ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ಮೇ 7 ಮಂಗಳವಾರ ನಡೆಯಲಿದ್ದು, ಭಾನುವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ.
ಮತದಾನ ನಡೆಯುವ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಕೊನೆಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು ಬಹಿರಂಗ ಪ್ರಚಾರ ಮುಗಿಸಿದ್ದಾರೆ. ವಾರಾಂತ್ಯ ಆಗಿದ್ದರಿಂದ ನಿನ್ನೆಯಿಂದಲೇ (ಮೇ 4, ಶನಿವಾರ) ಬಿರುಸಿನ ಪ್ರಚಾರ ಕೈಗೊಂಡಿದ್ದರು.
ನಾಳೆ (ಮೇ 6 ಸೋಮವಾರ) ಅಭ್ಯರ್ಥಿಗಳು ಮನೆ ಮನೆ ಪ್ರಚಾರ ನಡೆಸಲು ಅವಕಾಶ ಇದೆ. ಸಮಾರಂಭ, ಮೆರವಣಿಗೆ, ಧ್ವನಿವರ್ಧಕ ಬಳಕೆ, ಡಿಜಿಟಲ್ ವಿದ್ಯುನ್ಮಾನ ಪ್ರಚಾರ ಮಾಡುವಂತಿಲ್ಲ ಮತ್ತು ಜಾಹಿರಾತುಗಳನ್ನೂ ನೀಡುವಂತಿಲ್ಲ.
ಎಲ್ಲ ಕ್ಷೇತ್ರಗಳಲ್ಲೂ 144ನೇ ಸೆಕ್ಷನ್ ಜಾರಿಯಾಗಲಿದ್ದು, 5 ಜನರಿಗಿಂತ ಹೆಚ್ಚು ಗುಂಪು ಸೇರುವಂತಿಲ್ಲ. ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ಮತದಾನದ ದಿನದಂದು ಸಂತೆ, ಜಾತ್ರೆ ನಡೆಸುವಂತಿಲ್ಲ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಅವರ ಎಲ್ಲ ಸಂಪುಟ ಸಹದ್ಯೋಗಿಗಳು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಉತ್ತರ ಕರ್ನಾಟಕದ 14 ಕ್ಷೇತ್ರಗಳ ಪ್ರಚಾರ ನಡೆಸಿ, ಇಂದು ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಮೂಲಕ ಮತದಾರರಿಗೆ ಸಂದೇಶ ಸಾರಿದರು.
ಇತ್ತ ಪ್ರಚಾರದಲ್ಲಿ ಬಿಜೆಪಿಯೂ ಹಿಂದೆ ಬಿದ್ದಿಲ್ಲ. ಪಕ್ಷದ ವರಿಷ್ಠರಾದ ಬಿ ಎಸ್. ಯಡಿಯೂರಪ್ಪ, ಪಕ್ಷ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮತ್ತಿತರ ಮುಖಂಡರು ಬಿಸಿಲನ್ನೂ ಲೆಕ್ಕಿಸದೆ ಪ್ರಚಾರದಲ್ಲಿ 14 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ನರೇಂದ್ರ ಮೋದಿ ಅವರು ಎರಡು ದಿನ ಪ್ರಚಾರ ನಡೆಸಿದ್ದಾರೆ.
ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯಲುವ 14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಇದ್ದಾರೆ. ಇದರಲ್ಲಿ 1,29,48,928 ಪುರುಷ, 1,29,6,570 ಮಹಿಳಾ ಮತದಾರರು ಸೇರಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿ ಒಟ್ಟು 28,269 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಇಬ್ಬರು ಕೇಂದ್ರ ಸಚಿವರು ಸ್ಪರ್ಧೆಯಲ್ಲಿರುವುದು ವಿಶೇಷ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧಾರವಾಡದಿಂದ ಮತ್ತು ಭಗವಂತ ಖೂಬಾ ಬೀದರ್ ನಿಂದ ಸ್ಪರ್ಧಿಸಿದ್ದಾರೆ. ಹಾವೇರಿಯಿಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಬೆಳಗಾವಿಯಿಂದ ಜಗದೀಶ ಶೆಟ್ಟರ್ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಶಿವಮೊಗ್ಗದಲ್ಲಿ ಬಿಜೆಪಿಯ ಹಾಲಿ ಸಂಸದ ಬಿ.ವೈ ರಾಘವೇಂದ್ರ, ಕಾಂಗ್ರೆಸ್‌ನ ಗೀತಾ ಶಿವರಾಜ್‌ಕುಮಾರ್ ಹಾಗೂ ಬಿಜೆಪಿಯಿಂದ ಬಂಡೆದ್ದು ಸ್ವತಂತ್ರವಾಗಿ ಸ್ಪರ್ಧಿಸಿರುವ ಕೆ.ಎಸ್. ಈಶ್ವರಪ್ಪ ಕಣದಲ್ಲಿ ಉಳಿದಿದ್ದಾರೆ. ಇದು ಬಿಜೆಪಿ ಅಭ್ಯರ್ಥಿಯ ಗೆಲುವಿನ ನಾಗಾಲೋಟಕ್ಕೆ ತೊಡಕಾಗಬಹುದು.
ದಾವಣಗೆರೆಯಲ್ಲೂ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿ.ಬಿ ವಿನಯ್ ಕುಮಾರ್ ಕಾಂಗ್ರೆಸ್ ಪ್ರಯತ್ನಕ್ಕೆ ಅಡ್ಡಗಾಲಾಗಿದ್ದಾರೆ. ಇಲ್ಲಿ ಬಿಜೆಪಿಯಿಂದ ಗಾಯತ್ರಿ ಸಿದ್ಧೇಶ್ವರ್ ಮತ್ತು ಕಾಂಗ್ರೆಸ್ ನಿಂದ ಡಾ. ಪ್ರಭಾ ಮಲ್ಲಿಕಾರ್ಜುನ ಅಭ್ಯರ್ಥಿಗಳಾಗಿದ್ದಾರೆ.
ರಾಜ್ಯ ಕಾಂಗ್ರೆಸ್ ಸಚಿವರ ಮಕ್ಕಳಾದ ಮೃಣಾಳ್ ಹೆಬ್ಬಾಳ್ಕರ್ ಬೆಳಗಾವಿಯಿಂದ, ಚಿಕ್ಕೋಡಿಯಿಂದ ಪ್ರಿಯಾಂಕಾ ಜಾರಕಿಹೊಳಿ, ಬಾಗಲಕೋಟೆಯಿಂದ ಸಂಯುಕ್ತಾ ಪಾಟೀಲ್ ಮತ್ತು ಬೀದರ್ ನಿಂದ ಸಾಗರ್ ಖಂಡ್ರೆ ಅಖಾಡಾದಲ್ಲಿದ್ದಾರೆ.
