ಕಳೆದ ಕೆಲವು ದಿನಗಳಿಂದ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಎಂಬ ವಿಷಯ ಸಾಮಾಜಿಕ ಜಾಲತಾಣವೂ ಸೇರಿದಂತೆ ಎಲ್ಲ ಕಡೆ ಪರ ವಿರೋಧ ಚರ್ಚೆಯಾಗುತ್ತಿದೆ. ವಿಧಾನಸಭಾ ಮುಂಗಾರು ಅಧಿವೇಶನ ಆರಂಭವಾದ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ಎಕ್ಸ್ ಖಾತೆಯಲ್ಲಿ ʼರಾಜ್ಯದ ಖಾಸಗಿ ಕೈಗಾರಿಕೆಗಳು ಮತ್ತು ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಆಡಳಿತಾತ್ಮಕ ಹುದ್ದೆಗಳಿಗೆ ಶೇ.50 ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಶೇ.75 ಮೀಸಲಾತಿ ನಿಗದಿಪಡಿಸುವ ವಿಧೇಯಕಕ್ಕೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ ಎಂದು ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು.
ಈ ಪೋಸ್ಟ್ ಹಾಕಿದ ಕೆಲವೇ ಸಮಯದಲ್ಲಿ ಆ ಸಂದೇಶವನ್ನು ಅಳಿಸಿ ಹಾಕಿ, ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ಜಾರಿಗೆ ತರಲು ಉದ್ದೇಶಿಸಿದ್ದ ವಿಧೇಯಕವು ಇನ್ನೂ ಸಿದ್ದತೆಯ ಹಂತದಲ್ಲಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಹೊಸ ಪೋಸ್ಟ್ ಹಾಕಿದ್ದರು.
ಮುಖ್ಯಮಂತ್ರಿಯವರು ಅಳಿಸಿ ಹಾಕಿದ ಟ್ವೀಟ್ ಜನರ ತಲೆಯಿಂದ ಹೊರ ಹೋಗುವ ಬದಲಿಗೆ ತೀವ್ರ ಚರ್ಚೆಗೆ ಕಾರಣವಾಯಿತು. ಅಷ್ಟೇ ಅಲ್ಲದೇ ರಾಜ್ಯ ಸರ್ಕಾರವು ಕೆಲವು ಖಾಸಗಿ ಕಂಪನಿಗಳ ಒತ್ತಡಕ್ಕೆ ಮಣಿದು ಈ ಮಸೂದೆಗೆ ತಾತ್ಕಾಲಿಕ ತಡೆ ನೀಡಿದೆ ಎಂದು ವಿಶ್ಲೇಷಿಸಲಾಯಿತು.
ಕನ್ನಡಿಗರಿಗೆ ಖಾಸಗಿ ಕಂಪನಿಗಳ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸುವ ವಿಧೇಯಕದ ಬಗ್ಗೆ ಸಚಿವ ಸಂಪುಟದಲ್ಲಿ ಸಮಗ್ರವಾದ ಚರ್ಚೆ ಇನ್ನೂ ನಡೆದಿಲ್ಲ. ಮತ್ತೆ ಸಂಪುಟದ ಮುಂದಿಟ್ಟು ಕೂಲಂಕಷವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಕೊಂಚ ಗೊಂದಲ ಉಂಟಾಗಿತ್ತು, ಮುಂದಿನ ದಿನಗಳಲ್ಲಿ ಈ ಗೊಂದಲಗಳನ್ನು ನಿವಾರಣೆ ಮಾಡಲಾಗುವುದು.… pic.twitter.com/j87VCki37M
— Siddaramaiah (@siddaramaiah) July 18, 2024
ಅದಕ್ಕೆ ಪೂರಕವಾಗಿ ಮೋಹನ್ ದಾಸ್ ಪೈ, ಸಮೀರ್ ನಿಗಮ್, ಕಿರಣ್ ಮಜುಂದಾರ್ ಶಾ ರಂತಹ ಕೆಲವು ಉದ್ಯಮಿಗಳು ಈ ಮಸೂದೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದರು. ಈ ಉದ್ಯಮಿಗಳ ನಡೆಗೆ ಸ್ವಾಭಿಮಾನಿ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತಪಡಿಸಿದರು. ಫೋನ್ ಪೇ ಸಿಇಒ ಸಮೀರ್ ನಿಗಮ್ ವಿರುದ್ಧ ‘#boycott phonepe’, ‘#uninstallPhonepe’ ಹ್ಯಾಷ್‌ಟ್ಯಾಗ್‌ಗಳು ಟ್ರೆಂಡ್ ಆದವು. ನಂತರದಲ್ಲಿ ಸಮೀರ್ ನಿಗಮ್ ರವರು ಕನ್ನಡಿಗರಲ್ಲಿ ಕಾಟಾಚಾರಕ್ಕೆಂದು ಕ್ಷಮೆ ಕೇಳಿದರು. ಇನ್ನೂ ಕೆಲವು ಕನ್ನಡ ಪರ ಹೋರಾಟಗಾರರು ಕಿರಣ್ ಮಜುಂದಾರ್ ಶಾ ಅಧ್ಯಕ್ಷತೆಯ ಬಯೋಕಾನ್ ಕಂಪನಿಯ ಹೆಸರಿಗೆ ಮಸಿ ಬಳಿದು ಆಕ್ರೋಶ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಕಿಚ್ಚು ಹಚ್ಚಿರುವ ‘ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ವಿಧೇಯಕ’ದಲ್ಲಿ ಏನಿದೆ? ಇಂತಹದ್ದೊಂದು ಮಸೂದೆ ಬೇರೆ ಎಲ್ಲಿ ಜಾರಿಯಲ್ಲಿದೆ? ಅಷ್ಟಕ್ಕೂ ಈ ಕಾನೂನು ಜಾರಿಯಾಗಲು ಸಾಧ್ಯವೇ? ಎಂಬುದನ್ನು ತಿಳಿಯೋಣ;
ಈ ಕಾಯ್ದೆಯ ಪೂರ್ತಿ ಹೆಸರು – ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ-2024.
ಈ ಮಸೂದೆ ಏನು ಹೇಳುತ್ತದೆ?
- ಈ ಮಸೂದೆಯ ಪ್ರಕಾರ ಕೈಗಾರಿಕೆಗಳು,ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಶೇ.50 ಆಡಳಿತಾತ್ಮಕ ಹುದ್ದೆಗಳು ಮತ್ತು ಶೇ.75 ಆಡಳಿತಾತ್ಮಕವಲ್ಲದ ಹುದ್ದೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳನ್ನು ನೇಮಿಸಬೇಕು.
- ಕರ್ನಾಟಕದಲ್ಲಿರುವ ಖಾಸಗಿ ವಲಯದ ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ.100 ಮೀಸಲಾತಿಯನ್ನು ಈ ಮಸೂದೆ ಅನುಮೋದಿಸುತ್ತದೆ.
ಈ ಮೀಸಲಾತಿಯ ಫಲಾನುಭವಿಯಾಗಲು ಬೇಕಾಗಿರುವ ಅರ್ಹತಾ ಮಾನದಂಡಗಳೇನು?
- ಕರ್ನಾಟಕದದಲ್ಲಿ ಹುಟ್ಟಿರಬೇಕು.
- ಕನಿಷ್ಠ 15 ವರ್ಷಗಳ ಕಾಲ ಕರ್ನಾಟಕದಲ್ಲಿ ನೆಲೆಸಿರಬೇಕು ಮತ್ತು ಕನ್ನಡವನ್ನು ಮಾತನಾಡಲು, ಓದಲು ಮತ್ತು ಬರೆಯಲು ಸಮರ್ಥರಾಗಿರಬೇಕು.
- ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಅಧ್ಯಯನ ಮಾಡಿರುವ ಪ್ರಮಾಣ ಪತ್ರ ಪಡೆದಿರಬೇಕು. ಅಥವಾ ನೋಡಲ್ ಏಜೆನ್ಸಿಗಳು ನಡೆಸುವ ಕನ್ನಡ ಪ್ರಾವೀಣ್ಯತೆಯ ಪರೀಕ್ಷೆಯಲ್ಲಿ ತೇರ್ಗಡೆಯಾಗಬೇಕು.
ಒಂದು ವೇಳೆ ಅರ್ಹ ಸ್ಥಳೀಯ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ 3 ವರ್ಷಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಸಂಸ್ಥೆಗಳು ಸರ್ಕಾರದೊಂದಿಗೆ ಸಹಕರಿಸಬೇಕು. ಈ ಕಾನೂನನ್ನು ಉಲ್ಲಂಘನೆ ಮಾಡಿದರೆ 10,000ರಿಂದ 25,000 ವರೆಗೆ ದಂಡ ವಿಧಿಸಬಹುದು.
ಇದಿಷ್ಟು ಮಸೂದೆ ಬಗ್ಗೆ. ಇನ್ನು ಈ ಮಸೂದೆ ಹುಟ್ಟಿಕೊಂಡಿದ್ದು ಇತ್ತೀಚೆಗಾ ಅಂತ ನೋಡಿದ್ರೆ, ಇಲ್ಲ. ಈ ಹಿಂದೆ ಅಂದ್ರೆ 1984ರಲ್ಲಿಯೇ ಈ ಬಗ್ಗೆ ಚರ್ಚೆ ನಡೆದಿತ್ತು. ಅದೂ ಕರ್ನಾಟಕದಲ್ಲಿಯೇ ಅನ್ನೋದು ವಿಶೇಷ. ಈ ಮಸೂದೆಗೆ ಮೂಲ ಕಾರಣವಾದಂತಹ ಐತಿಹಾಸಿಕ ಸರೋಜಿನಿ ಮಹಿಷಿ ವರದಿಯ ಬಗ್ಗೆ ಸ್ಲಲ್ಪ ತಿಳಿಯೋಣ ಬನ್ನಿ…
ಕರ್ನಾಟಕದಲ್ಲಿ ಸಾಕಷ್ಟು ಕೇಂದ್ರೋದ್ಯಮಗಳು, ಸಾರ್ವಜನಿಕ ಹಾಗು ಖಾಸಗಿ ಉದ್ಯಮಗಳಿದ್ದರೂ ಕನ್ನಡಿಗರಿಗೆ ಸೂಕ್ತ ಪ್ರಮಾಣದಲ್ಲಿ ಉದ್ಯೋಗಗಳು ದೊರೆಯುತ್ತಿರಲಿಲ್ಲ, ಇದು ಸ್ವಾತಂತ್ರ್ಯಪೂರ್ವದಿಂದಲೂ ಇರುವಂತಹ ಸ್ಥಿತಿ. ಇದನ್ನು ಮನಗಂಡ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಸರ್ಕಾರವು ರಾಜ್ಯದಲ್ಲಿ ಕನ್ನಡಿಗರ ಉದ್ಯೋಗ ಸಮಸ್ಯೆಯ ಸ್ವರೂಪನ್ನು ಅಧ್ಯಯನ ಮಾಡಿ ಪರಿಹಾರ ಮಾರ್ಗಗಳನ್ನು ಸೂಚಿಸಿ ವರದಿ ಸಲ್ಲಿಸಲು ಕರ್ನಾಟಕದ ಪ್ರಥಮ ಮಹಿಳಾ ಸಂಸದೆಯಾದ ಸರೋಜಿನಿ ಬಿಂದುರಾವ್ ಮಹಿಷಿಯವರ ಅಧ್ಯಕ್ಷತೆಯಲ್ಲಿ 25/01/1984 ರಂದು ಸಮಿತಿ ರಚನೆ ಮಾಡಿತು. ಈ ಸಮಿತಿಯು ತನ್ನ ಅಂತಿಮ ವರದಿಯನ್ನು 30/12/1986 ರಂದು ಸರ್ಕಾರಕ್ಕೆ ಸಲ್ಲಿಸಿತು, ಅದು ಒಟ್ಟಾರೆ 58 ಶಿಫಾರಸ್ಸುಗಳನ್ನು ಹೊಂದಿತ್ತು. ಇದರಲ್ಲಿ ಸರ್ಕಾರ 45 ಶಿಫಾರಸ್ಸುಗಳಿಗೆ ಒಪ್ಪಿಗೆ ನೀಡಿತ್ತು ಆದರೆ ಪ್ರಮುಖ ಶಿಫಾರಸುಗಳಲ್ಲಿ ಒಂದಾದ ಸರಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದಿಲ್ಲ.
ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸುಗಳು
- ʼಸ್ಥಳೀಯರಿಗೆ ಉದ್ಯೋಗʼ ಎಂಬುದಕ್ಕೆ ತಾತ್ವಿಕ ನೆಲೆಯನ್ನು ಒದಗಿಸಿ ಕರ್ನಾಟಕದಲ್ಲಿ ಹೆಚ್ಚಿನ ಉದ್ಯೋಗವನ್ನು ಸ್ಥಳೀಯರಿಗೆ ಅಂದರೆ ಕನ್ನಡಿಗರಿಗೆ ಮೀಸಲಿಡಬೇಕು.
- ರಾಜ್ಯದ ಎಲ್ಲ ಸರ್ಕಾರಿ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ.
- ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇಂದ್ರ ಸರ್ಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ(PSU) ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಕನ್ನಡಿಗರಿಗೆ ಶೇ.100 ಮೀಸಲಾತಿ.
- ಕರ್ನಾಟಕದಲ್ಲಿ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಮತ್ತು ಸಾರ್ವಜನಿಕ ವಲಯ ಘಟಕಗಳಲ್ಲಿ ಗ್ರೂಪ್ ಬಿ ಮತ್ತು ಗ್ರೂಪ್ ಎ ಹುದ್ದೆಗಳಲ್ಲಿ ಕ್ರಮವಾಗಿ ಶೇಕಡಾ 80ರಷ್ಟು ಮತ್ತು ಶೇಕಡಾ 65ರಷ್ಟು ಕನ್ನಡಿಗರಿಗೆ ಮೀಸಲು ಇಡಬೇಕು.
ಕಾಯ್ದೆ ಯಾಕೆ ಜಾರಿಗೆ ಬಂದಿಲ್ಲ? ಇದಕ್ಕಿದ್ದ ಕಾನೂನು ತೊಡಕುಗಳೇನು?
ಇಂತಹ ಕಾನೂನನ್ನು ಜಾರಿ ಮಾಡಲು ಹೊರಟಿರುವುದು ಕರ್ನಾಟಕ ಮಾತ್ರವಲ್ಲ. ಹರಿಯಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ಜಾರ್ಖಂಡ್‌ನಂತಹ ರಾಜ್ಯಗಳು ಖಾಸಗಿ ವಲಯದಲ್ಲಿ ತಮ್ಮ ಸ್ಥಳೀಯ ನಿವಾಸಿಗಳಿಗೆ ಮೀಸಲಾತಿಯನ್ನು ಒದಗಿಸುವ ಇದೇ ರೀತಿಯ ಕಾನೂನುಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಹೆಚ್ಚಿನ ಕಾನೂನುಗಳನ್ನು ನ್ಯಾಯಾಲಯಗಳು ಅಸಂವಿಧಾನಿಕವೆಂದು ಪರಿಗಣಿಸಿದ್ದು, ಈವರೆಗೂ ಈ ಕಾನೂನು ಎಲ್ಲಿಯೂ ಸಮರ್ಪಕವಾಗಿ ಜಾರಿಯಾಗಿಲ್ಲ.
ಈಗ ಕರ್ನಾಟಕ ಸರ್ಕಾರವು ಈ ಕಾನೂನನ್ನು ಜಾರಿಗೊಳಿಸಿದರೂ ಸಹ, ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ, 2024 ಸಾಂವಿಧಾನಿಕ ಆಧಾರದ ಮೇಲೆ ಸಂಭಾವ್ಯವಿರುವ ಕಾನೂನು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ರಾಜ್ಯ ಸರ್ಕಾರ ಕಾನೂನಿನ ತೊಡಕನ್ನು ನಿವಾರಿಸಿಕೊಂಡು ಈ ಕಾಯ್ದೆಯನ್ನು ಜಾರಿ ಮಾಡುತ್ತದೆಯೇ ಕಾದು ನೋಡಬೇಕು.
ಆದರೆ, ಇದಿಷ್ಟೆನಾ? ಈ ಸಮಸ್ಯೆಗೆ ಮೂಲ ಕಾರಣ ಏನು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳದಿದ್ದಲ್ಲಿ ಇಡೀ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಹ್ಹಾ ನೀವು ಒಂದೇ ಮಾತಿನಲ್ಲಿ ನಿರುದ್ಯೋಗ ಹೆಚ್ಚುತ್ತಿದೆ. ಉದ್ಯೋಗ ಸೃಷ್ಟಿ ಆಗ್ದೆ ಇರೋದೆ ಇದಕ್ಕೆಲ್ಲ ಕಾರಣ ಅಂತ ಹೇಳಬಹುದು. ಹೌದು. ನಿರುದ್ಯೋಗವೇ ಈ ಸಮಸ್ಯೆಗೆ ಕಾರಣ. ಆದರೆ, ಬರೀ ಮೀಸಲಾತಿಯಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ ಎಂದರೆ ಇಲ್ಲ. ವರ್ಷದಿಂದ ವರ್ಷಕ್ಕೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಗ್ಗಂಟಾಗುತ್ತಿದೆ. ಉದ್ಯೋಗ ಸೃಷ್ಟಿ ಬಗ್ಗೆ ಚಿಂತಿಸಬೇಕಿದ್ದ ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ವರ್ತಿಸುತ್ತಿವೆ.
ಇನ್ನು ನಾವು ವಲಸಿಗರು ಹೆಚ್ಚಾಗುತ್ತಿರೋದ್ರಿಂದಲೇ ನಮಗೆ ಕೆಲಸ ಸಿಗ್ತಿಲ್ಲ ಅಂತ ವಲಸಿಗರನ್ನೇ ವೈರಿಗಳಂತೆ ನೋಡಲಾಗ್ತಿದೆ. ವಾಸ್ತವದಲ್ಲಿ ನಾವು, ನೀವು ಹಾಗೆಯೇ ಉದ್ಯೋಗ ಹರಸಿ ಮನೆ, ಕುಟುಂಬ ಊರು ಬಿಟ್ಟು ಯಾವುದೋ ಗೊತ್ತಿಲ್ಲದ ಊರು, ಅರ್ಥವಾಗದ ಭಾಷೆ ಮಾತಾಡೊ ಊರಲ್ಲಿ ಬದುಕುತ್ತಿರೋ ವಲಸಿಗರು ಎಲ್ಲರೂ ಈ ವ್ಯವಸ್ಥೆಯ ಬಲಿಪಶುಗಳೇ.
ಈ ವಲಸೆ ಎಂಬುದು ಕೇವಲ ಭಾರತದಲ್ಲಿನ ಸಮಸ್ಯೆಯಾಗಿಲ್ಲ ಪ್ರಪಂಚದಾದ್ಯಂತ ಬಡ ದೇಶದ ಜನರು ಶ್ರೀಮಂತ ದೇಶಗಳಿಗೆ ವಲಸೆ ಹೋಗಿ ಅಲ್ಲಿ ಕಡಿಮೆ ಸಂಬಳಕ್ಕೆ ದುಡಿಮೆ ಮಾಡುವುದು ಹೊಸತೇನು ಅಲ್ಲ. ಇನ್ನು ದೇಶ ದೇಶಗಳ ನಡುವಿನ ವಲಸೆ ಮತ್ತು ದೇಶದ ಒಳಗೆ ನಡೆಯುವಂತಹ ವಲಸೆಗಳ ಬಗ್ಗೆ ಖ್ಯಾತ ಅರ್ಥಶಾಸ್ತ್ರಜ್ಞರಾದ ನೋಬಲ್ ಪ್ರಶಸ್ತಿ ವಿಜೇತರಾದ ಅಭಿಜಿತ್ ಬ್ಯಾನರ್ಜಿ ಮತ್ತು ಎಸ್ತರ್ ಡಫ್ಲೋ ರವರು Good Economics for Hard Times: Better Answers to Our Biggest Problems ಎಂಬ ಪುಸ್ತಕದಲ್ಲಿ MIGRATION ಅಂದರೆ ವಲಸೆಯ ಬಗ್ಗೆ ಹಲವು ಅಧ್ಯಯನಗಳನ್ನು ಮಾಡಿದ್ದು ಜನರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಲಸೆ ಹೋಗುವುದರಿಂದ ಅಲ್ಲಿನ ಆರ್ಥಿಕತೆಗೆ ಒಳ್ಳೆಯದೇ ಆಗುತ್ತದೆ ಮತ್ತು ಅಲ್ಲಿನ ಸ್ಥಳೀಯರಿಗೆ ಉದ್ಯೋಗದಲ್ಲಿ ಉನ್ನತ ಹುದ್ದೆಗಳು ದೊರೆತಿವೆ ಹಾಗೂ ಅವರ ವ್ಯವಹಾರಗಳಲ್ಲಿಯೂ ಕೂಡ ಅಭಿವೃದ್ದಿಯಾಗಿದೆ ಎಂದು ಅಭಿಪ್ರಾಯ ಪಡುತ್ತಾರೆ.
ಕೊನೆಯಾದಾಗಿ ಈ ಗಂಭೀರವಾದ ಸಮಸ್ಯೆಗೆ ಪರಿಹಾರವಿಲ್ಲವೇ ಎಂದು ಕೇಳಿದರೆ ಖಂಡಿತ ಇದೆ ಅದಕ್ಕಾಗಿ ಕೇಂದ್ರ ಸರ್ಕಾರವು ಇದರ ಬಗ್ಗೆ ಸೂಕ್ತವಾದ ಉದ್ಯೋಗ ನೀತಿಯನ್ನು ರೂಪಿಸಬೇಕು, ಸ್ಥಳೀಯ ಉದ್ಯೋಗ ಸೃಷ್ಟಿಯ ಬಗ್ಗೆ ಗಮನ ಹರಿಸಬೇಕು. ವಲಸೆ ಕಾರ್ಮಿಕರಿಗೆ ಅವರ ರಾಜ್ಯದಲ್ಲಿಯೇ ಉತ್ತಮ ಸಂಬಳದ ಕೆಲಸಗಳು ಸಿಗುವಂತೆ ಮಾಡಿ ಆ ಕೆಲಸಕ್ಕೆ ತಕ್ಕ ಕನಿಷ್ಠ ಕೂಲಿಯನ್ನು ನಿಗದಿ ಮಾಡಬೇಕು ಅದು ಕಾರ್ಮಿಕರಿಗೆ ದಕ್ಕುವಂತೆ ಮಾಡಿದರೆ ಅವರು ಅಲ್ಲಿಯೇ ಕೆಲಸ ಮಾಡುತ್ತಾರೆ.
2019ರಲ್ಲಿ ಪ್ರತಿ ವರ್ಷ 1 ಕೋಟಿ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತೀವಿ ಅಂತ ಹೇಳಿ ಅಧಿಕಾರಕ್ಕೆ ಬಂದಿದ್ದ ಮೋದಿ ಸರ್ಕಾರವು ಯಾವುದೇ ಉದ್ಯೋಗ ನೀಡದೆ ಪಕೋಡ ಮಾರಿ ಎಂದು ಹೇಳಿದ್ದರು. ಈಗ ಮತ್ತೆ ಕೇಂದ್ರದಲ್ಲಿರುವ ಮೋದಿ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನಿನ್ನೆಯ ತಮ್ಮ ಬಜೆಟ್ ನಲ್ಲಿ 1 ಕೋಟಿ ಅಪ್ರೆಂಟಿಸ್ ಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ, ಕೇವಲ ಅಪ್ರೆಂಟಿಸ್ ನೀಡಿದರೆ ಕೆಲಸಗಳನ್ನು ನೀಡುವವರು ಯಾರು? ಇದು ಹೀಗೆಯೇ ಮುಂದುವರಿಯುತ್ತಾ ಹೋದರೆ ದೇಶದಲ್ಲಿ ನಿರುದ್ಯೋಗವು ಅತಿ ದೊಡ್ಡ ಪಿಡುಗಾಗುತ್ತದೆ ಅಲ್ಲವೇ?