ನಮ್ಮ ಸಚಿವರು | ಮಾಸ್ ಲೀಡರ್ ಆಗುವ ಲಕ್ಷಣವುಳ್ಳ ಪ್ರಿಯಾಂಕ್ ಖರ್ಗೆ; ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಿದೆ ಆದ್ಯತೆ

Date:

Advertisements
ಪ್ರಿಯಾಂಕ್ ಖರ್ಗೆ ಅವರು  ಕಾಂಗ್ರೆಸ್‌ನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ತಂದೆಯ ಹಾದಿಯಲ್ಲಿಯೇ ಸಾಗುತ್ತಿರುವ ಅವರು ಮೂರನೇ ಬಾರಿಗೆ ಸಚಿವರಾಗಿದ್ದಾರೆ. ಸಂಪುಟ ರಚನೆಯ ಮೊದಲ ಪ್ರಯತ್ನದಲ್ಲಿಯೇ ಎಂಟು ಸಚಿವರಲ್ಲಿ ಒಬ್ಬರನ್ನಾಗಿ ಆಯ್ಕೆ ಮಾಡಿರುವುದು ಗಮನಾರ್ಹ ಸಂಗತಿ.

ಈ ವ್ಯಕ್ತಿಯೇ ಹೀಗೆ; ಗುಂಡು ಹೊಡೆದಂತೆ ಮಾತನಾಡುತ್ತಾರೆ. ಅಲ್ಲಿ ಯಾವುದೇ ಮುಚ್ಚುಮರೆ ಇರಲ್ಲ. ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಎಂದೂ ಮಾತನಾಡಿಲ್ಲ. ರಾಜಕೀಯ ಲಾಭ-ನಷ್ಟದ ಬಗ್ಗೆ ಅಷ್ಟು ತಲೆಕೆಡಿಸಿಕೊಂಡು, ಜಾಣತನದಿಂದ ಮಾತನಾಡುವ ಸ್ವಭಾವ ಇವರದಲ್ಲ. ಕಾಂಗ್ರೆಸ್‌ನ ಸಿದ್ಧಾಂತದ ಬಗ್ಗೆ ಯಾವ ಗೊಂದಲವೂ ಇಲ್ಲದೇ ಸ್ಪಷ್ಟವಾಗಿ ಮಾತನಾಡುವ ಎದೆಗಾರಿಕೆ ಉಳ್ಳವರು. ತಮ್ಮ ತರ್ಕಬದ್ಧ ಮಾತುಗಳ ಮೂಲಕ ವಿರೋಧಿಗಳನ್ನು ಕಂಗೆಡಿಸಬಲ್ಲರು.

ಅವರೇ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್ ಖರ್ಗೆ. ಕರ್ನಾಟಕ ರಾಜಕಾರಣದಲ್ಲಿ ಮತ್ತೊಬ್ಬ ಮಾಸ್ ಲೀಡರ್ ಆಗಿ ಬೆಳೆಯುವ ಎಲ್ಲ ಲಕ್ಷಣಗಳು ಇವರಲ್ಲಿ ಗೋಚರಿಸುತ್ತಿವೆ. ಕಾಂಗ್ರೆಸ್‌ನ ಭರವಸೆಯ ನಾಯಕರಾಗಿ ಹೊರಹೊಮ್ಮಿ, ರಾಜಕೀಯದಲ್ಲಿ ದಾಪುಗಾಲಿಡುತ್ತಿರುವ ಪ್ರಿಯಾಂಕ ಖರ್ಗೆ ಮುಂದೊಂದು ದಿನ ಕರ್ನಾಟಕದ ಮುಖ್ಯಮಂತ್ರಿಯಾದರೂ ಆಶ್ಚರ್ಯ ಪಡಬೇಕಿಲ್ಲ.

ಪ್ರಿಯಾಂಕ್ ಖರ್ಗೆ ಅವರು  ಕಾಂಗ್ರೆಸ್‌ನಲ್ಲಿ ತಮ್ಮದೇ ವರ್ಚಸ್ಸು ಹೊಂದಿದ್ದಾರೆ. ತಂದೆಯ ಹಾದಿಯಲ್ಲಿಯೇ ಸಾಗುತ್ತಿರುವ ಅವರು ಮೂರನೇ ಬಾರಿಗೆ ಸಚಿವರಾಗಿ ಸಂಪುಟ ದರ್ಜೆ ಸಚಿವ ಸ್ಥಾನ ಪಡೆದಿದ್ದಾರೆ. ರಾಜಕೀಯ ಅನುಭವ ಇರುವ ಅನೇಕ ಹಿರಿಯರ ನಡುವೆ ಪ್ರಿಯಾಂಕ್ ಖರ್ಗೆ ಅವರನ್ನು ಸಂಪುಟ ರಚನೆಯ ಮೊದಲ ಹಂತದಲ್ಲಿಯೇ ಮಂತ್ರಿಯನ್ನಾಗಿ ಮಾಡಿದ್ದು ಗಮನಾರ್ಹ ಸಂಗತಿ.

Advertisements

ಸರ್ಕಾರ ರಚನೆಯಾಗುತ್ತಿದ್ದಂತೆ ಆರಂಭದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಖಾತೆ ನೀಡಲಾಗಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿಯಿದ್ದ ಖಾತೆಗಳನ್ನು ಮರು ಹಂಚಿಕೆ ಮಾಡಿ, ಐಟಿ-ಬಿಟಿ ಖಾತೆಯನ್ನು ಹೆಚ್ಚುವರಿಯಾಗಿ ಪ್ರಿಯಾಂಕ್ ಖರ್ಗೆ ಅವರಿಗೆ ನೀಡಲಾಗಿದೆ. ಇದು ಅವರ ರಾಜಕೀಯ ವೃತ್ತಿ ಬದ್ಧತೆಗೆ ಸಿಕ್ಕ ಗೌರವ ಎಂದೇ ವ್ಯಾಖ್ಯಾನಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ನಮ್ಮ ಸಚಿವರು | ಅಂದು ಗೌಡರ ಶಿಷ್ಯ, ಇಂದು ಸಿದ್ದು ಬಂಟ; ಪ್ರಭಾವಿ ರಾಜಕೀಯ ನಾಯಕನಾದ ಟ್ರಾವೆಲ್ಸ್ ಮಾಲೀಕ

ಸಿದ್ದರಾಮಯ್ಯ ವಿರೋಧದ ನಡುವೆಯೂ ಸಚಿವ ಸ್ಥಾನ ಲಭಿಸಿತ್ತು!

2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾದಾಗ ಶಾಸಕರಾಗಿ ಅನುಭವ ಪಡೆದ ಅವರಿಗೆ ಮೂರು ವರ್ಷಗಳಲ್ಲಿ ಸಚಿವ ಸ್ಥಾನಕ್ಕೆ ಬಡ್ತಿ ಸಿಕ್ಕಿತು. 2016ರಲ್ಲಿ ಪ್ರಿಯಾಂಕ್ ಅವರನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಹಿಂದೇಟು ಹಾಕಿದ್ದರು. ಆದರೆ, ಕೇಂದ್ರ ನಾಯಕರ ಮಧ್ಯಪ್ರವೇಶದ ನಂತರ ಸಿದ್ದರಾಮಯ್ಯ ಪಟ್ಟು ಸಡಿಲಿಸಿ, ಸಚಿವ ಸ್ಥಾನಕ್ಕೆ ಅವಕಾಶ ಮಾಡಿಕೊಟ್ಟರು ಎಂಬುದು ರಾಜಕೀಯ ವಲಯದಲ್ಲಿ ರಹಸ್ಯವಾಗಿಲ್ಲ. ಆಗ ಸಂಪುಟದಲ್ಲಿ ಸ್ಥಾನ ಪಡೆದ ಅತಿ ಕಿರಿಯ ವಯಸ್ಸಿನ (38 ವರ್ಷಕ್ಕೆ) ಸಚಿವ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಆಗ ಅವರು ಎರಡು ವರ್ಷ ಐಟಿ ಬಿಟಿ ಖಾತೆ ನಿರ್ವಹಿಸಿದ್ದರು.

2018ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಸಂಪುಟದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸುವಾಗ ಐರಾವತ, ಪ್ರಬುದ್ಧ, ಪ್ರಗತಿ, ಸಮೃದ್ದಿ ಹಾಗೂ ಉನ್ನತಿ ಎಂಬ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದರು.

ರಾಜಕೀಯ ಹಾದಿ

ನವೆಂಬರ್ 22, 1978 ರಂದು ಬೆಂಗಳೂರಿನಲ್ಲಿ ಜನಿಸಿದ ಪ್ರಿಯಾಂಕ್ ಖರ್ಗೆ ಅವರು ಬಿಎ ಪದವೀಧರರು. ಡಿಪಿ ಗ್ರಾಫಿಕ್ಸ್, ಡಿಎನ್‌ಇನ್ ಅನಿಮೇಷನ್ ಶಿಕ್ಷಣ ಪಡೆದಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿದ್ದಾಗಲೇ ಎನ್‌ಎಸ್‌ಯುಐ ಸೇರಿದ ಪ್ರಿಯಾಂಕ್‌ ಖರ್ಗೆ, ಅಲ್ಲಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡವರು. ಬಳಿಕ ತಂದೆಯ ಮಾರ್ಗದರ್ಶನದಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಸೋಲು ಅನುಭವಿಸಿದರು. 2013 ರಿಂದ 2023ರ ವರೆಗೂ ಚಿತ್ತಾಪುರ ಕ್ಷೇತ್ರದಿಂದ ಹ್ಯಾಟ್ರಿಕ್‌ ಗೆಲುವಿನ ನಗೆ ಬೀರಿದ್ದಾರೆ.

ಕರ್ನಾಟಕ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಕೆಪಿಸಿಸಿ ಸಂವಹನ ಹಾಗೂ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಆರೋಪದ ವಿರುದ್ಧ ನಡೆಸಿದ “ಪೇ ಸಿಎಂ” ಅಭಿಯಾನಕ್ಕೆ ಪ್ರಿಯಾಂಕ್ ಖರ್ಗೆ ಚಾಲನೆ ನೀಡಿದ್ದರು. ಇನ್ನು ಪಿಎಸ್‌ಐ ಹಗರಣ ಬಯಲಾದ ಸಂದರ್ಭದಲ್ಲಿ ಕೂಡ ಬಿಜೆಪಿ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಗಳಲ್ಲಿ ಅವರು ಮುಂಚೂಣಿಯಲ್ಲಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನು ಕಟ್ಟಿಹಾಕಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿತ್ತು. ರೌಡಿಶೀಟರ್‌ ಮಣಿಕಂಠ ರಾಥೋಡ್‌ನನ್ನು ಅಭ್ಯರ್ಥಿಯಾಗಿ ಬಿಜೆಪಿ ಕಣಕ್ಕಿಳಿಸಿ ಗೂಂಡಾ ರಾಜಕಾರಣವನ್ನು ಪ್ರದರ್ಶಿಸಿತು. ಆದರೂ ಪ್ರಿಯಾಂಕ್ ಖರ್ಗೆ ಚಿತ್ತಾಪುರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಜನತೆ‌ ಮನ್ನಣೆ ನೀಡಿದೆ.

ಶೈಕ್ಷಣಿಕ ಅಭಿವೃದ್ಧಿ, ಮೂಲ ಸೌಕರ್ಯಗಳ ಅಭಿವೃದ್ಧಿ, ಸಂಪರ್ಕ ರಸ್ತೆ‌ ನಿರ್ಮಾಣಕ್ಕೆ ಹಾಗೂ ಕುಡಿಯುವ ನೀರಿಗೆ ಆದ್ಯತೆ, ಆರೋಗ್ಯ ಕ್ಷೇತ್ರದ ಆಮೂಲಾಗ್ರ ಬಲಾವಣೆ ಹಾಗೂ ಮಳೆಯಾಧಾರಿತ ಜಮೀನುಗಳಿಗೆ ನೀರಾವರಿ ಒದಗಿಸಿರುವುದು ಇವರ ಗೆಲುವಿನ ಹಿಂದಿನ ಶಕ್ತಿಗಳಾಗಿವೆ. ಜನಪರ, ಜೀವಪರ ಹಾಗೂ ಜಾತ್ಯತೀತ ನಿಲುವುಗಳಿಗೆ ಮತದಾರರು ಜೈ ಎಂದಿದ್ದಾರೆ.

ಪ್ರಿಯಾಂಕ್ ಖರ್ಗೆ ಮುಂದಿವೆ ಸಾಲು ಸಾಲು ಸವಾಲು

ಚಿತ್ತಾಪುರ ಪಟ್ಟಣದ ಐತಿಹಾಸಿಕ ಕ್ಷೇತ್ರ ನಾಗಾವಿ ಪ್ರದೇಶದಲ್ಲಿ 758 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಜಿ+1 (ನೆಲಮಹಡಿ + ಮೊದಲ ಮಹಡಿ) ಮಾದರಿಯ ಒಂದು ಸಾವಿರ ಮನೆಗಳ ಅಭಿವೃದ್ಧಿ ಕಾಮಗಾರಿ ಅನುದಾನದ ಕೊರತೆಯಿಂದ ಸ್ಥಗಿತಗೊಂಡಿದೆ.

ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರು 2018ರಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಪಟ್ಟಣದ ಬಡವರಿಗೆ, ಶ್ರಮಿಕರಿಗೆ, ಕೂಲಿಕಾರ್ಮಿಕರ ವಾಸಕ್ಕೆ ಅನುಕೂಲವಾಗಲಿ ಎಂದು 154.74 ಕೋಟಿ ವೆಚ್ಚದಲ್ಲಿ ರಾಜ್ಯ ಕೊಳಚೆ ಅಭಿವೃದ್ಧಿ ಮಂಡಳಿಯಿಂದ ವಿವಿಧ ವಸತಿ ಯೋಜನೆ ಸಂಯೋಜಿಸಿ ಒಂದು ಸಾವಿರ ಮನೆಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡಿದ್ದರು. ಪ್ರಿಯಾಂಕ್ ಇದೀಗ ಮತ್ತೆ ಸಚಿವರಾಗಿದ್ದು, ಆ ಮನೆಗಳಿಗೆ ಮೂಲ ಸೌಲಭ್ಯ ಕಲ್ಪಿಸುವ ಸವಾಲು ಅವರ ಮುಂದಿದೆ.

ಕ್ಷೇತ್ರದಲ್ಲಿನ ಗ್ರಾಮ ಪಂಚಾಯಿತಿಗಳ ಆಡಳಿತ ವ್ಯವಸ್ಥೆ ಜಡ್ಡುಗಟ್ಟಿದೆ. ಪಂಚಾಯತ್ ರಾಜ್ ಖಾತೆ ಹೊಂದಿರುವ ಪ್ರಿಯಾಂಕ್ ಅವರು ಕ್ಷೇತ್ರದ ಗ್ರಾಮಾಡಳಿತ ವ್ಯವಸ್ಥೆಯನ್ನು ಬಲಪಡಿಸಬೇಕಿದೆ. ಗ್ರಾ.ಪಂ.ಗಳಿಗೆ ಸರ್ಕಾರಗಳು ಹೆಚ್ಚಿನ ಅನುದಾನ ಒದಗಿಸುತ್ತಿದ್ದರೂ ಅದರ ಉಪಯೋಗ ಸರಿಯಾದ ರೀತಿಯಲ್ಲಿ ಆಗಿಲ್ಲ. ಬಹುತೇಕ ಹಳ್ಳಿಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿವೆ. ಬಹುಮುಖ್ಯವಾಗಿ ಗ್ರಾಮೀಣ ಭಾಗದ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆಗಳಿಗೆ ಕೂಡಲೇ ಅವರು ಸ್ಪಂದಿಸಬೇಕಿದೆ.

ಅಕ್ರಮ ಮರಳು ಸಾಗಣೆಯಿಂದ ಕಾಗಿಣಾ ನದಿ ಒಡಲಿಗೆ ಧಕ್ಕೆ ಬಂದಿದೆ. ಭೀಮಾ, ಕಾಗಿಣಾ ಒಡಲು ಸೇರುತ್ತಿರುವ ಒಳಚರಂಡಿ, ಕೊಳಚೆ ನೀರು ತಡೆಯಬೇಕಿದೆ. ಬೆಣ್ಣೆತೊರಾ ಜಲಾಶಯದ ಬಲದಂಡೆ ಕಾಲುವೆಯ ಬಹುತೇಕ ಪ್ರದೇಶ ಚಿತ್ತಾಪುರದ ಗ್ರಾಮಗಳಲ್ಲಿ ವ್ಯಾಪಿಸಬೇಕಿದೆ. ನೂರಾರು ಕೋಟಿ ರೂಪಾಯಿಯ ಅನುದಾನದ ಹರಿದರೂ ಕೆಲವೆಡೆ ಕಾಲುವೆ ನಿರ್ಮಾಣ ಆಗಿಲ್ಲ. ಮತ್ತೆ ಕೆಲವೆಡೆ ಕಾಲುವೆ ಇದ್ದರೂ ನೀರು ಹರಿದು ಬಂದಿಲ್ಲ.

ಸನ್ನತಿ ಏತ ನೀರಾವರಿ ಯೋಜನೆಯು ಭೀಮಾ ನದಿ ದಾಟಿ ಮುಂದಕ್ಕೆ ಬರುತ್ತಿಲ್ಲ. ಕೆರೆಗಳಲ್ಲಿ ಹೂಳು ತುಂಬಿ ಸಂಗ್ರಹ ಸಾಮರ್ಥ್ಯ ಕುಸಿದಿದೆ. ಕೆರೆ ಅಂಗಳದ ಬಹುಭಾಗ ಒತ್ತುವರಿಯಾಗಿದೆ. ಅವುಗಳನ್ನು ತೆರವುಗೊಳಿಸಬೇಕಿದೆ. ತಾಲ್ಲೂಕಿನ ಬಹುಪಾಲು ರೈತರು ತೊಗರಿ ಬೆಳೆಯಲ್ಲಿ ಬದುಕು ಕಂಡುಕೊಂಡಿದ್ದಾರೆ. ಬೆಲೆ ಕುಸಿತ, ಅತಿವೃಷ್ಟಿ, ನೆಟೆ ರೋಗದಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಿಯಾಂಕ್ ಅವರು ಗಮನ ಹರಿಸಬೇಕಿದೆ.

ರಾಜ್ಯ ಮಟ್ಟದ ನಾಯಕರ ಸ್ಥಾನದಲ್ಲಿ ಗುರುತಿಸಿಕೊಂಡಿರುವ ಪ್ರಿಯಾಂಕ್ ಖರ್ಗೆ ಅವರು ಸ್ವಕ್ಷೇತ್ರಕ್ಕಿಂತ ಬೆಂಗಳೂರಲ್ಲಿ ಹೆಚ್ಚಾಗಿ ಉಳಿದುಕೊಳ್ಳುತ್ತಾರೆ ಎಂದ ಆಪಾದನೆ ಮಾತುಗಳು ಆಗಾಗ ಕೇಳಿಬರುತ್ತವೆ. ಈ ವಿಚಾರದಲ್ಲಿ ಕ್ಷೇತ್ರದ ಜನರಿಗೆ ಅವರು ಇನ್ನಷ್ಟು ಹತ್ತಿರ ಆಗಬೇಕಿದೆ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

Download Eedina App Android / iOS

X