ನಮ್ಮ ಸಚಿವರು | ಕೆ ಎನ್ ರಾಜಣ್ಣ: ಅಭಿವೃದ್ಧಿಯಲ್ಲಿ ಜೋರು; ಬಾಯಿಬಡುಕತನದಲ್ಲಿ ಇನ್ನೂ ಜೋರು!

Date:

Advertisements
ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಹೇಗೆ ಮಾತಾಡಬೇಕು ಎನ್ನುವ ಮೂಲಭೂತ ವಿಚಾರವನ್ನು ಸಚಿವ ಕೆ ಎನ್ ರಾಜಣ್ಣ ಮರೆತಂತೆ ಕಾಣುತ್ತದೆ. ಎಚ್ ವಿಶ್ವನಾಥ ಕೂಡ ಇದೇ ರೀತಿ ಬಾಯಿಬಡುಕತನದಿಂದ ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡರು ಎನ್ನುವುದನ್ನು ಮಂತ್ರಿಯಾದ ರಾಜಣ್ಣ ನೆನಪಿಟ್ಟುಕೊಳ್ಳಬೇಕಾಗಿದೆ.

ಕೆ ಎನ್ ರಾಜಣ್ಣ ಅಂದುಕೊಂಡಂತೆಯೇ ಆಗಿದೆ. ಸಿದ್ದರಾಮಯ್ಯ ಸಂಪುಟದಲ್ಲಿ ಅವರು ಸಹಕಾರ ಸಚಿವರಾಗಿದ್ದಾರೆ. ಚುನಾವಣೆಗೆ ಮುಂಚೆ ನಮ್ಮ ಸರ್ಕಾರ ಬಂದರೆ ನಾನು ಸಚಿವನಾಗುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿದಿದ್ದ ಅವರು ಅದರಂತೆಯೇ ಮಂತ್ರಿಗಿರಿ ಪಡೆದಿದ್ದಾಗಿದೆ. ಹಾಗೆ ಪಡೆಯುವ ಮುನ್ನ ಅವರು, ಎಂದಿನಂತೆ, ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದೂ ಆಗಿದೆ.

ತುಮಕೂರಿನ ಕ್ಯಾತಸಂದ್ರದ ಪರಿಶಿಷ್ಟ ಪಂಗಡ ಸಮುದಾಯದ ರಾಜಣ್ಣ, ಪಟ್ಟಣ ಪಂಚಾಯಿತಿಯಿಂದ ರಾಜಕೀಯ ಜೀವನ ಆರಂಭಿಸಿದವರು. 1998ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯರಾದರು. ನಂತರ ಅವರ ರಾಜಕೀಯ ವಿರೋಧಿ ಉಗ್ರಪ್ಪ ಕಾಂಗ್ರೆಸ್‌ಗೆ ಬಂದಿದ್ದರಿಂದ ರಾಜಣ್ಣ ಜೆಡಿಎಸ್‌ಗೆ ಬಂದರು; 2004ರಲ್ಲಿ ಬೆಳ್ಳಾವಿ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಗೆದ್ದರು.

ಜೆಡಿಎಸ್‌ನಿಂದ ಸಿದ್ದರಾಮಯ್ಯ ಹೊರಬಂದಾಗ ಅವರೊಂದಿಗೆ ಸತೀಶ್ ಜಾರಕಿಹೊಳಿ, ಎಂ ಪಿ ಪ್ರಕಾಶ್ ಮುಂತಾದವರ ಜೊತೆ ಕೆ ಎನ್ ರಾಜಣ್ಣನವರೂ ಹೊರಬಂದಿದ್ದರು. 2008ರ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೌರಿಶಂಕರ್ ವಿರುದ್ಧ, ನಂತರ ನಡೆದ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ವಿರುದ್ಧ ಸೋಲು ಕಂಡರು. 2013ರಲ್ಲಿ ಜೆಡಿಎಸ್‌ನ ವೀರಭದ್ರಯ್ಯನವರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು. 2018ರಲ್ಲಿ ವೀರಭದ್ರಯ್ಯ ವಿರುದ್ಧ ಸೋತಿದ್ದವರು, 2023ರಲ್ಲಿ ಗೆಲುವು ಪಡೆದರು.  

Advertisements

ಈ ಸುದ್ದಿ ಓದಿದ್ದೀರಾ: ನಮ್ಮ ಸಚಿವರು | ಅಪ್ಪ ಹಾಕಿದ ಆಲದಮರದಡಿ ‘ಸುಭದ್ರ ರಾಜಕಾರಣ’ ಮಾಡುತ್ತಿರುವ ಈಶ್ವರ್ ಖಂಡ್ರೆ

ಸಹಕಾರಿ ರಂಗದಲ್ಲಿಯೂ ಕೆ ಎನ್ ರಾಜಣ್ಣ ಅಪಾರ ಕೆಲಸ ಮಾಡಿದ್ದಾರೆ. ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿ, ರಾಜ್ಯ ಸಹಕಾರ ಮಾರಾಟ ಮಂಡಳ ನಿರ್ದೇಶಕರಾಗಿ, ತುಮಕೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ದಶಕಗಳ ಕಾಲ ದುಡಿದಿದ್ದಾರೆ. ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾಗ ಮಧುಗಿರಿ ಕ್ಷೇತ್ರದ ಮನೆ ಮನೆಗೂ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅಪಾರ ಹೆಸರು ಗಳಿಸಿದ್ದರು. ಇದುವೇ ಅವರನ್ನು ಈ ಬಾರಿ ಗೆಲುವಿನ ಹೊಸ್ತಿಲು ದಾಟಿಸಿದ್ದು ಎನ್ನಲಾಗುತ್ತಿದೆ.    

ಶಾಸಕರಾಗಿಯೂ ರಾಜಣ್ಣ ಅಭಿವೃದ್ಧಿ ಕೆಲಸದಲ್ಲಿ ಹಿಂದೆ ಬಿದ್ದವರಲ್ಲ. ಮಧುಗಿರಿ, ಪಾವಗಡ ತುಮಕೂರು ಜಿಲ್ಲೆಯಲ್ಲಿಯೇ ಅತ್ಯಂತ ಹಿಂದುಳಿದ ತಾಲ್ಲೂಕುಗಳು. ಜೊತೆಗೆ ಇವು ಜಿಲ್ಲಾ ಕೇಂದ್ರದಿಂದ ದೂರದಲ್ಲಿವೆ. ಇದನ್ನರಿತ ರಾಜಣ್ಣ ಡಿಡಿಪಿಐ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ ಸೇರಿದಂತೆ ಹಲವು ಜಿಲ್ಲಾ ಮಟ್ಟದ ಕಚೇರಿಗಳನ್ನು ಮಧುಗಿರಿಗೆ ತರಲು ಶ್ರಮಿಸಿದರು.

ಕಲ್ಲು ಕ್ವಾರಿಗಳ ಮಾಲೀಕರಾಗಿರುವ ರಾಜಣ್ಣ, ಅವುಗಳ ಮೂಲಕ ಸಾಕಷ್ಟು ಹಣ ಮಾಡಿದ್ದಾರೆ ಎನ್ನುವ ಮಾತುಗಳಿವೆ. ಆದರೂ ತುಮಕೂರಿನ ಪ್ರಬಲ ಲಿಂಗಾಯತ ಹಾಗೂ ಒಕ್ಕಲಿಗರ ನಡುವೆ ರಾಜಕಾರಣ ಮಾಡುವುದು ಸುಲಭದ ಕೆಲಸವಲ್ಲ. ತನ್ನ ಜಾತಿಯವರಿಂದ ಸುತ್ತುವರೆದಿದ್ದಾರೆ ಎನ್ನುವ ಆಪಾದನೆಗಳ ನಡುವೆಯೂ ಸಮಾಜದ ಎಲ್ಲ ಜಾತಿ, ವರ್ಗಗಳ ವಿಶ್ವಾಸ ಗಳಿಸಿದವರು ರಾಜಣ್ಣ.          

ಎದುರಾಳಿಗಳನ್ನು ಸದಾ ಮಾರ್ಮಿಕ ಮಾತುಗಳಿಂದ ಚುಚ್ಚುವುದು, ವ್ಯಂಗ್ಯ ಮಾಡುವುದು, ಕೊನೆಗೆ ತಾನೂ ಕೂಡ ಅಂಥದ್ದೇ ವ್ಯಂಗ್ಯಕ್ಕೆ ಗುರಿಯಾಗುವುದು ರಾಜಣ್ಣನವರ ಚಾಳಿ. ರಾಜಣ್ಣ ‘ಒಮ್ಮೆ ಕಾಂಗ್ರೆಸ್ ಪಕ್ಷ ಕಳ್ಳರ ಪಕ್ಷವಾಗಿದೆ’ ಎಂದಿದ್ದರು. ಇನ್ನೊಮ್ಮೆ ‘ಜೆಡಿಎಸ್ ವರಿಷ್ಠ ದೇವೇಗೌಡರು ಈಗ ಇಬ್ಬರ ಹೆಗಲ ಮೇಲೆ ಕೈಹಾಕಿಕೊಂಡು ಹೋಗುತ್ತಾರೆ. ಇನ್ನು ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ’ ಎಂದಿದ್ದರು. ಹೀಗೆ ವಿವಾದ ಉಂಟಾಗುವಂಥ ಹೇಳಿಕೆ ನೀಡುವುದು ಅವರ ರಾಜಕೀಯ ಶೈಲಿಯೇ ಆಗಿಬಿಟ್ಟಿದೆ. ಜೊತೆಗೆ ಜಿಲ್ಲೆಯ ಸ್ವಪಕ್ಷದ ಮುಖಂಡರೊಂದಿಗೆ ರಾಜಣ್ಣನವರದ್ದು ಸದಾ ಸಂಘರ್ಷದ ಸಂಬಂಧ. ವಿ ಎಸ್ ಉಗ್ರಪ್ಪ, ಟಿ ಬಿ ಜಯಚಂದ್ರ, ಜಿ ಪರಮೇಶ್ವರ್ ಅವರ ವಿರುದ್ಧವಾಗಿ ರಾಜಣ್ಣ ಬಹಿರಂಗವಾಗಿಯೇ ಅನೇಕ ಬಾರಿ ಹೇಳಿಕೆ ನೀಡಿದ್ದಾರೆ. ಪರಮೇಶ್ವರ್ ಅವರನ್ನು ‘ಜೀರೋ ಟ್ರಾಫಿಕ್ ಮಿನಿಸ್ಟರ್’ ಎಂದು ಬಹಿರಂಗವಾಗಿಯೇ ಹೀಯಾಳಿಸುತ್ತಿದ್ದರು.

ಜೊತೆಗೆ ಇವರು ಹಲವು ಚುನಾವಣೆಗಳಲ್ಲಿ ಸ್ವಂತ ಪಕ್ಷದವರ ವಿರುದ್ಧವೇ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದೂ ಇದೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಒಮ್ಮತದ ಅಭ್ಯರ್ಥಿಯಾಗಿದ್ದ ದೇವೇಗೌಡರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ತಮ್ಮ ‘ಹಳೇ ದೋಸ್ತ್’ ಬಸವರಾಜು ಅವರನ್ನು ಗೆಲ್ಲಿಸಲು ರಾಜಣ್ಣ ಶ್ರಮಿಸಿದ್ದರು. ಇದೇ ಸಿಟ್ಟಿಗೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಂದ ನಂತರ ರಾಜಣ್ಣ ಅಧ್ಯಕ್ಷರಾಗಿದ್ದ ತುಮಕೂರು ಡಿಸಿಸಿ ಬ್ಯಾಂಕ್ ಅನ್ನು ಸೂಪರ್ ಸೀಡ್ ಮಾಡಲಾಗಿತ್ತು. ರಾಜಕೀಯ ವೈಷಮ್ಯಕ್ಕೆ ಜಿ ಪರಮೇಶ್ವರ್ ಮತ್ತು ದೇವೇಗೌಡರು ಸೂಪರ್ ಸೀಡ್ ಮಾಡಿಸಿದ್ದಾರೆ ಎಂದು ರಾಜಣ್ಣ ನೇರವಾಗಿಯೇ ಆರೋಪಿಸಿದ್ದರು.

ಈ ಸುದ್ದಿ ಓದಿದ್ದೀರಾ: ಸಂಘ ಪರಿವಾರದ ಹೇಡಿಗಳಿಗೆ ಪಠ್ಯದಲ್ಲಿ ಜಾಗವಿಲ್ಲ: ಬಿಕೆ ಹರಿಪ್ರಸಾದ್

ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ಕೆ ಎನ್ ರಾಜಣ್ಣ, ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರುವ ಮೂಲಕ ಮತ್ತೆ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರೆದಿದ್ದರು. ಅದೇ ಸಿಟ್ಟಿನಲ್ಲಿ ತನ್ನ ಜಾತಿಬಾಂಧವ ರಮೇಶ್ ಜಾರಕಿಹೊಳಿ ಜೊತೆ ಸೇರಿಕೊಂಡು ಸಮ್ಮಿಶ್ರ ಸರ್ಕಾರದ ಪತನಕ್ಕೆ ತಮ್ಮ ಕೊಡುಗೆಯನ್ನೂ ನೀಡಿದರು.

ಮೈತ್ರಿ ಸರ್ಕಾರ ಪತನವಾಯಿತು. ಬಿಜೆಪಿ ಅಧಿಕಾರಕ್ಕೇರಿತು. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ನವರು ಯಾರೂ ಹೋಗಬಾರದು ಎಂದು ಅಂದಿನ ಕೆಪಿಸಿಸಿ ಅಧ್ಯಕ್ಷರು ಆದೇಶಿಸಿದ್ದರು. ಅದಕ್ಕೆ ಕ್ಯಾರೆ ಅನ್ನದೇ ಸಮಾರಂಭದಲ್ಲಿ ಹಾಜರಾಗಿ ಕಾಂಗ್ರೆಸ್ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡಿದ್ದರು ರಾಜಣ್ಣ.

ಇದು ರಾಜಣ್ಣನವರ ಗುಣ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿ ಹೇಗೆ ಮಾತಾಡಬೇಕು ಎನ್ನುವ ಮೂಲಭೂತ ವಿಚಾರವನ್ನೇ ಮರೆತಂತೆ ಕಾಣುವ ರಾಜಣ್ಣನವರು, ಎಚ್ ವಿಶ್ವನಾಥ ಕೂಡ ಇದೇ ರೀತಿ ಮಾತಾಡಿ ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡರು ಎನ್ನುವುದನ್ನು ನೆನಪಿಟ್ಟುಕೊಂಡರೆ ಒಳ್ಳೆಯದು.

ವಿಚಿತ್ರ ಎಂದರೆ, ಸಿದ್ದರಾಮಯ್ಯನವರ ಆಪ್ತರಾಗಿರುವ, ಡಿ ಕೆ ಶಿವಕುಮಾರ್ ವಿರೋಧಿ ಬಣದಲ್ಲಿರುವ ರಾಜಣ್ಣನವರಿಗೆ ಡಿಕೆ ಅವರ ಅಕ್ರಮ ಆಸ್ತಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿ ವಿಚಾರಣೆ ನಡೆಸಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ಸ್‌ಗೆ ರಾಜಣ್ಣ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 300 ಕೋಟಿ ರೂಪಾಯಿ ಸಾಲ ನೀಡಿದ್ದರ ಸಂಬಂಧ ನಡೆದ ವಿಚಾರಣೆ ಅದಾಗಿತ್ತು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X