾಡಿದರೆ ಕಠಿಣ ಕ್ರಮ: ಮಹದೇವಪ್ಪ
ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, “ಅಧಿಕಾರಿಗಳು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಅವರ ಮೇಲೆ ಕಠಿಣ ಕ್ರಮ ಜರುಗಿಸುತ್ತೇವೆ” ಎಂದಿದ್ದಾರೆ.
“ಸಾಂಸ್ಕೃತಿಕ ಮಹತ್ವವನ್ನು ಹಾಳು ಮಾಡುವ ಇಂತಹ ಸಂಗತಿಗಳನ್ನು ಸಹಿಸುವ ಪ್ರಶ್ನೆಯೇ ಇಲ್ಲ ಹಾಗೂ ನಾಡಹಬ್ಬ ದಸರಾದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಬೇಕು” ಎಂದು ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಏನಿದು ಪ್ರಕರಣ?
ನಾಡಹಬ್ಬ ದಸರಾ ಸಾಂಸ್ಕೃತಿಕ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಅಂತಾರಾಷ್ಟ್ರೀಯ ಖ್ಯಾತಿಯ ಸರೋದ್ ವಾದಕ ಪಂ.ರಾಜೀವ್ ತಾರಾನಾಥ್ ಅವರನ್ನು ಆಹ್ವಾನಿಸಿದ ದಸರಾ ಅಧಿಕಾರಿಗಳು ಸಂಭಾವನೆಯಲ್ಲಿ 3 ಲಕ್ಷ ಕಮಿಷನ್‌ಗೆ ಬೇಡಿಕೆ ಇಟ್ಟ ಆರೋಪ ಕೇಳಿ ಬಂದಿದೆ. ಇದೆ ಕಾರಣಕ್ಕೆ ದಸರಾದಲ್ಲಿ ಅವರ ಕಾರ್ಯಕ್ರಮಕ್ಕೆ ಕತ್ತರಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪಂ.ರಾಜೀವ್ ತಾರಾನಾಥ್, “ಕಮಿಷನ್ ಚಟುವಟಿಕೆಯ ಮೂಲಕ ಕಲಾವಿದರನ್ನು ಶೋಷಣೆ ಮಾಡಲಾಗುತ್ತಿದೆ. ಕಾರ್ಯಕ್ರಮ ನೀಡದಿದ್ದರೂ ಪರವಾಗಿಲ್ಲ ಎಂದು ನಾನು ಇಂತಹ ಕೃತ್ಯಗಳನ್ನು ಪ್ರೋತ್ಸಾಹಿಸಿಲ್ಲ. ಬೇರೆ ರಾಜ್ಯಗಳಲ್ಲಿ ಸ್ಥಳೀಯ ಕಲಾವಿದರನ್ನು ಪ್ರೋತ್ಸಾಹಿಸುವ ವಾಡಿಕೆ ಇದೆ. ಆದರೆ ನಮ್ಮಲ್ಲಿ ಅದಕ್ಕೆ ವಿರುದ್ಧವಾದ ವಾತಾವರಣ ಇದೆ” ಎಂದು ಹೇಳಿದ್ದಾರೆ.
ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಬಳಿಯಲ್ಲಿ ದಸರಾ ಕಾರ್ಯಕ್ರಮ ನೀಡಲು ಹಣಕ್ಕಾಗಿ ಬೇಡಿಕೆ ಇಟ್ಟಿರುವ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಮಾಡಿರುವ ಯಾರೇ ಆಗಿದ್ದರೂ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಿರುತ್ತೇನೆ. pic.twitter.com/i3a0INu8Jd
— Dr H.C.Mahadevappa (@CMahadevappa) October 14, 2023