ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ಜುಲೈ 22ರಿಂದ ನಡೆಯುವ ಕಾವಡ್ ಯಾತ್ರೆ ನಡೆಯಲಿದೆ. ಯಾತ್ರೆ ನಡೆಯುವ ಮಾರ್ಗದುದ್ದಕ್ಕೂ ತಿನಿಸುಗಳ ಮಾರಾಟ ಮಳಿಗಗಳ ಮಾಲೀಕರು ತಮ್ಮ ಹೆಸರುಗಳನ್ನು ಮಳಿಗೆಗಳ ಎದುರು ಪ್ರದರ್ಶಿಸಬೇಕು ಎಂದು ಪೊಲೀಸರು ಆದೇಶಿಸಿದ್ದಾರೆ. ಈ ಆದೇಶವನ್ನು ಖಂಡಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ‘ಇದು ಸಂವಿಧಾನಕ್ಕೆ ವಿರುದ್ಧವಾಗಿದ್ದು, ಸಂವಿಧಾನದ ಮೇಲಿನ ದಾಳಿಯಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಿಯಾಂಕಾ, “ಸಮಾಜದಲ್ಲಿ ಜಾತಿ – ಧರ್ಮದ ಆಧಾರದ ಮೇಲೆ ವಿಭಜನೆ ಸೃಷ್ಟಿಸುವುದು ಸಂವಿಧಾನಬಾಹಿರವೂ, ಅಪರಾಧವೂ ಆಗಿದೆ. ಸರ್ಕಾರವು ಈ ಆದೇಶವನ್ನು ತಕ್ಷಣವೇ ಹಿಂಪಡೆಯಬೇಕು. ಆದೇಶ ಹೊರಡಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು” ಎಂದು ಒತ್ತಾಯಿಸಿದ್ದಾರೆ.
“ನಮ್ಮ ಸಂವಿಧಾನವು ಪ್ರತಿಯೊಬ್ಬ ಪ್ರಜೆಗೂ ಜಾತಿ, ಧರ್ಮ, ಭಾಷೆ ಅಥವಾ ಇನ್ನಾವುದೇ ಆಧಾರದ ಮೇಲೆ ತಾರತಮ್ಯ ಮಾಡಬಾರದು ಎಂದು ಖಾತರಿಪಡಿಸುತ್ತದೆ. ಉತ್ತರ ಪ್ರದೇಶದಲ್ಲಿ ತಳ್ಳುಗಾಡಿಗಳು, ಗೂಡಂಗಡಿಗಳು ಹಾಗೂ ಅಂಗಡಿಗಳ ಮಾಲೀಕರ ಹೆಸರುಳ್ಳ ಫಲಕಗಳನ್ನು ಹಾಕಬೇಕೆಂಬ ವಿಭಜನೆಯ ಆದೇಶವು ನಮ್ಮ ಸಂವಿಧಾನ, ನಮ್ಮ ಪ್ರಜಾಪ್ರಭುತ್ವ ಮತ್ತು ನಮ್ಮ ಬಹುತ್ವದ ಪರಂಪರೆಯ ಮೇಲಿನ ದಾಳಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
हमारा संविधान हर नागरिक को गारंटी देता है कि उसके साथ जाति, धर्म, भाषा या किसी अन्य आधार पर भेदभाव नहीं होगा।
उत्तर प्रदेश में ठेलों, खोमचों और दुकानों पर उनके मालिकों के नाम का बोर्ड लगाने का विभाजनकारी आदेश हमारे संविधान, हमारे लोकतंत्र और हमारी साझी विरासत पर हमला है।
समाज…
— Priyanka Gandhi Vadra (@priyankagandhi) July 19, 2024
ಧಾರ್ಮಿಕ ಯಾತ್ರೆಯ ಸಮಯದಲ್ಲಿ ಅಂಗಡಿಗಳ ಮಾಲೀಕರು ತಮ್ಮ ಹೆಸರುಳ್ಳು ಫಲಕಗಳನ್ನು ಹಾಕುವಂತೆ ಆದೇಶಿಸಿರುವ ಮುಜಫರ್‌ನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್, “ಕಾವಡ್ ಯಾತ್ರೆಗೆ ಸಿದ್ಧತೆಗಳು ಪ್ರಾರಂಭವಾಗಿವೆ. ನಮ್ಮ ಸುಮಾರು 240 ಕಿ.ಮೀ ವ್ಯಾಪ್ತಿಯಲ್ಲಿ, ಎಲ್ಲ ತಿನಿಸುಗಳು, ಹೋಟೆಲ್‌ಗಳು, ಧಾಬಾಗಳು ಮತ್ತು ಬೀದಿಬದಿ ತಳ್ಳು ಗಾಡಿಗಳ ಮಾಲೀಕರು ತಮ್ಮ ಹೆಸರುಗಳನ್ನು ಅಂಗಡಿಗಳ ಮುಂದೆ ಪ್ರದರ್ಶಿಸಲು ಸೂಚಿಸಲಾಗಿದೆ. ಕಾವಡ್ ಯಾತ್ರೆಯಲ್ಲಿ ಭಾಗವಹಿಸುವವರಿಗೆ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳಲು ಇದನ್ನು ಮಾಡಲಾಗುತ್ತಿದೆ. ಹೀಗೆ ಮಾಡುವುದರಿಂದ, ಮುಂದಿನ ದಿನಗಳಲ್ಲಿ ಯಾವುದೇ ಆಪರಾಧಗಳು ಉದ್ಭವಿಸುವುದಿಲ್ಲ. ಇದು ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ನೆರವಾಗುತ್ತದೆ” ಎಂದು ಹೇಳಿದ್ದಾರೆ.
ಪೊಲೀಸರ ಕ್ರಮವನ್ನು ಖಂಡಿಸಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, “ಮುಸ್ಲಿಂ ಮಾಲೀಕರ ಅಂಗಡಿಯಿಂದ ಯಾವುದೇ ‘ಕಾವಡ್’ ಯಾತ್ರೆಯಲ್ಲಿ ಭಾಗಿಯಾಗುವವರು ಯಾವುದೇ ಪದಾರ್ಥವನ್ನು ಖರೀದಿಸಬಾರದು ಎಂಬುದನ್ನು ಖಾತ್ರಿಪಡಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ” ಎಂದು ಆರೋಪಿಸಿದ್ದಾರೆ.