ಮಧ್ಯ ಕರ್ನಾಟಕ ಭಾಗದ ಪ್ರಭಾವಿ ಯುವ ರಾಜಕಾರಣಿಗಳಲ್ಲಿ ಶಾಮನೂರು ಶಿವಶಂಕರಪ್ಪ ಮಲ್ಲಿಕಾರ್ಜುನ ಒಬ್ಬರು. ಹಾಲಿ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿರುವ ಎಸ್ ಎಸ್ ಮಲ್ಲಿಕಾರ್ಜುನ ತಂದೆ ನೆರಳಿನಲ್ಲಿ ಬೆಳೆದು ಬಂದ ರಾಜಕಾರಣಿ.
ಕಾಂಗ್ರೆಸ್‌ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಅವರಿಗೆ ಮಂತ್ರಿಗಿರಿ ದಕ್ಕಿರುವುದು ಇದು ಮೂರನೇ ಬಾರಿಗೆ. ಇದಕ್ಕೂ ಮುನ್ನ(1999) ಎಸ್ ಎಂ ಕೃಷ್ಣ ಸಂಪುಟದಲ್ಲಿ ಯುವಜನ ಸೇವೆ ಹಾಗೂ ಕ್ರೀಡಾ ಸಚಿವರಾಗಿಯೂ, 2013ರ ಸಿದ್ದರಾಮಯ್ಯ ಸಂಪುಟದಲ್ಲಿ ತೋಟಗಾರಿಕೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾಗಿಯೂ ಕೆಲಸ ಮಾಡಿದ್ದ ಇವರು ಹಾಲಿ ತೋಟಗಾರಿಕೆ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದಾರೆ.
ರಾಜಕೀಯ ಜೀವನ
ತಂದೆ ಶಾಮನೂರು ಶಿವಶಂಕರಪ್ಪ 1998ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಅನುವಾದ ಕಾರಣ, ಅವರ ರಾಜೀನಾಮೆಯಿಂದ ತೆರವಾದ ಸ್ಥಾನದಿಂದ ಸ್ಪರ್ಧಿಸಿದ ಮಲ್ಲಿಕಾರ್ಜುನ ಆ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿಗೆ ಶಾಸಕರಾದರು.
ಇದಾದ ಒಂದು ವರ್ಷದ ಬಳಿಕ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಗೆದ್ದು ಅವರು ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಸಚಿವರಾದರು. ಆ ಬಳಿಕ ರಾಷ್ಟ್ರ ರಾಜಕಾರಣದತ್ತ ಮುಖ ಮಾಡಿದ ಅವರು 2004, 2009ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲನ್ನನುಭವಿಸಿದ್ದರು. 2013ರಲ್ಲಿ ವಿಧಾನಸಭೆ ಶಾಸಕರಾದ ಅವರು ನಂತರ ಮಂತ್ರಿಯೂ ಆಗಿದ್ದರು. ಆದರೆ ಅದರ ಮರುವರ್ಷ ಮರಳಿ ಲೋಕಸಭೆಗೆ ನಿಂತು ಪರಾಭವಗೊಂಡಿದ್ದರು.
ಲೋಕಸಭೆ ಚುನಾವಣೆಗೆ ನಿಂತಾಗಲೆಲ್ಲ ಸೋತ ಮಲ್ಲಿಕಾರ್ಜುನ, ವಿಧಾನಸಭೆಗೆ ನಿಂತಾಗಲೆಲ್ಲ ಗೆದ್ದು ಸಚಿವರಾಗಿದ್ದರೆನ್ನುವುದು ಗಮನಾರ್ಹ. ಸದ್ಯ ನಾಲ್ಕನೇ ಬಾರಿ ಶಾಸಕರಾಗಿರುವ ಅವರು, ಮೂರು ಬಾರಿ ಸಚಿವರಾಗಿದ್ದಾರೆ.
ಸಚಿವ ಮತ್ತು ಶಾಸಕರಾಗಿದ್ದ ಅವಧಿಯಲ್ಲಿ ದಾವಣಗೆರೆಯಲ್ಲಿ ಗಾಜಿನ ಮನೆ, ಕುಂದವಾಡ ಕೆರೆ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಇವರ ಪ್ರಮುಖ ಸಾಧನೆಗಳು. ಇದರ ಜೊತೆಜೊತೆಗೆ ಸಕ್ಕರೆ ಕಾರ್ಖಾನೆ, ಡಿಸ್ಟಿಲರಿ, ರೈಸ್‌ಮಿಲ್ ಉದ್ಯಮ ನಡೆಸುತ್ತಿರುವ ಎಸ್.ಎಸ್. ಮಲ್ಲಿಕಾರ್ಜುನ, ಎಸ್ ಎಸ್ ಮೆಡಿಕಲ್ ಕಾಲೇಜ್ ಚೇರಮನ್ ಆಗಿದ್ದಾರೆ. ಹಾಗಯೇ ಶಿಕ್ಷಣ ಕ್ಷೇತ್ರದಲ್ಲೂ ಸಕ್ರಿಯರಾಗಿ ಗುರುತಿಸಿಕೊಂಡಿದ್ದು ಬಾಪೂಜಿ ಶಿಕ್ಷಣ ಸಂಸ್ಥೆ ನಡೆಸುತ್ತಲೇ ಅದರ ಜಂಟಿ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶಾಮನೂರು ಪುತ್ರ
ಶಾಮನೂರು ಶಿವಶಂಕರಪ್ಪನವರ ಕಿರಿಯ ಪುತ್ರರಾಗಿರುವ ಮಲ್ಲಿಕಾರ್ಜುನ 56 ವರ್ಷದ ರಾಜಕಾರಣಿ. ಬಿ.ಕಾಂ. ಓದಿರುವ ಇವರು, ರಾಜಕಾರಣಕ್ಕೆ ಬಂದ ಬಳಿಕ ದಾವಣಗೆರೆ ಉತ್ತರ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ತಂದೆ ಬಳಿಕ ಸಾದರ (ಸಾದು) ಲಿಂಗಾಯತ ಸಮುದಾಯದ ಯುವ ನಾಯಕನೆಂದೇ ಗುರುತಿಸಿಕೊಂಡಿರುವ ಇವರು, 152 ಕೋಟಿ ಮೌಲ್ಯದ ಆಸ್ತಿಪಾಸ್ತಿಯ ಒಡೆಯ.
ಈ ಸುದ್ದಿ ಓದಿದ್ದೀರಾ? :ನಮ್ಮ ಸಚಿವರು | ಡಿ. ಸುಧಾಕರ್: ಬಿಜೆಪಿಯಲ್ಲೂ ಮಂತ್ರಿ; ಕಾಂಗ್ರೆಸ್‌ನಲ್ಲೂ ಮಂತ್ರಿ!
ಶಾಮನೂರು ಮಲ್ಲಿಕಾರ್ಜುನ ಅವರ ವಿರುದ್ಧ ಕೇಳಿಬರುವ ಪ್ರಮುಖ ಆರೋಪ ಇವರು ಉದಾಸೀನತೆಯ ವ್ಯಕ್ತಿ ಎಂದು. ಸಿರಿವಂತ ಕುಟುಂಬದಲ್ಲಿ ಬೆಳೆದಿರುವ ಮಲ್ಲಿಕಾರ್ಜುನ್ ಜನಸೇವೆಗೆ ಬಂದ ಬಳಿಕವೂ ಹಿಂದಿದ್ದಂತೆಯೇ ಉದಾಸೀನ ಸ್ವಭಾವ ಪ್ರದರ್ಶಿಸುತ್ತಾರೆ; ದಿವಂಗತ ನಟ, ಸಚಿವ ಅಂಬರೀಶ್ ಆತ್ಮೀಯರಾಗಿದ್ದ ಮಲ್ಲಿಕಾರ್ಜುನ, ಅವರಂತೆಯೇ ಬಿಡುಬೀಸು ವ್ಯಕ್ತಿತ್ವದವರು; ಜನರ ದೂರುದುಮ್ಮಾನದ ಆಲಿಕೆ ವೇಳೆಯೂ ಉಡಾಫೆ ಪ್ರವೃತ್ತಿಯನ್ನು ತೋರುತ್ತಾರೆಂದು ಜನ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಉಳಿದಂತೆ ಜಾತಿ ರಾಜಕಾರಣಕ್ಕೆ ಮಹತ್ವ ನೀಡುವ ಅವರು, ಅಧಿಕಾರದಲ್ಲಿದ್ದಾಗ ಕ್ಷೇತ್ರದ ಅಭಿವೃದ್ದಿ ಕಡೆ ಗಮನ ಹರಿಸುವುದು ಅಷ್ಟಕ್ಕಷ್ಟೆ ಎನ್ನುವುದು ಅವರ ಮೇಲಿನ ಮತ್ತೊಂದು ಆರೋಪ.
ಪ್ರಬಲ ಲಿಂಗಾಯತ ಸಮುದಾಯದ ಬೆಂಬಲವಿದ್ದೂ,ಕಾಂಗ್ರೆಸ್ ಪಾಳಯದ ನಿರ್ಧಾರಕ ಶಕ್ತಿಯಾಗಿರುವ ತಂದೆ ಬೆಂಬಲವಿದ್ದೂ, ಮಲ್ಲಿಕಾರ್ಜುನ ರಾಜ್ಯ ಮಟ್ಟದ ನಾಯಕರಾಗಿ ಬೆಳೆಯುವಲ್ಲಿ ಸೋತಿದ್ದಾರೆ.
ಸದಾ ಸಕ್ಕರೆ ಲಾಬಿಯ ಜಂಜಾಟದಲ್ಲೇ ಮುಳುಗಿರುವ ಇವರು ಅದರಿಂದ ಹೊರಬಂದರಷ್ಟೆ ಜನಮೆಚ್ಚುವ ರಾಜಕಾರಣಿಯಾಗಬಹುದೆನ್ನುವುದು ಹಲವರ ಅನಿಸಿಕೆ.
ಈ ಸುದ್ದಿ ಓದಿದ್ದೀರಾ? : ನಮ್ಮ ಸಚಿವರು | ಮಾಸ್ ಲೀಡರ್ ಆಗುವ ಲಕ್ಷಣವುಳ್ಳ ಪ್ರಿಯಾಂಕ್ ಖರ್ಗೆ; ಕ್ಷೇತ್ರದ ಅಭಿವೃದ್ಧಿಗೆ ನೀಡಬೇಕಿದೆ ಆದ್ಯತೆ
ತೋಟಗಾರಿಕೆಯಂತಹ ರೈತಪರ ಇಲಾಖೆಯ ಸಚಿವ ಸ್ಥಾನವಿದ್ದರೂ ತಮ್ಮ ಅಧಿಕಾರದ ಅವಧಿಯಲ್ಲಿ ಗಮನಾರ್ಹ ಸಾಧನೆ ಮಾಡುವಲ್ಲಿ ಸೋತವರು ಮಲ್ಲಿಕಾರ್ಜುನ. ಅದೃಷ್ಟವೋ ಅವಕಾಶವೋ ತಿಳಿಯದೆನ್ನುವಂತೆ ಮರಳಿ ಅದೇ ಖಾತೆ ಈ ಬಾರಿ ಅವರ ಕೈ ಸೇರಿದೆ. ಇದರ ಜೊತೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೂ ಜೊತೆಯಾಗಿರುವುದು ಮಲ್ಲಿಕಾರ್ಜುನರ ಜವಾಬ್ದಾರಿ ಹೆಚ್ಚಿಸಿದೆ.