ಡಿಸಿಎಂ ಡಿ ಕೆ ಶಿವಕುಮಾರ್ ಅವರ ಮಹತ್ವಾಕಾಂಕ್ಷೆಯ ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ಸದನದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸದನ ಸಮಿತಿ ರಚಿಸುವುದಾಗಿ ಡಿ ಕೆ ಶಿವಕುಮಾರ್ ತಿಳಿಸಿದರು.
ಗುರುವಾರದ ಅಧಿವೇಶನದಲ್ಲಿ ಡಿ ಕೆ ಶಿವಕುಮಾರ್ ಮಾತನಾಡಿ, “ಬೆಂಗಳೂರಿಗೆ ಆರ್ಥಿಕ ಶಕ್ತಿ ಕೊಡಬೇಕಿದೆ. ಹೀಗಾಗಿ ಗ್ರೇಟರ್ ಬೆಂಗಳೂರು ಮಸೂದೆ ಬಗ್ಗೆ ಬೆಳಕು ಚೆಲ್ಲಬೇಕಿದೆ. ಹಾಗಾಗಿ ಚರ್ಚೆಗೆ ಅವಕಾಶ ಕೊಡಬೇಕು” ಎಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.
ಸಭಾಧ್ಯಕ್ಷ ಯು ಟಿ ಖಾದರ್ ಅವರು ಡಿ ಕೆ ಶಿವಕುಮಾರ್ಗೆ ಅವಕಾಶ ಮಾಡಿಕೊಟ್ಟರು. ಗ್ರೇಟರ್ ಬೆಂಗಳೂರು ವಿಧೇಯಕವನ್ನು ಉಪಮುಖ್ಯಮಂತ್ರಿಗಳು ಮಂಡಿಸಿದರು. ಆದರೆ ಇದಕ್ಕೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಯಿತು.
“ಈ ವಿಧೇಯಕದ ಬಗ್ಗೆ ಸುದೀರ್ಘ ಚರ್ಚೆ ನಡೆಸಬೇಕಾಗಿದೆ. ಹಾಗಾಗಿ ಇವಾಗ ಪರ್ಯಾಲೋಚನೆ ಮಾಡಬಾರದು. ಇದಕ್ಕೆ ಒಂದು ಸದನ ಸಮಿತಿಯನ್ನು ರಚಿಸಬೇಕು. ಸಮಗ್ರವಾಗಿ ಇದರ ಬಗ್ಗೆ ಚರ್ಚೆಯಾಗಬೇಕು” ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಿರೋಧ ವ್ಯಕ್ತಪಡಿಸಿದರು.
“ಮಸೂದೆಗೆ ವಿರೋಧ ಬಂದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ವಿಧೇಯಕದ ಬಗ್ಗೆ ಸುದೀರ್ಘ ಚರ್ಚೆ ನಡೆಸಲು ಸದನ ಸಮಿತಿ ರಚನೆಗೆ ಒಪ್ಪಿಗೆ ಇದೆ” ಎಂದು ಡಿ ಕೆ ಶಿವಕುಮಾರ್ ಹೇಳಿದರು.