ಮುಂದಿನ ವರ್ಷದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ಒಳಗೊಂಡ ವಿರೋಧ ಪಕ್ಷಗಳು ತಮ್ಮದೇ ಆದ ಕಾರ್ಯತಂತ್ರ ರೂಪಿಸಲು ಮುಂದಾಗಿವೆ. ಈ ನಿಟ್ಟಿನಲ್ಲಿ ಇಂದು (ಜೂನ್ 23) ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಬಿಹಾರದ ಪಾಟ್ನಾದಲ್ಲಿ ಸಭೆ ನಡೆಯದೆ.
ಎಲ್ಲ ಪಕ್ಷಗಳು ಒಟ್ಟಾಗಿ ಬಿಜೆಪಿಯನ್ನು ಮಣಿಸಲು ಯೋಜನೆ ರೂಪಿಸುವುದು ಪಾಟ್ನಾ ಸಭೆಯ ಮುಖ್ಯ ಉದ್ದೇಶವಾಗಿದೆ. 2024 ರ ಲೋಕಸಭೆ ಚುನಾವಣೆಗೆ ಒಗ್ಗಟ್ಟನ್ನು ರೂಪಿಸುವ ಗುರಿಯನ್ನು ಹೊಂದಿರುವ ನಿರ್ಣಾಯಕ ಸಭೆಗಾಗಿ ಹಲವು ವಿರೋಧ ಪಕ್ಷದ ನಾಯಕರು ಈಗಾಗಲೇ ಪಾಟ್ನಾಕ್ಕೆ ಆಗಮಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪಕ್ಷದ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಪ್ರತಿಪಕ್ಷಗಳ ಜಂಟಿ ಸಭೆಗಾಗಿ ಪಾಟ್ನಾಕ್ಕೆ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಸಭೆಗೂ ಮುನ್ನ ಇಬ್ಬರೂ ಪಾಟ್ನಾದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಟಿಎಂಸಿ ಯುವ ಕಾಂಗ್ರೆಸ್ ಅಧ್ಯಕ್ಷ ಅಭಿಷೇಕ್ ಬ್ಯಾನರ್ಜಿ ಅವರೊಂದಿಗೆ ಪಾಟ್ನಾ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಎಎಪಿ ಪರವಾಗಿ ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್ ಪಂಜಾಬ್ ಸಿಎಂ ಭಗವಂತ್ ಮಾನ್ ಮತ್ತು ಪಕ್ಷದ ಹಿರಿಯ ನಾಯಕರಾದ ಸಂಜಯ್ ಸಿಂಗ್ ಮತ್ತು ರಾಘವ್ ಚಡ್ಡಾ ಅವರೊಂದಿಗೆ ಆಗಮಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೋದಿಗೆ ಭಾರತದಲ್ಲಿ ಪತ್ರಕರ್ತರ ಮೇಲಿನ ದಬ್ಬಾಳಿಕೆ ನಿಲ್ಲಿಸಲು ಹೇಳಿ: ಬೈಡನ್‌ಗೆ ಸಿಪಿಜೆ ಒತ್ತಾಯ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಪಕ್ಷಗಳ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್, ಟಿಎಂಸಿ, ಎಎಪಿ, ಎನ್‌ಸಿಪಿ, ಶಿವಸೇನೆ (ಯುಬಿಟಿ), ಡಿಎಂಕೆ, ಜೆಎಂಎಂ, ಎಸ್‌ಪಿ, ಪಿಡಿಪಿ, ಸಿಪಿಐ, ಸಿಪಿಎಂ, ಸಿಪಿಐ ಎಂಎಲ್, ಜೆಡಿಯು, ಆರ್‌ಜೆಡಿ ಸೇರಿದಂತೆ 18 ಪಕ್ಷಗಳ ನಾಯಕರು ಪಾಲ್ಗೊಳ್ಳಲಿದ್ದಾರೆ.