ದಿಲ್ಲಿ ಮಟ್ಟದಲ್ಲಿ ಮುಂಚೂಣಿ ಮುಖಂಡರೆನಿಸಿಕೊಂಡಿರುವ ಎಚ್ ಕೆ ಪಾಟೀಲರು, ರಾಜ್ಯದಲ್ಲಿ ಪ್ರಭಾವಿ ಜನನಾಯಕರಾಗಿ ಬೆಳೆಯಲು ಸಾಧ್ಯವಾಗಲೇ ಇಲ್ಲ. ಗದಗ ಜಿಲ್ಲೆಗಷ್ಟೇ ಸೀಮಿತವಾಗಿ ಬೇರೆ ಜಿಲ್ಲೆಗಳತ್ತ ವಿಸ್ತರಿಸಲೂ ಇಲ್ಲ. ಅದಕ್ಕೆ ಬಹಳ ಮುಖ್ಯವಾದ ಕಾರಣ, ತಮ್ಮ ಕುಟುಂಬದವರನ್ನು ಬಿಟ್ಟು ಬೇರೊಬ್ಬರನ್ನು ರಾಜಕೀಯವಾಗಿ ಬೆಳೆಸದೇ ಇರುವುದು.
ಮುಂಬೈ-ಕರ್ನಾಟಕ ಭಾಗದ ಸಹಕಾರಿ ಕ್ಷೇತ್ರದ ಧುರೀಣರಾಗಿದ್ದ, ಅಭಿಮಾನಿಗಳಿಂದ ಹುಲಕೋಟಿ ಹುಲಿ ಎಂದು ಕರೆಸಿಕೊಳ್ಳುತ್ತಿದ್ದ ಕೆ.ಎಚ್. ಪಾಟೀಲರ ರಾಜಕಾರಣವೇ ಬೇರೆ. ಬಹಳ ದೊಡ್ಡ ಜಮೀನ್ದಾರರಾಗಿದ್ದ ಪಾಟೀಲರು ಫ್ಯೂಡಲ್ ಗುಣ ಹೊಂದಿದ್ದರೂ, ಜನರಿಗೆ ಸಹಕಾರಿ ಕ್ಷೇತ್ರ ಪರಿಚಯಿಸಿ ಪ್ರಯೋಜನ ಪಡೆಯುವಂತೆ ಮಾಡಿದ್ದರು. ವಿರೋಧಿಗಳೂ ಮೆಚ್ಚುವ ಪ್ರಜಾಸತ್ತಾತ್ಮಕ ರೀತಿ-ರಿವಾಜುಗಳನ್ನು ಮೈಗೂಡಿಸಿಕೊಂಡಿದ್ದರು. ರಾಜಕಾರಣದಲ್ಲಿ ಮುತ್ಸದ್ದಿ ಎನಿಸಿಕೊಂಡಿದ್ದರು. ಆ ಕಾರಣಕ್ಕಾಗಿಯೇ ಕರ್ನಾಟಕದ ರಾಜಕಾರಣದ ಇತಿಹಾಸದ ಪುಟಗಳಲ್ಲಿ ದಾಖಲಾದರು.
ಅವರ ಪುತ್ರರಾದ ಎಚ್.ಕೆ. ಪಾಟೀಲ್ ಅವರಲ್ಲಿ ತಂದೆಯವರ ಗತ್ತು, ಗೈರತ್ತನ್ನು ಕಾಣಲಾಗುವುದಿಲ್ಲ. ಅವರಿಗಿದ್ದ ದಿಟ್ಟತನ, ನೇರವಂತಿಕೆಯೂ ಇವರಿಗಿಲ್ಲ. ಇವರ ರಾಜಕಾರಣದ ಶೈಲಿಯೇ ಬೇರೆ. ನಾಮಧಾರಿ ರಡ್ಡಿ(ಬಸವರಾಜ ರಾಯರೆಡ್ಡಿ, ಕೆ.ಬಿ ಕೋಳಿವಾಡ ಇದೇ ಸಮುದಾಯಕ್ಕೆ ಸೇರಿದವರು) ಸಮುದಾಯಕ್ಕೆ ಸೇರಿದ ಪಾಟೀಲರು, ಬೆಂಗಳೂರು ಮತ್ತು ದೆಹಲಿಯಲ್ಲಿ ಲಿಂಗಾಯತ ಕಾರ್ಡ್ ಬಳಸುವುದುಂಟು. ಆದರೆ ಈ ಭಾಗದ ಲಿಂಗಾಯತರು ಇವರನ್ನು ಲಿಂಗಾಯತರೆಂದು ಒಪ್ಪಿಕೊಳ್ಳುವುದಿಲ್ಲ. ಆದರೂ, ರಾಜಕೀಯ ಸ್ಥಾನ-ಮಾನಗಳು ಇವರ ಕುಟುಂಬ ಬಿಟ್ಟು ಬೇರೆಯವರತ್ತ ಸುಳಿಯಲೂ ಕೂಡ ಬಿಟ್ಟವರಲ್ಲ.
1953ರಲ್ಲಿ ಗದಗದಲ್ಲಿ ಜನಿಸಿದ ಎಚ್.ಕೆ ಪಾಟೀಲ್, ವಿಜ್ಞಾನ ಹಾಗೂ ಕಾನೂನು ಪದವಿಗಳನ್ನು ಪಡೆದಿದ್ದಾರೆ. ಪತ್ರಕರ್ತರಾಗಿ ಕೂಡ ಕೆಲಸ ಮಾಡಿದ್ದಾರೆ. ಜೊತೆಗೆ ತಂದೆಯವರ ರಾಜಕಾರಣದ ಭದ್ರ ಬುನಾದಿಯೂ ಜೊತೆಗಿದೆ. ಇದೆಲ್ಲದರ ಪರಿಣಾಮವಾಗಿ, ಮುಂಬೈ-ಕರ್ನಾಟಕದ ರಾಜಕಾರಣ ಅರ್ಧ ಶತಕದ ಕಾಲ ಪಾಟೀಲರ ಕುಟುಂಬದ ಸ್ವತ್ತಾಗಿ, ಬೇರೆಯವರು ಬೆಳೆಯದ ತಾಣವಾಗಿ ಮಾರ್ಪಟ್ಟಿದೆ. 1984ರಿಂದ 2008ರ ವರೆಗೆ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸತತ ನಾಲ್ಕು ಬಾರಿ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾದ ಪಾಟೀಲರು, 2008ರ ನಂತರ ಗದಗ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ಸೋತು, ನಂತರ 2013, 2018 ಮತ್ತು 2023 ರಲ್ಲಿ ಗೆದ್ದು ಶಾಸಕರಾಗಿದ್ದಾರೆ. ಹಾಗೆಯೇ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಧರಂಸಿಂಗ್, ಸಿದ್ದರಾಮಯ್ಯನವರ ಸಂಪುಟದಲ್ಲಿ ಜವಳಿ, ನೀರಾವರಿ, ಕೃಷಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಖಾತೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಪಾಟೀಲರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿಯಾಗಿದ್ದಅವಧಿಯಲ್ಲಿ, ಕರ್ನಾಟಕ ಸರ್ಕಾರವು 2015-16ನೇ ಸಾಲಿನ ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ)ದ ಪರಿಣಾಮಕಾರಿ ಬಳಕೆಗಾಗಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಇ-ಪ್ರಶಸ್ತಿಯನ್ನು ನಾಲ್ಕು ವರ್ಷಗಳ ಕಾಲ ಸತತವಾಗಿ ಪಡೆದುಕೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು 2017 ರಲ್ಲಿ ಲಖನೌದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆಯ ಸಂದರ್ಭದಲ್ಲಿ ಈ ಪ್ರಶಸ್ತಿಯನ್ನು ಪಾಟೀಲರಿಗೆ ಪ್ರದಾನ ಮಾಡಿದ್ದೂ ಇದೆ. ರಾಜ್ಯದ ಕೆಲ ಭಾಗಗಳಿಗೆ ಮಳೆ ಬರದೆ ಬೆಳೆ ಬತ್ತಿಹೋಗುವ ಸಂದರ್ಭ ಎದುರಾದಾಗ, ಕೃತಕ ಮಳೆ ತರಿಸುವ ಮೋಡ ಬಿತ್ತನೆಯನ್ನು ಮೊದಲ ಬಾರಿಗೆ ರಾಜ್ಯಕ್ಕೆ ಪರಿಚಯಿಸಿದ್ದು ಕೂಡ ಈ ಪಾಟೀಲರೇ. ಹಾಗೆಯೇ ಗದಗ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ತಲೆದೋರಿದಾಗ, ಒಂದು ರೂಪಾಯಿಗೆ ಐದು ಲೀಟರ್ ಶುದ್ಧ ಕುಡಿಯುವ ನೀರು ನೀಡುವ ಯೋಜನೆಯನ್ನು ಸ್ವಂತ ಹಣದಲ್ಲಿ ಜಾರಿಗೆ ತಂದು, ಸಹಕಾರಿ ವಲಯವನ್ನು ಸದೃಢಗೊಳಿಸಿದವರು.
ಯಾವುದೇ ಕೆಲಸ ಕೊಟ್ಟರೂ ಅಚ್ಚುಕಟ್ಟಾಗಿ ಮಾಡುವ, ಆ ಖಾತೆಗೆ ನ್ಯಾಯ ಸಲ್ಲಿಸುವ ಪಾಟೀಲರು, ಕೆಲವು ಸಲ ಸತ್ಯ ನುಡಿದು ಹಲವರ ಹುಬ್ಬೇರಿಸಿದ್ದೂ ಉಂಟು. ಈ ಬಾರಿಯ ಚುನಾವಣೆಗೂ ಮುಂಚೆ ಪಕ್ಷ ಘೋಷಿಸಿದ ಗ್ಯಾರಂಟಿಗಳ ಬಗ್ಗೆ ಪ್ರತಿಪಕ್ಷದವರು ಗೇಲಿ ಮಾಡಿದಾಗ, `ಪಕ್ಷವು ಬಡವರಿಗಾಗಿ ನೀಡಿದ ಚುನಾವಣಾ ಭರವಸೆಗಳನ್ನು ಕೆಲವು ವರ್ಗಗಳು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಆದರೆ, ಶ್ರೀಮಂತರಿಗೆ ಸಾಲ ಮನ್ನಾ ಮಾಡುವುದನ್ನು ಇವರು ಪ್ರಶ್ನಿಸುವುದೇ ಇಲ್ಲ. 523 ಕೈಗಾರಿಕೆಗಳ 10 ಲಕ್ಷ ರೂಪಾಯಿ ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರವನ್ನು ಯಾರಾದರೂ ಪ್ರಶ್ನಿಸಿದ್ದಿರಾʼ ಎಂದು ಖಡಕ್ಕಾಗಿ ಉತ್ತರಿಸಿದ್ದರು.
ಎಚ್.ಕೆ ಪಾಟೀಲ್ ಕುಟುಂಬ ತಮ್ಮ ತಂದೆಯ ಕಾಲದಿಂದಲೂ ಗಾಂಧಿ ಕುಟುಂಬದೊಂದಿಗೆ ನಿಕಟ ಸಂಪರ್ಕದಲ್ಲಿದೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುತ್ತ ಬಂದಿದೆ. ಆ ಕಾರಣಕ್ಕಾಗಿಯೇ ಕಾಂಗ್ರೆಸ್ ಹೈಕಮಾಂಡ್ ಪಾಟೀಲರನ್ನು 2020ರಲ್ಲಿ ಮಹಾರಾಷ್ಟ್ರದ ಉಸ್ತುವಾರಿಯನ್ನಾಗಿ ನೇಮಿಸಿದೆ. ಇಂಗ್ಲಿಷ್, ಹಿಂದಿ ಭಾಷೆಯ ಮೇಲಿನ ಹಿಡಿತ ಹಾಗೂ ಮರಾಠಿ ಭಾಷೆ ಬಲ್ಲವರಾಗಿರುವ ಎಚ್.ಕೆ ಪಾಟೀಲ್ ಅವರನ್ನು ಮಹಾರಾಷ್ಟ್ರ ಉಸ್ತುವಾರಿ ಮಾಡಲು ಪ್ರಮುಖ ಕಾರಣ ಎನ್ನಲಾಗಿದೆ.
ಆಶ್ಚರ್ಯವೆಂದರೆ, ದಿಲ್ಲಿ ಮಟ್ಟದಲ್ಲಿ ಮುಂಚೂಣಿ ಮುಖಂಡರೆನಿಸಿಕೊಂಡಿರುವ ಪಾಟೀಲರು, ರಾಜ್ಯದಲ್ಲಿ ಪ್ರಭಾವಿ ಜನನಾಯಕರಾಗಿ ಬೆಳೆಯಲು ಸಾಧ್ಯವಾಗಲೇ ಇಲ್ಲ. ಗದಗ ಜಿಲ್ಲೆ ಬಿಟ್ಟು ಅವರ ಪ್ರಭಾವ ಬೇರೆ ಜಿಲ್ಲೆಗಳತ್ತ ವಿಸ್ತರಿಸಲೂ ಇಲ್ಲ. ಅದಕ್ಕೆ ಬಹಳ ಮುಖ್ಯವಾದ ಕಾರಣ, ತಮ್ಮ ಕುಟುಂಬದವರನ್ನು ಬಿಟ್ಟು ಬೇರೊಬ್ಬರನ್ನು ರಾಜಕೀಯವಾಗಿ ಬೆಳೆಸದೇ ಇರುವುದು. ಗದಗ ಕ್ಷೇತ್ರವನ್ನು ಕಳೆದ 47 ವರ್ಷಗಳಿಂದ ಆಳುತ್ತಲೇ ಬಂದಿರುವ ಪಾಟೀಲರ ಕುಟುಂಬ, ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸದೇ ಇರುವುದು. ತಮ್ಮ ಬೆಳವಣಿಗೆಯನ್ನಷ್ಟೇ ಬಯಸುವುದು- ಇದು ಕ್ಷೇತ್ರದ ಮತದಾರರ ಆರೋಪ. ಪಂಚಾಯತ್ ರಾಜ್ ಸಚಿವರಾಗಿದ್ದ ಅವಧಿಯಲ್ಲಿ, ದೊಡ್ಡ ಮೊತ್ತದ ಠೇವಣಿ ಹಣವನ್ನು ಅಧಿಕಾರಿಗಳು ದುರುಪಯೋಗಪಡಿಸಿಕೊಂಡರೂ, ಅದು ತಮ್ಮ ಗಮನಕ್ಕೆ ಬಂದರೂ, ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪವೂ ಪಾಟೀಲರ ಮೇಲಿದೆ.
2020ರಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಾಗಿದ್ದ ಪಾಟೀಲರು, ಕೊರೊನಾ ವೇಳೆಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಬೇಕಾದ ಅಸ್ತ್ರಗಳಿದ್ದರೂ, ಪತ್ರಿಕಾ ಹೇಳಿಕೆಯೊಂದನ್ನು ಬಿಟ್ಟು ಬೇರೇನೂ ಮಾಡಲಿಲ್ಲ. ಅಂದರೆ, ಪಾಟೀಲರು ಎಲ್ಲರೊಂದಿಗೂ ಸ್ನೇಹದಿಂದಿದ್ದು, ಎಲ್ಲರ ದೃಷ್ಟಿಯಲ್ಲೂ ಒಳ್ಳೆಯ ವ್ಯಕ್ತಿ ಎನಿಸಿಕೊಳ್ಳಲು ಇಷ್ಟಪಡುವವರು.
ಈಗ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ ಮಂತ್ರಿಯಾಗಿದ್ದಾರೆ. ಬಿಜೆಪಿ ಸರ್ಕಾರ ಮಾಡಿರುವ ಅಧ್ವಾನಗಳಲ್ಲೊಂದಾದ ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಕಾಂಗ್ರೆಸ್ ಸರ್ಕಾರದ ಸಚಿವರು, ವಾಪಸ್ ಪಡೆಯಲಾಗುವುದು ಎನ್ನುತ್ತಾರೆ. ಆದರೆ ಕಾನೂನು ಮತ್ತು ಸಂಸದೀಯ ಸಚಿವರಾದ ಪಾಟೀಲರು, ಗೋಹತ್ಯೆ ನಿಷೇಧ ವಾಪಸ್, ಬಜರಂಗದಳ ನಿಷೇಧಕ್ಕೆ ಸಂಬಂಧಿಸಿದ ಯಾವುದೇ ಪ್ರಸ್ತಾವಗಳು ಸರ್ಕಾರದ ಮುಂದೆ ಇಲ್ಲ. ಇಂತಹ ಚರ್ಚೆಗಳು ಅನವಶ್ಯಕ ಎನ್ನುತ್ತಾರೆ. ಅಂದರೆ ಮೃದು ಹಿಂದುತ್ವವನ್ನು ಪರಿಪಾಲಿಸುವ ಪಾಟೀಲರು, ಮೇಲ್ಜಾತಿಗಳನ್ನು ಎದುರು ಹಾಕಿಕೊಳ್ಳಲು ಹಿಂಜರಿಯುತ್ತಾರೆ.
ನೋಡಿದ ತಕ್ಷಣ ಅವರ ವಯಸ್ಸು, ವಿದ್ವತ್ತು, ವಿನಯಗಳಿಂದ ಗೌರವ ಭಾವನೆ ಮೂಡಿಸುವ ಎಚ್.ಕೆ ಪಾಟೀಲರು, ಅವರಲ್ಲಿರುವ ಜ್ಞಾನವನ್ನು ನಾಡಿನ ಒಳಿತಿಗಾಗಿ ವಿನಿಯೋಗಿಸಿದರೆ, ಸ್ವಾರ್ಥ ಬಿಟ್ಟು ಸರ್ವರ ಕಲ್ಯಾಣದತ್ತ ಗಮನ ಹರಿಸಿದರೆ, ತಮ್ಮ ತಂದೆಯಂತೆ- ಆ ಪಾಟೀಲರಂತೆ- ಈ ಪಾಟೀಲರೂ ಕೂಡ ರಾಜಕಾರಣದ ಇತಿಹಾಸದ ಪುಟಗಳಲ್ಲಿ ದಾಖಲಾಗುತ್ತಾರೆ.

ಲೇಖಕ, ಪತ್ರಕರ್ತ
H K Patil is not Lingayat and does not follow any Lingayat tenents.
In fact, they were never supportive of Lord Basavanna’s thoughts.
Yet they use Lingayat card, just because, Gadag region has large
percent Lingayat voters. It is pure cheating.
Also, they are pro-upper caste Hindus. Hence, they would never
criticise upper caste. By remaining silent on such issues,
they get accepted by upper and lower caste people.
Overall, well written article, which removed many doubts.
thank u sir