ನಮ್ಮ ಸಚಿವರು | ಡಿ. ಸುಧಾಕರ್: ಬಿಜೆಪಿಯಲ್ಲೂ ಮಂತ್ರಿ; ಕಾಂಗ್ರೆಸ್‌ನಲ್ಲೂ ಮಂತ್ರಿ!

Date:

ಚಾಣಾಕ್ಷತನದಿಂದ ಮತದಾರರನ್ನು, ಹಿಂದುಳಿದ ಸಮುದಾಯಗಳನ್ನು ನಿಭಾಯಿಸುತ್ತಾ ಗೆಲ್ಲುತ್ತಿರುವ ಡಿ. ಸುಧಾಕರ್, ಆ ಸಮುದಾಯಗಳ ಮತ್ತು ತನ್ನ ಕ್ಷೇತ್ರದ ಸಮಸ್ಯೆಗಳತ್ತ ಗಮನ ಹರಿಸುತ್ತಿಲ್ಲ ಎನ್ನುವ ಆರೋಪಗಳಿವೆ. ಜೊತೆಗೆ ಗೆದ್ದ ನಂತರ ತನ್ನ ಜೊತೆಯಿರುವ ಹಿಂದುಳಿದ ವರ್ಗಗಳ ಮುಖಂಡರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ ಎನ್ನುವ ಅಸಮಾಧಾನ ಕೆಲವರಲ್ಲಿದೆ.

ಡಿ ಸುಧಾಕರ್, ಕೊನೆಗೂ ಮಂತ್ರಿಯಾಗಿದ್ದಾರೆ. ಹಿರಿಯೂರು ಶಾಸಕರಾದ ಡಿ ಸುಧಾಕರ್, ಮಂತ್ರಿಯಾಗಲೇಬೇಕೆಂದು ಹಟ ಹಿಡಿದಿದ್ದರು. ಅದಕ್ಕಾಗಿ ಅವರ ಬೆಂಬಲಿಗರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮನೆ ಮುಂದೆ ಪ್ರತಿಭಟನೆ ಕೂಡ ಮಾಡಿದ್ದರು. ಅವರ ಆಸೆ ಈಡೇರಿದೆ. ಡಿ ಸುಧಾಕರ್‌ಗೆ ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವ ಸ್ಥಾನ ದಕ್ಕಿದೆ.

ಗೊಲ್ಲರು, ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಹಿರಿಯೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಸುಧಾಕರ್ ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿದವರು. ಸಿದ್ದರಾಮಯ್ಯ ಸಂಪುಟದಲ್ಲಿ ಸ್ಥಾನ ಪಡೆದಿರುವ ಏಕೈಕ ಜೈನ ಶಾಸಕ ಸುಧಾಕರ್. ಶಾಸಕ ಸ್ಥಾನವಾಗಲಿ, ಮಂತ್ರಿಗಿರಿಯಾಗಲಿ ಅವರಿಗೆ ಹೊಸದೇನಲ್ಲ.

ಬಿ ಕಾಂ ಪದವೀಧರರಾದ ಸುಧಾಕರ್, ಮೂಲತಃ ಉದ್ಯಮಿ; ಲಿಕ್ಕರ್ ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಾರೆ. ಸುಧಾಕರ್ ರಾಜಕೀಯಕ್ಕೆ ಬರಲು ಕಾರಣ ಅವರ ಚಿಕ್ಕಪ್ಪ ಜಯಣ್ಣ. ಚಿತ್ರದುರ್ಗ ಜಿಲ್ಲೆಯ ಮೊದಲ ಬಿಜೆಪಿ ಶಾಸಕ ಎಂದು ಹೆಸರು ಗಳಿಸಿದ್ದ ಬಸವರಾಜ್ ಮಂಡಿಮಠ್ ಅವರನ್ನು ಚಳ್ಳಕೆರೆ ಕ್ಷೇತ್ರದಲ್ಲಿ 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜಯಣ್ಣ ಸೋಲಿಸಿದ್ದರು.  

2004ರಲ್ಲಿ ಚಿಕ್ಕಪ್ಪನ ಬದಲು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದವರು ಡಿ ಸುಧಾಕರ್. ಚಿಕ್ಕಪ್ಪನೊಂದಿಗೆ ರಾಜಕೀಯದ ತರಬೇತಿ ಪಡೆದಿದ್ದ ಸುಧಾಕರ್, ತಾವು ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಗೆಲುವು ಸಾಧಿಸಿದರು. 2008ರಲ್ಲಿ ಚಳ್ಳಕೆರೆ ಎಸ್‌ಟಿ ಮೀಸಲು ಕ್ಷೇತ್ರವಾದ್ದರಿಂದ ಸುಧಾಕರ್ ಹಿರಿಯೂರಿಗೆ ವಲಸೆ ಬಂದರು.

ಈ ಸುದ್ದಿ ಓದಿದ್ದೀರಾ: ನಮ್ಮ ಸಚಿವರು | ಕರ್ನಾಟಕ – ಕೇರಳಕ್ಕೂ ಇದೆ ಹಲವು ರಾಜಕೀಯ ನಂಟು; ಅದು ಕೆ ಜೆ ಜಾರ್ಜ್‌ಗೂ ಉಂಟು

ಹಿರಿಯೂರು ಕಾಂಗ್ರೆಸ್ ಆಗ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದ ಎ ಕೃಷ್ಣಪ್ಪನವರ ಹಿಡಿತದಲ್ಲಿತ್ತು. ಗೊಲ್ಲ ಸಮುದಾಯದ ಕೃಷ್ಣಪ್ಪ, ತಮ್ಮದೇ ಸಮುದಾಯದ ಗೀತಾ ನಂದಿನಿಗೌಡ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸಿದ್ದರಿಂದ 2008ರಲ್ಲಿ ಸುಧಾಕರ್ ಪಕ್ಷೇತರ ಅಭ್ಯರ್ಥಿಯಾದರು. ಕ್ಷೇತ್ರದಲ್ಲಿ ಗೊಲ್ಲ ಸಮುದಾಯ ನಿರ್ಣಾಯಕವಾಗಿದ್ದರೂ ವಲಸಿಗರಾಗಿದ್ದ ಸುಧಾಕರ್, ಆ ಸಮುದಾಯದ ಅಭ್ಯರ್ಥಿ ವಿರುದ್ಧ ಭಾರಿ ಅಂತರದ ಗೆಲುವು ಸಾಧಿಸಿದ್ದರು.

ಆಗ ಅತಂತ್ರ ವಿಧಾನಸಭೆ ನಿರ್ಮಾಣವಾಗಿದ್ದ ಕಾರಣಕ್ಕೆ ಬಿಜೆಪಿಗೆ ಬೆಂಬಲ ಕೊಟ್ಟ ಸುಧಾಕರ್, ಯಡಿಯೂರಪ್ಪ ಸಂಪುಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಮಂತ್ರಿಯಾಗಿದ್ದರು. ಅದೇ ಕಾಲದಲ್ಲಿ ಬೆಂಗಳೂರಿನ ಸುಂಕದ ಕಟ್ಟೆಯ ನಿರಾಶ್ರಿತರ ಶಿಬಿರದಲ್ಲಿ ಸರಣಿ ಸಾವುಗಳಾಗಿದ್ದವು. ಅದರ ಬಗ್ಗೆ ಅತ್ಯಂತ ಬೇಜವಾಬ್ದಾರಿಯ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದರು.

ಹಲವು ಕಾರಣಕ್ಕೆ ಆಗಿನ ಸಿಎಂ ಯಡಿಯೂರಪ್ಪ ಅವರೊಂದಿಗೆ ಸುಧಾಕರ್ ಮನಸ್ತಾಪ ಬೆಳೆಸಿಕೊಂಡರು. ಜೊತೆಗೆ ಅದೇ ಕಾಲಕ್ಕೆ ರಿಯಲ್ ಎಸ್ಟೇಟ್ ವಂಚನೆ ಪ್ರಕರಣವೊಂದರಲ್ಲಿ ಅವರ ಹೆಸರು ಕೇಳಿಬಂದು, ಸುಧಾಕರ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಸುಧಾಕರ್, 2013ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದರು. ಆಗ ಅವರಿಗೆ ಎದುರಾಳಿಯಾಗಿದ್ದವರು ಗೊಲ್ಲ ಸಮುದಾಯದ ಅದೇ ಎ ಕೃಷ್ಣಪ್ಪ. ಅವರ ಎದುರು ಅತ್ಯಲ್ಪ ಅಂತರದಿಂದ ಗೆದ್ದ ಡಿ ಸುಧಾಕರ್, ಮೂರನೇ ಬಾರಿಗೆ ಶಾಸಕರಾಗಿದ್ದರು. 2018ರಲ್ಲಿ ಕೃಷ್ಣಪ್ಪನವರ ಮಗಳು ಪೂರ್ಣಿಮಾ ಶ್ರೀನಿವಾಸ್ ಸುಧಾಕರ್ ಅವರನ್ನು ಸೋಲಿಸಿ, ಅಪ್ಪನ ಸೋಲಿನ ಸೇಡನ್ನು ತೀರಿಸಿಕೊಂಡಿದ್ದರು.

ಇದೀಗ ಮತ್ತೆ ಡಿ ಸುಧಾಕರ್ ಶಾಸಕರಾಗಿದ್ದಾರೆ. ಈ ಬಾರಿ ಗೆಲ್ಲಲೇಬೇಕೆಂದು ಸತತ ಐದು ವರ್ಷದಿಂದಲೂ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪ್ರಚಾರ ಮಾಡಿದ್ದರು. ಅದರಂತೆ ಗೆದ್ದು ಮಂತ್ರಿಯೂ ಆಗಿದ್ದಾರೆ. ಜೈನ ಸಮುದಾಯದ ಬೆರಳೆಣಿಕೆಯಷ್ಟು ಮತಗಳಿರುವ ಕ್ಷೇತ್ರದಲ್ಲಿ ಹಿಂದುಳಿದವರು, ಮುಸ್ಲಿಮರು, ದಲಿತ ಎಡಗೈ ಸಮುದಾಯದವರು ಸುಧಾಕರ್ ಅವರನ್ನು ಬೆಂಬಲಿಸುತ್ತ ಬರುತ್ತಿದ್ದಾರೆ. ಕಷ್ಟ ನಷ್ಟ ಎಂದು ಹೇಳಿಕೊಂಡು ತನ್ನ ಬಳಿ ಬರುವವರಿಗೆ ನೆರವು ನೀಡುವುದರ ಮೂಲಕವೇ ಸುಧಾಕರ್ ಖ್ಯಾತಿ ಪಡೆದವರು. ಕೊಡುಗೈ ದಾನಿಯೆಂಬ ಹೆಸರೇ ಅವರನ್ನು ಗೆಲುವಿನ ದಡ ಮುಟ್ಟಿಸುತ್ತಿದೆ.

ಹೀಗೆ ಚಾಣಾಕ್ಷತನದಿಂದ ಮತದಾರರನ್ನು, ಹಿಂದುಳಿದ ಸಮುದಾಯಗಳನ್ನು ನಿಭಾಯಿಸುತ್ತಾ ಗೆಲ್ಲುತ್ತಿರುವ ಸುಧಾಕರ್, ಆ ಸಮುದಾಯಗಳತ್ತ ಗಮನ ಹರಿಸುತ್ತಿಲ್ಲ ಎನ್ನುವ ಆರೋಪಗಳಿವೆ. ಜೊತೆಗೆ ಗೆದ್ದ ನಂತರ ತನ್ನ ಜೊತೆಯಿರುವ ಹಿಂದುಳಿದ ವರ್ಗಗಳ ಮುಖಂಡರನ್ನು ಗೌರವದಿಂದ ನಡೆಸಿಕೊಳ್ಳುವುದಿಲ್ಲ ಎನ್ನುವ ಅಸಮಾಧಾನ ಕೆಲವರಲ್ಲಿದೆ. ಇದರ ನಡುವೆ, ಸುಧಾಕರ್ ಯಡಿಯೂರಪ್ಪ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಹೆಚ್ಚಿನ ಅನುದಾನ ತಂದಿದ್ದು ಸೇರಿದಂತೆ ಒಂದಿಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎನ್ನುತ್ತಾರೆ ಕ್ಷೇತ್ರದ ಜನ.

ಡಿ ಸುಧಾಕರ್, ಡಿ ಕೆ ಶಿವಕುಮಾರ್ ಆಪ್ತರು. ರಮೇಶ್ ಜಾರಕಿಹೊಳಿ ಸಿ ಡಿ ಕೇಸ್‌ನಲ್ಲಿ ಶಿವಕುಮಾರ್ ಪರವಾಗಿ ಸಂತ್ರಸ್ತ ಯುವತಿಗೆ ಅಕೌಂಟ್ ಮೂಲಕ ಹಣ ಸಂದಾಯ ಮಾಡಿದ್ದರು, ಆ ಯುವತಿಯ ಸಂಪರ್ಕದಲ್ಲಿದ್ದು, ಪಿತೂರಿಯ ಭಾಗವಾಗಿದ್ದರು ಎನ್ನುವ ಆರೋಪ ಸುಧಾಕರ್ ವಿರುದ್ಧ ಕೇಳಿಬಂದಿತ್ತು. ಅವರ ಆ ನಿಷ್ಠೆಗೆ ಈಗ ಫಲ ಸಿಕ್ಕಿದೆ. ತಮ್ಮನ್ನು ಗೆಲ್ಲಿಸಿದ ಜನರಿಗೆ ಸುಧಾಕರ್ ಎಷ್ಟರ ಮಟ್ಟಿಗೆ ನಿಷ್ಠರಾಗಿರುತ್ತಾರೆ ಎನ್ನುವುದರ ಮೇಲೆ ಅವರ ರಾಜಕೀಯ ಭವಿಷ್ಯ ನಿಂತಿದೆ.      

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಭಾರತದ ಸಂಪತ್ತು ಸಂವಿಧಾನ ರಕ್ಷಿಸಬೇಕಾಗಿದೆ: ಡಾ.ಜಯದೇವಿ ಗಾಯಕವಾಡ

ಸಂವಿಧಾನ ಗಟ್ಟಿಯಾಗಿ ಉಳಿದರೆ ನಾವೆಲ್ಲರೂ ನೆಮ್ಮದಿಯಾಗಿರಲು ಸಾಧ್ಯ. ಭಾರತೀಯ ಸಂವಿಧಾನ ಮೂಲಕ ವರ್ತಮಾನದ...

ಚಿತ್ರದುರ್ಗ | ಶಾಲಾ ಮಕ್ಕಳ ಜಿಲ್ಲಾ ಮಟ್ಟದ ಕ್ರೀಡಾಕೂಟ

ಕಲಿಕೆಯಲ್ಲಿ ಓದಿನ ಜೊತೆಗೆ ಕ್ರೀಡೆಯೂ ಕೂಡ ಒಂದು ಭಾಗ. ಎಲ್ಲ ಮಕ್ಕಳು...

ಗದಗ | ಚಿಕ್ಕನರಗುಂದದಲ್ಲಿ ಕಾಲುಬಾಯಿ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ

ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಯೋಜನೆಯ...